SUNDAY SPECIAL
DG Pavan Kalyan Bagepalli
ಬೆಟ್ಟದ ತುದಿಯಲ್ಲಿ ನಿಂತು ಸುತ್ತಲೂ ಕಣ್ಣಾಡಿಸಿದಾಗ ಸುಂದರ ಪರಿಸರ, ಅಲ್ಲಲ್ಲಿ ಅಲ್ಪಸ್ವಲ್ಪ ನೀರು ತುಂಬಿದ ಕೆರೆಗಳು… ಪುಟ್ಟ ಪುಟ್ಟ ಹತ್ತಾರು ಗ್ರಾಮಗಳು ಕಂಡರೆ, ಬೆಟ್ಟವೆಲ್ಲ ಸುತ್ತಾಡಿದರೆ ಅದ್ಭುತವಾದ ಬುರುಜುಗಳು, ಐತಿಹಾಸಿಕ ಲಿಪಿಗಳನ್ನು ಮತ್ತು ಕೆತ್ತಿದ ಬಂಡೆಗಲ್ಲುಗಳನ್ನೂ ಕಾಣಬಹುದು.
ಸುಂದರ ಪ್ರಕೃತಿಯ ಮಡಿಲಲ್ಲಿನ ಈ ಬೆಟ್ಟವನ್ನು ಗಮನಿಸಿದರೆ ಬೇಸರವೂ ಆಗುತ್ತದೆ. ಏಕೆಂದರೆ ಅಲ್ಲಲ್ಲಿ ಹಂಪಿಯಂತೆ ಹಾಳಾದ ಆಗಿನ ಕಾಲದ ಮನೆಗಳ, ಅಪರೂಪದ ನಿರ್ಮಾಣಗಳ ಕುರುಹುಗಳು ಕಾಣಿಸುತ್ತವೆ.
ಐತಿಹಾಸಿಕ ನಂದಿಬೆಟ್ಟದಲ್ಲಿರುವಂತೆ ಈ ಬೆಟ್ಟದ ಮೇಲೂ ಸುತ್ತಲೂ ಕೋಟೆ ಇದೆ. ಅಲ್ಲಲ್ಲಿ ಹಾಳಾಗಿದೆ. ಈ ಕೋಟೆ ಮತ್ತೊಂದು ವಿಶೇಷತೆಯೆಂದರೆ ತಳಭಾಗವನ್ನು ಕಲ್ಲುಗಳ ಜೋಡಣೆಯಿಂದ ಮೇಲ್ಭಾಗದಲ್ಲಿ ಇಟ್ಟಿಗೆಯಿಂದ ನಿರ್ಮಿಸಲಾಗಿದೆ.
ಯಾವುದು ಆ ಬೆಟ್ಟ? ಅದರ ಇತಿಹಾಸ ಏನು? ಎಂತವರಿಗೂ ಕುತೂಹಲ ಮೂಡಿಸುವ ಬೆಟ್ಟವದು. ಇದು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಮಾರಗಾನಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಿಕುಂಟೆ ಬೆಟ್ಟ. ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದು.
ಜಿಲ್ಲಾ ಕೇಂದ್ರದಿಂದ ಸುಮಾರು 60 ಕಿ.ಮೀ ದೂರವಿದೆ. ತಾಲೂಕು ಕೇಂದ್ರದಿಂದ ಸುಮಾರು 20 ಕಿ.ಮೀ ದೂರದ ಮಾರಾಗಾನಕುಂಟೆ ಗ್ರಾ.ಪಂ. ವ್ಯಾಪ್ತಿಯಲ್ಲಿನ ದೇವಿಕುಂಟೆ ಗ್ರಾಮದ ಅಕ್ಕಮ್ಮಬೆಟ್ಟ ಎಂದು ಕರೆಯಲ್ಪಡುವ ಐತಿಹಾಸಿಕ ಸ್ಥಳಕ್ಕೆ 700 ವರ್ಷಗಳ ಇತಿಹಾಸವಿದೆ. ಇಲ್ಲಿ ಹಲವು ಸ್ಮಾರಕ, ಕಟ್ಟಡ, ಶಾಸನಗಳು, ಕೆತ್ತನೆಗಳು ಹಾಗೂ ಕೋಟೆಯ ಅವಶೇಷಗಳನ್ನು ಕಾಣಬಹುದು.
