Lead photo from @ckphotographihi / ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ಪೋಲಂಪಲ್ಲಿ ಗ್ರಾಮದ ಶ್ರೀ ಕೋದಂಡರಾಮರ ದೇವಸ್ಥಾನ.
ಸತ್ಯಯುಗ, ತ್ರೇತಾಯುಗದಲ್ಲಿ ದೇವರು ಹಾಗೂ ರಾಕ್ಷಸರ ನಡುವೆ ಯುದ್ಧಗಳು ನಡೆದವು. ದ್ವಾಪರ ಯುಗದಲ್ಲಿ ಒಂದೇ ಕುಟುಂಬದಲ್ಲಿರುವ ಜನರ ಮಧ್ಯೆ ಯುದ್ಧಗಳು ನಡೆದವು. ಕಲಿಯುಗದಲ್ಲಿ ಯುದ್ಧಗಳು ನಮ್ಮೊಳಗೇ ನಡೆಯುತ್ತಿವೆ. ರಾಮನು ನಮ್ಮ ಆತ್ಮವಾದರೆ, ಸೀತೆಯು ನಮ್ಮ ಮನಸ್ಸು, ಹನುಮಾನ್ ನಮ್ಮ ಜೀವಶಕ್ತಿಯಾದರೆ ರಾವಣನು ನಮ್ಮ ಅಹಂ. ಅಹಂ ಮನಸ್ಸನ್ನು ಆವರಿಸಿಕೊಂಡಾಗ ನಮ್ಮ ಆತ್ಮವು ಪ್ರಕ್ಷುಬ್ಧಗೊಳ್ಳುತ್ತದೆ. ಮನಸ್ಸು ಮತ್ತು ಆತ್ಮವನ್ನು ಸಮನತ್ವಯಗೊಳಿಸಲು ಧ್ಯಾನ ಮಾಡಿ, ಉಸಿರಾಟದ ಮೂಲಕ ನಮ್ಮ ಮನಸ್ಸು ಮತ್ತು ಆತ್ಮವನ್ನು ನಿಯಂತ್ರಿಸಬಹುದು. ರಾಮ ಮತ್ತು ಸೀತೆ ಒಂದಾದರೆ ಅಹಂ ನಾಶವಾಗುತ್ತದೆ.
ಮರ್ಯಾದ ಪುರುಷೋತ್ತಮ, ದಶರಥ ನಂದನ ಶ್ರೀರಾಮ ಹುಟ್ಟಿದ ದಿನವನ್ನು ಶ್ರೀರಾಮನವಮಿ ಹಬ್ಬವೆಂದು ಆಚರಣೆ ಮಾಡಲಾಗುತ್ತಿದೆ, ಶ್ರೀರಾಮನವಮಿ ಸಕಲ ಹಿಂದೂ ಧರ್ಮದವರಿಗೆಲ್ಲಾ ಬಹು ಮುಖ್ಯ ಧಾರ್ಮಿಕ ಹಬ್ಬವಾಗಿದೆ.
ಹಿಂದೂ ಸಂಪ್ರದಾಯದಲ್ಲಿ ರಾಮನನ್ನು ವಿಷ್ಣುವಿನ ಅವತಾರವಾಗಿ ಪೂಜಿಸಲಾಗುತ್ತದೆ. ರಾಮನವಮಿ ಹಬ್ಬವನ್ನು ಚೈತ್ರ ಮಾಸದ 9ನೇ ದಿನದಂದು ಆಚರಣೆ ಮಾಡಲಾಗುತ್ತದೆ.
ಚೈತ್ರ ಮಾಸದ ಶುಕ್ಲ ಪಕ್ಷದ ಪಾಡ್ಯದಿಂದ ನವಮಿವರೆಗೆ ರಾಮಾಯಣವನ್ನು ಭಕ್ತಿ, ಶ್ರದ್ಧೆಗಳಿಂದ ಪಾರಾಯಣ ಮಾಡಿ, ನವಮಿ ದಿನ ರಾಮ ಪಟ್ಟಾಭಿಷೇಕ ಪಾರಾಯಣ ಮಾಡಿ ಹಬ್ಬವನ್ನು ಪೂರ್ಣಗೊಳಿಸುತ್ತಾರೆ.
