Lead photo by CkPhotography ಸಿಕೆಪಿ@ckphotographi
ಬೆಂಗಳೂರು: ಕೋವಿಡ್ ಎರಡನೇ ಅಲೆಯನ್ನು ಹತ್ತಿಕ್ಕಲು ಕೊನೆಗೂ ರಾಜ್ಯ ಸರಕಾರ ಲಾಕ್‌ಡೌನ್ ಘೋಷಣೆ ಮಾಡಿದೆ. ಮೇ 10ರಿಂದ 24ರ ವರೆಗೆ ಎರಡು ವಾರ ಕಾಲ ರಾಜ್ಯಪೂರ್ತಿ ಕಠಿಣ ಲಾಕ್‌ಡೌನ್ ಜಾರಿ ಮಾಡಲಾಗಿದೆ.
ಕೊರೋನಾ ಕರ್ಫ್ಯೂ ಮಾಡಿದಾಗ್ಯೂ ಜನ ಪಾಲನೆ ಮಾಡಲಿಲ್ಲ. ಪರಿಣಾಮ ಸೋಂಕಿನ ಪ್ರಮಾಣ ನಾಗಾಲೋಟದಲ್ಲಿ ಹೆಚ್ಚುತ್ತಲೇ ಹೋಯಿತು. ಸಾವಿನ ಸಂಖ್ಯೆ ಮಿತಿಮೀರತೊಡಗಿದಾಗ ದಿಕ್ಕೆಟ್ಟ ಸರಕಾರ ಈ ಕ್ರಮಕ್ಕೆ ಮುಂದಾಗಿದೆ.
ಸೋಮವಾರ ಬೆಳಗ್ಗೆ 6 ಗಂಟೆಯಿಂದ ಮೇ 24ರ ಬೆಳಗ್ಗೆ 6 ಗಂಟೆವರೆಗೆ ಈ ಕಠಿಣ ಲಾಕ್‌ಡೌನ್ ರಾಜ್ಯಾದ್ಯಂತ ಜಾರಿಯಲ್ಲಿರುತ್ತದೆ. ಬೆಳಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ಮಾತ್ರ ಹಾಲು, ಆಹಾರ ಪದಾರ್ಥ, ದಿನಸಿ, ತರಕಾರಿಯಂಥ ಅತ್ಯಗತ್ಯ ವಸ್ತುಗಳ ಅಂಗಡಿಗಳನ್ನು ತೆರೆಯಲು ಅವಕಾಶ ಕೊಡಲಾಗಿದೆ
ಮುಖ್ಯಮಂತ್ರಿ ಯಡಿಯೂರಪ್ಪ ಲಾಕ್‌ಡೌನ್ ವಿಷಯವನ್ನು ಪ್ರಕಟಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಬಿಗಿ ಕ್ರಮಗಳನ್ನು ಪಾಲನೆ ಮಾಡದೆ ಬೇರೆ ದಾರಿ ಇಲ್ಲ ಎಂದಿದ್ದಾರೆ. ಬಳಿಕ, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರು ಲಾಕ್‌ಡೌನ್ ಮಾರ್ಗಸೂಚಿಯನ್ನು ಪ್ರಕಟಿಸಿದರು.
ಏನಿರುತ್ತೆ? ಏನಿರುವುದಿಲ್ಲ?
- ನಿತ್ಯ ಬೆಳಗ್ಗೆ 6ರಿಂದ 10 ಗಂಟೆವರೆಗೆ ಮಾತ್ರ ಅಗತ್ಯ ವಸ್ತುಗಳು ಲಭ್ಯ, ಖರೀದಿಗೆ ಅವಕಾಶ. ಬೆಳಗ್ಗೆ ಹತ್ತು ಗಂಟೆ ನಂತರ ಯಾರೂ ರಸ್ತೆಗೇ ಬರುವಂತಿಲ್ಲ.
- ಬೆಳಗ್ಗೆ 6ರಿಂದ ಸಂಜೆ 6 ಗಂಟೆ ತನಕ ಹಾಲು ಮಾರಾಟಕ್ಕೆ ಅವಕಾಶ.
- ಮದ್ಯ ಪಾರ್ಸೆಲ್‌ಗೆ ಅವಕಾಶ ನೀಡಲಾಗಿದೆ. ಪಬ್, ಕ್ಲಬ್, ಬಾರ್ ತೆರೆಯುವಂತಿಲ್ಲ.
- ಅಗತ್ಯ ವಸ್ತು ಖರೀದಿಗೆ ವಾಹನದಲ್ಲಿ ಹೋಗಲು ಅವಕಾಶ ಇಲ್ಲ. ನಡೆದುಕೊಂಡೇ ಹೋಗಬೇಕು.
- ವಾಹನ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ.
- ವೈದ್ಯಕೀಯ ತುರ್ತುಸೇವೆಗಳಿಗೆ ನಿರ್ಬಂಧ ಇಲ್ಲ. ಆರೋಗ್ಯ ಸಿಬ್ಬಂದಿ ಸಂಚಾರಕ್ಕೆ ತೊಂದರೆ ಇಲ್ಲ.
- ಪತ್ರಕರ್ತರು ಹಾಗೂ ಮಾಧ್ಯಮಕ್ಕೆ ಸಂಬಂಧಿಸಿದವರ ಸಂಚಾರಕ್ಕೆ ಅಡ್ಡಿ ಇಲ್ಲ.
- ಹೋಟೆಲ್ಗಳಿಂದ ಪಾರ್ಸೆಲ್ ಮಾತ್ರ ಪಡೆಯಬಹುದು.
- ಸರಕಾರಿ ಕಚೇರಿಗಳಲ್ಲಿ ಪೂರ್ಣ ಹಾಜರಾತಿಗೆ ಅವಕಾಶವಿಲ್ಲ. ಸೀಮಿತ ಸಿಬ್ಬಂದಿಗೆ ಮಾತ್ರ ಅವಕಾಶ.
- ಮದುವೆಗಳಿಗೆ ವಿಘ್ನ ಇಲ್ಲ. ಆದರೆ, 50 ಜನ ಭಾಗಿಯಾಗುವುದಕ್ಕೆ ಮಾತ್ರ ಅವಕಾಶ.
- ತುರ್ತು ಕಾರಣವಿದ್ದರೆ ಸಂಚಾರಕ್ಕೆ ಅವಕಾಶವಿದೆ. ಆದಕ್ಕೆ ಅಗತ್ಯ ದಾಖಲೆ ಬೇಕು.
- ಇ-ಕಾಮರ್ಸ್‌ಗೆ ಅವಕಾಶ, ಅನ್ಲೈನ್ ಶಾಪಿಂಗ್ ನಿರಾತಂಕ.
- ತಳ್ಳುವ ಗಾಡಿಯಲ್ಲಿ ತರಕಾರಿ ಮಾರಾಟಕ್ಕೆ ಅವಕಾಶ.
- ಎಂದಿನಂತೆ ರೈಲು, ವಿಮಾನ ಸಂಚಾರ ಇರುತ್ತದೆ. ಟಿಕೆಟ್ ತೋರಿಸುವುದು ಕಡ್ಡಾಯ.
- ಆವರಣದಲ್ಲಿ ನಿರ್ಮಾಣ ಆಗುವ ಕಟ್ಟಡ ಕಾಮಗಾರಿಗಳಿಗೆ ಮಾತ್ರ ಅವಕಾಶ.
- ಯಾರಿಗೂ ಪಾಸ್ ಕೊಡುವುದಿಲ್ಲ.
- ಸಿದ್ಧ ಉಡುಪು ಕಾರ್ಖಾನೆಗಳು ಸಂಪೂರ್ಣ ಬಂದ್.
- ಕಾರ್ಮಿಕರು & ಕೆಲಸಗಾರರು ಬೆಂಗಳೂರು ನಗರ ಬಿಟ್ಟು ಹೋಗುವಂತಿಲ್ಲ.
- ಅಂತಾರಾಜ್ಯ & ಅಂತರ್ ಜಿಲ್ಲಾ ಗಡಿಗಳೆಲ್ಲ ಬಂದ್. ಜಿಲ್ಲೆಯಿಂದ ಜಿಲ್ಲೆಗೆ ಓಡಾಟ ಇರುವುದಿಲ್ಲ.
- ಕೈಗಾರಿಕೆ ಚಟುವಟಿಕೆಗಳಿಗೂ ಅವಕಾಶವಿಲ್ಲ.
- ಯಾವುದೇ ರೀತಿಯ ಸಾರಿಗೆಗೆ ಅವಕಾಶ ಇರಲ್ಲ. ಬಸ್, ಕ್ಯಾಬ್, ಆಟೋ, ಮೆಟ್ರೋ ಇರೋದಿಲ್ಲ. ಟ್ಯಾಕ್ಸಿ, ಆಟೋ, ಕ್ಯಾಬ್ಗಳಿಗೆ ತುರ್ತು ಸೇವೆಗೆ ಮಾತ್ರ ಅವಕಾಶವಿದೆ.
- ಶಾಲೆ ಕಾಲೇಜು ಬಂದ್. ಆನ್ಲೈನ್ ಕಾಸ್ ಇರುತ್ತದೆ.
- ಮಾಲ್, ಸಿನಿಮಾ ಮಂದಿರ, ಉದ್ಯಾನವನ, ಮನರಂಜನಾ ಪಾರ್ಕ್‌ಗಳು ಬಂದ್.
- ಕೃಷಿ ಚಟುವಟಿಕೆಗಳಿಗೆ ಸಂಪೂರ್ಣ ಅವಕಾಶ.