Special Story
ಬೆಂಗಳೂರು: 18 ವರ್ಷಕ್ಕೂ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ಹಾಕುವ ಸರಕಾರದ ಮಹತ್ವಾಕಾಂಕ್ಷೆಯ ಕಾರ್ಯಕ್ರಮ ಸ್ವತಃ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಡಾ.ಕೆ.ಸುಧಾಕರ್ ಅವರ ಜಿಲ್ಲೆಯಲ್ಲೇ ಹಳ್ಳ ಹಿಡಿಯುವತ್ತ ಮುಖ ಮಾಡಿದೆ.
ಸ್ಥಳಿಯರಿಗೆ ಬಿಟ್ಟು ಹೊರಗಿನಿಂದ ಬರುವವರಿಗೆ ಲಸಿಕೆ ಕೊಡುವ ಹಾಗೂ ಸ್ವತಃ ಜಿಲ್ಲಾಡಳಿತ ಹಾಗೂ ತಾಲೂಕು ವ್ಯದ್ಯಾಧಿಕಾರಿಯೇ ಮಾರಕ ವೈರಸ್ ಹರಡುವಿಕೆಗೆ ಕಾರಣವಾಗುತ್ತಿರುವ ವಿಲಕ್ಷಣ ಕೃತ್ಯಗಳು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಮತ್ತಿತರೆ ಭಾಗಗಳಲ್ಲಿ ಎಗ್ಗಿಲ್ಲದೆ ನಡೆಯುತ್ತಿವೆ.
ಇದೇ ವೇಳೆ ಗ್ರಾಮೀಣ ಪ್ರದೇಶಗಳತ್ತ ಹೋಗಿ ಬೆಂಗಳೂರಿಗರು ಲಸಿಕೆ ಪಡೆಯುತ್ತಿರುವ ಬಗ್ಗೆ ಆಘಾತ ವ್ಯಕ್ತಪಡಿಸಿರುವ ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ; ಬೆಂಗಳೂರಿಗರಿಗೆ ಬೆಂಗಳೂರಿನಲ್ಲಿಯೇ ಲಸಿಕೆ ಲಭ್ಯವಿದೆ. ಅವರು ನೆರೆಯ ಚಿಕ್ಕಬಳ್ಳಾಪು & ಕೋಲಾರ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಿಗೆ ಹೋಗಿ ಲಸಿಕೆ ಪಡೆಯುವುದು ಬೇಡ. ಈ ಬಗ್ಗೆ ಎರಡೂ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ಮಾತನಾಡುತ್ತೇನೆ ಎಂದು ಸಿಕೆನ್ಯೂಸ್ ನೌ ಜತೆ ಮಾತನಾಡುತ್ತಾ ತಿಳಿಸಿದ್ದಾರೆ.
ಅಲ್ಲದೆ, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಜಾವೇದ್ ಅಖ್ತರ್ ಜತೆ ಮಾತನಾಡಿದ ಡಿಸಿಎಂ ಅವರು, ಕೂಡಲೇ ಬೆಂಗಳೂರಿನಿಂದ ಲಸಿಕೆಗಾಗಿ ಹಳ್ಳಿ ಕಡೆ ಹೋಗುವವರನ್ನು ತಡೆಯುವಂತೆ ಸೂಚನೆ ನೀಡಿದರು. ಯಾರು ಎಲ್ಲಿ ಇರುತ್ತಾರೋ ಅಲ್ಲಿನ ಸ್ಥಳೀಯ ವಿಳಾಸದ ದಾಖಲೆ ತೋರಿಸಿ ಅಲ್ಲಿಯೇ ಲಸಿಕೆ ಪಡೆಯಬೇಕು. ಇಲ್ಲವಾದರೆ ಕೊಡುವಂತಿಲ್ಲ. ಇದರಲ್ಲಿ ತಾಂತ್ರಿಕ, ಆಡಳಿತಾತ್ಮಕ ದೋಷಗಳಿದ್ದರೆ ಸರಿಪಡಿಸಿ ಎಂದು ನಿರ್ದೇಶನ ನೀಡಿದರು. ಈ ಬಗ್ಗೆ ಅಖ್ತರ್ ಅವರು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗೆ ಸ್ಪಷ್ಟ ನಿರ್ದೇಶನ ನೀಡುವ ಸಾಧ್ಯತೆ ಇದೆ.