ಅಕ್ಕಮ್ಮ ಬೆಟ್ಟ ಎಂದೇ ಪ್ರಸಿದ್ಧವಾಗಿರುವ ದೇವಿಕುಂಟೆ ಬೆಟ್ಟದಲ್ಲಿ ವಿಜಯನಗರ ಸಾಮ್ರಾಜ್ಯದ ಸಮಕಾಲಿನ ಕೋಟೆ, ಬುರುಜುಗಳಿವೆ. ಈ ಬೆಟ್ಟಕ್ಕಿದ್ದ ಪ್ರಾಚೀನ ಹೆಸರು ʼಇಟ್ಟಿಗೆರಾಯನ ದುರ್ಗ ಕೋಟೆʼ ಎಂದು. ಈ ಹೆಸರು ಬರಲು ಈ ಕೋಟೆಯನ್ನು ಇಟ್ಟಿಗೆಯಿಂದ ಕಟ್ಟಿರುವುದೇ ಕಾರಣ.
ಕಟ್ಟಿಸಿದವರು ಯಾರು?
ಇಲ್ಲಿ ಕೋಟೆಯನ್ನು ಕಟ್ಟಿಸಿದವರು ವಿಜಯನಗರ ಸಾಮ್ರಾಜ್ಯದ ಸಾಮಂತ ಅರಸನಾಗಿದ್ದ ʼಲಕುಮನ್ನʼ ಎಂದು ಹೇಳಲಾಗುತ್ತಿದೆ. ಇವರ ನಂತರ ʼಕನ್ನರಿ ದೇವನುʼ ಮಲಪ್ಪಗಲ್ಲು ದ್ವಾರ ಮತ್ತು ದೊಣೆಯನ್ನು ಕಟ್ಟಿಸಿದರು.
ಇಟ್ಟಿಗೆರಾಯನ ದುರ್ಗಕೋಟೆ ಆಡಳಿತ ಕೆಲ ಪ್ರದೇಶಗಳ ರಾಜರೊಂದಿಗೆ ಸಂಪರ್ಕ ಹೊಂದಿದ್ದರು. ಜಿಲ್ಲೆಯ ನಂದಿ ಕೋಟೆ, ಚಿಕ್ಕಬಳ್ಳಾಪುರ ಕೋಟೆ, ಗುಮ್ಮನಾಯಕನ ಪಾಳ್ಯ, ತುಮ್ಮಲ ಹೊಸಕೋಟೆ, ಗುಡಿಬಂಡೆ ಕೋಟೆ, ಸಾದಲಿ ಕೋಟೆ, ಶಿಡ್ಲಘಟ್ಟ ಕೋಟೆ, ಬುರುಡುಗುಂಟೆ ಕೋಟೆಳೊಂದಿಗೆ ಸಂಪರ್ಕ ಹೊಂದಿದ್ದರು.
ಈ ದುರ್ಗದ ಆಡಳಿತದ ಸಮಯ ಸುಮಾರು 1200ರಿಂದ 1800ನೇ ವರ್ಷದವರೆಗೂ ನಡೆಸಿದ್ದಾರೆ ಎಂದು ಲಭ್ಯವಿರುವ ಶಾಸನಗಳು ತಿಳಿಸುತ್ತವೆ. ಒಂದು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ನಿಡುಮಾಮಿಡಿ ಮಠಕ್ಕೂ ಆಶ್ರಯ ಪಡೆದಿತ್ತು ಎಂದು ತಿಳಿದು ಬರುತ್ತದೆ.
