ಚಾಮರಾಜನಗರ: ಕೋಲಾರದಲ್ಲಿ ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಕೋಲಾರದ ಜಿಲ್ಲಾಸ್ಪತ್ರೆಯಲ್ಲಿ ಐವರು ಸೋಂಕಿತರು ಸಾವನ್ನಪ್ಪಿದ ಧಾರುಣ ಘಟನೆ ಮರೆಯುವ ಮುನ್ನವೇ ಚಾಮರಾಜನಗರ ಜಿಲ್ಲೆಯ ಜಿಲ್ಲಾಸ್ಪತ್ರೆಯಲ್ಲಿ ಇದೇ ರೀತಿಯ ಘಟನೆ ಸಂಭವಿಸಿ 24ಕ್ಕೂ ಹೆಚ್ಚು ಕೋವಿಡ್ ಸೋಂಕಿತರು ಬಲಿಯಾಗಿದ್ದಾರೆ.
ದಿಲ್ಲಿ ನಂತರ ದೇಶದಲ್ಲಿ ಕೋವಿಡ್ ಪರಿಸ್ಥಿತಿ ವಿಷಮ ಸ್ಥಿತಿಗೆ ಹೋಗಿರುವ ರಾಜ್ಯ ಕರ್ನಾಟವೇ ಆಗಿದ್ದು, 24 ಸೋಂಕಿತರ ಸಾವು ಇಡೀ ರಾಜ್ಯ ಮತ್ತು ದೇಶವನ್ನು ಕಂಪಿಸುವಂತೆ ಮಾಡಿದೆ. ಜನರು ಸರಕಾರಕ್ಕೆ ಹಿಡಿಶಾಪ ಹಾಕುತ್ತಿದ್ದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ರಾತ್ರೋರಾತ್ರಿ ಖಾಲಿಯಾದ ಆಕ್ಸಿಜನ್ ಗೊ ಅಥವಾ ಸರಬರಾಜಿನಲ್ಲಿ ಆದ ತಾಂತ್ರಿಕ ತೊಂದರೆಯಿಂದಲೇ 24ಕ್ಕೂ ಹೆಚ್ಚು ಕೋವಿಡ್ ರೋಗಿಗಳು ಸಾವನ್ನಪ್ಪಿರುವ ಸಾಧ್ಯತೆ ಎಂದು ಮೂಲಗಳು ತಿಳಿಸಿವೆ.
ಇನ್ನೊಂದೆಡೆ ಜಿಲ್ಲಾಧಿಕಾರಿ ಎಂ.ಆರ್.ರವಿ ಹೇಳಿಕೆ ನೀಡಿದ್ದು, ಮೈಸೂರಿನಿಂದ ಸರಿಯಾದ ಸಮಯಕ್ಕೆ ಆಕ್ಸಿಜನ್ ಪೂರೈಕೆಯಾಗಲಿಲ್ಲ, ಈ ಕಾರಣಕ್ಕೆ ರೋಗಿಗಳು ಮೃತಪಟ್ಟಿದ್ದಾರೆ ಎಂದಿದ್ದಾರೆ.
ಚಾಮರಾಜನಗರ ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ ಸುಮಾರು ಕಳೆದ ರಾತ್ರಿ 11.40ರಿಂದ 12-20ರ ಸರಿಸುಮಾರಿನಲ್ಲಿ ಆಕ್ಸಿಜನ್ ಖಾಲಿಯಾಗಿದೆ ಎಂಬ ನಿಖರ ಮಾಹಿತಿ ಸಿಕ್ಕಿದೆ.
ಕಳೆದ ರಾತ್ರಿ 16 ಸೋಂಕಿತರು ಸಾವನ್ನಪ್ಪಿದ್ದಾರೆ ಎನ್ನಲಾಗಿದ್ದು, ಸೋಮವಾರ ಬೆಳಗಿನಜಾವ ನಾಲ್ವರಿಗಿಂತ ಹೆಚ್ಚು ಕೋವಿಡ್ ಸೋಂಕಿತರು ಆಮ್ಲಜನಕ ಇಲ್ಲದೆ ನರಕಯಾತನೆ ಅನುಭವಿಸಿ ಪ್ರಾಣ ಬಿಟ್ಟಿದ್ದಾರೆ ಎಂದು ಗೊತ್ತಾಗಿದೆ. ಮೈಸೂರಿನಿಂದ ಆಕ್ಷಿಜನ್ ಬರುವ ಹೊತ್ತಿಗೆ ಬಹತೇಕರ ಜೀವ ಹೋಗಿತ್ತು ಎಂದು ಮೂಲಗಳು ತಿಳಿಸಿವೆ.
ಜಿಲ್ಲಾಡಳಿತ ಮಾತ್ರ ಸಮಸ್ಯೆ ಉಂಟಾಗಿಲ್ಲ ಎಂದು ಸರಕಾರದ ಪರವಾಗಿ ಬ್ಯಾಟಿಂಗ್ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಮೃತರ ಸಂಬಂಧಿಕರ ಆಕ್ರೋಶ ಕಟ್ಟೆಯೊಡೆದಿದೆ.
ಸ್ಥಳೀಯ ಶಾಸಕ ಪುಟ್ಟರಂಗಶೆಟ್ಟಿ ಅವರು ಹೇಳಿರುವಂತೆ, “ಆಕ್ಸಿಜನ್ ಸಮಸ್ಯೆ ಉಂಟಾಗಿರುವುದರಿಂದಲೇ ಈ ಸಾವುಗಳು ಆಗಿವೆ ಎಂದು ತಿಳಿಸಿದ್ದಾರೆ. ರೋಗಿಗಳ ಕುಟುಂಬದವರು ರಾತ್ರಿ ಆದ ಸಮಸ್ಯೆಗೆ ಪೂರಕ ಎಂಬಂತೆ ಟವಲ್, ಪೇಪರ್ʼಗಳಲ್ಲಿ ರೋಗಿಗಳಿಗೆ ಗಾಳಿ ಬೀಸಿತ್ತಿರುವ ವಿಡಿಯೋ ಕೂಡ ವೈರಲ್ ಆಗಿದ್ದು ಶಾಸಕರ ಹೇಳಿಕೆಗೆ ಪೂರಕವಾಗಿದೆ.
