ಬಾಗೇಪಲ್ಲಿಯಿಂದ ಬಂತು ಶುಭ ಸಮಾಚಾರ I ಆರೋಗ್ಯ ಸಿಬ್ಬಂದಿಗೆ ಪ್ರಶಂಸೆ
- Lead photo: ಆಂಬ್ಯುಲೆನ್ಸ್ ಚಾಲಕ ಜಿ.ಶ್ರೀನಿವಾಸ (ಎಡಗಡೆ) ಹಾಗೂ ಹರಿಗೆ ಮಾಡಿದ ಶಶ್ರೂಷಕ ಡಿ.ವಿ.ಮುರಳಿ.
ಬಾಗೇಪಲ್ಲಿ: ಬೆಳಗಿನಜಾವ 5 ಗಂಟೆ ಸಮಯದಲ್ಲಿ ಗರ್ಭಿಣಿಯೊಬ್ಬರು ಹೆರಿಗೆಗಾಗಿ ಆಂಬ್ಯುಲೆನ್ಸ್ʼನಲ್ಲಿ ಆಸ್ಪತ್ರೆಗೆ ತೆರಳುವಾಗ ಹದಗೆಟ್ಟ ರಸ್ತೆಗಳ ʼಪುಣ್ಯವೋʼ ಎಂಬಂತೆ ಅವರಿಗೆ ಮಾರ್ಗಮಧ್ಯದಲ್ಲಿಯೇ ಹೆರಿಗೆಯಾಗಿದೆ. ತಾಯಿ-ಮಗು ಕ್ಷೇಮವಾಗಿದ್ದಾರೆ.
ಆಂಧ್ರ ಪ್ರದೇಶದ ಗಡಿಗೆ ಹೊಂದಿಕೊಂಡಿರುವ ಬಾಗೇಪಲ್ಲಿ ವಿಧಾನಸಭೆ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳ ದುಃಸ್ಥಿತಿಯ ಬಗ್ಗೆ ಇದೊಂದು ಉದಾಹರಣೆಯಷ್ಟೇ. ಈಗಲೂ ಅನೇಕ ಗ್ರಾಮಗಳಿಗೆ ಮಣ್ಣಿನ ರಸ್ತೆಗಳೇ ಗತಿ. ಡಾಂಬರು ಬಿದ್ದಿರುವ ಬಹುತೇಕ ಗ್ರಾಮೀಣ ರಸ್ತೆಗಳ ಪರಿಸ್ಥಿತಿಯಂತೂ ದೇವರಿಗೇ ಪ್ರೀತಿ. ವೃದ್ಧರು, ಕಾಯಿಲೆಪೀಡಿತರು ಹಾಗೂ ಗರ್ಭಿಣಿಯರು ಸಂಚರಿಸಲು ಸಾಧ್ಯವಾಗದಂಥ ಕಳಪೆ ರಸ್ತೆಗಳು ಇಡೀ ಕ್ಷೇತ್ರದಲ್ಲಿ ಲೆಕ್ಕವಿಲ್ಲದಷ್ಟು!!
ಇಂಥ ಸಂದರ್ಭದಲ್ಲೇ ಈ ವರದಿ ಬಂದಿದ್ದು, ತೀವ್ರ ಸಂಚಲನ ಉಂಟು ಮಾಡಿದೆ. ವಿವರಗಳತ್ತ ನೋಡುವುದಾದರೆ…
ತಾಲೂಕಿನ ಜಿ.ಮದ್ದೆಪಲ್ಲಿ ಗ್ರಾಮದ ಈಶ್ವರಪ್ಪ ಎಂಬುವವರ ಪತ್ನಿ ಕಲಾವತಿ ಎಂಬ ಮಹಿಳೆಗೆ ಬೆಳಗಿನಜಾವ ಹೆರಿಗೆ ನೋವು ಕಾಣಸಿಕೊಂಡಿದೆ. 3.46ರ ಹೊತ್ತಿಗೆ ಅವರ ಮನೆಯವರು 108ಗೆ ಕರೆ ಮಾಡಿದರು. 4.30 ಗಂಟೆಗೆಲ್ಲ ಸಿಬ್ಬಂದಿ ಶಶ್ರೂಷಕರಾದ ಡಿ.ವಿ.ಮುರಳಿ ಹಾಗೂ ಪೈಲೆಟ್ (ಚಾಲಕ) ಜಿ.ಶ್ರೀನಿವಾಸ (ಸೀನಪ್ಪ) ಅವರಿಬ್ಬರಿದ್ದ ಆಂಬ್ಯುಲೆನ್ಸ್ ಆ ಗ್ರಾಮವನ್ನು ತಲುಪಿದೆ.
