ಹ್ಯಾಟ್ರಿಕ್ ಹೊಡೆದ ಮಮತಾ ಬ್ಯಾನರ್ಜಿ I ಕೇರಳದಲ್ಲಿ ಇನ್ನೊಮ್ಮೆ ಪಿಣರಾಯಿ ವಿಜಯನ್ I ತಮಿಳುನಾಡಿನಲ್ಲಿ ಸ್ಟಾಲಿನ್ I ಪುದುಚೆರಿಯಲ್ಲಿ ರಂಗಸ್ವಾಮಿ I ಅಸೋಮ್‌ನಲ್ಲಿ ಮತ್ತೊಮ್ಮೆ ಸರ್ಬಾನಂದ
ಮಮತಾ ಬ್ಯಾನರ್ಜಿ, ಎಂ.ಕೆ.ಸ್ಟಾಲಿನ್, ಪಿಣರಾಯಿ ವಿಜಯನ್, ಎನ್.ರಂಗಸ್ವಾಮಿ, ಸರ್ಬಾನಂದ ಸೋನೋವಾಲ
ನವದೆಹಲಿ: ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಬಹತೇಕ ಹೊರಬಿದ್ದಿದ್ದು, ಚುನಾವಣಾ ಆಯೋಗದ ಅಂತಿಮ ಅಂಕಿ-ಅಂಶ ಹೊರ ಬೀಳುವುದೊಂದೇ ಬಾಕಿ.
ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಸೇರಿದಂತೆ ಇಡೀ ಬಿಜೆಪಿಯ ಸವಾಲನ್ನು ಗಟ್ಟಿಯಾಗಿ ಎದುರಿಸಿದ ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅಸೋಮ್‌ನಲ್ಲೂ ಬಿಜೆಪಿ ಅಧಿಕಾರ ಉಳಿಸಿಕೊಂಡಿದೆಯಾದರೂ, ಕೇರಳದಲ್ಲಿ ಆ ಪಕ್ಷದ್ದು ಶೂನ್ಯ ಸಾಧನೆ. ಕೇರಳದಲ್ಲಿ ಮೆಟ್ರೋಮ್ಯಾನ್ ಇ.ಶ್ರೀಧರನ್ ಮ್ಯಾಜಿಕ್ ನಡೆದಿಲ್ಲ. ಸಿಪಿಎಂ ನೇತೃತ್ವದ ಎಲ್‌ಡಿಎಫ್ ಪುನರಾಯ್ಕೆ ಆಗಿದೆ.
ತಮಿಳುನಾಡಿನಲ್ಲಿ ನಿರೀಕ್ಷೆಯಂತೆ ಡಿಎಂಕೆ ಭರ್ಜರಿ ಜಯ ಸಾಧಿಸಿದೆ. ಅಲ್ಲಿ ದಿವಂಗತ ಕರುಣಾನಿಧಿ ಅವರ ಪುತ್ರ ಎಂ.ಕೆ.ಸ್ಟಾಲಿನ್ ಮುಖ್ಯಮಂತ್ರಿ ಆಗಲಿದ್ದಾರೆ. ಪುದುಚೆರಿಯಲ್ಲಿ ಎನ್.ಆರ್.ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ, ಮೈತ್ರಿ ಸರಕಾರದ ಭಾಗವಾಗಲಿದೆ. ಎನ್.ಆರ್. ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಂಗಸ್ವಾಮಿ ಮುಖ್ಯಮಂತ್ರಿಯಾಗಲಿದ್ದಾರೆ.
ತಮಿಳುನಾಡಿನಲ್ಲಿ ಡಿಎಂಕೆ
ನಿರೀಕ್ಷೆಯಂತೆ ತಮಿಳುನಾಡಿನಲ್ಲಿ ಡಿಎಂಕೆ ಭರ್ಜರಿ ಗೆಲುವು ಸಾಧಿಸಿದೆ. ಈ ವರದಿ ಬರೆಯುವ ಹೊತ್ತಿಗೆ ಸಿಕ್ಕಿರುವ ಅಂಕಿ-ಅಂಶಗಳ ಪ್ರಕಾರ ಡಿಎಂಕೆ ಮೈತ್ರಿಕೂಟ 154 ಕ್ಷೇತ್ರಗಳಲ್ಲಿ ಗೆದ್ದರೆ, ಎಐಡಿಎಂಕೆ ಕೂಟ 77 ಹಾಗೂ ಇತರರು 3 ಕ್ಷೇತ್ರಗಳಲ್ಲಿ ಗೆದ್ದಿದ್ದಾರೆ. ರಾಜ್ಯದಲ್ಲಿ ಒಟ್ಟು 224 ಕ್ಷೇತ್ರಗಳಿವೆ.
