ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ತೀವ್ರವಾಗಿರುವ ಕಾರಣ ಪ್ರತಿಷ್ಠಿತ ಒಕ್ಕಲಿಗರ ಸಂಘದ ಚುನಾವಣೆ ಮೇಲೆ ಕಾರ್ಮೋಡ ಕವಿದಿದೆ. ಸಂಭಾವ್ಯ ಅಭ್ಯರ್ಥಿಗಳು ಈಗಾಗಲೇ ಕಣಕ್ಕೀಯಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದರೆ, ಸರಕಾರ ಮಾತ್ರ ಬೇರೆಯದ್ದೇ ಆಲೋಚನೆ ಮಾಡುತ್ತಿದೆ.
ಬೆಂಗಳೂರು: ಮೇ 16ರಂದು ನಡೆಲಿರುವ ಒಕ್ಕಲಿಗರ ಸಂಘದ ಚುನಾವಣೆ ಮೇಲೆ ಕೋವಿಡ್ ಕರಿನೆರಳು ಬಿದ್ದಿದೆ. ಎರಡನೇ ಅಲೆ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಚುನಾವಣೆ ಮುಂದಕ್ಕೆ ಹೋಗುವ ಸಾಧ್ಯತೆ ದಟ್ಟವಾಗಿದೆ.
ಬಹಳ ಪ್ರತಿಷ್ಠೆಯ ಚುನಾವಣೆ ಆಗಿರುವ ಒಕ್ಕಲಿಗರ ಸಂಘದ ಹಣಾಹಣಿಗೆ ಈಗಾಗಲೇ ಚುನಾವಣಾ ಕ್ಯಾಲೆಂಡರ್ ಪ್ರಕಟವಾಗಿದೆಯಾದರೂ ಸರಕಾರ ಮಾತ್ರ ಕೋವಿಡ್ ಸೋಂಕಿನ ಕಾರಣ ಕೊಟ್ಟು ಚುನಾವಣೆಯನ್ನು ಮುಂದಕ್ಕೆ ಹಾಕುವ ಮನಸ್ಸು ಮಾಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಸಹಕಾರ ಕಾಯ್ದೆಯಡಿ ರಾಜ್ಯದ ವಿವಿಧ ಸಂಘ ಸಂಸ್ಥೆಗಳ ಚುನಾವಣೆ ನಡೆಯಬೇಕಾಗಿದ್ದು ಅದರಂತೆ ಒಕ್ಕಲಿಗರ ಸಂಘದ ಚುನಾವಣೆಯೂ ಘೋಷಣೆ ಆಗಿದೆ. ಚುನಾವಣಾಧಿಕಾರಿ ಪಿ.ಎನ್.ರವೀಂದ್ರ ಅವರು ಮೇ 16ರಂದು ಚುಣಾವಣೆ ನಡೆಯಲಿದೆ ಎಂದು ಘೋಷಿಸಿದ್ದು, ಮೇ 18ರಂದು ಫಲಿತಾಂಶ ಪ್ರಕಟವಾಗಲಿದೆ ಎಂದಿದ್ದಾರೆ. ಆದರೆ ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ತೀವ್ರ ಸ್ವರೂಪದಲ್ಲಿ ವ್ಯಾಪಿಸುತ್ತಿರುವುದರಿಂದ ಎಲ್ಲ ಸಹಕಾರ ಸಂಘಗಳು ಹಾಗೂ ಸಂಘ ಸಂಸ್ಥೆಗಳ ಚುನಾವಣೆಗಳನ್ನು ಮುಂದೂಡಲು ಸರಕಾರ ನಿರ್ಧರಿಸಿದೆ ಎಂದು ಗೊತ್ತಾಗಿದೆ.
ಶುಕ್ರವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ವರದಿ ನೀಡಿರುವ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಕೂಡ ʼಅತ್ಯಗತ್ಯವಲ್ಲದʼ ಎಲ್ಲ ಚಟುವಟಿಕೆಗಳನ್ನು ಮುಲಾಜಿಲ್ಲದೆ ಸ್ಥಗಿತ ಮಾಡಬೇಕು ಎಂದು ತಿಳಿಸಿದೆ. ಈ ಹಿನ್ನೆಲೆಯಲ್ಲಿ ಒಕ್ಕಲಿಗರ ಸಂಘದ ಚುನಾವಣೆ ಮೇಲೆ ವೈರಸ್ ಕರಿನೆರಳು ಬಿದ್ದಿದೆ.