ಕೂಡಲೇ ಮಹಿಳೆಯನ್ನು ಆಂಬ್ಯುಲೆನ್ಸ್‌ಗೆ ಲಿಫ್ಟ್ ಮಾಡಿ ಬಾಗೇಪಲ್ಲಿಯತ್ತ ಹೊರಟಿದ್ದಾರೆ. ಆದರೆ, ಆ ಗ್ರಾಮದಿಂದ ಅರ್ಧ ಕಿ.ಮೀ ದೂರ ಕ್ರಮಿಸುಷ್ಟೊತ್ತಿಗೆ ಸಾಕಷ್ಟು ಸಮಯ ಆಗಿದೆ. ಹಳ್ಳದಿಣ್ಣೆಗಳ ಮೇಲೆ ಸಾಗುತ್ತಿದ್ದ ಆಂಬ್ಯುಲೆನ್ಸ್ ಎತ್ತೆತ್ತಿ ಹಾಕುತ್ತಿದ್ದ ಕಾರಣದಿಂದ ಮಹಿಳೆಗೆ ಬಹಳ ನೋವಿ ಕಾಣಿಸಿಕೊಂಡಿದೆ. ಕೂಡಲೇ ಅಲರ್ಟ್ ಆದ ಮುರಳಿ, ಆಂಬ್ಯುಲೆನ್ಸ್ ನಿಲ್ಲಿಸುವಂತೆ ಸೂಚಿಸಿ ಹೆರಿಗೆ ಮಾಡಿಸಲು ಮುಂದಾಗಿದ್ದಾರೆ.
ಮಹಿಳೆ, ಗಂಡು ಮಗುವಿಗೆ ಜನ್ಮ ನೀಡಿದ್ದು ತಾಯಿ ಮಗು ಆರೋಗ್ಯವಾಗಿದ್ದಾರೆ. ಪ್ರಸ್ತುತ ತಾಯಿ, ಮಗುವನ್ನು ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಸೇರಿಸಲಾಗಿದೆ. ಇದೇ ವೇಳೆ ಆ ಮಹಿಳೆ ಸಿಬ್ಬಂದಿ ಇಬ್ಬರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. ಅಲ್ಲದೆ, ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ತುರ್ತಾಗಿ ಸ್ಪಂದಿಸಿದ 108 ಸಿಬ್ಬಂದಿಯವರಿಗೆ ಕಲಾವತಿ ಮತ್ತು ಅವರ ಕುಟುಂಬದವರು ಕೃತಜ್ಞತೆ ಸಲ್ಲಿಸಿದ್ದಾರೆ.
ಮಹಿಳೆಯ ಕೃತಜ್ಞತೆ, ಭಾವುಕರಾದ ಶಶ್ರೂಷಕ
ಮಹಿಳೆಗೆ ಹೆರಿಗೆ ಮಾಡಿಸಿದ ಮುರಳಿ ಅವರು ಸಿಕೆನ್ಯೂಸ್ ನೌ ಜತೆ ಆ ಸಂದರ್ಭವನ್ನು ಹಂಚಿಕೊಂಡರು.