ಎಐಡಿಎಂಕೆ ಮತ್ತು ಬಿಜೆಪಿ ಮೈತ್ರಿಕೂಟ ಎಡವಿದ್ದು, ಎರಡಂಕಿ ದಾಟಿಲ್ಲ. ಎಐಡಿಎಂಕೆ ಮತ್ತು ಬಿಜೆಪಿ ಪಳನಿಸ್ವಾಮಿ ಹಾಗೂ ಪನ್ನೀರ್‌ಸೆಲ್ವಂ ಸರಕಾರ ವಿರೋಧಿ ಅಲೆ ಎಐಡಿಎಂಕೆಯನ್ನು ಸೋಲಿನ ದವಡೆಗೆ ತಳ್ಳಿದೆ. ಇದೇ ಮೊದಲ ಬಾರಿಗೆ ರಾಜಕೀಯ ಭವಿಷ್ಯಕ್ಕೆ ಹೊಸ ಪಕ್ಷ ಸ್ಥಾಪಿಸಿ ಕಣಕ್ಕಿಳಿದಿದ್ದ ಕಮಲ್ ಹಾಸನ್ ಅವರು ಕೊಯಮತ್ತೂರು ದಕ್ಷಿಣದಲ್ಲಿ ಸೋಲನುಭವಿಸಿದ್ದಾರೆ. ಕರ್ನಾಟಕದ ಸಿ.ಟಿ.ರವಿ ಉಸ್ತುವಾರಿಯಲ್ಲಿದ್ದ ಬಿಜೆಪಿ ಭಾರೀ ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ, 3 ಕ್ಷೇತ್ರಗಳಲ್ಲಿ ಮಾತ್ರ ಆ ಪಕ್ಷ ಗೆದ್ದಿದೆ. ಇನ್ನು, ಕಾಂಗ್ರೆಸ್ 16 ಕ್ಷೇತ್ರಗಳಲ್ಲಿ ವಿಜಯ ಸಾಧಿಸಿ ಎಲ್ಲರಿಗೂ ಅಚ್ಚರಿ ಉಂಟು ಮಾಡಿದೆ.
ಪುದುಚೆರಿಯಲ್ಲಿ ಎನ್.ಆರ್.ಕಾಂಗ್ರೆಸ್ & ಬಿಜೆಪಿ
ಇನ್ನು, ಕೇಂದ್ರಾಡಳಿತ ಪ್ರದೇಶ ಪುದುಚೆರಿಯಲ್ಲಿ ಬಿಜೆಪಿ ಮತ್ತು ಎನ್.ಆರ್.ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಅಧಿಕಾರಕ್ಕೆ ಬರುವುದು ಖಚಿತ. ಒಟ್ಟು 30 ಕ್ಷೇತ್ರಗಳಿರುವ ಎನ್.ಆರ್.ಕಾಂಗ್ರೆಸ್ 10 ಕ್ಷೇತ್ರಗಳಲ್ಲಿ, ಬಿಜೆಪಿ 6, ಕಾಂಗ್ರೆಸ್ 2, ಡಿಎಂಕೆ 6 ಹಾಗೂ ಪಕ್ಷೇತರರು 6 ಕಡೆಗಳಲ್ಲಿ ಗೆದ್ದಿದ್ದಾರೆ. ಎನ್.ಆರ್.ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ರಂಗಸ್ವಾಮಿ ಮುಖ್ಯಮಂತ್ರಿ ಆಗುವುದು ಖಚಿತವಾಗಿದೆ. ಆದರೆ, ಕಾಂಗ್ರೆಸ್‌ಗಿಂತ ಹೆಚ್ಚು ಸ್ಥಾನಗಳನ್ನು ಗಳಿಸಲು ಬಿಜೆಪಿಗೆ ಸಾಧ್ಯವಾಗಿಲ್ಲ.
