Photo by CkPhotography ಸಿಕೆಪಿ@ckphotographi
Dr. Guruprasada H S
ಯಾವುದೇ ದೇಶ ರಾಜ್ಯದ ಅಭಿವೃದ್ಧಿ ಆಯಾ ದೇಶದ ಕಾರ್ಮಿಕರ ಮೇಲೆ ಅವಲಂಬಿತವಾಗಿರುತ್ತದೆ. ದಕ್ಷ ಕಾರ್ಮಿಕರ ವರ್ಗದಿಂದ ದೇಶದ ಆರ್ಥಿಕ ಪ್ರಗತಿಯನ್ನು ಕಾಣಲು ಸಾಧ್ಯ. ಕಾರ್ಮಿಕ ಎಂದರೆ ಸಾಮಾನ್ಯ ಅರ್ಥದಲ್ಲಿ ದೈಹಿಕ ಇಲ್ಲವೇ ಬೌದ್ಧಿಕ ಶ್ರಮವನ್ನು ಮಾರಾಟ ಮಾಡಿ ಹಣ ಗಳಸುತ್ತಿರುವ ವ್ಯಕ್ತಿಗೆ ಕಾರ್ಮಿಕ ಎನ್ನುತ್ತೇವೆ.
ಈ ರೀತಿ ಆದಾಯ ಗಳಿಸುವ ವರ್ಗಕ್ಕೆ ಕಾರ್ಮಿಕ ವರ್ಗವೆಂದು ಕರೆಯುತ್ತಿದ್ದು, ಜಗತ್ತಿನ ಪ್ರತಿಯೊಂದು ದೇಶದಲ್ಲಿ ಶೇ.60ರಷ್ಟು ಕಾರ್ಮಿಕ ವರ್ಗದವರು ಕಂಡು ಬರುತ್ತಾರೆ. ಕೈಗಾರಿಕಾ ಕ್ರಾಂತಿಯ ನಂತರ ಅದರ ಫಲವಾಗಿ ಸಮಾಜದಲ್ಲಿ ಎರಡು ವರ್ಗಗಳು ಉದಯವಾದವು. ಒಂದು ಬಂಡವಾಳಶಾಹಿ ವರ್ಗ ಹಾಗೂ ಇನ್ನೊಂದು ಕಾರ್ಮಿಕ ವರ್ಗ. ಅಂದಿನಿಂದ ಇಂದಿನವರೆಗೂ ಕಾರ್ಮಿಕರ ಮೇಲಿನ ಶೋಷಣೆ ಹಾಗೆ ನಡೆಯುತ್ತಲೇ ಬಂದಿದೆ.
ಕಾರ್ಮಿಕ ದಿನ ಆಚರಣೆ ಹಿನ್ನಲೆ
ಸುಮಾರು 150 ವರ್ಷಗಳ ಹಿಂದೆ ಯುರೋಪ್, ಅಮೆರಿಕ ಮುಂತಾದ ರಾಷ್ಟ್ರಗಳಲ್ಲಿ ಕಾರ್ಮಿಕರನ್ನು ಬಂಡವಾಳ ಶಾಹಿಗಳು ಅನಿರ್ದಿಷ್ಟಾವಧಿ ತನಕ ದುಡಿಸಿ ಕೊಳ್ಳುತ್ತಿದ್ದರು. ಇದನ್ನು ವಿರೋಧಿಸಿದ ಕಾರ್ಮಿಕರು ದಿನದ 8 ಗಂಟೆ ದುಡಿಯುವ ಅವಧಿ ಎಂಬ ಬೇಡಿಕೆ ಮುಂದಿಟ್ಟರು. ದಿನದ 24 ಗಂಟೆಗಳಲ್ಲಿ 8 ಗಂಟೆ ದೈನಂದಿನ ಚಟುವಟಿಕೆಗಳನ್ನು ಪೂರೈಸುವ 8 ಗಂಟೆ ದುಡಿಯುವ ಅವಧಿ ಹಾಗೂ ಇನ್ನುಳಿದ 8 ಗಂಟೆ ವಿಶ್ರಾಂತಿಗಾಗಿ ಮೀಸಲು ಎಂಬ ಲೆಕ್ಕಾಚಾರ ಮುಂದಿಡಲಾಯಿತು.