ಚುನಾವಣೆ ನೆಪದಲ್ಲಿ ದೊಡ್ಡ ದೊಡ್ಡ ಸಭೆಗಳನ್ನು ಮಾಡುವುದು, ರಾತ್ರಿ ಔತಣಕೂಟಗಳನ್ನು ನಡೆಸುವುದು ಈಗಾಗಲೇ ಆರಂಭವಾಗಿದೆ. ಚುನಾವಣೆ ಕಣದಲ್ಲಿ ಹಣದ ಹೊಳೆ ಹರಿಯುತ್ತಿದೆ. ಕೆಲ ದಿನಗಳ ಹಿಂದೆ ಚನ್ನಪಟ್ಟಣದಲ್ಲಿ ಸಂಭಾವ್ಯ ಅಭ್ಯರ್ಥಿಯೊಬ್ಬರು ಏರ್ಪಡಿಸಿದ್ದ ಬಾಡೂಟ ಔತಣದಲ್ಲಿ ಸುಮಾರು ಸಾವಿರಾರು ಮತದಾರರು ಪಾಲ್ಗೊಂಡಿದ್ದರು. ಮತದಾರರಿಗೆ ಹಣದ ಆಮಿಷದ ಜತೆಗೆ ಹಣ-ಹೆಂಡದ ಸಮಾರಾಧನೆ ನಡೆದಿತ್ತು ಎಂಬ ಮಾಹಿತಿ ಸಿಕ್ಕಿದೆ. ಅದೇ ರೀತಿ ಬೆಂಗಳೂರು ಗ್ರಾಮಾಂತರ, ಕೋಲಾರ-ಚಿಕ್ಕಬಳ್ಳಾಪುರ, ರಾಮನಗರ ಮುಂತಾದ ಜಿಲ್ಲೆಗಲ್ಲಿ ಕಣಕ್ಕೆ ಇಳಿಯಲಿರುವ ಹುರಿಯಾಳುಗಳು ಮತದಾರರನ್ನು ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶುರುವಾಗುವುದಕ್ಕೆ ಮುನ್ನವೇ ಚುನಾವಣೆಯ ಕಾವು ಸಿಕ್ಕಾಪಟ್ಟೆ ಏರಿದೆ.
ರಾಜ್ಯದ 11 ಜಿಲ್ಲೆಗಳಿಂದ ೩೫ ಸ್ಥಾನಗಳಿರುವ ಕಾರ್ಯಕಾರಿ ಸಮಿತಿಗೆ ನಡೆಯುವ ಈ ಚುನಾವಣೆಯಲ್ಲಿ ೩೦೦ಕ್ಕೂ ಹೆಚ್ಚು ಅಭ್ಯರ್ಥಿಗಳು ಕಣಕ್ಕಿಳಿಯುವ ನಿರೀಕ್ಷೆ ಇದೆ. 3 ಲಕ್ಷಕ್ಕೂ ಅಧಿಕ ಮತದಾರರು ಇದ್ದಾರೆ. ಮೆಡಿಕಲ್ ಕಾಲೇಜ್ ಸೇರಿದಂತೆ ಅನೇಕ ಸಂಸ್ಥೆಗಳನ್ನು ಹೊಂದಿರುವ ಒಕ್ಕಲಿಗರ ಸಂಘದಲ್ಲಿ ಕೋಟ್ಯಂತರ ರೂಪಾಯಿ ವ್ಯವಹಾರ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ಹಿಂದೆಂದಿಗಿಂತಲೂ ಈ ಬಾರಿ ಬಿರುಸಿನ ಪೈಪೋಟಿ ನಡೆಯುವುದು ಪಕ್ಕಾ.