“ನಾಲ್ಕೂವರೆ ಗಂಟೆಗೆಲ್ಲ ನಮ್ಮ ಆಂಬ್ಯುಲೆನ್ಸ್ ಜಿ.ಮದ್ದೇಪಲ್ಲಿ ತಲುಪಿತು. ಆ ಮಹಿಳೆಯನ್ನು ಲಿಫ್ಟ್ ಮಾಡುವದಕ್ಕೆ ಮುನ್ನವೇ ಅವರು ನೋವಿನಿಂದ ಬಳಲುತ್ತಿದ್ದರು. ನನಗೆ ಮಾರ್ಗಮಧ್ಯೆಯೇ ಹೆರಿಗೆ ಆಗಬಹುದು ಎಂಬ ಮುನ್ಸೂಚನೆ ಸಿಕ್ಕಿತು. ಆದರೂ ಸಾಧ್ಯವಾದಷ್ಟು ಬೇಗ ತಾಲೂಕು ಆಸ್ಪತ್ರೆಗೆ ಶಿಫ್ಟ್ ಮಾಡೋಣ ಎಂದು ಭಾವಿಸಿ ಹೊರಟೆವು. ಆ ಗ್ರಾಮದಿಂದ ಆರ್ಧ ಕಿ.ಮೀ. ದೂರ ಬರುವಷ್ಟರಲ್ಲಿ ಆ ಮಹಿಳೆ ನೋವಿನಿಂದ ಬಹಳ ಯಾತನೆ ಅನುಭವಿಸತೊಡಗಿದರು. ಕೂಡಲೇ ಆಂಬ್ಯುಲೆನ್ಸ್ ನಿಲ್ಲಿಸಲು ಸೂಚಿಸಿ ಹೆರಿಗೆ ಮಾಡಿಸಿದೆ. ಗಂಡು ಮಗುವಿಗೆ ಅವರು ಜನ್ಮ ನೀಡಿದರು. ಮಗುವನ್ನು ನೋಡಿದ ಕೂಡಲೇ ಅವರ ಆನಂದಕ್ಕೆ ಪಾರವೇ ಇರಲಿಲ್ಲ. ಎರಡೂ ಕೈ ಜೋಡಿಸಿ, ಅಣ್ಣ ನಿಮ್ಮಿಬ್ಬರಿಂದ ನಾನೂ, ನನ್ನ ಮಗು ಬದುಕಿದೆವು ಎಂದಾಗ ಅವರ ಕಣ್ಣುಗಳು ತುಂಬಿಕೊಂಡಿದ್ದವು. ಅದುವರೆಗೆ ಇಂಥ ಹೆರಿಗೆಗಳನ್ನು ಮಾಡಿಸಿದ್ದ ನನಗೂ ಆ ಕ್ಷಣದಲ್ಲಿ ಕಣ್ಣುಗಳು ಉಕ್ಕಿಬಂದವು. ನಾನು ಹೆರಿಗೆ ಮಾಡಿಸಿದೆ ಎನ್ನುವುದಕ್ಕಿಂತ ಆ ಭಗವಂತ ಇಂಥ ಅವಕಾಶ ನನಗೆ ನೀಡಿದನಲ್ಲ ಎಂದು ಅನಿಸಿತು. ತಡ ಮಾಡದೇ ತಾಯಿ-ಮಗು ಇಬ್ಬರನ್ನು ಕರೆತಂದು ಆಸ್ಪತ್ರೆಯಲ್ಲಿ ದಾಖಲಿಸಿದೆವು. ಇಬ್ಬರೂ ಕ್ಷೇಮವಾಗಿದ್ದಾರೆ.”
“ಆಸ್ಪತ್ರೆಗೆ ಬಂದ ಮೇಲೆ ಹೆರಿಗೆ ಆಗುವುದು ಸಾಮಾನ್ಯ. ಆದರೆ, ಮಾರ್ಗಮಧ್ಯೆ ಆಂಬ್ಯುಲೆನ್ಸ್‌ನಲ್ಲಿಯೇ ಹೆರಿಗೆಗಳನ್ನು ಮಾಡಿಸುವುದು ಕೆಲವೊಮ್ಮೆ ಸವಾಲಿನ ಕೆಲಸ. ತಾಯಿ ಮಗುವಿನ ಜೀವಕ್ಕೆ ಅಪಾಯವಾಗದಂತೆ ನೋಡಿಕೊಳ್ಳಬೇಕು. ಬಹಳ ಎಚ್ಚರಿಕೆ ಇರಬೇಕು. ನಮ್ಮ ವೈದ್ಯಾಧಿಕಾರಿಗಳ ಮಾರ್ಗದರ್ಶನದಲ್ಲಿ ನಾನು ಕಳೆದ ಎಂಟು ವರ್ಷಗಳ ಸೇವಾವಧಿಯಲ್ಲಿ ಇಂಥ ಹಲವಾರು ಹೆರಿಗೆಗಳನ್ನು ಮಾಡಿದ್ದೇನೆ” ಎಂದು ಮುರಳಿ ಹೇಳಿದರು.
ಕಲ್ಲು ಟಿಪ್ಪರ್‌ಗಳ ಅಬ್ಬರಕ್ಕೆ ಹದಗೆಟ್ಟ ರಸ್ತೆಗಳು
ಪ್ರಸ್ತುತ, ತಾಲೂಕಿನ ಕುಗ್ರಾಮಗಳಿಗೆ ಆರೋಗ್ಯ ಸೇವೆಗಳು ಸಿಗುವುದು ಕಷ್ಟಕರವಾಗಿರುತ್ತದೆ. ಇನ್ನು ಈ ಕೋವಿಡ್ʼನ ಕಷ್ಟಕಾಲದಲ್ಲಿ ಮತ್ತಷ್ಟು ಕಠಿಣ. ತುರ್ತು ಸಂದರ್ಭದಲ್ಲಿ ತಾಲೂಕು ಆಸ್ಪತ್ರೆಗೆ ಬೇಗ ತಲುಪಲು ಸರಿಯಾದ ರಸ್ತೆಗಳಿಲ್ಲ. ಹೀಗಿರುವಾಗ ಈ ಘಟನೆ ವರದಿಯಾಗಿದೆ.
ತಾಲೂಕು ಕೇಂದ್ರಕ್ಕೆ 25 ಕಿ.ಮೀ ದೂರದಲ್ಲಿ ಜಿ.ಮದ್ದೇಪಲ್ಲಿಗೆ ತಲುಪಲು ಏನಿಲ್ಲವೆಂದರೂ ಒಂದು ಗಂಟೆ ಬೇಕು. ಕಲ್ಲು ಕ್ವಾರಿಗಳ ಟಿಪ್ಪರ್ ಲಾರಿಗಳ ಹತೋಟಿ ಇಲ್ಲದ ಸಂಚಾರದಿಂದ ರಸ್ತೆಗಳು ಅಲ್ಲಲ್ಲಿ ಬಿರುಕು ಬಿಟ್ಟಿದೆ. ಮೋರಿಗಳು ಕುಸಿದುಬಿದ್ದಿವೆ. ಬೆಳಗ್ಗೆ 3.46ಕ್ಕೆ 108ಗೆ ಕರೆ ಮಾಡಿದರೆ, ಅದು ಆಂಬ್ಯುಲೆನ್ಸ್‌ಗೆ 4.30ಕ್ಕೆ ಗ್ರಾಮಕ್ಕೆ ಬಂದಿದೆ. ಸಿಬ್ಬಂದಿ ಆ ಮಹಿಳೆಯನ್ನು ಲಿಫ್ಟ್ ಮಾಡಿ ಬಾಗೇಪಲ್ಲಿಗೆ ವಾಪಸ್ ಬರುವಾಗ ಆಂಬ್ಯುಲೆನ್ಸ್ ಚಾಲಕನಿಗೆ ನರಕ ದರ್ಶನವಾಗಿದೆ.
ತಾಯಿ ಮತ್ತು ಮಗುವಿಗೆ ಸಕಾಲಕ್ಕೆ ಹೆರಿಗೆ ಮಾಡಿಸುವುದಕ್ಕಾಗಿ ಪಣತೊಟ್ಟ ಚಾಲಕನಿಗೆ ವೇಗವಾಗಿ ಆಂಬ್ಯುಲೆನ್ಸ್ ಅನ್ನು ಚಾಲನೆ ಮಾಡಲು ಸಾಧ್ಯವಾಗಿಲ್ಲ. ಕತ್ತಲು ಬೇರೆ, ಎತ್ತ ಕಣ್ಣು ಹಾಯಿಸಿದರೂ ಹಳ್ಳದಿಣ್ಣೆಗಳೇ. ಇದೇ ವೇಳೆ ಆ ಮಹಿಳೆಗೆ ವಿಪರೀತ ನೋವು ಕಾಣಿಸಿಕೊಂಡಿದೆ. ಕೂಡಲೇ ಶಶ್ರೂಷಕ ಮುರಳಿ ತಡ ಮಾಡದೇ ಮಹಿಳೆಗೆ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾದರು.
ಅಲ್ಲದೆ, ಜಿ.ಮದ್ದೇಪಲ್ಲಿ ಗ್ರಾಮದಲ್ಲಿ ರಸ್ತೆಯ ಮೇಲೆ ಭೂಮಿಗೆ ಬಂದ ಕಂದನ ಬಗ್ಗೆ ಸಂಭ್ರಮ ಮನೆ ಮಾಡಿದೆ. ಆ ಕಂದ ಆರೋಗ್ಯವಾಗಿರಲಿ ಎಂದು ಹಾರೈಸಿದ್ದಾರೆ. ಕೊನೆಪಕ್ಷ ಈ ರಸ್ತೆಯಲ್ಲೇ ಜನ್ಮತಳೆದ ಈ ಮಗುವಿನ ಕಾರಣದಿಂದಲಾದರೂ ಆ ರಸ್ತೆ ಉತ್ತಮವಾಗಿ ಅಭಿವೃದ್ಧಿಯಾಗಲಿ, ಶಾಸಕರು ಈಗಲಾದರೂ ಗಮನ ಹರಿಸಲಿ ಎಂದು ಒತ್ತಾಯ ಮಾಡಿದ್ದಾರೆ.