8 ಗಂಟೆ ದುಡಿವ ಅವಧಿ ಎಂದು ಬೇಡಿಕೆಯನ್ನು ಮುಂದಿಟ್ಟುಕೊಂಡು ಕಾರ್ಮಿಕರು ಅಮೆರಿಕದ ಚಿಕಾಗೋ ನಗರದಲ್ಲಿ ಮೇ 1, 1886 ರಂದು ಸಹಸ್ರಾರು ಸಂಖ್ಯೆಯಲ್ಲಿ ಹೋರಾಟ ಮಾಡುತ್ತಿದ್ದರು. ಹೋರಾಟವು ತೀವ್ರ ಸ್ವರೂಪ ಪಡಿದಿದ್ದರಿಂದ ಇದನ್ನು ಹತ್ತಿಕ್ಕುವುದಕ್ಕಾಗಿ ಮೇ 4ರಂದು ಪೋಲಿಸರು ಕಾರ್ಮಿಕರ ಮೇಲೆ ಗುಂಡಿನ ದಾಳಿ ನಡೆಸಲಾಯಿತು. ಇದರಲ್ಲಿ ನೂರಾರು ಕಾರ್ಮಿಕರು ಸಾವನ್ನಪ್ಪಿದ್ದರು. ಇದನ್ನು ಲೆಕ್ಕಿಸದೇ ಕಾರ್ಮಿಕರು ಹೋರಾಟವನ್ನು ಮುಂದುವರಿಸಿದ್ದರಿಂದ ಕೊನೆಗೆ ನ್ಯಾಯಯುತವಾದ ದಿನದ 8 ಗಂಟೆ ಕಾರ್ಮಿಕರ ಕೆಲಸದ ಅವಧಿಯನ್ನು ಚಾಲನೆ ತಂದರು. ಇದರ ನೆನಪಿಗೆ ಮೇ 1ರಂದು ಕಾರ್ಮಿಕರ ದಿನಾಚರಣೆಯನ್ನು ಅಂತಾರಾಷ್ಟೀಯ ಮಟ್ಟದಲ್ಲಿ ಆಚರಿಸುತ್ತಾ ಬರಲಾಗುತ್ತಿದೆ.
ಭಾರತದಲ್ಲಿ ಕಾರ್ಮಿಕ ದಿನ. 20ನೆಯ ಶತಮಾನದ ಎರಡನೆಯ ದಶಕದ ದ್ವಿತೀಯಾರ್ಧದಲ್ಲಿ-ಕಾರ್ಮಿಕ ಸಂಘ ಚಳವಳಿಯ ಪ್ರಭಾವ ಹೆಚ್ಚಿದಾಗಿನಿಂದ-ಇದರ ಆಚರಣೆ ಆರಂಭವಾಯಿತು. ಭಾರತೀಯ ಕಾರ್ಮಿಕರು ಮೊತ್ತ ಮೊದಲನೆಯದಾಗಿ ಕಾರ್ಮಿಕ ದಿನಾಚರಣೆಯಲ್ಲಿ ಭಾಗವಹಿಸಿದ್ದು ಇಂಗ್ಲೆಂಡ್‌ನಲ್ಲಿ ಅದು ಭಾರತೀಯ ನಾವಿಕರು. 1925ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ನೀಡಬೇಕೆಂಬ ಘೋಷಣೆಯನ್ನೊಳಗೊಂಡ ಪೋಸ್ಟರ್ʼಗಳನ್ನು ಹಿಡಿದು ಲಂಡನ್ʼನ ಹೈಡ್ ಪಾರ್ಕಿನ ಮೇ ದಿನದ ಉತ್ಸವ ಸಭೆಗೆ ಹೋದರು. ನಂತರ 1927ರಲ್ಲಿ ಮುಂಬಯಿಯಲ್ಲಿ ನಡೆದ ಕಾರ್ಮಿಕ ದಿನ ಆಚರಣೆಯಲ್ಲಿ ಅನೇಕ ಕಾರ್ಮಿಕ ಮುಖಂಡರು ಭಾಗವಹಿಸಿ ಆರಂಭಿಸಿದರು. 1927ರಿಂದ ಪ್ರತಿವರ್ಷವೂ ದೇಶದಲ್ಲಿ ಕಾರ್ಮಿಕರು ಈ ದಿನವನ್ನಾಚರಿಸುತ್ತಿದ್ದಾರೆ.