ನ್ಯಾಯಾಂಗ ತನಿಖೆಯಾಗಲಿ
ಒಂದೆಡೆ ಆಕ್ಸಿಜನ್ ಖಾಲಿಯಾಗಿಲ್ಲ ಎಂದು ಜಿಲ್ಲಾಡಳಿತ ಹೇಳಿಕೆ ನೀಡಿ ಜಾರಿಕೊಂಡಿದ್ದು, .
ಮೃತರ ಸಂಬಂಧಿಕರು ಆಕ್ಸಿಜನ್ ಕೊರತೆಯಿಂದಲೇ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದ್ದಾರೆ. ಹೀಗಾಗಿ ಇಡೀ ಘಟನೆಯನ್ನು ನ್ಯಾಯಾಂಗ ತನಿಖೆ ಮಾಡಿಸಬೇಕು ಎಂದು ಅವರು ಒತ್ತಾಯ ಮಾಡಿದ್ದಾರೆ.
ನ್ಯಾಯಾಂಗ ವ್ಯವಸ್ಥೆ ತನಿಖೆ ನಡೆಸಿ, ಆಕ್ಸಿಜನ್ ಪ್ರಮಾಣ ಯಾವಾಗ ಖಾಲಿಯಾಯಿತು? ಅದು ಎಷ್ಟು ರೋಗಿಗಳಿಗೆ ಸರಬರಾಜಾಗಿದೆ? ಆ ಸಾವಿಗೆ ನಿಖರ ಮಾಹಿತಿ ಎಲ್ಲವನ್ನೂ ಕಲೆಹಾಕಿ ಕರ್ತವ್ಯಲೋಪ ಮಾಡಿದ ಆಸ್ಪತ್ರೆ ಸಿಬ್ಬಂದಿಗೆ ಶಿಕ್ಷೆ ನೀಡಬೇಕಾಗಿದೆ ಎಂದು ಅವರು ಆಗ್ರಹಪಡಿಸಿದ್ದಾರೆ.
ಸಿಎಂ ದಿಗ್ಭ್ರಮೆ, ಆರೋಗ್ಯ ಸಚಿವರಿಗೆ ಕ್ಲಾಸ್
ಚಾಮರಾಜನಗರ ದುರಂತದ ಸುದ್ದಿ ತಿಳಿದ ಕೂಡಲೇ ತೀವ್ರ ಶಾಕ್‌ಗೆ ಗುರಿಯಾದ ಮುಖ್ಯಮಂತ್ರಿ ಯಡಿಯೂರಪ್ಪ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಅವರಿಬ್ಬರನ್ನು ತರಾಟೆಗೆ ತೆಗೆದುಕೊಂಡಿದ್ದಾರೆಂದು ಗೊತ್ತಾಗಿದೆ. ಕೂಡಲೇ ಚಾಮರಾಜನಗರಕ್ಕೆ ತೆರಳುವಂತೆ ಆರೋಗ್ಯ ಸಚಿವರಿಗೆ ಸಿಎಂ ಸೂಚಿಸಿದ್ದಾರಲ್ಲದೆ, ಈ ಬಗ್ಗೆ ಪೂರ್ಣ ವರದಿ ನೀಡುವಂತೆ ಆದೇಶ ನೀಡಿದ್ದಾರೆ.
ಈ ದುರ್ಘಟನೆ ಹಿನ್ನೆಲೆಯಲ್ಲಿ ಜನರ ಆಕ್ರೋಶ ತೀವ್ರವಾಗುತ್ತಿದ್ದು, ಮುಖ್ಯಮಂತ್ರಿ ಅವರು ನಾಳೆ ಸಚಿವ ಸಂಪುಟದ ತುರ್ತುಸಭೆ ಕರೆದಿದ್ದಾರೆ. ಅಲ್ಲದೆ, ಚಾಮರಾಜನಗರ ಜಿಲ್ಲಾಧಿಕಾರಿ ಜತೆ ಮೊಬೈಲ್‌ನಲ್ಲಿ ಮಾತನಾಡಿದ್ದಾರೆ!
ಇನ್ನೊಂದೆಡೆ ಚಾಮರಾಜನಗರ ಜಿಲ್ಲಾಸ್ಪತ್ರೆ ಮುಂದೆ ಜನರು ಜಿಲ್ಲಾಡಳಿತ ಮತ್ತು ಸರಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
ತನಿಖೆಗೆ ಸರಕಾರ ಆದೇಶ
ಈ ದುರಂತದ ತನಿಖೆಗೆ ಸರಕಾರ ಆದೇಶ ನೀಡಿದೆ. ಆಮ್ಲಜನಕದ ಕೊರತೆಯಿಂದಲೇ ಸೋಂಕಿತರು ಸಾವನ್ನಪ್ಪಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಆದರೂ ಸಮಗ್ರ ತನಿಖೆ ನಡೆಸಲು ಐಎಎಸ್ ಅಧಿಕಾರಿ ಶಿವಯೋಗಿ ಕಳಸದ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ. ಮೂರು ದಿನಗಳ ಒಳಗೆ ವರದಿ ಸಲ್ಲಿಸುವಂತೆ ಅವರಿಗೆ ನಿರ್ದೇಶನ ನೀಡಲಾಗಿದೆ.