ಆಗಿನ ಕಾಲದ ಜನರು ದೂರದ ಊರುಗಳ ಮೇಲೆ ದಾಳಿ ನಡೆಸಿ ದರೋಡೆ ಮಾಡುತಿದ್ದರು ಎಂದು ಹಿರಿಯರು ತಿಳಿಸಿದ್ದಾರೆ. ಇಲ್ಲಿನ ಪುರಾತನ ಹಳ್ಳಿಗಳ ಹೆಸರುಗಳು ಇಟ್ಟಿಗೆ ದುರ್ಗ (ಅಕ್ಕಮ್ಮ ಬೆಟ್ಟ), ಇಟ್ಟುಕೂಲವೀರಾಪುರ (ಈಗಿನ ಹೆಸರು ದೇವಿಕುಂಟೆ), ಬಂಗಾರುಪಲ್ಲಿ (ಈಗಿನ ಹೆಸರು ಹೊನ್ನಂಪಲ್ಲಿ), ಗೂನಿವಾರಪಲ್ಲಿ, ಜಲಪಾತಹಳ್ಳಿ, ಗುಣಮರದಹಳ್ಳಿ, ಒಂಕನಹಳ್ಳಿ.. ಹೀಗೆ ಹಲವು ಊರುಗಳ ಹೆಸರುಗಳೇ ಸಾಕ್ಷಿಯಾಗುತ್ತವೆ. ಕಾಲಾನುಕ್ರಮದಲ್ಲಿ ಹೆಸರುಗಳು ಬದಲಾಗುತ್ತಾ ಇಂದಿನ ಹೆಸರುಗಳಿಂದ ಕರೆಯಲಾಗುತ್ತಿದೆ ಎಂದು ಚಾಪಲ ಬಾವನ್ನ ಹೇಳುತ್ತಿದ್ದರು. ಬಾವನ್ನ ಅವರಿಗೆ ದೇವಿಕುಂಟೆ ಬೆಟ್ಟದ ಎರಡು ತಲೆಮಾರುಗಳ ಕಥೆ ಗೊತ್ತಿತ್ತು. ವರ್ಷದ ಹಿಂದೆಯಷ್ಟೇ ಅವರು ತೀರಿಕೊಂಡರು.
ಕರ್ನಾಟಕದ ಎಪಿಗ್ರಫಿ ಪುಸ್ತಕದಲ್ಲಿ ಬಿ.ಎಲ್ ರೈಸ್‌ನ ಬಾಗೇಪಲ್ಲಿ ತಾಲೂಕಿನ ಸೀರಿಯಲ್ ನಂಬರ್ 33, 34, 42, 43 ನಾಲ್ಕು ಶಾಸನಗಳು ಈ ಇಟ್ಟಿಗೆರಾಯನ ದುರ್ಗದ ಬಗ್ಗೆ ವಿವರಿಸುತ್ತದೆ.
ದೇವಿಕುಂಟೆಯ ಪಶ್ಚಿಮಕ್ಕಿದೆ ಅಕ್ಕಮ್ಮ ಬೆಟ್ಟ
ದೇವಿಕುಂಟೆಯ ಪಶ್ಚಿಮ ದಿಕ್ಕಿಗೆ ಎತ್ತರವಾದ ಹಾಗೂ ತ್ರಿಭುಜಾಕಾರದಲ್ಲಿ ಎದ್ದು ಕಾಣುವ ಬೆಟ್ಟ ದಕ್ಷಿಣ ದಿಕ್ಕಿಗೆ ಹೊರಟಾಗ ಮರ, ಗಿಡ, ಕಲ್ಲು, ಬಂಡೆ, ಪೊದೆ, ಬಳ್ಳಿ ಕಾಣುತ್ತದೆ. ಪೂರ್ವ ದಿಕ್ಕಿನಲ್ಲಿ ಬೆಟ್ಟಗಳನ್ನು ಆವರಿಸಿಕೊಂಡು ಹೋಗಿ ಮುಂದುವರಿದಿದೆ. ಉತ್ತರ ದಿಕ್ಕಿಗೆ, ಅಂದರೆ; ಬೆಟ್ಟದ ಕೆಳಗಿನಿಂದ ಮೇಲಿನ ಅಂದರೆ ಬೆಟ್ಟದ ತಪ್ಪಲು ತಲುಪುವ ತನಕ ಕಲ್ಲು ಬಂಡೆಯಿಂದ ಕೂಡಿದೆ. ಇದರ ಮೇಲೆ ಕೋಟೆಯನ್ನು ಭದ್ರವಾಗಿ ಕಟ್ಟಿದರೆ. ಈ ಭಾಗದಲ್ಲಿ ಬಂಡೆಯ ಮೇಲೆ ದೊಣೆ ಮತ್ತು ಅಕ್ಕಮ್ಮ ದೇವಸ್ಥಾನ ಇದೆ. ಇದರ ಮುಂದೆ ಗೆನ್ನೇರು ಮರಗಳಿವೆ.