ಅದೇ ವರ್ಷ ಕೊಲ್ಕತಾದಲ್ಲಿ ಬಂಗಾಳ ಪ್ರದೇಶ ಕಾರ್ಮಿಕ ಸಂಘವು ಮೇ ದಿನವನ್ನಾಚರಿಸಿದಾಗ ಪೋಲೀಸರು ಅನೇಕ ನಿರ್ಬಂಧಗಳನ್ನು ವಿಧಿಸಿದರೆಂದು ತಿಳಿದು ಬರುತ್ತದೆ. 1928ರಿಂದ 1934ರವರೆಗೆ ಆ ಉತ್ಸವಾಚರಣೆಯ ದಿನದಂದು ದಿನಾಚರಣೆಯ ಕಾರ್ಮಿಕರ ಅನೇಕ ಮುಷ್ಕರಗಳು ನಡೆದವು. ಎರಡನೇ ಮಹಾಯುದ್ಧ ನಂತರ ಆ ದಿನವನ್ನು ಹೆಚ್ಚು ವ್ಯಾಪಕವಾಗಿ ಆಚರಿಸಲು ಪ್ರಾರಂಭವಾಯಿತು. ಕಾರ್ಮಿಕರೂ, ಕಾರ್ಮಿಕ ಸಂಘಗಳೂ ಅಧಿಕ ಸಂಖ್ಯೆಯಲ್ಲಿ ಭಾಗವಹಿಸತೊಡಗಿದವು. 1969ರಲ್ಲಿ ಭಾರತ ರಾಷ್ಟ್ರೀಯ ಕಾರ್ಮಿಕ ಸಂಘಗಳ ಕಾಂಗ್ರೆಸ್ ಒಂದನ್ನು ಬಿಟ್ಟು ಉಳಿದೆಲ್ಲ ಕಾರ್ಮಿಕ ಸಂಘಗಳೂ ಒಟ್ಟಾಗಿ, ತಮ್ಮ ಹಕ್ಕುಗಳನ್ನು ಸಾಧಿಸಲು ಭಾರಿ ಮೆರವಣಿಗೆಯಲ್ಲಿ ಪಾರ್ಲಿಮೆಂಟ್ ಭವನದ ಬಳಿಗೆ ಮೆರವಣಿಗೆಯಲ್ಲಿ ಹೋಗಿ ಪ್ರದರ್ಶನ ನಡೆಸಿದವು.
ಭಾರತದಲ್ಲಿ ಕಾರ್ಮಿಕರನ್ನು ಸಂಘಟಿತ ಕಾರ್ಮಿಕರು ಹಾಗೂ ಅಸಂಘಟಿತ ಕಾರ್ಮಿಕರೆಂದು ವಿಭಾಗಿಸಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಸ್ವಾಮ್ಯದ ಅಡಿ ದುಡಿಯುವ ಕಾರ್ಮಿಕರು ಬಹುತೇಕ ಸಂಘಟಿತ ಕಾರ್ಮಿಕರಾಗಿದ್ದು, ದೇಶದಲ್ಲಿ ಕೇವಲ ಪ್ರತಿಶತ 12ರಿಂದ 15 ರವರೆಗೆ ಮಾತ್ರ ಕಂಡುಬಂದಿದ್ದು ತಮ್ಮ ಸಂಘಟಿತ ಹೋರಾಟದ ಮೂಲಕ ಬೇಡಿಕೆಗಳನ್ನು ತಕ್ಕ ಮಟ್ಟಿಗೆ ಈಡೇರಿಸಿಕೊಳ್ಳುತ್ತಿದ್ದಾರೆ.
ಇನ್ನುಳಿದ ಶೇ.85ರಷ್ಟು ಕಾರ್ಮಿಕರು, ಗ್ರಾಮೀಣ ಪ್ರದೇಶದಲ್ಲಿ ದುಡಿಯುವ ಭೂ ರಹಿತ ಮಹಿಳೆ ಹಾಗೂ ಪುರುಷ ಕಾರ್ಮಿಕರು ನಗರಗಳಲ್ಲಿ ಹೋಟೆಲ್‌ಗಳಲ್ಲಿ ದುಡಿಯುವ ಕಾರ್ಮಿಕರು, ಸಣ್ಣ ಉದ್ದಿಮೆಗಳಲ್ಲಿ ದುಡಿಯುವವರು, ಈ ಮುಂತಾದ ಕ್ಷೇತ್ರಗಳಲ್ಲಿ ದುಡಿವ ಕೆಲಸಗಾರರು ಅಸಂಘಟಿತ ಕಾರ್ಮಿಕರು. ಇವರಿಗೆ ಮೂಲತಃ ನಿರ್ದಿಷ್ಟ ಕೂಲಿ ಇರುವುದಿಲ್ಲ,ಇಂತಹ ಕಾರ್ಮಿಕರನ್ನು ಗಮನದಲ್ಲಿಟ್ಟುಕೊಂಡು ಸ್ವಾತಂತ್ರ ನಂತರ ಕೇಂದ್ರ ಸರ್ಕಾರ 1949ರಲ್ಲಿ ಕನಿಷ್ಠ ಕೂಲಿ ಕಾಯ್ದೆಯನ್ನು ಜಾರಿಗೆ ತಂದಿದ್ದು, ಆ ಕಾಯ್ದೆಯು ಬಹುತೇಕವಾಗಿ ಹಲ್ಲಿಲ್ಲದ ಕಾಯ್ದೆಯಾಗಿದ್ದು ಪರಿಪೂರ್ಣವಾಗಿ ಜಾರಿಯಲ್ಲಿ ತರಲು ಸಾಧ್ಯವಾಗಿಲ್ಲ.