ಸರಳ ಹಾಗೂ ಸುಲಭ
ರಾಮನವಮಿ ಹಬ್ಬ ಅತ್ಯಂತ ಸರಳ ಹಾಗೂ ಸುಲಭವಾಗಿದ್ದು, ಈ ಹಬ್ಬವನ್ನು ದೇಶದಾದ್ಯಂತ ಬಹಳಷ್ಟು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಗುತ್ತದೆ. ಪ್ರಮುಖವಾಗಿ ಉತ್ತರ ಭಾರತದಲ್ಲಂತೂ ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ.
ರಾಮ ಮನೆ ದೇವರು ಇರುವವರು ಹಬ್ಬವನ್ನು 9 ದಿನಗಳ ಕಾಲ ಆಚರಣೆ ಮಾಡುತ್ತಾರೆ. ಚೈತ್ರ ಮಾಸದ ಶುಕ್ಲಪಕ್ಷದ ಪಾಡ್ಯದಿಂದ ನವಮಿವರೆಗೆ ರಾಮಾಯಣ ಪಾರಾಯಣ ಮಾಡಿ, ನವಮಿ ದಿನ ರಾಮ ಪಟ್ಟಾಭಿಷೇಕ ಪಾರಾಯಣ ಮಾಡಿ ಹಬ್ಬವನ್ನು ಪೂರ್ಣಗೊಳಿಸುತ್ತಾರೆ. ಹೀಗೆ 9 ದಿನದ ರಾಮನ ಉತ್ಸವ ಆಚರಿಸಲಾಗುತ್ತದೆ.
ರಾಮನವಮಿ ಆಚರಣೆ ಅತ್ಯಂತ ಸರಳ. ಸಾಮಾನ್ಯವಾಗಿ ರಾಮ ಪಟ್ಟಾಭಿಷೇಕ, ರಾಮ ಪಂಚಾಯತನದ ಪಟವನ್ನು ಇಟ್ಟು ಪೂಜೆ ಮಾಡುತ್ತಾರೆ, ಇದರಲ್ಲಿ ಶ್ರೀರಾಮನ ಜೊತೆಗೆ ಎಲ್ಲಾ ಸಹೋದರರು ಇರುತ್ತಾರೆ. ಶ್ರೀರಾಮಚಂದ್ರನಿಗೆ ಷೋಡಶೋಪಚಾರದಿಂದ ಪೂಜೆ ಮಾಡಬೇಕು. ಪಾನಕ ಕೋಸಂಬರಿಗಳನ್ನು ನೈವೇದ್ಯ ಮಾಡಿ ಇತರರಿಗೆ ಹಂಚಲಾಗುತ್ತದೆ. ರಾಮನ ಭಜನೆ, ಹಾಡುಗಳಿಂದ ರಾಮನ ಧ್ಯಾನ ಮಾಡುತ್ತಾರೆ. ಮತ್ತೊಂದು ವಿಶೇಷವೆಂದರೆ, ರಾಮನಾಮ ಬರೆಯುವುದು. ರಾಮನಾಮ ಜಪಿಸಿದರೆ ರಾಮ ನಮ್ಮನ್ನು ಸಂರಕ್ಷಿಸುತ್ತಾನೆಂಬ ನಂಬಿಕೆ ಇದೆ.
ಹಬ್ಬದ ದಿನದಂದು ರಾಮನ ಭಜನೆ, ಕೀರ್ತನೆ ಹಾಗೂ ಮೆರವಣಿಗಳನ್ನು ನಡೆಸಲಾಗುತ್ತದೆ.
ಸೂರ್ಯ ದೇವನ ಏಕೆ?
