ನಡೆದಾಡುವ ನಿಘಂಟು, ಶಬ್ದಬ್ರಹ್ಮ ಎಂದೇ ಜನಜನಿತರಾಗಿದ್ದ ಜೀವಿ ಅವರು ಸಾಹಿತ್ಯ ವಿಮರ್ಶೆ, ಸಂಶೋಧನೆ, ಅನುವಾದ, ನಿಘಂಟು ರಚನೆ ಕ್ಷೇತ್ರಗಳ ಮೂಲಕ ಕನ್ನಡ ಸೇವೆ ಮಾಡಿದ್ದರು.
ಬೆಂಗಳೂರು: ನಾಡಿನ ಖ್ಯಾತ ಸಂಶೋದಕರು, ನಿಘಂಟು ತಜ್ಞರೂ ಆಗಿದ್ದ ವೆಂಕಟಸುಬ್ಬಯ್ಯ ಅವರು ಸೋಮವಾರ ರಾತ್ರಿ 1.15ರ ವೇಳೆಗೆ ತಮ್ಮ ವಯೋ ಸಹಜ ಕಾರಣಗಳಿಂದ 108ನೇ ವಯಸ್ಸಿನಲ್ಲಿ ನಿಧನರಾದರು.
ನಾಡೋಜ ಪ್ರೊ.ಜಿ. ವೆಂಕಟಸುಬ್ಬಯ್ಯ ಅವರು ಖ್ಯಾತ ವಿದ್ವಾಂಸರು ಮಾತ್ರವಲ್ಲದೆ ಜನಪ್ರಿಯ ಪ್ರಾಧ್ಯಾಪಕರು. ಅವರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಸುವರ್ಣ ಪದಕದೊಡನೆ ಎಂ.ಎ. ಪದವಿ, ನಂತರ ಬಿ.ಟಿ. ಪದವಿ ಪಡೆದಿದ್ದರು. ಮಹಾರಾಜ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿಯನ್ನು ಆರಂಭಿಸಿ, ನಂತರ ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಪ್ರಿನ್ಸಿಪಾಲರಾಗಿ, ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದರು.
ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ-ಕನ್ನಡ ನಿಘಂಟುವಿನ ಪ್ರಧಾನ ಸಂಪಾದಕರಾಗಿ ಅವರ ಸೇವೆ ಅನನ್ಯ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ತಿಗೆ ಅಖಿಲ ಕರ್ನಾಟಕ ವ್ಯಾಪ್ತಿಯನ್ನು ತಂದುಕೊಟ್ಟ ಹಿರಿಮೆ ಅವರದ್ದು. ಆ ಮೂಲಕ ಅವರು ನಾಡಿನ ಉದ್ದಗಲಕ್ಕೂ ತಮ್ಮ ಛಾಪು ಮೂಡಿಸಿದರು.
ನಡೆದಾಡುವ ನಿಘಂಟು, ಶಬ್ದಬ್ರಹ್ಮ ಎಂದೇ ಜನಜನಿತರಾಗಿದ್ದ ಜೀವಿ ಅವರು ಸಾಹಿತ್ಯ ವಿಮರ್ಶೆ, ಸಂಶೋಧನೆ, ಅನುವಾದ, ನಿಘಂಟು ರಚನೆ ಕ್ಷೇತ್ರಗಳ ಮೂಲಕ ಕನ್ನಡ ಸೇವೆ ಮಾಡಿದ್ದರು. 50 ಪುಸ್ತಕಗಳನ್ನು, 14 ನಿಘಂಟುಗಳನ್ನು ಪ್ರಕಟಗೊಳಿಸಿರುವುದಲ್ಲದೆ, ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ‘ಇಗೋ ಕನ್ನಡ’ ಅಂಕಣದಿಂದ ಅವರು ನಾಡಿನ ಮನೆಮಾತಾಗಿದ್ದರು.
- ಪ್ರೊ.ಜಿ.ವೆಂಕಟಸುಬ್ಬಯ್ಯ ಅವರ ಬದುಕಿನ ಕೆಲ ಚಿತ್ರಗಳು..
ನಿಘಂಟು ಪರಿವಾರ, ಅಕ್ರೂರ ಚರಿತ್ರೆ (ಸಂಪಾದನೆ), ಇಗೋ ಕನ್ನಡ (ಸಾಮಾಜಿಕ ನಿಘಂಟು), ಗತಿ ಪ್ರಜ್ಞೆ, ಕನ್ನಡವನ್ನು ಉಳಿಸಿ ಬೆಳೆಸಿದವರು, ಅನುಕಲ್ಪನೆ, ಕರ್ಣ ಕರ್ಣಾಮೃತ ಮುಂತಾದವು ಜೀವಿ ಅವರ ಪ್ರಮುಖ ಕೃತಿಗಳು. ಭಾಷಾ ತಜ್ಞ, ಸಂಶೋಧಕ, ಬರಹಗಾರ, ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ‘ಕನ್ನಡ ನಿಘಂಟು ಶಾಸ್ತ್ರ ಪರಿಚಯ’ ಇವರ ಶ್ರೇಷ್ಠ ಗ್ರಂಥ.
