ಇತ್ತೀಚಿಗೆ ಹನುಮನ ಜನ್ಮ ಸ್ಥಳದ ಬಗ್ಗೆ ಟಿಟಿಡಿ ಮಾಡಿವ ವಾದ ಎಲ್ಲರಿಗೂ ಗೊತ್ತೇ ಇದೆ. ಇಲ್ಲಿಯವರೆಗೂ ರಾಜ್ಯ, ದೇಶ-ವಿದೇಶದ ಜನರು ಶತಮಾನಗಳಿಂದ ನಂಬಿಕೊಂಡು ಬಂದಿರುವ ಅಂಜನೇಯನ ಜನ್ಮಸ್ಥಳವೆಂದೇ ನಂಬಲಾಗಿರುವ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದ ಬಗ್ಗೆ, ಹನುಮನನ್ನು ಆರಾಧಿಸುವ ಭಕ್ತರಲ್ಲಿ ಗೊಂದಲ ಉಂಟಾಗಿದೆ. ಗೊಂದಲದ ವಾದ ಮಾಡಿದವರು ಸಾಮಾನ್ಯ ವ್ಯಕ್ತಿ ಅಥವಾ ಸಂಸ್ಥೆಯಾಗಿದ್ದರೆ ಅಲಕ್ಷ್ಯ ಮಾಡಬಹುದು. ಆದರೆ, ಅದನ್ನು ಅನವಶ್ಯಕ ಗೊಂದಲ ಮೂಡಿಸಿದ್ದು ತಿರುಮಲದ ಟಿಟಿಡಿ (ತಿರುಮಲ ತಿರುಪತಿ ದೇವಸ್ಥಾನಂ).
ಅವರು ಹೇಳುವ ಹಾಗೆ ಹನುಮನ ಜನನವಾಗಿದ್ದು “ತಿರುಮಲದ ಅಕಾಶ ಗಂಗಾ ಜಲಪಾತ ಸಮೀಪ ಇರುವ ಜಪಲಿ ತೀರ್ಥವೇ ಬಳಿ. ಜತೆಗೆ ಅದಕ್ಕೆ ಸಾಕ್ಷ್ಯವಾಗಿ 20 ಪುಟಗಳ ತೆಲುಗು ಪುಸ್ತಕವೊಂದನ್ನೂ ಟಿಟಿಡಿ ಬಿಡುಗಡೆ ಮಾಡಿದೆ.
ಟಿಟಿಡಿ ವಾದವೇನು?
ಆಂಜನೇಯ ಹುಟ್ಟಿದ್ದು ತಿರುಪತಿಯಲ್ಲಿರುವ ಅಂಜನಾದ್ರಿ ಬೆಟ್ಟದಲ್ಲಿ ಎಂಬುದನ್ನು ಸಂಶೋಧಿಸಲು ಹಾಗೂ ಸಾಕ್ಷ್ಯಗಳನ್ನು ಕಲೆ ಹಾಕಲು ತಜ್ಞರ ಸಮಿತಿಯೊಂದನ್ನು ರಚಿಸಿತ್ತು. ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಮುರಳೀಧರ ಶರ್ಮ ನೇತೃತ್ವದ ಸಮಿತಿಯು “ಪುರಾಣಗಳಲ್ಲಿ ಉಲ್ಲೇಖಗೊಂಡ, ಹನುಮಂತನ ಜನ್ಮದಿನ & ಸ್ಥಳದ ಬಗ್ಗೆ ಹಲವಾರು ಸಾಹಿತ್ಯಿಕ ಸಾಕ್ಷ್ಯಗಳು, ಕೆಲವಾರು ಶಿಲಾಶಾಸನಗಳಲ್ಲಿ ಉಲ್ಲೇಖಗೊಂಡ ಮತ್ತು ಭೌಗೋಳಿಕ ಅಂಶಗಳನ್ನು ಸಮಗ್ರವಾಗಿ ಅಧ್ಯಯನ ನಡೆಸಿ ತಿರುಮಲದ ಅಂಜನಾದ್ರಿ ಪರ್ವತದ ವ್ಯಾಪ್ತಿಯಲ್ಲಿರುವ ಅಕಾಶಗಂಗಾ ಜಲಪಾತ ಸಮೀಪದ ಜಪಲಿ ತೀರ್ಥವೇ ಆಂಜನೇಯನ ಜನ್ಮಸ್ಥಳ. ವೆಂಕಟಾಚಲಂ ಎನ್ನುವುದನ್ನು ಅಂಜನಾದ್ರಿ ಎಂದು ಹೇಳಿದೆ. ಇದರ ಜತೆಗೆ 19 ಇತರೆ ಹೆಸರುಗಳೂ ಈ ಬೆಟ್ಟಕ್ಕಿವೆ ಎಂದು ಹೇಳಿದ ಅವರು, ತ್ರೇತಾಯುಗದಲ್ಲಿ ರಾಮಭಕ್ತ ಹನುಮಂತ ಅಂಜನಾದ್ರಿಯಲ್ಲೇ ಹುಟ್ಟಿದ್ದ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.