ಇನ್ನೊಂದೆಡೆ, ಈ ಬಗ್ಗೆ ಮಾಹಿತಿ ಪಡೆಯಲು ಯತ್ನಸಿದರೆ ಆರೋಗ್ಯ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರು ಫೋನ್ ಲಿಫ್ಟ್ ಮಾಡಲಿಲ್ಲ. ಆದರೆ, ಜಿಲ್ಲಾಡಳಿತ ಸ್ವಲ್ಪ ಅಲರ್ಟ್ ಆಗಿದೆ. ಈ ಬಗ್ಗೆ ಮಂಗಳವಾರ ಬೆಳಗ್ಗೆಯೇ ಸಿಕೆನ್ಯೂಸ್ ನೌ ಜತೆ ಮಾತನಾಡಿದ ಜಿಲ್ಲಾಧಿಕಾರಿ ಆರ್.ಲತಾ ಅವರು, ಈ ವಿಷಯವನ್ನು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದೆ ಎಂದರು.
ಬೆಂಗಳೂರು ಟು ಗುಡಿಬಂಡೆ
ಮೇ 10ರ ಸೋಮವಾರ ಬೆಳಗ್ಗೆ 18 ವರ್ಷ ವಯಸ್ಸು ಮೇಲ್ಪಟ್ಟವರಿಗೆ ಲಸಿಕೆ ಹಾಕುವ ಅಭಿಯಾನ ಶುರುವಾಗಿದ್ದೇ ತಡ ಗುಡಿಬಂಡೆ ಸರಕಾರಿ ಆಸ್ಪತ್ರೆಯಲ್ಲಿ ಬೆಂಗಳೂರಿಗರ ಜಾತ್ರೆಯೇ ಸೇರಿದೆ. ಸಂಪೂರ್ಣ ಲಾಕ್‌ಡೌನ್ ಉಲ್ಲಂಘಿಸಿ ಲಸಿಕೆ ನೆಪವೊಡ್ಡಿ ಬೆಂಗಳೂರಿನಿಂದ ಬೆಳ್ಳಂಬೆಳಗ್ಗೆಯೇ ಇಲ್ಲಿನ ಆಸ್ಪತ್ರೆಗೆ ದಾಂಗುಡಿ ಇಟ್ಟ ಟೆಕ್ಕಿಗಳು, ಸ್ಥಳೀಯ ಯುವ ಜನರಿಗಿಂತ ಮೊದಲೇ ಆಸ್ಪತ್ರೆ ಸಿಬ್ಬಂದಿಯ ರಾಜ ಮರ್ಯಾದೆಯೊಂದಿಗೆ ಲಸಿಕೆ ಚುಚ್ಚಿಸಿಕೊಂಡು ಜಾಗ ಮಾಡಿದ್ದಾರೆ.
ಗುಡಿಬಂಡೆಗೆ ಇವರು ಬಂದಿದ್ದು ಹೇಗೆ?
