ಬಾಗೇಪಲ್ಲಿಯಲ್ಲಿ ಡೆಡ್ಲಿ ವೈರಸ್ ಬಗ್ಗೆ ನಿರ್ಲಕ್ಷ್ಯ; ಭಾನುವಾರ ಚಿಕನ್-ಮಟನ್ ಖರೀದಿಗೆ ಮುಗಿದು ಬಿದ್ದ ಜನ, ಸೋಮವಾರ ಅಬ್ಬರಿಸಲಿದೆಯಾ ಕೊರೊನಾ
Ra Na Gopala Reddy Bagepalli
ಬಾಗೇಪಲ್ಲಿ: ಎಂದಿನಂತೆ ಸಂಚಾರ ಹಾಗೂ ಅಗತ್ಯ ವಸ್ತುಗಳ ಖರೀದಿಗೆ ಕೊಟ್ಟ ಅವಕಾಶದ ದುರುಪಯೋಗ, ಪರಿಣಾಮ ವಾರದ ಮೊದಲ ದಿನ ಬಾಗೇಪಲ್ಲಿಯಲ್ಲಿ ಸೋಂಕು ಜಿಗಿಯುವ ಭೀತಿ ತಾಲೂಕು ಆಡಳಿತ ಯಂತ್ರಕ್ಕೆ ಉಂಟಾಗಿದೆ.
ಎಷ್ಟೇ ಹೇಳದರೂ ಮಾತು ಕೇಳದ ಜನರು ಭಾನುವಾರ ಬಾಗೇಪಲ್ಲಿ ಪಟ್ಟಣವೂ ಸೇರಿದಂತೆ ತಾಲೂಕಿನ ಎಲ್ಲಡೆ ಚಿಕನ್, ಮಟನ್ ಖರೀದಿಗೆ ಮುಗಿಬಿದ್ದರು. ದೈಹಿಕ ಅಂತರದ ಮರೆತದ್ದು, ಗುಂಪು ಗುಂಪಾಗಿ ಸೇರಿದ್ದು ಸೋಮವಾರ ತಾಲೂಕಿನಲ್ಲಿ ವೈರಸ್ ಅಬ್ಬರಸಬಹುದಾ? ಎಂಬ ಭೀತಿ ಉಂಟಾಗಿದೆ.
ಜನರಿಗೆ ಕೊರೊನಾ ಭೀಕರತೆ ಆರ್ಥವಾದಂತಿಲ್ಲ. ಕೊರೋನಾ ಸೋಂಕು ಹರಡುವುದನ್ನು ತಡೆಯಲು ಸರಕಾರ ಕಠಿಣ ಕರ್ಫ್ಯೂ ಜಾರಿ ಮಾಡಿದ್ದರೂ ಸಾರ್ವಜನಿಕರು ಎಂದಿನಂತೆ ದೈಹಿಕ ಅಂತರವಿಲ್ಲದೆ ಗುಂಪು ಗುಂಪಾಗಿ ತಿರುಗಾಡುತ್ತಿದ್ದಾರೆ. ಜನರನ್ನು ನಿಯಂತ್ರಿಸಬೇಕಾದ ಪೊಲೀಸರು ಮೃದುಧೋರಣೆ ಅನುಸರಿಸುತ್ತಿದ್ದು, ಜನತಾ ಕರ್ಫ್ಯೂ ಯಶಸ್ವಿಗೊಳಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಸಾರ್ವಜನಿಕರೊಬ್ಬರು ಅಳಲು ತೋಡಿಕೊಂಡರು.
ಕರ್ಫ್ಯೂ ಜಾರಿ ಬಳಿಕ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗಬೇಕು. ಆದರೆ, ಪ್ರತಿದಿನ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಸಾವನ್ನಪ್ಪುವವರ ಸಂಖ್ಯೆ ಏರುಗತಿಯಲ್ಲಿಯೇ ಸಾಗುತ್ತಿದೆ. ಆದರೂ, ಜನ ಸಾಮಾನ್ಯರು ಸೋಂಕನ್ನು ಗಂಭೀರವಾಗಿ ಪರಿಗಣಿಸಿಲ್ಲ. ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6ರಿಂದ 12 ಗಂಟೆವರೆಗೆ ಮಾರುಕಟ್ಟೆಗಳು ಮತ್ತು ದಿನಸಿ ಪದಾರ್ಥಗಳ ಖರೀದಿಗೆ ಅವಕಾಶ ನೀಡಿರುವುದನ್ನೇ ಜನ ದುರ್ಬಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕರ್ಪ್ಯೂ ನಡುವೆ ಕೆಲ ಚಟುವಟಿಕೆಗಳನ್ನು ಮುಂದುವರೆಸಲು ಸರಕಾರ ಅವಕಾಶ ನೀಡಿರುವುದರಿಂದ ನಿರ್ಲಕ್ಷ್ಯ ವಹಿಸುತ್ತಿದ್ದು, ಗುಂಪುಗೂಡುವುದು. ಜನ ಏಕಕಾಲಕ್ಕೆ ಒಟ್ಟಾಗಿ ನಿಂತು ಮಾತನಾಡುವುದು ಮುಂದುವರಿದಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.
ಭಾನುವಾರ ಚಿಕನ್ ಮತ್ತು ಮಟನ್ ಖರೀದಿಸಲು ಮುಗಿದು ಬಿದ್ದು ಗುಂಪು ಗುಂಪಾಗಿ ಓಡಾಡುವ ಜನರು ಕೊರೊನಾ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಈ ಕಾರಣದಿಂದ ಕರ್ಫ್ಯೂ ನಡುವೆ ಪಟ್ಟಣದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಲು ಕಾರಣವಾಗುತ್ತಿದೆ. ಪಟ್ಟಣದ ಪ್ರಮುಖ ರಸ್ತೆಗಳಾದ ಗೂಳೂರು ವೃತ್ತ, ಎಸ್.ಬಿ.ಐ ರಸ್ತೆ, ಮಟನ್ ಮಾರುಕಟ್ಟೆ ರಸ್ತೆ, ಬಸ್ ನಿಲ್ದಾಣ,ಕೊತ್ತಪಲ್ಲಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಯಾವುದೇ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳದ ಜನತೆ ಸಾಮಾನ್ಯದಂತೆ ಓಡಾಡುತ್ತಿದ್ದ ದೃಶ್ಯಗಳು ಕಂಡು ಬಂದವು. ಸೋಮವಾರ ಸೋಂಕು ಅಬ್ಬರಿಸುವ ಭೀತಿ ಶುರುವಾಗಿದೆ.