ಈ ಕೋಟೆಯನ್ನು ಇಲ್ಲಿ ಕಟ್ಟಲು ಕಾರಣ ಇಲ್ಲಿನ ದೊಣೆಯಲ್ಲಿ ಸಂಗ್ರಹವಾಗುವ ನಿರಂತರ ನೀರು ಸಂಪನ್ಮೂಲ ಕಾರಣದಿಂದ ರಾಜರು ಇಲ್ಲಿ ಕೋಟೆಯನ್ನು ಕಟ್ಟಿದ್ದಾರೆ. ಇಲ್ಲಿನ ದೊಣೆಯ ನೀರು ಸರ್ವಋತುವಿನಲ್ಲಿಯೂ ಇರುತ್ತವೆ ಇದೂ ಸಹ ಮುಖ್ಯವಾದದು ಆಗಿದೆ.
ಈ ಊರಿನ ಪೂರ್ವ ದಿಕ್ಕಿನ ಮೂಲಕ ಸುಮಾರು ಅರ್ಧ ತಾಸು ನಡೆದರೆ ಕಲ್ಲುಗಳಿಂದ ಕಟ್ಟಿರುವ ಬುರುಜು ಮತ್ತು ಕೋಟೆಗಳು ಕಾಣುತ್ತವೆ. ಈ ಬೆಟ್ಟಕ್ಕೆ ಕಾಲುದಾರಿಯಲ್ಲಿ ನಡೆದು ಹೋಗುವಾಗ ಒಂದು ಗುಂಡು ಕಲ್ಲು ಇದೆ. ಈ ಗುಂಡಿನ ಮೇಲೆ ಹೆಣ್ಣಿನ ತಲೆಗೂದಲಿನ ಮುಡಿಯ ಕೆತ್ತನೆ ಮಾಡಲಾಗಿದ ಆ ಗುಂಡಿಗೆ ʼಲಂಜ ಗುಂಡುʼ ಎಂದು ಕರೆಯುತ್ತಾರೆ. ಇದಕ್ಕೆ ಅಂಟಿಕೊಂಡು ಕುದರೆ ಮತ್ತು ಆನೆಗಳ ಕೋಣೆಗಳು ಇದ್ದವು. ಆದರೆ ಕಾಲಾನುಕ್ರಮದಲ್ಲಿ ಪಾಳು ಬಿದ್ದಿವೆ. ಕನ್ನಿರಪ್ಪ ಗುಡಿ ಮತ್ತು ಇದರ ಮುಂದೆ ವೀರಗಲ್ಲು ಹಾಗೂ ಬಸದಿಯನ್ನು ಕಟ್ಟಿದ್ದಾರೆ. ʼಲಂಜ ಗುಂಡುʼ ಮುಂದೆ ಹೋದರೆ ʼಪರಿಶೀಲನೆ ಠಾಣೆʼ ಇದೆ.
ಇದರ ಮೇಲೆ ಬುರುಜು ಮತ್ತು ಗೋಡೆ ಮೆಟ್ಟಿಲುಗಳು ಎಡಭಾಗಕ್ಕೆ ʼಮದುಗಿಯಾರ ಬಾವಿʼ, ಇದರ ಕೆಳಗೆ ಕೆಲ ಸ್ಮಶಾನಗಳು, ಅದರ ಮೇಲೆ ಹೋದರೆ ಗಿಳಿಗಳ ದ್ವಾರ ಹಾಗೂ ಕೋಟೆಯ ಹೆಬ್ಬಾಗಿಲು ಕಾಣುತ್ತದೆ. ಈ ದ್ವಾರದಲ್ಲಿ ಹೋದರೆ ʼರಣಬಂಡ್ಲʼ ದ್ವಾರ, ಇದರಿಂದ ಒಳಗಡೆ ಹೋಗಿ ಎಡಭಾಗಕ್ಕೆ ಹೋದರೆ ಪೂರ್ವದ ಕೋಟೆ ಕಾಣುತ್ತದೆ.