ಮೇ 10ರ ಬೆಳಗ್ಗೆ 6 ಗಂಟೆಯಿಂದಲೇ ರಾಜ್ಯಾದ್ಯಂತ ಅತ್ಯಂತ ಕಠಿಣ ನಿಯಮಗಳುಳ್ಳ ಲಾಕ್‌ಡೌನ್ ಆರಂಭವಾಗಿದೆ. ಆದರೆ, ಬೆಂಗಳೂರಿನಿಂದ ಹೊರಟ ಕೆಲ ಲಸಿಕಾಂಕ್ಷಿಗಳು ಬೆಳಗ್ಗೆ 6ಕ್ಕೆ ಮೊದಲೇ ಬೆಂಗಳೂರು ದಾಟಿದ್ದಾರೆ. ಇನ್ನು ಕೆಲವರು, ಬೆಳಗಿನ ಜಾವವೇ ಬೆಂಗಳೂರು ಬಿಟ್ಟು, ಅಂದರೆ ಬೆಳಕರಿಯುವ ಮೊದಲೇ ಗುಡಿಬಂಡೆ ತಲುಪಿದ್ದಾರೆ. ಅದರಲ್ಲಿ ಕೆಲವರು ಗುಡಿಬಂಡೆಯ ಐತಿಹಾಸಿಕ ಅಮಾನಿ ಭೈರಸಾಗರ ಕೆರೆಯ ಬಳಿ ಭವ್ಯವಾದ ಸೂರ್ಯೋದಯವನ್ನು ಕಣ್ತುಂಬಿಕೊಂಡಿದ್ದಾರೆ. ಬೆಳಬೆಳಗ್ಗೆ ಹೊಲಗದ್ದೆ ಕಡೆ ಹೋದ ಸ್ಥಳೀಯರು, ಸಮೀಪದ ಮನೆಗಳವರೆಲ್ಲ ಲಾಕ್‌ಡೌನ್ ಮೊದಲ ದಿನವೇ ಬೆಂಗಳೂರು ಮುಖಗಳು ಕೆರೆಕಟ್ಟೆಯಲ್ಲಿ ಠಳಾಯಿಸತೊಡಿದಾಗ ಚಕಿತರಾಗಿದ್ದಾರೆ.
ಚಿಕ್ಕಬಳ್ಳಾಪರ ಜಿಲ್ಲೆಯ ಗಡಿ ಭಾಗದ ಕೊನೆಯ ತಾಲೂಕು ಗುಡಿಬಂಡೆ. ಇಲ್ಲಿನ ಆಸ್ಪತ್ರೆಯಲ್ಲಿ ಬೆಳಗ್ಗೆ 8 ಗಂಟೆ ಹೊತ್ತಿಗೆಲ್ಲ ಬೆಂಗಳೂರಿನಿಂದ ಬಂದವರು ಕ್ಯೂ ಕಟ್ಟಿ ನಿಂತಿದ್ದರು. ಆಸ್ಪತ್ರೆ ಮುಂಭಾಗದಲ್ಲಿ ಬೆಂಗಳೂರು ನೋಂದಣಿಯ ಕಾರುಗಳು ಸಾಲುಗಟ್ಟಿದ್ದವು. ಆಸ್ಪತ್ರೆಯೊಳಕ್ಕೆ ಎಂಟ್ರಿ ಕೊಟ್ಟರೆ ಲಸಿಕೆ ಕೊಡುವ ಕೊಠಡಿ ಮುಂದೆ ಇವೆರೆಲ್ಲರ ಜಾತ್ರೆ ಸೇರಿತ್ತಲ್ಲದೆ, ದೈಹಿಕ ಅಂತರ ಮರೀಚಿಕೆಯಾಗಿತ್ತು. ಅಲ್ಲಿದ್ದವರೆಲ್ಲರನ್ನೂ ನೋಡಿದರೆ ಸ್ಥಳೀಯರೊಬ್ಬರೂ ಇರಲಿಲ್ಲ. ಮೊದಲ ದಿನವೇ ಸುಮಾರು 100ಕ್ಕೂ ಹೆಚ್ಚು ಬೆಂಗಳೂರಿಗೆ ಲಸಿಕೆ ಹಾಕಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಇನ್ನು ಮಂಗಳವಾರವೂ ಇಲ್ಲಿ ಹೊರಗಿನವರಿಗೆ ಲಸಿಕೆ ಸಮಾರಾಧನೆ ಭರ್ಜರಿಯಾಗಿಯೇ ನಡೆದಿದೆ, 200ಕ್ಕೂ ಹೆಚ್ಚು ಸಿಟಿ ಜನ ಲಸಿಕೆ ಪಡೆದ ಮಾಹಿತಿ ಸಿಕ್ಕಿದೆ.