ಸಮುದಾಯದ ಸಚಿವರಿಗೆ ಬೇಡದ ಚುನಾವಣೆ
ಒಕ್ಕಲಿಗರ ಸಂಘ ಆರಂಭದಿಂದಲೂ ಒಂದಿಲ್ಲ ಒಂದು ವಿವಾದದಿಂದ ಬಸವಳಿಯುತ್ತಲೇ ಇದೆ. ಸಂಘದಲ್ಲಿ ಅನೇಕ ಅವ್ಯವಹಾರಗಳು ನಡೆದ ಆರೋಪಗಳು ಸಾಕಷ್ಟು ಕೇಳಿಬರುತ್ತಿವೆ. ಇದರ ಹೊರತಾಗಿಯೂ ಸಂಘಕ್ಕೆ ಸರಕಾರ ಆಡಳಿತಾಧಿಕಾರಿನ್ನು ನೇಮಕ ಮಾಡಿತ್ತು.
ಈ ಎಲ್ಲ ಕಾರಣಗಳಿಂದ ಒಕ್ಕಲಿಗ ಸಮುದಾಯಕ್ಕೆ ಸೇರಿದ ಬಹುತೇಕ ಸಚಿವರಿಗೆ ಈ ಚುನಾವಣೆ ಬೇಡವಾಗಿದೆ. ಇತ್ತೀಚೆಗೆ ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ್ದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಸಂಘದಲ್ಲಿ ನಡೆಯುತ್ತಿರವ ಚಟುವಟಿಕೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಚುನಾವಣೆ ಬಗ್ಗೆ, ಹಿಂದಿನ ಆಡಳಿತ ಮಂಡಳಿ ಕಾರ್ಯವೈಖರಿ ಇತ್ಯಾದಿಗಳ ಬಗ್ಗೆ ಅವರು ಒಕ್ಕಲಿಗರ ಸಂಘದ ಚುನಾವಣೆಯ ಪೂರ್ವಭಾವಿ ಸಭೆಯಲಿ ಬೇಸರ ಹೊರಹಾಕಿದ್ದರು.
ಇನ್ನು ಸಂಘದ ಚುನಾವಣೆಯ ಬಗ್ಗೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಕೂಡ ಅಷ್ಟೇನೂ ಸಕಾರಾತ್ಮಕ ನಿಲುವು ಹೊಂದಿಲ್ಲ ಎಂಬ ಮಾಹಿತಿ ಸಿಕ್ಕಿದೆ. ಇನ್ನೊಂದೆಡೆ ಸಂಘದ ಚುನಾವಣೆ ಬೇಡವೆಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯೂ ಶುರುವಾಗಿದೆ.
ಬೆಳಗಾವಿ ಲೋಕಸಭೆ ಹಾಗೂ ಮಸ್ಕಿ-ಬಸವ ಕಲ್ಯಾಣದ ಉಪ ಚುನಾವಣೆ ಬಹಿರಂಗ ಪ್ರಚಾರ ಅಂತ್ಯವಾಗಿದ್ದು, ಶನಿವಾರ ಚುನಾವಣೆ ನಡೆಯಲಿದೆ. ಉಪ ಚುನಾವಣೆವರೆಗೂ ಸುಮ್ಮನಿದ್ದ ಸರಕಾರ ಇದೀಗ ಸಂಘ ಸಂಸ್ಥೆಗಳ ಚುನಾವಣೆಗಳನ್ನು ಸಾಧ್ಯವಾದಷ್ಟು ಮುಂದಕ್ಕೆ ಹಾಕಲು ಮನಸ್ಸು ಮಾಡಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೋವಿಡ್ ಪಾಸಿಟೀವ್ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದು, ಭಾನುವಾರ ಕರೆದಿದ್ದ ಸರ್ವಪಕ್ಷ ಸಭೆ ಮುಂದಕ್ಕೆ ಹೋಗಿದೆ.