ಸ್ಕಂದ ಪುರಾಣ ಮತ್ತು ವೆಂಕಟಾಚಲ ಮಹಾತ್ಮೆಯಲ್ಲಿ ಹನುಮಂತನ ತಾಯಿ ಅಂಜನಾದೇವಿ ಅಗಸ್ತ್ಯ ಮಹರ್ಷಿಯನ್ನು ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ತನಗೆ ಮಕ್ಕಳಾಗುವಂತೆ ಅನುಗ್ರಹಿಸಬೇಕು ಎಂದು ಕೋರಿಕೊಂಡಿದ್ದಳು. ಆಗ ಅಗಸ್ತ್ಯ ಮುನಿಗಳು ವೆಂಕಟಾಚಲದಲ್ಲಿ ತಪಸ್ಸನ್ನಾಚರಿಸುವಂತೆ ಸಲಹೆ ಮಾಡಿದ್ದರು. ಅದಕ್ಕನುಸಾರವಾಗಿ ಅಂಜನಾ ದೇವಿ ಅಲ್ಲಿ ತಪಸ್ಸು ಮಾಡಿ ಪುತ್ರನನ್ನು ಪಡೆದರಂತೆ. ಹೀಗಾಗಿ ಈ ಪರ್ವತಕ್ಕೆ ಅಂಜನಾದ್ರಿ ಎಂಬ ಹೆಸರು ಬಂದಿತು, ಇದನ್ನು ದೃಢಪಡಿಸಲು 12 ಪುರಾಣಗಳನ್ನು ಅಧ್ಯಯನ ನಡೆಸಿ ಸಾಕ್ಷ್ಯ ಸಂಗ್ರಹಿಸಲಾಗಿದೆ. ಕಂಬ ರಾಮಾಯಣ ಮತ್ತು ಅನ್ನಮಾಚಾರ್ಯರ ಕೀರ್ತನೆಗಳಲ್ಲಿಯೂ ಈ ಅಂಶ ಇದೆ. ಮತ್ತು 12 ಮತ್ತು 13ನೇ ಶತಮಾನದ ಶಿಲಾಶಾಸನಗಳು ತಿರುಮಲ ದೇಗುಲದಲ್ಲಿವೆ. ಅದರಲ್ಲಿಯೂ ಹನುಮನ ಜನ್ಮಸ್ಥಳ ಉಲ್ಲೇಖಗೊಂಡಿದೆ. ಇಷ್ಟೆಲ್ಲವನ್ನು ಟಿಟಿಡಿ ಸಾಕ್ಷಿ-ಪುರಾವೆಗಳು ಎಂದು ಹೇಳುತ್ತದೆ.
