ಚಿಕ್ಕಬಳ್ಳಾಪುರ ಜಿಲ್ಲೆಯ ಕೋವಿಡ್ ಸೋಂಕಿತರಿಗೆ ಜೈನ್ ಆಸ್ಪತ್ರೆಯಲ್ಲಿ 100 ಬೆಡ್
ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕರ್ಫ್ಯೂ ರೀತಿಯ ಲಾಕ್‌ಡೌನ್ ಅಷ್ಟೊಂದು ಪರಿಣಾಮಕಾರಿಯಾಗಿ ಫಲಿತಾಂಶ ನೀಡಲಿಲ್ಲ. ಪಾಸಿಟೀವ್ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲೇ ಇದೆ. ಈ ಚೈನ್‌ಲಿಂಕ್‌ನ್ನು ಸಂಪೂರ್ಣವಾಗಿ ಮುರಿಯಬೇಕಾದರೆ ಸಂಪೂರ್ಣ ಲಾಕ್‌ಡೌನ್ ಒಂದೇ ಅಸ್ತ್ರವಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ನಗರದ ಹೊರವಲಯದ ಜಡಲತಿಮ್ಮನಹಳ್ಳಿ ಬಳಿ ನಿರ್ಮಾಣ ಹಂತದಲ್ಲಿರುವ ಜೈನ್ ಆಸ್ಪತ್ರೆಯಲ್ಲಿ 100 ಬೆಡ್‌ಗಳನ್ನು ಜಿಲ್ಲೆಯ ಕೋವಿಡ್ ರೋಗಿಗಳಿಗೆ ಬಳಕೆ ಮಾಡಿಕೊಳ್ಳುವ ಸಂಬಂಧ ಶುಕ್ರವಾರ ಆಸ್ಪತ್ರೆಗೆ ಭೇಟಿ ನೀಡಿ ಅವರು ಪರಿಶೀಲನೆ ನಡೆಸಿದರು.
ಅಲ್ಲಿನ ಬೆಡ್ ವ್ಯವಸ್ಥೆ, ಐಸಿಯು, ಆಕ್ಸಿಜನ್ ಪೂರೈಕೆ ಸೇರಿದಂತೆ ಇತರೆ ಸಿದ್ಧತೆಗಳನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ರಾಜ್ಯದಲ್ಲಿ ಇಂದೂ ಕೂಡ ಕೋವಿಡ್ ಸಾವಿನ ಸಂಖ್ಯೆ ಹೆಚ್ಚಾಗಿದೆ. ಒಟ್ಟು 592 ಮಂದಿ (ಶೇ.1.21ರಷ್ಟು) ಸಾವನ್ನಪ್ಪಿದ್ದಾರೆ. ಈ ದಿಸೆಯಲ್ಲಿ ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಕಳೆದ ಬಾರಿಯಂತೆ ಲಾಕ್‌ಡೌನ್‌ನ್ನು ಅತ್ಯಂತ ಕಠಿಣವಾಗಿ ಮಾಡಬೇಕಾಗಿದೆ. ಮುಂದಿನ ದಿನಗಳಲ್ಲಿ ಕನಿಷ್ಠ 14 ದಿನಗಳ ಕಾಲ ಕಠಿಣ ಕ್ರಮಗಳನ್ನು ಕೈಗೊಂಡರೆ ಮಾತ್ರ ಈ ಸಂಕಷ್ಟದಿಂದ ನಾವು ಪಾರಾಗಬಹುದು. ಮಾನ್ಯ ಮುಖ್ಯಮಂತ್ರಿಗಳು ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದು ಕೊಂಡಿದ್ದಾರೆ” ಎಂದರು.
ಏಕಾಏಕಿ 2 ಪಟ್ಟು ರೋಗಿಗಳು ಹೆಚ್ಚಾದಾಗ ಸ್ವಾಭಾವಿಕವಾಗಿ ಸಮಸ್ಯೆಗಳು ಉಂಟಾಗುವುದು ಸಹಜ. ಆದರೂ ಕೂಡ ಸರಕಾರ ಮತ್ತು ನಾವು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡು ಯಾರಿಗೂ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದೇವೆ. ಇದಲ್ಲದೇ ಆಕ್ಸಿಜನ್ ಬೇಡಿಕೆಯೂ ಏಕಾಏಕಿ ಹೆಚ್ಚಾಗಿದ್ದು, 1700 ಟನ್ ಆಕ್ಸಿಜನ್ ಬೇಡಿಕೆ ಬಂದಿದೆ. ಇದು ಯಾರ ಊಹೆಗೂ ಬಂದಿರಲಿಲ್ಲ. ಈ ಹಿಂದೆ ಯಾವ ರೋಗಕ್ಕೂ, ಯಾವ ಸೋಂಕಿಗೂ ಇಷ್ಟು ದೊಡ್ಡ ಪ್ರಮಾಣದ ಆಕ್ಸಿಜನ್ ಬೇಡಿಕೆ ಬಂದಿರಲಿಲ್ಲ. ಹಾಗಾಗಿ ಸ್ವಲ್ಪ ತೊಂದರೆಯಾಗಿದೆ ಎಂದು ಅವರು ಮಾಹಿತಿ ನೀಡಿದರು.
ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಕೂಡ ನಮಗೆ 1200 ಟನ್ʼನಷ್ಟು ಆಕ್ಸಿಜನ್ ಬೇಕು ಎಂಬ ನಮ್ಮ ಮನವಿಯನ್ನು ಪುರಸ್ಕರಿಸಿದೆ. 1200 ಟನ್‌ನಷ್ಟು ಆಕ್ಸಿಜನ್‌ನ್ನು ಅಧಿಕೃತವಾಗಿ ಕರ್ನಾಟಕಕ್ಕೆ ಕೊಡಬೇಕು ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ. ಕೇಂದ್ರ ಸರಕಾರವು ದೊಡ್ಡ ಸವಾಲಿನ ನಡುವೆಯೂ ರಾಜ್ಯಕ್ಕೆ 960 ಟನ್ ಆಕ್ಸಿಜನ್ ನೀಡಲು ಒಪ್ಪಿದೆ. ಆದರೆ, ಕೆಲವೊಂದು ಲಾಜಿಸ್ಟಿಕ್ ಸಮಸ್ಯೆಯಿಂದ ಆಕ್ಸಿಜನ್ ಸರಬರಾಜು ತಡವಾಗಬಹುದು. ಆದರೂ ಕೂಡ ಎಲ್ಲವನ್ನೂ ಸಮರ್ಪಕವಾಗಿ ನಿಭಾಯಿಸಲಾಗುತ್ತಿದೆ. ಸರಕಾರ, ಸಚಿವರೆಲ್ಲರ ಒಮ್ಮತದ ಸಹಕಾರದಿಂದ ಆದಷ್ಟು ಮಟ್ಟಿಗೆ ನಿಯಂತ್ರಣ ಮಾಡಲಾಗುತ್ತಿದೆ ಎಂದರು ಸಚಿವರು.
ಜೈನ್ ಆಸ್ಪತ್ರೆಯಿಂದ 100 ಬೆಡ್
ಚಿಕ್ಕಬಳ್ಳಾಪುರ ಜಿಲ್ಲೆಗೆ ಸಂಬಂಧಿಸಿದಂತೆ ಜೈನ್ ಆಸ್ಪತ್ರೆಯವರು ತಮ್ಮಲ್ಲಿನ 100 ಬೆಡ್‌ಗಳನ್ನು ಜಿಲ್ಲೆಯ ಕೋವಿಡ್ ರೋಗಿಗಳಿಗೆ ಬಳಕೆ ಮಾಡಿಕೊಳ್ಳಲು ಮುಂದೆ ಬಂದಿದ್ದು, ಇಲ್ಲಿ 100 ಬೆಡ್ ವ್ಯವಸ್ಥೆ ಮಾಡಲಾಗಿದೆ. 9 ಐಸಿಯು ಬೆಡ್‌ಗಳು ಇದ್ದು, ಜಿಲ್ಲೆಯ ರೋಗಿಗಳಿಗೆ ಅನುಕೂಲವಾಗಲಿದೆ. ಇನ್ನು ಜೈನ್ ಆಸ್ಪತ್ರೆಯಲ್ಲಿ ಈಗಾಗಲೇ 2 ಆಕ್ಸಿಜನ್ ಟ್ಯಾಂಕರ್ ಸಿದ್ಧವಿದೆ. ಇನ್ನೂ 4 ಕೆಎಲ್ ಟ್ಯಾಂಕರ್ ತರಿಸಲು ಪ್ರಯುತ್ನಿಸುತ್ತಿದ್ದೇವೆ. ಜಿಲ್ಲಾ ಆಸ್ಪತ್ರೆಗೆ 13 ಕೆಎಲ್ ಅಳವಡಿಕೆಗೆ ಪ್ರಯತ್ನಿಸಲಾಗುತ್ತಿದೆ. ಜಿಲ್ಲಾಡಳಿತವು ಎಲ್ಲಾ ರೀತಿಯಲ್ಲಿ ವ್ಯವಸ್ಥೆಗಳನ್ನು ಮಾಡಿದೆ ಎಂದು ಡಾ.ಸುಧಾಕರ್ ಹೇಳಿದರು.
ಪ್ರತಿ ಸೋಂಕಿತನಿಗೂ ಕಿಟ್
ಬಳಿಕ ಸರಕಾರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಅವರು, ಕೋವಿಡ್ ನಿಯಂತ್ರಣದ ಬಗ್ಗೆ ಜಿಲ್ಲೆಯಲ್ಲಿ ಸೂಕ್ತ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಸಮರ್ಪಕ ಚಿಕಿತ್ಸೆಯನ್ನು ನೀಡಬೇಕು. ಗುಣಮಟ್ಟದ ಪೌಷ್ಠಿಕ ಆಹಾರವನ್ನು ಕೋವಿಡ್ ರೋಗಿಗಳಿಗೆ ನೀಡಬೇಕು. ಆಸ್ಪತ್ರೆಗಳಲ್ಲಿ ಸ್ಪಚ್ಛತೆಗೆ ಹೆಚ್ಚು ಒತ್ತು ನೀಡಬೇಕು, ಪ್ರತಿಯೊಬ್ಬ ಕೋವಿಡ್ ಸೊಂಕಿತನಿಗೂ ಆರೋಗ್ಯ ಕಿಟ್‌ನ್ನು ವಿತರಿಸಬೇಕು. ಅನಗತ್ಯವಾಗಿ ರೆಮಿಡಿಸಿವಿರ್‌ನ್ನು ರೋಗಿಗಳಿಗೆ ನೀಡಬಾರದು. ತಜ್ಞ ವೈದ್ಯರ ಶಿಫಾರಸ್ಸಿನಂತೆ ಔಷಧಿ ನೀಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಸಚಿವರು ಸೂಚಿಸಿದರು.
ಈಗಾಗಲೇ ಸರಕಾರದ ನಿರ್ದೇಶನದಂತೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೂ ಜಿಲ್ಲಾಧಿಕಾರಿಗಳು ಕೋವಿಡ್ ನಿಯಂತ್ರಣಕ್ಕಾಗಿ ಪ್ರತಿ ಹಳ್ಳಿಗಳಲ್ಲೂ ಟಾಸ್ಕ್ ಪೋರ್ಸ್ ಸಮಿತಿಗಳನ್ನು ರಚಿಸಿ, ಪರಿಣಾಮಕಾರಿಯಾಗಿ ಕೋವಿಡ್ ನಿಯಂತ್ರಣ ಕ್ರಮಗಳನ್ನು ಕೈಗೊಂಡಿದ್ದಾರೆ. ಟಾಸ್ಕ್ ಪೋರ್ಸ್ ಸಮಿತಿಗಳ ಸದಸ್ಯರು ಮುನ್ನೆಚ್ಚರಿಕೆಯಾಗಿ ಪ್ರತಿ ಸೊಂಕಿತರ ಮನೆಗೆ ಭೇಟಿ ಕೊಟ್ಟು ಆರೋಗ್ಯ ಸೇವೆ ಒದಗಿಸುತ್ತಿದ್ದಾರೆ ಎಂದರು ಸಚಿವರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ.ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದಿರಾ ಆರ್.ಕಬಾಡೆ, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಯಲ್ಲಾ ರಮೇಶ್‌ಬಾಬು, ಜಿಲ್ಲಾಸ್ಪತ್ರೆ ಶಸ್ತ್ರಚಿಕಿತ್ಸಕ ಡಾ.ರಮೇಶ್, ಉಪವಿಭಾಗಾಧಿಕಾರಿ ಎ.ಎನ್.ರಘುನಂದನ್, ಜೈನ್ ಆಸ್ಪತ್ರೆಯ ಆಡಳಿತ ಮಂಡಳಿಯ ಸದಸ್ಯರು ಹಾಗೂ ವೈದ್ಯರು ಉಪಸ್ಥಿತರಿದ್ದರು.