ಇಲ್ಲಿ ನಾಲ್ಕು ಬುರುಜುಗಲು ಇವೆ. ಇದರಲ್ಲಿ ʼಆಗ್ನೇಯ ದಿಕ್ಕಿಗೆ ಆಂಜನೇಯಸ್ವಾಮಿ ಮೂರ್ತಿʼ ಕೆತ್ತನೆ ಮಾಡಿದ್ದಾರೆ. ಈ ಭಾಗವನ್ನು ʼಕೆಂಪುಕೋಟೆʼ ಎಂದು ಕರೆಯುತ್ತಾರೆ. ಗಿಳಿಗಳ ದ್ವಾರದ ಕೋಟೆಯಿಂದ ʼಕಲ್ಯಾಣಿ ದ್ವಾರʼದಲ್ಲಿ ಹೋದರೆ ʼಶಿವನ ಗುಡಿʼ ಮುಂದೆ ಕಲ್ಯಾಣಿ ಇದೆ. ಎಡಭಾಗಕ್ಕೆ ಕೆಳಗೆ ಹೋದರೆ ಶಾಸನವನ್ನು ಕೆತ್ತಿರುವುದು ಕಾಣುತ್ತದೆ. ಹಾಗೆಯೇ ಜನರು ಹೋಗಲು ಕಲ್ಲಿನ ಬಂಡೆಯ ಮೇಲೆ ಮೆಟ್ಟಿಲುಗಳನ್ನು ಕೆತ್ತನೆ ಮಾಡಿದ್ದಾರೆ. ಹೋಗುವಾಗ ಬಲಭಾಗಕ್ಕೆ ಬಂಡೆಯ ಮೇಲೆ ʼವಿಗಸಿಯದಂ ನಾಯಕರ ದೊಣೆʼ ಎಂದು ಕೆತ್ತನೆ ಮಾಡಿದ್ದಾರೆ.
ಇದರ ಮುಂದೆ ಕೊಳ ಇದೆ. ಹಾಗೆಯೇ ಕೆಳಮುಖವಾಗಿ ನಡೆದರೆ ದೊಣೆ ದಡದಲ್ಲಿ ಅಕ್ಕಮ್ಮ ದೇವಸ್ಥಾನ ಕಾಣುತ್ತದೆ. ಇದರ ಮುಂದೆ ಸ್ವಲ್ಪ ಹೋದರೆ ಮುಸ್ಲಿಂ ನಮಾಜು ಕಟ್ಟೆ ಕಾಣುತ್ತದೆ. ಶಿವನ ಗುಡಿಯ ಪಕ್ಕದಲ್ಲಿ ರಚ್ಚಬಂಡೆಯ ದ್ವಾರದ ಮೂಲಕ ಹೋದರೆ ಮೊದಲು ನ್ಯಾಯ ತೀರ್ಮಾನದ (ರಚ್ಚಬಂಡೆ) ಕಾಣುತ್ತದೆ. ಮುಂದೆ ಆಂಜನೇಯ ಸ್ವಾಮಿ ಮೂರ್ತಿ, ಬೆಣ್ಣೆಯ ಕೋಣೆ, ಪಾಲು ಬಿದ್ದಿರುವ ಮನೆಗಳು, ಬಾವಿ, ಹೊಂಡಗಳು, ಮೊಹರಂ ಮನೆ, ವೀರಗಲ್ಲುಗಳ ಕೆತ್ತನೆ, ಸಿಡಿಮದ್ದಿನ ಕೋಣೆ, ಭತ್ತದ ಕೋಣೆ ಕಾಣಬಹುದು. ವೀರಗಲ್ಲುವಿಂದ ಎಡಭಾಗಕ್ಕೆ ಹೋದರೆ ಕೋಟೆಯ ಗೋಡೆ ಕಾಣುತ್ತವೆ.
ಹಾಗೆಯೇ ಮೂರು ಬುರುಜುಗಳು ಕಾಣುತ್ತವೆ. ಅಲ್ಲಿ ಸೈನಿಕರು ʼಪಗಡೆ ಆಟʼ ಆಡುವ ಸ್ಥಳ ಇದೆ. ಇದರ ಮುಂದೆ ಕೋಟೆಯ ಕೆಳಗೆ ಶಾಸನವನ್ನು ಕೆತ್ತನೆ ಮಾಡಿದ್ದಾರೆ. ಈ ಶಾಸನದ ಮೇಲೆ ಕೆಲ ಗುರುತುಗಳು ಇವೆ. (ಹಸು, ಸೂರ್ಯ, ಹೆಣ್ಣಿನ ತಲೆಯ ಮುಡಿ, ಹುಲಿಯ ಹೆಜ್ಜೆ) ಕಾಣುತ್ತವೆ.