ರಾಮನವಮಿಯಂದು ಸೂರ್ಯ ದೇವನ ಪ್ರಾರ್ಥನೆಯೊಂದಿಗೆ ಹಬ್ಬ ಆರಂಭವಾಗುತ್ತದೆ. ಏಕೆಂದರೆ, ಶ್ರೀರಾಮನು ಸೂರ್ಯ ವಂಶಸ್ಥರಾಗಿದ್ದು, ಶಕ್ತಿಯ ಪ್ರತೀಕವಾಗಿರುವ ಸೂರ್ಯ ದೇವರ ಆರಾಧನೆ ಮೂಲಕ ರಾಮನವಮಿ ಆರಂಭವಾಗುತ್ತದೆ. ಹಬ್ಬದ ದಿನದಂದು ರಾಮನ ಸ್ತೋತ್ರ ಹಾಗೂ ಭಜನೆಗಳನ್ನು ಹಾಡುವ ಮೂಲಕ ದೇವರನ್ನು ಸಂಪ್ರೀತಿಗೊಳಿಸಲಾಗುತ್ತದೆ. ದೇಶದ ಹಲವು ರಾಮ ಮಂದಿರಗಳಲ್ಲಿ ವಿಶೇಷ ಪೂಜೆಗಳನ್ನು ಸಲ್ಲಿಸಲಾಗುತ್ತದೆ ಅದರಲ್ಲೂ ವಿಶೇಷವಾಗಿ ಅಯೋಧ್ಯೆಯಲ್ಲಿ ಶ್ರೀರಾಮನ ಜನ್ಮಸ್ಥಳಕ್ಕೆ ಭೇಟಿ ನೀಡಿ ಸರಯೂ ನದಿಯಲ್ಲಿ ಮಿಂದು ಶ್ರೀರಾಮನ ದರ್ಶನ ಮಾಡಿ ಪಾವನರಾಗುತ್ತಾರೆ. ದಕ್ಷಿಣ ಭಾರತದ ಮನೆಗಳಲ್ಲಿ, ಮುಖ್ಯವಾಗಿ ಕರ್ನಾಟಕದಲ್ಲಿ ಪಾನಕ ಹಾಗೂ ಕೋಸಂಬರಿಗಳನ್ನು ಬಂದವರಿಗೆ ನೀಡಿ ಆಚರಿಸಲಾಗುತ್ತದೆ.
ಈ ದಿನದಂದು ಉಪವಾಸವನ್ನು ಮಾಡುತ್ತಾರೆ ಇದು ಅತ್ಯಂತ ಶ್ರೇಷ್ಠ. ಬೆಳಗ್ಗೆಯಿಂದ ಮರುದಿನ ಬೆಳಗ್ಗೆಯವರೆಗೂ ಉಪವಾಸವನ್ನು ಮಾಡುತ್ತಾ ಈ ಸಮಯದಲ್ಲಿ ಶ್ರೀರಾಮ ಜಪ, ರಾಮಾಯಣ ಪಾರಾಯಣ, ಶ್ರೀ ರಾಮ ಸೀತಾ ಕಲ್ಯಾಣ್ಯೋತ್ಸವವನ್ನೂ ಮಾಡುತ್ತಾರೆ.
ತಮಿಳುನಾಡಿನ ರಾಮೇಶ್ವರಂನಲ್ಲಿ ರಾಮನ ಪೂಜೆಗಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಕರ್ನಾಟಕದಲ್ಲೂ ಕರ್ನಾಟಕ ಸಂಗೀತ ಮತ್ತು ಹಿಂದೂಸ್ತಾನಿ ಸಂಗೀತ ಕಛೇರಿಗಳನ್ನು ಆಯೋಜಿಸಲಾಗುತ್ತದೆ.
ಹಬ್ಬದ ದಿನದಂದು ಪ್ರತೀಯೊಬ್ಬರೂ ಜಾತಿ, ಧರ್ಮವೆಂಬ ಕಟ್ಟಳೆಗಳನ್ನ ಬದಿಗೊತ್ತಿ ಕೋಸಂಬರಿ, ಮಜ್ಜಿಗೆ ಹಾಗೂ ಪಾನಕ ಗಳನ್ನು ಹಂಚುವ ಮೂಲಕ ಸೌಹಾರ್ದತೆಯನ್ನು ಮೆರೆಯುತ್ತಾರೆ. ವಸುದೈವ ಕುಟುಂಬಕಂ
( ಇಡೀ ವಿಶ್ವವೇ ಒಂದು ಕುಟುಂಬ) ಎಂಬುದನ್ನು ಜಗತ್ತಿಗೆ ಸಾರಿ ಹೇಳಲು ಇಂತಹ ಹಬ್ಬಗಳು ಮಹತ್ವಪೂರ್ಣವಾಗಿವೆ.
***
ಡಾ.ಗುರುಪ್ರಸಾದ ಎಚ್ ಎಸ್
- ಮೂಲತಃ ಉಪನ್ಯಾಸಕರು. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನ ಹಳ್ಳಿಯವರು. ಪ್ರಸ್ತುತ ಹಗರಿಬೊಮ್ಮನಹಳ್ಳಿ ಜಿವಿಪಿಪಿ ಪದವಿ ಕಾಲೇಜನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತ ಜೊತೆಗೆ ಪತ್ರಿಕೆಗಳಿಗೆ ವೆಬ್ ನ್ಯೂಸ್ ಪೋಟ್೯ಲ್ ಗಳಿಗೆ ಲೇಖನ ಬರೆಯುತ್ತಿದ್ದಾರೆ.