Ra Na Gopala Reddy Bagepalli
ಬಾಗೇಪಲ್ಲಿ: ಕೆಲವೇ ಕೆಲವರ ಕಪಿಮುಷ್ಠಿಯಲ್ಲಿದ್ದ ಭೂಮಿ ಮತ್ತು ಕೈಗಾರಿಕೆಗಳನ್ನು ರಾಷ್ಟ್ರೀಕರಣ ಮಾಡುವುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸಾಗಿತ್ತು ಎಂದು ಡಿವೈಎಫ್ಐ ಜಿಲ್ಲಾ ಸಂಚಾಲಕ ಡಾ.ಅನಿಲ್ ಕುಮಾರ್ ಹೇಳಿದರು.
ಪಟ್ಟಣದಲ್ಲಿಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಡಾ.ಅಂಬೇಡ್ಕರ್ ಅವರು ದೂರದೃಷ್ಟಿಯುಳ್ಳ ಮಹಾನಾಯಕರು. ಅವರು ಪ್ರಜಾಪ್ರಭುತ್ವ ಭಾರತವನ್ನು ಅಚ್ಚುಕಟ್ಟಾಗಿ ನಿರ್ಮಾಣ ಮಾಡಲು ಸಂವಿಧಾನವನ್ನು ರಚಿಸುವಲ್ಲಿ ಪ್ರಧಾನ ಪಾತ್ರ ವಹಿಸಿದರು. ಇಂತಹವರ ಬಾಲ್ಯವೂ ಹಲವಾರು ಅಹಿತಕರ ಅನುಭವಗಳ ಪಯಣವಾಗಿತ್ತು. ಅದೆಲ್ಲವನ್ನು ಮೀರಿ ಅವರು ಜಗದ್ವಿಖ್ಯಾತಿ ಪಡೆದರು ಎಂದು ಅವರು ಹೇಳಿದರು.
ಇವರ ಕನಸಿನಂತೆ ದೇಶದ ಭೂಮಿ ಮತ್ತು ಕೈಗಾರಿಕೆಗಳು ರಾಷ್ಟ್ರೀಕರಣ ಆಗಿದ್ದರೆ ಬಡವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿತ್ತು. ಶ್ರಮಿಕರು, ರೈತರು, ಕಾರ್ಮಿಕರ ಆತ್ಮಗೌರವದಿಂದ ಬದಕು ಕಟ್ಟಿಕೊಳ್ಳುತ್ತಿದ್ದರು. ಈಗಿನ ಫ್ಯಾಸಿಸ್ಟ್ ಸರ್ಕಾರಗಳ ದೌರ್ಜನ್ಯಗಳು ನಡೆಯುತ್ತಿರಲಿಲ್ಲ. ಹಾಗಾಗಿ ರಾಷ್ಟ್ರೀಕರಣವಾದ ಸಾರ್ವಜನಿಕ ವಲಯಗಳನ್ನು ಒಂದೊಂದಾಗಿ ಖಾಸಗೀಕರಣ ಮಾಡಲಾಗುತ್ತಿದೆ. ಇದರಿಂದಾಗಿ ಬಂಡವಾಳಶಾಹಿಗಳ ಗುಲಾಮರನ್ನಾಗಿಸಿ ಸಾಮಾನ್ಯ ಜನರ ಬದಕನ್ನು ಅತಂತ್ರಗೊಳಿಸಲು ಈಗಿನ ಸರ್ಕಾರಗಳು ಮುಂದಾಗಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕೃಷಿ ಕೂಲಿ ಕಾರ್ಮಿಕರ ರಾಜ್ಯ ಉಪಾಧ್ಯಕ್ಷ ಎಂ.ಪಿ ಮುನಿವೆಂಕಟಪ್ಪ, ಸಿಪಿಎಂ ತಾಲ್ಲೂಕು ಕಾರ್ಯದರ್ಶಿ ಮಹಮ್ಮದ್ ಅಕ್ರಂ, ಡಿ.ಹೆಚ್.ಎಸ್ʼನ ಅಶ್ವತ್ಥನಾರಾಯಣ, AIAWU ನ
ಸಾವಿತ್ರಮ್ಮ, ರಾಮಚಂದ್ರ, ಗೂಳೂರು ಕೃಷ್ಣಪ್ಪ, ಚೆಂಚುರಾಯನಪಲ್ಲಿ ಕೃಷ್ಣಪ್ಪ, ಪ್ರೊ.ವೆಂಕಟಶಿವಾರೆಡ್ಡಿ, ರಘುರಾಮರೆಡ್ಡಿ, ಹರೀಶ್, ಮುನಿಚಂದ್ರಪ್ಪ ಇತರರು ಭಾಗವಹಿಸಿದ್ದರು.