ದೇವಿಕುಂಟೆಯ ನಾಲ್ಕು ದಿಕ್ಕುಗಳಿಗೆ ಮಾಹಿತಿ ಮನೆಗಳನ್ನು ನಿರ್ಮಿಸಲಾಗಿದೆ. ಈ ಕೋಟೆಯನ್ನು ಕಟ್ಟಲು ದೇವಿಕುಂಟೆ ಬಳಿ ʼಸಂಜೀವಮ್ಮ ಕೆರೆʼಯನ್ನು ಕಟ್ಟಿಸಿದ್ದಾರೆ. ಇಲ್ಲಿನ ಇಟ್ಟಿಗೆಯ ದುರ್ಗ ಕೋಟೆಯನ್ನು ಕಟ್ಟಲು ದೇವಿಕುಂಟೆ ಬಳಿ ಸಂಜೀವಮ್ಮ ಕೆರೆಯಲ್ಲಿ ತಯಾರಿಸಿದ ಇಟ್ಟಿಗೆಗಳನ್ನೇ ಆನೆಗಳ ಮೂಲಕ ಬೆಟ್ಟಕ್ಕೆ ಸಾಗಿಸಿ ಸೇತುವೆಗಳನ್ನು, ಹಲವಾರು ದ್ವಾರಗಳನ್ನು, ದೊಣೆಗಳನ್ನು, ಕೋಟೆ, ಬುರುಜು, ಕಟ್ಟಡಗಳು, ಸ್ಮಾರಕಗಳನ್ನು ಕಟ್ಟಿದ್ದಾರೆ.
ಇಟ್ಟಿಗೆ ಸಹಾಯದಿಂದ ಇಟ್ಟಿಗೆಯ ದುರ್ಗದ ಕೋಟೆಯನ್ನು ಕಟ್ಟಿದರೆ, ಇಲ್ಲಿನ ನೀರಾವರಿ ಸ್ಥಳಗಳು ಬೆಟ್ಟದಲ್ಲಿ ದೊಣೆ, ಒಕ್ಕರಿಯ ಬಾವಿ, ಮದಗರ ಬಾವಿ, ಸಂಜೀವಮ್ಮ ಕೆರೆ, ಬೆಟ್ಟದಲ್ಲಿನ ಹಳ್ಳಗ ಸಹಕಾರವಾಗಿ ಇತ್ತು. ಈ ಗ್ರಾಮದಲ್ಲಿ ಪ್ರಾಚೀನ ಕಾಲದ ನಂದಿ ವಿಗ್ರಹ, ಕಾಳಿಕಮ್ಮ ಗುಡಿ, ಊರಿನ ಸುತ್ತಲೂ ರಕ್ಷಣಾ ಗೋಡೆ ನಿರ್ಮಾಣ, ಪಾಪಮ್ಮ ಬಾವಿ, ಚಿಂತಲ ಗುಂಟ, ನಳನ್ನ ಕುಂಟೆ, ಗುಣಮನು ಕುಂಟೆ, ಜೋವಪ್ಪ ಕುಂಟೆ, ನಂಚೆರವು ಕೆರೆ ನೀರಾವರಿಗಾಗಿ ಅರಸರು ಕಟ್ಟಿದ್ದಾರೆ.
ದೇವಿಕುಂಟೆ ಸುತ್ತಲಿನ ನಾಲ್ಕು ದಿಕ್ಕುಗಳಲ್ಲಿ ಮಾಹಿತಿ ಮನೆಗಳನ್ನು ಕಟ್ಟಿದ್ದಾರೆ. ದರೋಡೆಗಳಿಂದ ಹಾಗೂ ಇಟ್ಟಿಗೆರಾಯನ ದುರ್ಗದ ಕೋಟೆ ರಾಜರಿಗೆ ಶತ್ರುಗಳು ಹೆಚ್ಚಾಗಿ ಒಂದು ಜಾತ್ರೆ ದಿನ ಮುಂಜಾನೆ ಶತ್ರುಗಳಿಂದ ದಾಳಿಯಾಗಿ ಕೋಟೆ ಪತನವಾಗಿದೆ ಎಂದು ಹಿರಿಯರು ಹೇಳುತ್ತಾರೆ.
ಪುರಾತತ್ವ ಇಲಾಖೆಯವರು ಬಂದಿದ್ದರಂತೆ!
