ಬೆಂಗಳೂರು: ರಾಜಧಾನಿ ಬೆಂಗಳೂರು ಸಾವಿನ ಮನೆಯಾಗಿದೆ. ಇಡೀ ರಾಜ್ಯ ಕೋವಿಡ್ ಸೋಂಕಿನಿಂದ ತತ್ತರಿಸಿದೆ. ಆದರೆ, ರಾಜ್ಯ ಸರಕಾರ ಪ್ರಚಾರ ಮತ್ತು ಹಣದ ದುಂದುವೆಚ್ಛದಲ್ಲಿ ತೊಡಗಿದೆ ಎಂದು ಮಾಜಿ ಮುಖ್ಯಮಂತ್ರಿ ಟೀಕಾಪ್ರಹಾರ ನಡೆಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ರಾಜ್ಯ ಸರಕಾರವು ಇಂಥ ಕೃತ್ಯಗಳ ಮೂಲಕ ರಾಜ್ಯದ ಜನರನ್ನು ಅಪಹಾಸ್ಯ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ. ಅವರ ಟ್ವೀಟ್ ಮಾಡಿರುವ ಅಂಶಗಳು ಹೀಗಿವೆ;
ಆತ್ಮಸಾಕ್ಷಿಯ ನಡೆಯಲ್ಲ!
“ಕೊರೊನಾ ವೈರಸ್ ಹೊಡೆತಕ್ಕೆ ರಾಷ್ಟ್ರವೇ ತತ್ತರಿಸಿದೆ. ಜನ ಚಿಕಿತ್ಸೆ ಸಿಗದೆ ಪರದಾಡುತ್ತಿದ್ದಾರೆ. ಇಂಥ ಸೂತಕದ ಸಂದರ್ಭದಲ್ಲಿ ರಾಜ್ಯ ಸರಕಾರ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿ ಎಲ್ಲ ಪತ್ರಿಕೆಗಳ ಮುಖಪುಟದಲ್ಲಿ ಪ್ರಧಾನಿ ನಗುಮೊಗದ ಜಾಹೀರಾತೊಂದನ್ನು ನೀಡಿದೆ. ಈ ಮೂಲಕ ಜನರ ನೋವನ್ನು ಗೇಲಿ ಮಾಡಿದೆ. ಇದು ನಿಜಕ್ಕೂ ಆತ್ಮಸಾಕ್ಷಿಯ ನಡೆಯಲ್ಲ!”
ಪ್ರಚಾರಪ್ರಿಯತೆ ಸಹಿಸಲಾಗದು
“ಸರಕಾರ ಕೋವಿಡ್ ಅನ್ನು ನಿಭಾಯಿಸಿದ ರೀತಿ ಮತ್ತು ಅದರಲ್ಲಿ ನಡೆದಿರಬಹುದಾದ ಭ್ರಷ್ಟಾಚಾರದ ಬಗ್ಗೆ ಆರೋಪಗಳು ಬಂದವು. ಆದರೆ, ಕೋವಿಡ್ ವಿರುದ್ಧದ ಹೋರಾಟದಲ್ಲಿ ಸರಕಾರ ನೈತಿಕತೆ ಪ್ರಶ್ನೆ ಎದುರಿಸಬಾರದು ಎಂಬ ಕಾರಣಕ್ಕೆ ನಾವೆಲ್ಲರೂ ಸುಮ್ಮನಿದ್ದೆವು. ಆದರೆ, ಕಣ್ಣ ಮುಂದಿನ ಇಂಥ ಬೇಜವಾಬ್ದಾರಿತನ, ಪ್ರಚಾರಪ್ರಿಯತೆಯನ್ನು ಸಹಿಸಲಾಗದು.”
ಜನರ ಪ್ರಾಣ ರಕ್ಷಿಸಬೇಕು
“ಈ ದುರಂತ ಕಾಲದಲ್ಲಿ ಸರಕಾರ ಜನರ ಪ್ರಾಣ ರಕ್ಷಣೆಗಾಗಿ ಪಣತೊಡಬೇಕೆ ಹೊರತು, ಪ್ರಚಾರದಲ್ಲಿ ತೊಡಗಬಾರದಿತ್ತು. ಬಿಜೆಪಿಯ ಪ್ರಚಾರಪ್ರಿಯತೆ ಎಲ್ಲರಿಗೂ ತಿಳಿದಿರುವ ವಿಚಾರವೇ. ಆದರೆ, ಈ ಸನ್ನಿವೇಶದಲ್ಲಾದರೂ ಅದನ್ನು ನಿಲ್ಲಿಸಿ ಮಾದರಿ ನಡೆ ಅನುಸರಿಸಬೇಕಿತ್ತು. ಜನರ ವಿಶ್ವಾಸ ಗೆಲ್ಲಿ, ಇಲ್ಲದೇ ಹೋದರೆ, ನಿಮ್ಮ ಪ್ರಚಾರಗಳೆಲ್ಲವೂ ಋಣವಾಗುತ್ತದೆ.”