ಪಶ್ಚಿಮ ಬಂಗಾಳದಲ್ಲಿ ಮತ್ತೆ ತೃಣಮೂಲ ಕಾಂಗ್ರೆಸ್
ಪಂಚ ರಾಜ್ಯಗಳ ಪೈಕಿ ಅತಿ ಹೆಚ್ಚು ಗಮನ ಸೆಳೆದಿದ್ದ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಸಡ್ಡು ಹೊಡೆದ ಮಮತಾ ಬ್ಯಾನರ್ಜಿ ಅಧಿಕಾರ ಉಳಿಸಿಕೊಂಡಿದ್ದಾರೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಕಣಕ್ಕಿದಳಿದರೂ, ತೃಣಮೂಲ ಕಾಂಗ್ರೆಸ್‌ನಿಂದ ತಂಡೋಪ ತಂಡವಾಗಿ ನಾಯಕರನ್ನು ಗುಳೆ ಎಬ್ಬಿಸಿದರೂ ಬಿಜೆಪಿ ಸಕ್ಸಸ್ ಆಗಿಲ್ಲ. ಒಂಟಿಯಾಗಿ ಸೆಣಸಿದ ಮಮತಾ ಸ್ವತಃ ನಂದಿಗ್ರಾಮದಲ್ಲಿ ಅದ್ಭುತ ಗೆಲುವು ಸಾಧಿಸಿದ್ದಾರೆ.
ಒಟ್ಟು 292 ಕ್ಷೇತ್ರಗಳಿರುವ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ 214 ಹಾಗೂ ಬಿಜೆಪಿ 76 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೆ, ದಶಕಗಳ ಬಂಗಾಳವನ್ನು ಆಳಿ ಭಾರೀ ಪ್ರಮಾಣದ ಕಾರ್ಯಕರ್ತರ ಪಡ ಹೊಂದಿದ್ದ ಎಡರಂಗದ್ದು ಶೂನ್ಯ ಸಂಪಾದನೆ. ಕೇರಳಕ್ಕೆ ತದ್ವಿರುದ್ಧವಾದ ಪರಿಸ್ಥಿತಿಯಲ್ಲಿ ಎಡಪಕ್ಷಗಳಿವೆ ಇಲ್ಲಿ. ಇನ್ನು ರಾಷ್ಟ್ರೀಯ ಸೆಕ್ಯೂಲರ್ ಮಜ್ಲೀಸ್ ಪಕ್ಷ 01 ಹಾಗೂ ಪಕ್ಷೇತರರೊಬ್ಬರು 01 ಸ್ಥಾನದಲ್ಲಿ ಗೆಲುವುದ ಸಾಧಿಸಿದ್ದಾರೆ.
ಅಸೋಮ್‌ನಲ್ಲಿ ಬಿಜೆಪಿ
ಅಸ್ಸೋಂನಲ್ಲಿ ಪುನಾ ಎನ್‍ಡಿಎ ಮೈತ್ರಿಕೂಟ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಒಟ್ಟು 126 ಕ್ಷೇತ್ರಗಳ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 76 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ. ಬಿಜೆಪಿ 58 ಹಾಗೂ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ 49 ಕಡೆ ಜಯ ಗಳಿಸಿದೆ.
ಮತ್ತೊಮ್ಮೆ ಸರಕಾರ ರಚಿಸಲು ಮತದಾರ ನಮಗೆ ಆಶೀರ್ವಾದ ನೀಡಿದ್ದು, ಮಿತ್ರಪಕ್ಷಗಳ ನೆರವಿನೊಂದಿಗೆ ಮತ್ತೆ ಸರಕಾರ ರಚಿಸುತ್ತೇವೆ ಎಂದು ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ ತಿಳಿಸಿದ್ದಾರೆ.
ಕೇರಳದಲ್ಲಿ ಮತ್ತೆ ಎಲ್‌ಡಿಎಫ್
ಉಳಿದಂತೆ ಕೇರಳದಲ್ಲಿ ಸಿಪಿಎಂ ನೇತೃತ್ವದ ಎಲ್‌ಡಿಎಫ್ ಮೈತ್ರಿಕೂಟ ಅಧಿಕಾರ ಉಳಿಸಿಕೊಂಡಿದೆ. ಪಿಣರಾಯಿ ವಿಜಯನ್ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಲಿದ್ದಾರೆ. ಒಟ್ಟು 140 ಕ್ಷೇತ್ರಗಳ ಪೈಕಿ ಎಡರಂಗ 97, ಕಾಂಗ್ರೆಸ್ ನೇತೃತ್ವದ ಎಲ್‌ಡಿಎಫ್ 41 ಕ್ಷೇತ್ರಗಳಲ್ಲಿ ಗೆದಿದ್ದರೆ, ಇದ್ದ ಒಂದು ಕ್ಷೇತ್ರವನ್ನೂ ಬಿಜೆಪಿ ಕಳೆದುಕೊಂಡಿದೆ. ಇತರರು 2 ಕಡೆ ಗೆದ್ದಿದ್ದಾರೆ.
Charts courtesy: Election Commission Of India