ದೇವಿಕುಂಟೆ ಗ್ರಾಮದ ಹಿರಿಯ ಮಹಿಳೆ ರತ್ನಮ್ಮ ಅವರು ತಿಳಿಸಿದಂತೆ, 1990ರಲ್ಲಿ ಕರ್ನಾಟಕ ಸರಕಾರದ ಪುರಾತತ್ವ ಇಲಾಖೆಯ ಅಧಿಕಾರಿಗಳು ನೂಲು ಹಗ್ಗವನ್ನು ಕಲ್ಲಿಗೆ ಕಟ್ಟಿ ದೊಣೆಯಲ್ಲಿಗೆ ಬಿಟ್ಟು ಪ್ರಯತ್ನಿಸಿದರು. ಅದರ ಅಂತಿಮ ಸ್ಥಳ ಸಿಕ್ಕಿಲ್ಲ, ಬರೀ ಬೇರುಗಳು ಇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಹಾಗೂ ದೇವಿಕುಂಟೆಯ ಬಳಿ ಇರುವ ಸೇತುವೆ ಬಾವಿಗೆ ದೊಣೆ ನೀರಿನ ಸಂಪರ್ಕ ಇದೆ ಎಂದು ಹಿರಿಯರು ತಿಳಿಸಿದ್ದಾರೆ.
ದೇವಿಕುಂಟೆ ʼಸೈಸವಳಿ ದರ್ಗಾದʼ ಹಿನ್ನೆಲೆಯಲ್ಲಿ ಅಕ್ಕಮ್ಮ ಬೆಟ್ಟದಲ್ಲಿ ಮುಸ್ಲಿಂ ಧರ್ಮ ಸಂತರದ ಸೈಸವಲಿ ಇದ್ದರು. ಇವರು ದೈವದೃಷ್ಟಿ ಉಳ್ಳವರು ಆಗಿದ್ದರು. ಇವರ ತಲೆಯನ್ನು ಶತ್ರುಗಳು ಕತ್ತರಿಸಿದರು ಎನ್ನಲಾಗಿದೆ. ಅದು ಬೆಟ್ಟದಿಂದ ಜಲಪಾತದ ಕೆಳಗೆ ಪೊದೆಯಲ್ಲಿಗೆ ಬಿದ್ದಿತ್ತು ಎಂದು ದೇವಿಕುಂಟೆ ಗ್ರಾಮದ ಅಜರತ್ʼಗೆ ಕನಸಿನಲ್ಲಿ ಬಂದಿತ್ತು. ಬೆಳಗ್ಗೆ ಹೋಗಿ ನೋಡಿದರೆ ಇಲ್ಲಿ ತಲೆ ಇದೆ, ಅದನ್ನು ಅವರು ಹೇಳಿದ ಹಾಗೆ ದೇವಿಕುಂಟೆ ಗ್ರಾಮದ ಬಳಿ ಸಮಾದಿಙ ಮಾಡಲಾಗಿತ್ತು. ಈಗ ಇದು ಹಿಂದೂ-ಮುಸ್ಲಿಂ ಪ್ರಸಿದ್ದ ʼಧಾರ್ಮಿಕ ದರ್ಗಾʼ ಆಗಿದೆ ಎಂದು ಕೆಲವರು ಹೇಳುತ್ತಾರೆ.
ಬಾವಿಯಲ್ಲಿ ತುಂಬಿತ್ತಾ ನೆತ್ತರು?
ಇದನ್ನು 13ನೇ ಶತಮಾನದಲ್ಲಿ ಕನ್ನಾರಿ ದೇವನ ಮಲ್ಲಪ್ಪಗಲ್ಲು ಇಟ್ಟಿಗೆರಾಯನ ದುರ್ಗದ ಜನರಿಗಾಗಿ ನೀರಾವರಿ ಸೌಕರ್ಯಕ್ಕಾಗಿ ಕಟ್ಟಿಸಿದರು. ಆದರೆ ಈ ಬಾವಿಯಲ್ಲಿ ಯುದ್ಧದಿಂದ ರಕ್ತ ಹರಿದು ಮಳೆಗೆ ನೀರಿನ ರೂಪದಲ್ಲಿ ಹರಿದು ತುಂಬಿದ ದಾಖಲೆ ಬಾವಿಯ ಸುತ್ತಲಿನ ಕಲ್ಲಿನ ಕಟ್ಟಡದಲ್ಲಿ ಕಾಣಬಹುದು ಎನ್ನುತ್ತಾರೆ ಗ್ರಾಮದ ನಿವಾಸಿ ಡಿ.ಸಿ.ಶ್ರೀನಿವಾಸ್. ಇವರು ತಮ್ಮ ಬಾಲ್ಯದಿಂದಲೂ ಬೆಟ್ಟದ ಕೌತುಕವನ್ನೇ ನೋಡಿಕೊಂಡು ಬೆಳೆದವರು.