ಆನ್‌ಲೈನ್ ನೋಂದಣಿ
ಬೆಂಗಳೂರು ಕಡೆಯಿಂದ ಬಂದವರೆಲ್ಲ ಆರೋಗ್ಯ ಸೇತು ಆಪ್ & ಕೋವಿನ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡು ಸ್ಲಾಟ್ ಪಡೆದುಕೊಂಡು ಬಂದ ನಂತರವೇ ಲಸಿಕೆ ಹಾಕಲಾಗಿದೆ ಎಂದು ಗುಡಿಬಂಡೆ ಆಸ್ಪತ್ರೆ ವೈದ್ಯಾಧಿಕಾರಿ ಡಾ.ನರಸಿಂಹಮೂರ್ತಿ ಹೇಳಿಕೊಂಡಿದ್ದಾರೆ.
ಸರಕಾರವೋ ಮೊದಲೇ ನೋಂದಣಿ ಮಾಡಿಕೊಂಡವರಿಗೆ ಮಾತ್ರ ಲಸಿಕೆ ಹಾಕಲಾಗುತ್ತದೆ ಎಂದು ಹೇಳಿದ ಮೇಲೆ ಬೆಂಗಳೂರಿಗರು ಮೂರು ದಿನ ಮೊದಲೇ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಆದರೆ, ಬಹುತೇಕ ಸ್ಥಳೀಯರಿಗೆ ಈ ಮಾಹಿತಿ ಇಲ್ಲ. ಅನಕ್ಷರತೆ ಹೆಚ್ಚೇ ಇರುವುದರಿಂದ ಶೇ.90ರಷ್ಟು ಜನರಿಗೆ ಆನ್‌ಲೈನ್ ನೋಂದಣಿಯೇ ಗೊತ್ತಿಲ್ಲ. ಇಷ್ಟು ಪ್ರಮಾಣದ ಜನ ತಿಂಗಳ ನೆಟ್‌ಡಾಟಾ ಹಾಕಿಸಿಕೊಂಡು ಸ್ಮಾರ್ಟ್ ಫೋನ್ ಬಳಸುವಷ್ಟು ಸಿರಿವಂತಿಕೆ ತಾಲೂಕಿನಲ್ಲಿ ಇಲ್ಲ. ಇಡೀ ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದ, ಆಂಧ್ರದ ಗಡಿ ಪ್ರದೇಶದಲ್ಲಿರುವ, ಬೆಂಗಳೂರಿಗೆ ಏನಿಲ್ಲವೆಂದರೂ 100 ಕಿ.ಮೀ ದೂರದಲ್ಲಿರುವ ಗುಡಿಬಂಡೆಯನ್ನೇ ಟೆಕ್ಕಿಗಳು ಆಯ್ಕೆ ಮಾಡಿಕೊಂಡಿದ್ದು ಏಕೆ? ಇದು ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ.
ಇದೆಯಾ ಕಾಣದ ಕೈಗಳ ಕೈವಾಡ?