ಅಂಜನಾದ್ರಿಯಲ್ಲಿ ಅಪಾರ ಪುರಾವೆ
ನಮ್ಮ ಮಹಾಕಾವ್ಯ, ಪುರಾಣ, ಇತಿಹಾಸ, ಶಾಸನ, ಜನಪದರು ಮತ್ತು ಜನಪದ ಸಾಹಿತ್ಯಗಳು ಹೇಳುವುದು ಈಗಿನ ಕೊಪ್ಪಳ ಜಿಲ್ಲೆ ಕಿಷ್ಕಿಂಧೆ ಅಂಜನಾದ್ರಿ ಬೆಟ್ಟವೇ ಹನುಮನ ಜನ್ಮಸ್ಥಳವೆಂದು ಸಾರಿ ಹೇಳುತ್ತಿವೆ. ಇದಕ್ಕೆ ಪೂರಕವಾಗುವಂತಹ ಅನೇಕ ಕುರುಹುಗಳು, ಸ್ಮಾರಕಗಳು, ಐತಿಹ್ಯಗಳು ನಮಗೆ ಸ್ಥಳೀಯವಾಗಿ ಸಿಗುತ್ತವೆ, ಸಿಕ್ಕಿವೆ.
ವಾಲ್ಮೀಕಿ ರಾಮಾಯಣದಲ್ಲಿ ಪ್ರಸ್ತಾಪಿಸುವಂತೆ ಹನುಮನು ಹುಟ್ಟಿದ್ದು ಸುಮೇರು ಪರ್ವತದಲ್ಲಿ. ಸುಮೇರು ಪರ್ವತ ಎಂದರೆ ಸೂರ್ಯಾಸ್ತದ ವೇಳೆಯಲ್ಲಿ ಬಂಗಾರದಂತೆ ಕಂಗೊಳಿಸುವುದು. ಅಂಜನಾದ್ರಿ ಪರ್ವತ ಸೂರ್ಯಾಸ್ತದ ಸಂದರ್ಭದಲ್ಲಿ ಬಂಗಾರದಂತೆ ಕಂಗೊಳಿಸುತ್ತದೆ. ಅದನ್ನೇ ಸುಮೇರು ಪರ್ವತ ಎಂದು ಕರೆದಿರುವುದು. ಈಗಲೂ ದೇಶ-ವಿದೇಶಗಳ ಪ್ರವಾಸಿಗರು ಇಲ್ಲಿ ಸೂರ್ಯಾಸ್ತವಾಗುವುದನ್ನು ನೋಡಲು ಕಾತುರದಿಂದ ಕಾಯುವುದನ್ನು ನೋಡಬಹುದು. ಅಲ್ಲದೇ ಸ್ಥಳೀಯವಾಗಿ ಸಿಗುವ ಐತಿಹ್ಯದಲ್ಲಿ ತಾಯಿ ಅಂಜನಾದೇವಿ ಅವರು ಬಾಣಂತಿ ಆಗಿದ್ದಾಗ ಸ್ನಾನಕ್ಕೆ ನೀರಿರಲಿಲ್ಲ. ಆ ಸಂದರ್ಭದಲ್ಲಿ ಹನುಮ ತುಂಗಭದ್ರೆಯನ್ನೇ ಎರಡು ಭಾಗವಾಗಿಸಿ, ಒಂದು ಭಾಗವನ್ನು ತಾಯಿಯ ಬಳಿಗೆ ಬರುವಂತೆ ಮಾಡಿದನಂತೆ. ಅಂದಿನಿಂದ ಹಂಪಿ ಹೊಳೆ ಋಷ್ಯಮುಖ ಪರ್ವತವನ್ನೂ ಬಳಸಿ ಎರಡು ಭಾಗಗಳಾಗಿ ಹರಿಯಲು ಆರಂಭಿಸಿತು. ಈಗಲೂ ನದಿ ಎರಡು ಕವಲುಗಳಾಗಿ ಹರಿಯುತ್ತದೆ. ಈ ಸ್ಥಳ ʼಹನುಮನ ಸೆಳವುʼ ಎಂದು ಕರೆಯುತ್ತಾರೆ.
ಅಡವ್ಯಾಗಂಜನಾದೇವಿ ಹನುಮನ ಹಡೆದಾಳ
ತೊಡೆಯ ತೊಳೆಯೋಕ ನೀರಿಲ್ಲ!
ಹನುಮಣ್ಣ ಸುತ್ತಲ ಹೊಳೆಯ ತಿರುವ್ಯಾನೆ!
ಇದೇ ಸಂಗತಿಯನ್ನು ಜಾನಪದ ಹಾಡುಗಳಲ್ಲೂ ಕಾಣಬಹುದು.ರಾಮಾಯಣ ಕಾವ್ಯದಲ್ಲಿ ಬರುವ ಕಿಷ್ಕಿಂಧಾ ಕಾಂಡದಲ್ಲಿ ನಡೆಯುವ ಪ್ರಸಂಗಗಳೆಲ್ಲ ಜರಗಿದ್ದು ಹಂಪಿ ಆನೆಗೊಂದಿಯ ಕಿಷ್ಕಿಂಧೆಯಲ್ಲಿ. ಇಲ್ಲಿಯ ದುರ್ಗಾದೇವಿ ದೇವಸ್ಥಾನವಿರುವ ಬೆಟ್ಟವೇ ವಾಲಿ ಪರ್ವತ ಅಥವಾ ವಾಲಿಖಿಲ್ಲಾ. ಕಿಷ್ಕಿಂಧೆಯ ಅಧಿಪತಿಯಾಗಿದ್ದ ಇವನು ಆಡಳಿತ ನಡೆಸಿದ್ದ. ಈ ಬೆಟ್ಟದ ದಕ್ಷಿಣ ಬದಿಯ ಒಂದು ಭಾಗದ ಗವಿಯೇ ವಾಲಿ ಭಂಡಾರ.
ಹನುಮ ಜನಿಸಿದ ಅಂಜನಾದ್ರಿ, ಹಂಪೆಯ ಸುತ್ತಮುತ್ತ ಇರುವ ಸುಗ್ರೀವ ಗುಹೆ, ವಾಲಿ ಕಾಷ್ಟ, ಮತಂಗ ಋಷಿಗಳ ಪರ್ವತ, ಶಬರಿ ಗುಹೆ, ಮಾಲ್ಯವಂತನ ಗುಹೆ, ಸೀತೆಯ ಸೆರಗು ಕುರುಹು ಕೂಡ ಶಿಲೆಯಲ್ಲಿ ಅಚ್ಚಾಗಿದೆ ಎನ್ನುವ ನಂಬಿಕೆಯಿದೆ.
ವಾಲ್ಮೀಕಿ ರಾಮಾಯಣದಲ್ಲಿ ಬರುವ ಪಂಪ ಸರೋವರದ ವರ್ಣನೆ ಇಲ್ಲಿರುವುದು
– “ಸ ತಾಂ ದೃಷ್ಟಾs ತತಃ ಪಮಾಂ” (ಅರಣ್ಯಕಾಂಡ: 79-22ನೇ ಶ್ಲೋಕ) ರಾಮ-ಲಕ್ಷ್ಮಣರು ಪಂಪಾ ಸರೋವರ ನೋಡಿದ ಸಂದರ್ಭ.
– “ಋಷ್ಯಮೂಕೇ ಗಿರಿವರೇ ಪಮಾ³ಪರ್ಯಸ್ತು ಶೋಭಿತೇ” (72-13) “ಪಂಪಾ ಸರೋವರದ ಪರಿಸರದಿಂದ ಶೋಭಾಯಮಾನವಾಗಿ ಕಾಣುತ್ತಿರುವ ಋಷ್ಯಮೂಕ ಗಿರಿವರ.”
– ಪಂಪಾ ಸರೋವರದ ವರ್ಣನೆ (73): ಸೀತೆಯನ್ನು ಕಳೆದುಕೊಂಡ ಶ್ರೀರಾಮನ ಪರಿತಾಪಕ್ಕೆ ಪಂಪಾ ಸರೋವರವೇ ಉಪಮೆಯನ್ನಾಗಿ ವರ್ಣಿಸಲಾಗುತ್ತದೆ.
– ಶ್ರೀರಾಮನಿಗೆ ಹಿಂದೆ ಸಿಕ್ಕಿದ ಕಬಂಧನೆಂಬ ಶಾಪಗ್ರಸ್ತ ಗಂಧರ್ವ, “ಸುಗ್ರೀವನ ಸಖ್ಯವನ್ನು ಮಾಡಿಕೊ”, “ಸಖ್ಯಂ ಕುರುಷ” (73-44) ಎನ್ನುವನು.