ಹಲವಾರು ಶಿಕ್ಷಕ ತರಬೇತಿ ಕಾಲೇಜುಗಳಲ್ಲಿ ಆಹ್ವಾನಿತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಅವರ ಪಾಂಡಿತ್ಯಕ್ಕೆ ಸಂದ ಪ್ರಶಸ್ತಿ ಪುರಸ್ಕಾರಗಳು ಹಲವಾರು. ಅವುಗಳಲ್ಲಿ ವಿದ್ಯಾಲಂಕಾರ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಶಂಬಾ ಪ್ರಶಸ್ತಿ, ಸೇಡಿಯಾಪು ಪ್ರಶಸ್ತಿ, ಕಾಯಕ ಪ್ರಶಸ್ತಿ, ಪತ್ರಿಕಾ ಅಕಾಡೆಮಿ ವಿಶೇಷ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಹಂಪಿ ವಿಶ್ವವಿದ್ಯಾನಿಲಯದ ನಾಡೋಜ ಪ್ರಶಸ್ತಿ, ಅಂತರಾಷ್ಟ್ರೀಯ ನಿಘಂಟು ಸಮ್ಮೇಳನಗಳಿಗೆ ಆಹ್ವಾನ ಮುಂತಾದವು ಮುಖ್ಯವಾದವು.
ಜಿ.ವಿ. ಎಂದೇ ಖ್ಯಾತರಾದ ವೆಂಕಟಸುಬ್ಬಯ್ಯ ಅವರು ಅತ್ಯುತ್ತಮ ಭಾಷಣಕಾರರು ಹಾಗೂ ಸರಳ ಸಜ್ಜನಿಕೆಯ ವ್ಯಕ್ತಿ. ಅವರ ಅಗಲಿಕೆಯಿಂದ ಕನ್ನಡಿಗರು ದುಃಖತಪ್ತರಾಗಿದ್ದಾರೆ.
ಪ್ರೊ.ಜಿ.ವೆಂಕಟಸುಬ್ಬಯ್ಯ ಅವರು1913 ಆಗಸ್ಟ್ 13ರಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಗಂಜಾಂನಲ್ಲಿ ಜನಿಸಿದ್ದರು.
ಕನ್ನಡ ಸಾರಸ್ವತ ಲೋಕದ ಮಹೋನ್ನತ ಕೊಂಡಿ ಕಳಚಿಬಿದ್ದಿದೆ
ಪ್ರೊ.ಜಿ.ವೆಂಕಟಸುಬ್ಬಯ್ಯ ಅವರ ನಿಧನಕ್ಕೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
108 ವರ್ಷಗಳ ಶತಾಯುಷಿ, ನಮ್ಮ ನಾಡಿನ ಹಿರಿಯ ʼಜೀವಿʼಯಾಗಿದ್ದ ನಾಡೋಜ ಪ್ರೊ.ಜಿ. ವೆಂಕಟಸುಬ್ಬಯ್ಯ ಅವರ ಅಗಲಿಕೆಯಿಂದ ಕನ್ನಡ ಸಾರಸ್ವತ ಲೋಕದ ಮಹೋನ್ನತ ಕೊಂಡಿಯೊಂದು ಕಳಚಿಬಿದ್ದಂತೆ ಆಗಿದೆ ಎಂದು ಅವರು ಹೇಳಿದ್ದಾರೆ.
ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವರೂ ಆದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಪ್ರೊ.ವೆಂಕಟಸುಬ್ಬಯ್ಯ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ನಿಘಂಟು ಬ್ರಹ್ಮ, ಶಬ್ಧರ್ಷಿ, ನಾಡೋಜ, ಪದ್ಮಶ್ರೀ ಪ್ರೊ|| ಜಿ.ವೆಂಕಟಸುಬ್ಬಯ್ಯ ಅವರ ನಿಧನದಿಂದ ಕನ್ನಡ ಸಾರಸ್ವತ ಲೋಕ ಅನರ್ಘ್ಯ ರತ್ನವೊಂದನ್ನು ಕಳೆದುಕೊಂಡಿದೆ. ನಿಘಂಟುಶಾಸ್ತ್ರ, ಪ್ರಾಚೀನ ಸಾಹಿತ್ಯ ಅಧ್ಯಯನ, ಅನುವಾದ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡಿರುವ ಶ್ರೀಯುತರು ಕನ್ನಡ ಭಾಷೆಯ ಸಿರಿವಂತಿಕೆವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಚಾಮರಾಜಪೇಟೆಯ ಚಿತಾಗಾರದಲ್ಲಿ ಅಂತ್ಯಕ್ರಿಯೆ
ವೆಂಕಟಸುಬ್ಬಯ್ಯ ಅವರ ಅಂತ್ಯಕ್ರಿಯೆ ಚಾಮರಾಜಪೇಟೆಯ ಚಿತಾಗಾರದಲ್ಲಿ ಇಂದು ಮಧ್ಯಾಹ್ನ 12.30ಕ್ಕೆ ನಡೆಯಲಿದೆ ಹಾಗೂ ಜಯನಗರ 7ನೇ ಬ್ಲಾಕ್‌ನಲ್ಲಿ ಇರುವ ಅವರ ನಿವಾಸದ ಮುಂದೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
- ಲೀಡ್ ಚಿತ್ರ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