ದೇವಿಕುಂಟೆ ಗ್ರಾಮದಿಂದ ಆಂಧ್ರ ಪ್ರದೇಶಕ್ಕೆ ಹೋಗುವ ʼಅರೆ ದಾರಿಯ ವ್ಯವಸ್ಥೆʼ ಇದೆ. ಕಾಡಿನ ಮದ್ಯದಲ್ಲಿ ಕಟಮೇಯಿ ಗುಡ್ಡದ ಬಳಿ ʼವೀರಗಲ್ಲುʼ ಕೆತ್ತನೆ ನೋಡಬಹುದು.
ಈ ಐತಿಹಾಸಿಕ ಸ್ಥಳದ ವಿಶೇಷತೆ ಎಂದರೆ, ಬೆಟ್ಟವು ಎತ್ತರ ವಿನ್ಯಾಸ ಹೊಂದಿದೆ. ಕೋಟೆ, ಬುರುಜು, ಕಟ್ಟಡಗಳು, ಸ್ಮಾರಕಗಳು, ದೊಣೆ, ದೇವಸ್ಥಾನಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇಲ್ಲಿನ ಬಂಡೆಗಳು ಚಾರಣಕ್ಕೂ, ಟ್ರೆಕ್ಕಿಂಗ್ ಹೇಳಿ ಮಾಡಿಸಿದಂತಿವೆ. ಇಲ್ಲಿ ಚಲನಚಿತ್ರ ಚಿತ್ರೀಕರಣಕ್ಕೂ ಒಳ್ಳೆಯ ಅವಕಾಶವಿದೆ.
ಇಲ್ಲಿ ಬೆಟ್ಟಕ್ಕೆ ರಸ್ತೆ, ವಿದ್ಯುತ್ ದೀಪ ವ್ಯವಸ್ಥೆ ಮಾಡಿ ಬೆಟ್ಟದ ಮೇಲಿನ ಕಟ್ಟಡಗಳನ್ನು ರಕ್ಷಿಸುವ ಕೆಲಸಗಳನ್ನು ಪುರಾತತ್ತ್ವ ಹಾಗೂ ಪ್ರವಾಸೋದ್ಯಮ ಇಲಾಖೆ ಮಾಡಬೇಕು.
ಜಿಲ್ಲಾಡಳಿತ, ಸ್ಥಳೀಯ ಶಾಸಕರು, ಜಿಲ್ಲಾ ಸಚಿವರು ಗಮನ ಹರಿಸಬೇಕು. ಇಲ್ಲವಾದರೆ, ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನಲ್ಲೊಂದು ಹಾಳು ಹಂಪೆ ಹಾಗೆಯೇ ಉಳಿದುಬಿಡುತ್ತದೆ. ಅದು ಯಾರಿಗೂ ಶೋಭೆ ತರುವುದಿಲ್ಲ.
ಡಿ.ಜಿ ಪವನ್ ಕಲ್ಯಾಣ್ I ಓದಿದ್ದು ಇಂಗ್ಲೀಷ್ ಲಿಟರೇಚರ್. ಹವ್ಯಾಸ ಇತಿಹಾಸ ಮತ್ತು ಸಂಶೋಧನೆ. ಬಾಗೇಪಲ್ಲಿ ತಾಲೂಕಿನ ಐತಿಹಾಸಿ ತಾಣಗಳ ಬಗ್ಗೆ ಅತೀವ ಆಸಕ್ತಿ. ದೇವಿಕುಂಟೆ ಕೋಟೆ ಬಗ್ಗೆ ಆಳವಾದ ಶೋಧ ಮಾಡುತ್ತಿದ್ದಾರೆ.
- ಈ ವರದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ…