SPECIAL REPORT
by Ra Na Gopala Reddy Bagepalli
ಬಾಗೇಪಲ್ಲಿ: ತಾಲೂಕಿನ ಆಚೇಪಲ್ಲಿ, ಗುಮ್ಮನಾಯಕಪಾಳ್ಯ ಸೇರಿ ವಿವಿಧ ಗ್ರಾಮಗಳಲ್ಲಿನ ಐತಿಹಾಸಿಕ ಹಾಗೂ ಅತ್ಯಂತ ಅಪರೂಪದ ಕಲ್ಯಾಣಿಗಳು ವಿನಾಶದ ಅಂಚಿನಲ್ಲಿವೆ.
ಅವುಗಳಲ್ಲಿ ಕಳೆ, ಮುಳ್ಳಿನ ಗಿಡಗಳು ಹಾಗೂ ಕಸ ಕಡ್ಡಿಗಳು ತುಂಬುಹೋಗಿ ನೀರು ಕಲುಷಿತವಾಗಿದ್ದು, ನಮ್ಮ ಜಿಲ್ಲಾಡಳಿತ ಮತ್ತು ತಾಲೂಕು ಮಟ್ಟದ ಆಡಳಿತದ ದಿವ್ಯನಿರ್ಲಕ್ಷ್ಯಕ್ಕೆ ಕನ್ನಡಿಯಂತಿವೆ.
ಬರಪೀಡಿತ ಬಯಲುಸೀಮೆಯ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಂತರ್ಜಲ ವೃದ್ಧಿಸಲು ಹಿಂದಿನ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಅವರು ಚೆಕ್ ಡ್ಯಾಂ, ಕಲ್ಯಾಣಿಗಳನ್ನು ಸ್ವಚ್ಛ ಮಾಡಲು ಆದೇಶ ನೀಡಿದ್ದರು. ಆಯಾ ತಾಲೂಕು, ಗ್ರಾಮ ಪಂಚಾಯಿತಿಗಳ ಅಧಿಕಾರಿಗಳು, ಸಿಬ್ಬಂದಿ ಗ್ರಾಮಸ್ಥರೊಂದಿಗೆ ತಾಲೂಕಿನ ಕಲ್ಯಾಣಿಗಳನ್ನು ಸ್ವಚ್ಛತೆ ಮಾಡಿಸಿದ್ದರು. ಆದರೆ ಇದೀಗ ಗ್ರಾಮ ಪಂಚಾಯಿತಿಗಳ ಅಧಿಕಾರಿಗಳು ಸೂಕ್ತ ನಿರ್ವಹಣೆ ಮಾಡಿಸಿಲ್ಲ. ಕಲ್ಯಾಣಿಗಳಲ್ಲಿ ಕಳೆ ಹಾಗೂ ಮುಳ್ಳಿನ ಗಿಡಗಳು ಬೆಳೆದಿವೆ. ಕಸ-ಕಡ್ಡಿಗಳನ್ನು ಹಾಕಲಾಗಿದೆ. ಮದ್ಯದ ಬಾಟಲಿಗಳು ಸೇರಿದಂತೆ ತ್ಯಾಜ್ಯ ವಸ್ತುಗಳನ್ನು ಸುರಿಯಲಾಗಿದೆ. ಕಲ್ಯಾಣಿಗಳನ್ನು ಅಕ್ರಮ ಚಟುವಟಿಕೆಗಳಿಗೆ ಬಳಕೆ ಮಾಡಿಕೊಳ್ಳಲಾಗಿದೆ.
ತಾಲೂಕಿನಲ್ಲಿ ಯಾವುದೇ ನದಿ ನಾಲೆಗಳು ಇಲ್ಲ. ಶಾಶ್ವತ ಜಲಮೂಲಗಳು ಇಲ್ಲ. ಕೇವಲ ಮಳೆಯಾಧಾರಿತ ಪ್ರದೇಶ ಆಗಿದೆ. ರೈತರು ಮಳೆಯನ್ನೇ ನಂಬಿಕೊಂಡು ತರಕಾರಿ ಹಾಗೂ ಧಾನ್ಯಗಳನ್ನು ಬೆಳೆಯಬೇಕಾಗಿದೆ. ತಾಲೂಕಿನ ಕೆಲ ಪ್ರದೇಶಗಳಲ್ಲಿ ಮಳೆ ಆಗದೇ ರೈತರು ತಮ್ಮ ಹೊಲ-ಗದ್ದೆಗಳನ್ನು ಬಂಜರುಗೊಳಿಸಿದ್ದಾರೆ. ಕೃಷಿ ಚಟುವಟಿಕೆಗಳನ್ನು ಬಿಟ್ಟು ನಗರ ಪ್ರದೇಶಗಳಿಗೆ ವಲಸೆ ಹೋಗಿ, ಕೂಲಿಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಈಗ ಕೋವಿಡ್ ಮತ್ತು ಲಾಕ್‌ಡೌನ್ ಬಂದು ಪುನಾ ಕೃಷಿಯತ್ತ ಚಿತ್ತ ಹರಿಸಿದ್ದಾರಾದರೂ ಅವರಿಗೆ ಬೇಸಾಯ ಮಾಡಲು ನೀರಿಲ್ಲ.
ತಾಲೂಕಿನಲ್ಲಿ ಸಮರ್ಪಕವಾಗಿ ಮಳೆ ಆಗುತ್ತಿಲ್ಲ. ಕೆಲವೆಡೆ ತರಕಾರಿ ಹಾಗೂ ಬೆಳೆಗಳನ್ನು ಬೆಳೆಯಲು ನೀರಿಲ್ಲ. ಕೃಷಿಗೆ ಅಗತ್ಯವಾದಷ್ಟು ನೀರಿನ ಕೊರತೆ ಇದೆ. ತಾಲೂಕಿನಲ್ಲಿ ಚಿತ್ರಾವತಿ, ವಂಡಮಾನ್ ಸೇರಿ ಕೆರೆ-ಕಟ್ಟೆ, ಚೆಕ್ ಡ್ಯಾಂ, ಗುಂಡಿಗಳಲ್ಲಿ ನೀರಿನ ಶೇಖರಣೆ ಇಲ್ಲ. ಅಂರ್ತಜಲ ಕುಸಿತವಾಗಿದೆ. ಅನೇಕ ಕಡೆ ಜನ ಹಾಗೂ ಜಾನುವಾರುಗಳಿಗೂ ನೀರಿನ ಕೊರತೆ ಇದೆ. ತಾಲೂಕಿನ ಗೂಳೂರು ಹೋಬಳಿಯ ಬಹುತೇಕ ರೈತರು ಪಟ್ಟಣ ಪ್ರದೇಶಕ್ಕೆ ತೆರಳಿ ಸಿಮೆಂಟ್, ಗಾರೆ ಹಾಗೂ ಮರಕೆಲಸಗಳಿಗೆ ಬಂದು ಕೂಲಿಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ದಿನದ ಕೂಲಿ ಹಣ ಪಡೆದು ಜೀವನ ಸಾಗಿಸುವಂತಾಗಿದೆ.
560 ವರ್ಷಗಳಷ್ಟು ದೀರ್ಘ ಕಾಲ ಪಾಳೇಗಾರರು ಆಳ್ವಿಕೆ ನಡೆಸಿದ್ದರು. ತಾಲ್ಲೂಕಿನ ಐತಿಹಾಸಿಕ ಗುಮ್ಮನಾಯಕಪಾಳ್ಯದ ಗ್ರಾಮದ ಮುಖ್ಯದ್ವಾರದಲ್ಲಿ ಪಾಳೇಗಾರರು ಸುಂದರ, ವಿಶಾಲವಾದ ಕಲ್ಯಾಣಿಯನ್ನು ನಿರ್ಮಿಸಿದ್ದಾರೆ. ಇದೇ ಮಾದರಿಯಲ್ಲಿ ಆಚೇಪಲ್ಲಿ ಕ್ರಾಸ್ʼನಿಂದ ಪಾತಪಾಳ್ಯಕ್ಕೆ ಸಂಚರಿಸುವ ಮಾರ್ಗದಲ್ಲಿ ಒಂದು ಕಲ್ಯಾಣಿ ಇದೆ. ಹೀಗೆ ತಾಲೂಕಿನಲ್ಲಿ 20ಕ್ಕೂ ಹೆಚ್ಚು ಕಲ್ಯಾಣಿಗಳಿವೆ. ಇವುಗಳನ್ನು ಸ್ವಚ್ಛಗೊಳಿಸಿ, ಹೂಳು ತೆಗೆದು ಸಂರಕ್ಷಿಸಿ ಮಳೆಯ ನೀರನ್ನು ಶೇಖರಣೆ ಮಾಡಬೇಕಾಗಿದೆ. ಇದರಿಂದ ಜಲಪೂರಣ ಮಾಡಿದಂತಾಗುತ್ತದೆ ಎಂದು ಗ್ರಾಮಸ್ಥರು ಹಾಗೂ ತಾಲೂಕಿನ ಪ್ರಮುಖರು ಒತ್ತಾಯಿಸಿದ್ದಾರೆ.
ಪ್ರಾಚೀನ ಕಟ್ಟೆಗಳ ರಕ್ಷಣೆ ಮಾಡಿ
‘ತಾಲೂಕಿನಲ್ಲಿ ಮಳೆ ಬರುವ ಮುನ್ನವೇ ಗ್ರಾಮ ಪಂಚಾಯಿತಿ ಅಧಿಕಾರಿಗಳು ಪರಗೋಡು ಬಳಿ ಇರುವ ಚಿತ್ರಾವತಿ, ವಂಡಮಾನ್ ಮತ್ತಿತರೆ ಕೆರೆ-ಕಟ್ಟೆ, ಚೆಕ್ ಡ್ಯಾಂಗಳು ಹಾಗೂ ಕಲ್ಯಾಣಿಗಳ ಸ್ವಚ್ಛತೆ ಆಗಬೇಕು. ಕಲ್ಲುಕಟ್ಟಡವನ್ನು ಸಮರ್ಪಕವಾಗಿ ಮಾಡಬೇಕು. ಮಳೆಯ ನೀರನ್ನು ಶೇಖರಣೆ ಮಾಡಿದರೆ ಅಂತರ್ಜಲ ಹೆಚ್ಚಿಸುತ್ತದೆ. ಜನ-ಜಾನುವಾರುಗಳಿಗೆ ನೀರು ಸಿಗುತ್ತದೆ. ಕಲ್ಯಾಣಿಗಳನ್ನು ಪಂಚಾ ಮಾಡಿಸಬೇಕು. ನೀರನ್ನು ಶೇಖರಣೆ ಮಾಡುವಂತೆ ಮಳೆ ಆಗುವ ಸಂದರ್ಭದಲ್ಲಿ ಚೆಕ್ ಡ್ಯಾಂಗಳನ್ನು ಕಾಲ ಕಾಲಕ್ಕೆ ನಿರ್ವಹಣೆ ಮಾಡಬೇಕು. ಸರ್ಕಾರ ಹಾಗೂ ಜನರು ಕೆರೆ-ಕಟ್ಟೆ, ಚೆಕ್ ಡ್ಯಾಂಗಳನ್ನು ಹಾಗೂ ಹಳೇ ಕಾಲದ ಕಲ್ಯಾಣಿಗಳನ್ನು ಉಳಿಸಿಕೊಂಡರೆ ಸಾಕಷ್ಟು ನೀರಿನ ಕೊರತೆಯನ್ನು ನೀಗಿಸಿಕೊಳ್ಳಬಹುದು’ ಎಂದು ರೈತಸಂಘ ಹಾಗೂ ಹಸಿರು ಸೇನೆ ರಾಜ್ಯ ಸಂಚಾಲಕ ಲಕ್ಷ್ಮಣರೆಡ್ಡಿ ಹೇಳುತ್ತಾರೆ.
‘ತಾಲೂಕಿನ ಗುಮ್ಮನಾಯಕನ ಪಾಳ್ಯದಲ್ಲಿ ಪಾಳೇಗಾರರು ಕಲ್ಯಾಣಿಯನ್ನು ನಿರ್ಮಿಸಿದ್ದಾರೆ. ಇದೀಗ ಕಲ್ಯಾಣಿಯಲ್ಲಿ ಕಳೆ ಹಾಗೂ ಮುಳ್ಳಿನ ಗಿಡಗಳು ಬೆಳೆದಿವೆ. ಮಳೆಯ ನೀರನ್ನು ಶೇಖರಣೆ ಮಾಡುವ ಕೆರೆ-ಕಟ್ಟೆಗಳು, ಚೆಕ್ ಡ್ಯಾಂಗಳು ಹಾಗು ರಾಜಕಾಲುವೆಗಳು ಸೇರಿದಂತೆ ಕಲ್ಯಾಣಿಗಳನ್ನು ಸ್ವಚ್ಛತೆ ಮಾಡಬೇಕಾಗಿದೆ. ಕೂಡಲೇ ಕಲ್ಯಾಣಿಯನ್ನು ಅಧಿಕಾರಿಗಳು ಸ್ವಚ್ಛತೆ ಮಾಡಿಸಬೇಕು’ ಎಂದು ಗುಮ್ಮನಾಯಕನ ಪಾಳ್ಯದ ಶ್ರೀರಾಮ ಆಗ್ರಹಿಸಿದರು.
ಕಲ್ಯಾಣಿಗಳು ಬಹಳ ಆಕರ್ಷಕ
ಪಾಳೇಗಾರರು ನಿರ್ಮಿಸಿರುವ ಕಲ್ಯಾಣಿಗಳು, ಕೆರೆಕಟ್ಟೆಗಳನ್ನು ನಾವು ಸಂರಕ್ಷಣೆ ಮಾಡಲೇಬೇಕಾಗಿದೆ. ಅವುಗಳನ್ನು ಅತ್ಯಂತ ವಿಶೇಷವಾಗಿ, ಸುಂದರವಾಗಿ ಅಷ್ಟೇ ವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದೆ. ಇದನ್ನು ಎಲ್ಲರೂ ಗಮನಿಸಬೇಕು. ಪ್ರವಾಸೋದ್ಯಮ ಇಲಾಖೆ ಇವುಗಳನ್ನು ಅತ್ಯುತ್ತಮವಾಗಿ ಅಭಿವೃದ್ಧಿಪಡಿಸಿ ನಿರ್ವಹಿಸಬೇಕು. ಪಾಳೇಗಾರರು ಕಟ್ಟಿಸಿದ ಕಲ್ಯಾಣಿಗಳನ್ನು ಪುರಾತತ್ವ ಇಲಾಖೆ ಸಂರಕ್ಷಿಸಬೇಕು. ಒಮ್ಮೆ ಈ ಐತಿಹಾಸಿಕ ಸಂಪತ್ತನ್ನು ಕಳೆದುಕೊಂಡರೆ ಅದಕ್ಕಿಂತ ದೊಡ್ಡ ನಷ್ಟ ಮತ್ತೊಂದಿಲ್ಲ ಎನ್ನುತ್ತಾರೆ ಜನರು.