ಈ ಅನುಮಾನ ದಟ್ಟವಾಗಿ ಕಾಡುತ್ತಿದೆ. ಬೆಂಗಳೂರು ಜನರಿಗೆ ಗುಡಿಬಂಡೆಗಿಂತ ದೇವನಹಳ್ಳಿ, ನೆಲಮಂಗಲ, ಹೊಸಕೋಟೆ, ದೊಡ್ಡಬಳ್ಳಾಪುರ ಅಥವಾ ಚಿಕ್ಕಬಳ್ಳಾಪುರ ಬಹಳ ಹತ್ತಿರ. ಶಿಡ್ಲಘಟ್ಟದಲ್ಲೂ ನೂರಾರು ಸಿಟಿಜನರು ಲಸಿಕೆ ಪಡೆದಿದ್ದಾರೆ. ಹೀಗಿದ್ದರೂ ಇವರು ಲಸಿಕೆ ಪಡೆಯಲು 100 ಕಿ.ಮೀ ದೂರ ಇರುವ ಗುಡಿಬಂಡೆಗೆ ಬಂದಿದ್ದು ಹೇಗೆ? ಎಂಬ ಅನುಮಾನ ಕಾಡುತ್ತಿದೆ. ಟೆಕ್ಕಿಗಳು, ಬೆಂಗಳೂರಿಗರು ಬುದ್ಧಿವಂತರೇನೋ ಸರಿ. ಆದರೆ, ಅವರು ವಾಸವಿರುವ ಬೆಂಗಳೂರಿನ ಪ್ರದೇಶಗಳನ್ನು ಬಿಟ್ಟು ನಿರ್ದಿಷ್ಟವಾಗಿ ಗುಡಿಬಂಡೆಗೇ ಬಂದು ಲಸಿಕೆ ಪಡೆದದ್ದು ಹೇಗೆ? ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆಯಾ? ಅಥವಾ ಲಸಿಕೆ ಮಾರಾಟವಾಗಿದೆಯಾ? ಎಂಬ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯ ಮುಂದೆ ಠಳಾಯಿಸುತ್ತಿದ್ದ ಹೊಸ ಮುಖಗಳು ಹಣ ತೆತ್ತು ಲಸಿಕೆ ಪಡೆಯಲು ಚಡಪಡಿಸುತ್ತಿದ್ದರು ಎಂಬುದನ್ನು ಆಸ್ಪತ್ರೆಯ ಹತ್ತಿರದ ಕೆಲ ಜನರೇ ಬಾಯ್ಬಿಟ್ಟ ಸತ್ಯ. ಜತೆಗೆ, ಟೆಕ್ಕಿಗಳು ಇಷ್ಟು ದೂರದ ಗುಡಿಬಂಡೆಗೆ ಬರಲು ವ್ಯವಸ್ಥಿತ ನೆಟ್‌ವರ್ಕ್ ಕೆಲಸ ಮಾಡಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ಮಿಗಿಲಾಗಿ ಬೆಂಗಳೂರಿನ ಇಬ್ಬರು ಎರಡು ಲಸಿಕೆ ಪಡೆಯಲು ನಾಲ್ಕು ಸಾವಿರ ಖರ್ಚಾಯಿತು ಎಂದಿದ್ದು ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ.
ಮಾರ್ಗಸೂಚಿಯೇ ಅಸ್ತ್ರವಾಯಿತಾ?
ಲಸಿಕೆ ಪಡೆಯುವವರು ಲಾಕ್‌ಡೌನ್ ನಡುವೆಯೂ ಮನೆಯಿಂದ ಹೊರಬಂದು ಹತ್ತಿರದ ಆರೋಗ್ಯ ಕೇಂದ್ರ ಅಥವಾ ಯಾವುದೇ ಹತ್ತಿರದ ಆಸ್ಪತ್ರೆಯಲ್ಲಿ ಲಸಿಕೆ ಪಡೆಯಬಹುದಷ್ಟೇ. ಇದು ರಾಜ್ಯ ಸರಕಾರದ ನಿಯಮ. ಕೊನೆಯ ಪಕ್ಷ ಹಾಲು ತರಲಿಕ್ಕೂ ಹೊರಗೆ ಹೋಗಲು ವಾಹನ ಬಳಸಬಾರದು ಎಂಬ ನಿಯಮವಿದ್ದರೂ ಬೆಂಗಳೂರಿಗರು 100 ಕಿ.ಮೀ ದೂರದ ಗುಡಿಬಂಡೆಗೆ ಲಸಿಕೆ ಪಡೆಯಲು ಹೋಗಿದ್ದಾರೆ!! ಇದು ಎಲ್ಲರ ಹುಬ್ಬೇರುವಂತೆ ಮಾಡಿದೆ.