ಬರೀ ಮ್ಯಾರಥಾನ್ ಸಭೆಗಳಷ್ಟೇ
“ಕೋವಿಡ್ ತಡೆಯುವ ಕುರಿತು ಸರ್ಕಾರ ಮ್ಯಾರಥಾನ್ ಸಭೆಗಳನ್ನು ಮಾಡಿದೆ, ವಿರೋಧ ಪಕ್ಷದ ನಾಯಕರ ಸಲಹೆ ಪಡೆದಿದೆ. ಜನರನ್ನು ಸೋಂಕಿನಿಂದ ದೂರವಿಡಲು ಮಾರ್ಗಸೂಚಿಗಳನ್ನು ಮಂಗಳವಾರ ಪ್ರಕಟಿಸಿದೆ. ಆದರೆ, ಈಗಾಗಲೇ ಸೋಂಕಿಗೆ ತುತ್ತಾಗಿರುವ ಜನರನ್ನು ರಕ್ಷಿಸಲು, ಅವರ ಜೀವ ಉಳಿಸಲು ಏನು ಕ್ರಮ ಕೈಗೊಳ್ಳಲಾಗಿದೆ ಎಂಬುದರ ಬಗ್ಗೆ ಸರಕಾರ ಮಾತಾಡಬೇಕು.”
ಸರಕಾರದ ದೈನೇಸಿ ಸ್ಥಿತಿ
“ಒಂದೆಡೆ ಸೂಕ್ತ ಚಿಕಿತ್ಸೆ ಸಿಗದೇ ಸೋಂಕಿತರು ಪರದಾಡುತ್ತಿದ್ದಾರೆ. ಆರೋಗ್ಯ ಸೇವೆ ಒದಗಿಸಲಾಗದ ಸರಕಾರದ ದೈನೇಸಿ ಸ್ಥಿತಿಯ ಬಗ್ಗೆ ಜನರು ಆತಂಕಗೊಂಡಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಜನರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸವನ್ನು ಸರ್ಕಾರ ಮಾಡಬೇಕಲ್ಲವೇ? ಜನರ ರಕ್ಷಣೆಗಾಗಿ ಮಾಡಿಕೊಂಡಿರುವ ಆರೋಗ್ಯ ವ್ಯವಸ್ಥೆಯ ಬಗ್ಗೆ ಸರಕಾರ ಹೇಳಬೇಕಲ್ಲವೇ?”
“ಜನರನ್ನು ಯಾವುದೇ ಹಂತದಲ್ಲಿ ಸರ್ಕಾರ ರಕ್ಷಣೆ ಮಾಡುತ್ತದೆ. ಅವರ ಜೀವಕ್ಕೆ ಆಧಾರವಾಗಿರುತ್ತದೆ ಎಂಬ ವಿಶ್ವಾಸವನ್ನು ತುಂಬುವುದು ಅಗತ್ಯ. ಅದು ಬಿಟ್ಟು ಯಾವುದೇ ಕಠಿಣ ಕ್ರಮಗಳನ್ನು ಕೈಗೊಂಡರೂ ಅದು ನಗಣ್ಯ. ಈ ವಿಷಯವನ್ನು ಸರಕಾರ ಗಮನದಲ್ಲಿಟ್ಟುಕೊಳ್ಳಬೇಕು. ಆರೋಗ್ಯ ವ್ಯವಸ್ಥೆಯ ಕೊರತೆ ನೀಗಿಸುವ ಕ್ರಮಗಳ ಬಗ್ಗೆ ಸರಕಾರ ಮಾತಾಡಬೇಕು.”
ಹೀಗೆ ಟ್ವೀಟ್ ಮಾಡಿರುವ ಎಚ್ ಡಿ ಕುಮಾರಸ್ವಾಮಿ ಅವರು ತಾವು ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ಆಸ್ಪತ್ರೆಯಿಂದಲೇ ವಿಡಿಯೋ ಒಂದನ್ನು ಬಿಡುಗಡೆ ಮಾಡಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರಕಾರ ಬೇಜವಾಬ್ದಾರಿ ನಡವಳಿಕೆ ಬಿಡದಿದ್ದರೆ ಜನರೇ ರೊಚ್ಚಿಗೇಳಲಿದ್ದಾರೆಂದು ಅವರು ಎಚ್ಚರಿಕೆ ನೀಡಿದ್ದಾರೆ.
ದಿಲ್ಲಿ ಪತ್ರಿಕೆಗಳಲ್ಲೂ ಮೋದಿ ಜಾಹೀರಾತು
ಕರ್ನಾಟಕದ ಕನ್ನಡ ಮತ್ತು ಇಂಗ್ಲೀಷ್ ಪತ್ರಿಕೆಗಳಲ್ಲಿ ಮಾತ್ರ ಮೋದಿ ಜಾಹೀರಾತು ನೀಡಿರುವುದಷ್ಟೇ ಅಲ್ಲ, ದೆಹಲಿಯ ಎಲ್ಲ ಇಂಗ್ಲೀಷ್ ಮತ್ತು ಹಿಂದಿ ಪತ್ರಿಕೆಗಳಿಗೂ ಈ ಜಾಹೀರಾತು ಕೊಡಲಾಗಿದೆ. ಮೋದಿ ಅವರನ್ನು ಓಲೈಸಿ ಖುಷಿಪಡಿಸಬೇಕು ಎಂಬುದನ್ನು ಬಿಟ್ಟರೆ ಮುಖ್ಯಮಂತ್ರಿಗೆ ಬೇರೆ ಉದ್ದೇಶ ಇಲ್ಲ. ಜನರ ದುಡ್ಡನ್ನು ಹೀಗೆ ಪೋಲು ಮಾಡುವುದು ಅಕ್ಷಮ್ಯ ಎಂದು ಎಚ್‌ಡಿಕೆ ಟೀಕಿಸಿದ್ದಾರೆ.
ಇನ್ನೊಂದೆಡೆ ಸಾಮಾಜಿಕ ಜಾಲತಾಣಗಳಲ್ಲೂ ಈ ಜಾಹೀರಾತು ಹೆಚ್ಚು ಸದ್ದು ಮಾಡುತ್ತಿದೆ.
- ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..