– ಸೌಮಿತ್ರೇ ಶೋಭತೇ ಪಂಮಾ³ ವೈಡೂರ್ಯವಿಮಲೋದಕಾ (1-4) “ವೈಡೂರ್ಯ ಮಣಿಯಂತೆ ಸ್ವತ್ಛವಾಗುವ ಪವಿತ್ರವಾದ ಪಂಪಾ ಸರೋವರವನ್ನು ನೋಡು.”
– ಸೌಮಿತ್ರೇ ಪಶ್ಯ ಪಮಾ³ಯಾಃ ಕಾನನಂ ಶುಭದರ್ಶನಮ್ (1-5 , 73 74, 93, 94, 99, 103, 104) “ಶುಭಪ್ರದೇಶವಾದ ಪಂಪಾ ಅರಣ್ಯವನ್ನು ನೋಡು ಲಕ್ಷ್ಮಣ.”
– “ಮಂದಾನ್ಯಾಸ್ತು” (94): “ಮಂದಾಕಿನೀ ನದಿಯ ಮನೋರಮ್ಯತೆಯನ್ನು ಪಂಪಾ ಸರೋವರ ಹೊಂದಿದೆ” ಎಂಬ ವರ್ಣನೆ ಕಾಣಬಹುದು.
1961ರಲ್ಲಿ ಕರ್ನಾಟಕದ ಖ್ಯಾತ ಪುರಾತತ್ವ ಪಂಡಿತರಾದ ಡಾ.ಅ.ಸುಂದರ ಅವರು ಹಂಪಿ-ಆನೆಗೊಂದಿ ಪ್ರದೇಶದಲ್ಲಿ ಅಧ್ಯಯನ ನಡೆಸಿ ಈ ಭಾಗವೇ ರಾಮಾಯಣ ಕಾಲದ ಕಿಷ್ಕಿಂಧೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಆನೆಗೊಂದಿಯ ಹತ್ತಿರದಲ್ಲಿ ಇರುವ ತುಂಗಭದ್ರಾ ನದಿಯ ತೀರದಲ್ಲಿರುವ ದೇವಘಾಟ್‌ನ ಅಮೃತೇಶ್ವರ ದೇವಾಲಯದಲ್ಲಿಯ ಕ್ರಿ.ಶ.1059ರ ಕಾಲದ ಶಿಲಾ ಶಾಸನದಲ್ಲಿ “ತುಂಗಭದ್ರಾ ತಟದ ಬಡಗ ಕಿ: ಕಿನಮಿ ಪರ್ವನಾಮಿ ದರ ಮೃತಿಗಳೊಳ್” ಎಂದು ಕಿಷ್ಕಿಂಧಾ ಪರ್ವತವನ್ನು ಉಲ್ಲೇಖೀಸುತ್ತದೆ. ಆನೆಗೊಂದಿಯಿಂದ 15 ಕಿ.ಮೀ ದೂರದಲ್ಲಿರುವ ಹುಲಗಿಯ ಕ್ರಿ.ಶ.1088ರ ಕಾಲದ ಶಿಲಾಶಾಸನದಲ್ಲಿ ಹುಲಗಿಯ ಸುತ್ತಮುತ್ತ ರಿಷ್ಯ ಮೂಕಾಚಲ, ಗಂಧಮಾದನ, ಶ್ರೀಕೂಟ, ಕಿಷ್ಕಿಂಧ ಪರ್ವತಗಳಿವೆ ಎಂದು ಉಲ್ಲೇಖೀಸುತ್ತದೆ.
ಕ್ರಿ.ಶ.16ನೇ ಶತಮಾನದ ಹನುಮನಳ್ಳಿ ಶಿಲಾಶಾಸನದಲ್ಲಿ ಅಂಜನಾ ದೇವಿ ಮತ್ತು ಹನುಮಂತ ದೇವರ ಅಮೃತಪಡಿಗೆ ದಾನ ಬಿಟ್ಟ ವಿಷಯವಿದೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಶಿರಸಂಗಿ ಕಾಳಮ್ಮ ದೇವಾಲಯದಲ್ಲಿರುವ ಕ್ರಿ.ಶ. 1186ರ ಶಾಸನದಲ್ಲಿ ಪೂರ್ವ ಪಶ್ಚಿಮ ವಿಸ್ತಾರವಾದ ಭೂಮಿಗೆ ಹಿಮವತ್ಪರ್ವತ, ವಿಂದ್ಯ, ಕಿಷ್ಕಿಂಧೆ ಈ ಮೂರು ಪರ್ವತಗಳು ಉನ್ನತವಾದವು. ಇವುಗಳಲ್ಲಿ ಅತ್ಯಂತ ಶ್ರೇಷ್ಠವಾದುದು ಎಂದರೆ ಕಿಷ್ಕಿಂಧ ಗಿರಿ. ಇದು ಜನನಿಬಿಡವಾದ ಪ್ರದೇಶವಾಗಿತ್ತು. ಅದರಲ್ಲಿ ವಾಲಿ, ಮರುತ್ಸ, ಅಂಗದ, ದಿನೇಶ, ಮತಂಗ, ಹಂಸ, ಕಪಿಲ, ಶಾರ್ಗ, ಅಗಸ್ತ್ಯ, ವಿಭಾಂಡಕನ ಪುತ್ರ ಋಷ್ಯಶೃಂಗ ಮೊದಲಾದ ಋಷಿಗಳಿಗೆ ಆಶ್ರಯ ಸ್ಥಾನವಾಗಿತ್ತು ಎಂದು ಹೇಳಲಾಗಿದೆ.
ಕಿಷ್ಕಿಂಧವೇ ಹನುಮನ ಜನ್ಮಸ್ಥಳ ಎಂದು ನಂಬಿದ್ದ ವಿಜಯನಗರ ಅರಸರು ಈ ಪ್ರದೇಶದ ಸುತ್ತಮುತ್ತಲೂ ಹಲವಾರು ಆಂಜನೇಯ ದೇವಾಲಯಗಳನ್ನು ನಿರ್ಮಿಸಿದರು. ಹಂಪಿಯ ಹಜಾಮರಾಮ ದೇವಾಲಯ, ಕೋದಂಡ ದೇವಾಲಯ, ಪಟ್ಟಾಭಿರಾಮ ದೇವಾಲಯ, ಮೌಲ್ಯವಂತ ರಘುನಾಥ ದೇವಾಲಯ.. ಈ ತರದ ರಾಮನ ದೇವಾಲಯಗಳು ಬಹುಶಃ ಎಲ್ಲೂ ಇಲ್ಲ. ಹಜಾರರಾಮ ದೇವಾಲಯದ ಪ್ರಕಾರದ ಗೋಡೆಯ ರಾಮಾಯಣದ ದೃಶ್ಯಗಳನ್ನು ಹಾಗೂ ದೇವಾಲಯದ ಶಂಬಗಾರ ಆಂಜನೇಯನ ನೂರಾರು ಶಿಲ್ಪಗಳನ್ನು ಹಾಕಿಸಿದ್ದಾರೆ.
ವ್ಯಾಸರಾಯರೇ ಹೇಳಿದ್ದರು
ಶ್ರೀ ಕೃಷ್ಣದೇವರಾಯನ ಗುರುಗಳಾದ ವ್ಯಾಸರಾಯರಿಗೆ ಅಂಜನಾದ್ರಿಯೇ ಹನುಮಂತನ ಮೂಲ ತಿಳಿದಿತ್ತು. ಹೀಗಾಗಿ ಅವರು ಅರಸನಿಗೆ ಹೇಳಿ ಸಾಮ್ರಾಜ್ಯದಾದ್ಯಂತ 734 ಹನುಮನ ದೇವಾಲಯಗಳನ್ನು ನಿರ್ಮಾಣ ಮಾಡಿಸಿದ್ದರು. ಈ ಶಾಸನಗಳ ಉಲ್ಲೇಖ, ದಾಖಲೆ, ಸಾಹಿತ್ಯ, ಐತಿಹ್ಯ, ಜನರ ನಂಬಿಕೆಗಳನ್ನು ನೋಡಿದಾಗ ಅಂಜನಾದ್ರಿ ಬೆಟ್ಟದಲ್ಲಿಯೇ ಹನುಮ ಜನಿಸಿದ್ದು ಎನ್ನುವುದು ನಿರ್ವಿವಾಗಿದೆ. ಪ್ರತಿವರ್ಷ ಉತ್ತರ ಭಾರತದ ಲಕ್ಷಾಂತರ ಪ್ರವಾಸಿಗರು, ಭಕ್ತರು, ಖ್ಯಾತನಾಮರು ಅಂಜನಾದ್ರಿಗೆ ಭೇಟಿ ನೀಡುತ್ತಾರೆ.
ಕಳೆದ ದಶಕಗಳಿಂದ ಜಾತಿ-ಮತ ಭೇದ ಭಾವವಿಲ್ಲದೆ ಲಕ್ಷಾಂತರ ಹನುಮ ಮಾಲೆಯನ್ನು ಹನುಮನ ಆರಾಧಕರು ಪ್ರತಿ ವರ್ಷವೂ ಧಾರಣೆ ಮಾಡುತ್ತಿದ್ದಾರೆ. ಇದರ ವಿಸರ್ಜನೆ ವೇಳೆ ಲಕ್ಷಕ್ಕೂ ಅಧಿಕ ಭಕ್ತರು ಅಂಜನಾದ್ರಿ ಬೆಟ್ಟಕ್ಕೆ ಆಗಮಿಸುತ್ತಾರೆ. ಈ ಎಲ್ಲ ಬೆಳವಣಿಗೆಗಳಿಂದ ವರ್ಷಕ್ಕೆ ಕೋಟ್ಯಂತರ ರುಪಾಯಿ ಆದಾಯವೂ ದೇಗುಲಕ್ಕೆ ಬರಲಾರಂಭಿಸಿದೆ. ರಾಜ್ಯ ಸರಕಾರ ಅಂಜನಾದ್ರಿಯನ್ನು ಅಭಿವೃದ್ಧಿಪಡಿಸಲು ಈಗಾಗಲೇ ಮಾಸ್ಟರ್‌ಪ್ಲ್ಯಾನ್ ರೂಪಿಸಿದ್ದು, ನೂರಾರು ಕೋಟಿ ರು.ಗಳ ಪ್ರಸ್ತಾವನೆ ಸಿದ್ಧಪಡಿಸಿದೆ. ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಜಿಲ್ಲಾ ಆಡಳಿತ ಮತ್ತು ಸರಕಾರ ತಯಾರಿ ನಡೆಸಿವೆ.
ಇಂಥ ಹೊತ್ತಿನಲ್ಲಿ ಟಿಟಿಡಿ ವಿವಾದ ಕೆದಕಿದೆ. ಯಾರೇ ಏನೇ ಹೇಳಿದರೂ ಜನರ ನಂಬುಗೆಯಲ್ಲಿ ಹನುಮನ ಜನ್ಮಸ್ಥಳ ಅಂಜನಾದ್ರಿಯೇ ಆಗಿದೆ.
***
ಡಾ.ಗುರುಪ್ರಸಾದ ಹವಲ್ದಾರ್
- ಮೂಲತಃ ಉಪನ್ಯಾಸಕರು. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನ ಹಳ್ಳಿಯವರು. ಪ್ರಸ್ತುತ ಹಗರಿಬೊಮ್ಮನಹಳ್ಳಿ ಜಿವಿಪಿಪಿ ಪದವಿ ಕಾಲೇಜನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತ ಜೊತೆಗೆ ಪತ್ರಿಕೆಗಳಿಗೆ ವೆಬ್ ನ್ಯೂಸ್ ಪೋಟ್೯ಲ್ ಗಳಿಗೆ ಲೇಖನ ಬರೆಯುತ್ತಿದ್ದಾರೆ.