ಬೆಂಗಳೂರಿನಲ್ಲಿ ಮತ್ತಷ್ಟು ಬಿಗಿ
ಸೋಮವಾರದಿಂದ ಬೆಂಗಳೂರಿನಲ್ಲಿ ಕೋವಿಡ್ ನಿಯಮಗಳು ಇನ್ನಷ್ಟು ಬಿಗಿಯಾಗುವ ಸಾಧ್ಯತೆ ಇದೆ. ಅಲ್ಲದೆ, ಒಕ್ಕಲಿಗರ ಸಂಘದ ಒಟ್ಟು ಮತದಾರರಲ್ಲಿ ಅರ್ಧದಷ್ಟು ಬೆಂಗಳೂರು ನಗರ, ಗ್ರಾಮಾಂತರದಲ್ಲೇ ಇದ್ದಾರೆ. ಶುಕ್ರವಾರ ಒಂದೇ ದಿನ ರಾಜ್ಯದಲ್ಲಿ 14,859 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸೋಂಕಿತರ ನಗರದಲ್ಲಿನ ಸೋಂಕಿತರ ಸಂಖ್ಯೆ 5,22,438ಕ್ಕೆ ಏರಿಕೆಯಾಗಿದೆ. ಅಲ್ಲದೆ, ನಗರದಲ್ಲಿ 57 ಜನರು ಮೃತಪಟ್ಟಿದ್ದಾರೆ. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಮತ್ತಷ್ಟು ನಿರ್ಬಂಧಗಳನ್ನು ಹೇರಲು ಸರಕಾರ ಚಿಂತಿಸುತ್ತಿದೆ.
ಹೀಗಾಗಿ ಒಕ್ಕಲಿಗರ ಸಂಘದ ಚುನಾವಣೆ ಮುಂದೂಡಿಕೆ ನಿರ್ಧಾರ ಸೋಮವಾರದ ನಂತರ ಹೊರಬೀಳಬಹುದು ಎನ್ನಲಾಗಿದೆ.
ಚುನಾವಣೆ ವೇಳಾಪಟ್ಟಿ ಹೀಗಿದೆ
ಇದೇ ಏಪ್ರಿಲ್ 21ರಿಂದ 28ರವರೆಗೆ ನಾಮಪತ್ರ ಸಲ್ಲಿಕೆ ಮಾಡಬಹುದು. ಏಪ್ರಿಲ್ 30 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದ್ದು, ಅಂದು ಮಧ್ಯಾಹ್ನ 3 ಗಂಟೆಗೆ ನಾಮಪತ್ರ ಪರಿಶೀಲನೆ ನಡೆದು ಸಂಜೆ ಹೊತ್ತಿಗೆ ಅಂತಿಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು. ಮೇ 3ರಂದು ಅಭ್ಯರ್ಥಿಗಳಿಗೆ ಚಿಹ್ನೆಗಳನ್ನು ನೀಡಲಾಗುವುದು, ಮೇ 16ರಂದು ಆಯಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬೆಳಗ್ಗೆ 7ರಿಂದ ಸಂಜೆ 5 ಗಂಟೆವರೆಗೂ ಮತದಾನ ನಡೆಯಲಿದೆ. ಮೇ 18ರಂದು ಬೆಳಗ್ಗೆ 9 ಗಂಟೆಯಿಂದ ಮತ ಎಣಿಕೆ ನಡೆಯಲಿದೆ.
ಒಟ್ಟು ಹನ್ನೊಂದು ಮತಕ್ಷೇತ್ರಗಳು
1.ಬೆಂಗಳೂರು ನಗರ, ಹೊಸೂರು (ತಮಿಳುನಾಡು), ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ
2.ಮೈಸೂರು, ಚಾಮರಾಜನಗರ, ಊಟಿ (ತಮಿಳುನಾಡು)
3.ಮಂಡ್ಯ
4.ಹಾಸನ
5.ತುಮಕೂರು
6.ಚಿತ್ರದುರ್ಗ (ದಾವಣಗೆರೆ, ಗದಗ, ಹುಬ್ಬಳ್ಳಿ)
7.ಕೋಲಾರ ಮತ್ತು ಚಿಕ್ಕಬಳ್ಳಾಪುರ (ಆಂಧ್ರ ಪ್ರದೇಶ ಸೇರಿ)
8.ದಕ್ಷಿಣ ಕನ್ನಡ, ಉಡುಪಿ (ಕಾಸರಗೋಡು ಸೇರಿ)
9.ಕೊಡಗು
10.ಶಿವಮೊಗ್ಗ ಮತ್ತು ಉತ್ತರ ಕನ್ನಡ
11.ಚಿಕ್ಕಮಗಳೂರು
***
lead photo by CKPhotography ಸಿಕೆಪಿ@ckphotographi / ಒಕ್ಕಲಿಗರ ಸಂಘದ ಕಿಮ್ಸ್ ಆಸ್ಪತ್ರೆ