ಕಳೆದ ವರ್ಷದಿಂದ ದೇಶದಲ್ಲಿ ಕೋವಿಡ್ ಯಿಂದಾಗಿ ಸುಮಾರು 20 ಕೋಟಿ ಕಾರ್ಮಿಕರ ಬದುಕು ಅತಂತ್ರ ಸ್ಥಿತಿಗೆ ತಲುಪಿತು, ಉದ್ಯೋಗಕ್ಕಾಗಿ ನಗರಕ್ಕೆ ವಲಸೆ ಬಂದಂತಹವರು ಲಾಕ್ ಡೌನ್ ಕಾರಣಕ್ಕೆ ತಮ್ಮ ಹಳ್ಳಗಳಿಗೆ ಹಿಂದಿರುಗಿದರು, ಇದರಿಂದಾಗಿ ಅರ್ಥಿಕ ವ್ಯವಸ್ಥೆಯನ್ನು ಬುಡಮೇಲು ಮಾಡಿಹಾಕಿತು, ಅನೇಕ ಸಣ್ಣ ಮತ್ತು ಮಾದ್ಯಮ ವರ್ಗ ಕೈಗಾರಿಕೆಗಳು ಮಚ್ಚಿದವು ಸರ್ಕಾರ ಅನೇಕ ಯೋಜನೆಗಳನ್ನು, ಸಹಾಯ ಧನವನ್ನು ನೀಡಿದರು. ಅದು ಅವರ ಬದುಕಿಗೆ ಕೊಂಚಮಟ್ಟಿಗೆ ನೆಮ್ಮದಿ ತಂದರು, ಮುಂದೇನು? ಎಂಬ ಪ್ರಶ್ನೆ ಹಾಗೆ ಉಳಿಯಿತು, ಕೋವಿಡ್ ಕಡಿಮೆ ಆಯಿತು, ಮತ್ತೆ ಆರ್ಥಿಕ ವ್ಯವಸ್ಥೆ ಸಹಜ ಸ್ಥಿತಿಯತ್ತ ಮರಳುತಿದೆ ಎನ್ನುವಷ್ಟರಲ್ಲಿಯೇ 2ನೇ ಅಲೆ ಪ್ರಾರಂಭವಾಯಿತು, ಮತ್ತೆ ಕಾರ್ಮಿಕರ ಬದುಕು ಅತಂತ್ರೆಗೆ ಸಿಲುಕಿದೆ, ಇಡೀ ದೇಶಾದ್ಯಂತ ನಗರ ಹಳ್ಳಿ ಎನ್ನದೇ ಕೊರೊನಾ ವಕ್ಕರಿಸಿ ಸಾವು-ನೋವುಗಳು ಸಂಭವಿಸುತ್ತಿದೆ,
ಒಟ್ಟಾರೆ ಭಾರತದಲ್ಲಿ ಕಾರ್ಮಿಕರು ಶೋಷಣೆಯಲ್ಲೇ ಬದುಕು ಸಾಗಿಸುತ್ತಿದ್ದು ಶ್ರಿಮಂತರು ಶ್ರೀಮಂತರಾಗಿಯೇ ಮಂದುವರೆದರೆ ಬಡವರು ಬಡವರಾಗಿಯೇ ಸಾಗುತ್ತಿದ್ದಾರೆ. ಇಂತಹ ಬಂಡವಾಳಶಾಹಿ ಶೋಷಣೆಯ ವಿರುದ್ದ ಕಾರ್ಮಿಕರಿಗೆ ಬಲ ತುಂಬ ಬೇಕಿದೆ ಅದು ಕಾನೂನುಗಳ ಮೂಲಕ, ಅವರ ಹೋರಾಟಕ್ಕೆ ನೈತಿಕ ಸ್ಥೈರ್ಯ ನೀಡ ಬೇಕಿರುವುದು ನಮ್ಮಲ್ಲರ ಕರ್ತವ್ಯ.
***
ಡಾ.ಗುರುಪ್ರಸಾದ ಎಚ್ ಎಸ್
- ಮೂಲತಃ ಉಪನ್ಯಾಸಕರು. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನ ಹಳ್ಳಿಯವರು. ಪ್ರಸ್ತುತ ಹಗರಿಬೊಮ್ಮನಹಳ್ಳಿ ಜಿವಿಪಿಪಿ ಪದವಿ ಕಾಲೇಜನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತ ಜೊತೆಗೆ ಪತ್ರಿಕೆಗಳಿಗೆ ವೆಬ್ ನ್ಯೂಸ್ ಪೋಟ್೯ಲ್ ಗಳಿಗೆ ಲೇಖನ ಬರೆಯುತ್ತಿದ್ದಾರೆ.