ಇನ್ನೊಂಡೆದೆ ಲಸಿಕೆ ಪಡೆಯಲು ಹೊರಬರಬಹುದು ಎಂಬ ಮಾರ್ಗಸೂಚಿಯಲ್ಲಿನ ಒಂದು ಅಂಶವನ್ನು ಲಸಿಕಾಂಕ್ಷಿಗಳು ಅಸ್ತ್ರವನ್ನಾಗಿ ಬಳಸಿಕೊಂಡಿದ್ದಾರೆ. ಬೆಂಗಳೂರು ಬಾರ್ಡರ್ ದಾಟಿದ ಇವರೆಲ್ಲ ಅಡ್ಡಗಟ್ಟಿದ ಪೊಲೀಸರಿಗೆ ಲಸಿಕೆ ಪಡೆಯಲು ಸಿಕ್ಕ ಸ್ಲಾಟ್ ಬಗ್ಗೆ ಹೇಳಿ ಕೋವಿನ್ ಪೋರ್ಟಲ್‌ನಿಂದ ಡೌನ್‌ಲೋಡ್ ಮಾಡಿಕೊಂಡ ದಾಖಲೆಯನ್ನಷ್ಟೇ ತೋರಿಸಿದ್ದಾರೆ. ಆದರೆ, ಪೊಲೀಸರು ಅವರ ಆಧಾರ್ ಸಂಖ್ಯೆಯನ್ನಾಗಲಿ ಅಥವಾ ಅವರ ವಾಹನದ ನೋಂದಣಿ ಸಂಖ್ಯೆಯನ್ನಾಗಲಿ ಪರಿಶೀಲನೆ ಮಾಡಿಲ್ಲ. ವ್ಯವಸ್ಥೆಯಲ್ಲಿನ ಲೋಪಕ್ಕೆ ಇದೊಂದು ದೊಡ್ಡ ನಿದರ್ಶನ. ಪೊಲೀಸರು ಚಾಪೆ ಕೆಳಗೆ ತೂರಿದರೆ ಟೆಕ್ಕಿಗಳು ರಂಗೋಲಿ ಕೆಳಗೇ ನುಗ್ಗಿದ್ದಾರೆ. ಜಿಲ್ಲಾ ಪೊಲೀಸರು ಮತ್ತು ಜಿಲ್ಲಾಡಳಿತಕ್ಕೆ ಚಳ್ಳೆಹಣ್ಣು ತಿನ್ನಿಸಿ ನಿರಾಯಾಸವಾಗಿ ಲಸಿಕೆ ಪಡೆದು ಬೆಂಗಳೂರಿಗೆ ಮರಳಿದ್ದಾರೆ.
ಲಸಿಕೆ ನೆಪದಲ್ಲಿ ಹೊರಬರುತ್ತಿರವ ಬೆಂಗಳೂರು ಜನ ಲಸಿಕೆ ಪಡೆದ ನಂತರ ನೇರವಾಗಿ ಮನೆಗಳಿಗೆ ವಾಪಸ್ಸಾಗುತ್ತಿಲ್ಲ. ಬದಲಿಗೆ ಗುಡಿಬಂಡೆ ಸಮೀಪದ ಪ್ರವಾಸೀ ತಾಣಗಳಿಗೆ ಎಡತಾಕುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಮಾರ್ಗದುದ್ದಕ್ಕೂ ಸಿಗುವ ಬೆಟ್ಟಗುಡ್ಡ, ದೇವಸ್ಥಾನಗಳಿಗೆ ಹೋಗುತ್ತಿದ್ದಾರೆ. ದೇಗುಲಗಳು ಮುಚ್ಚಿದ್ದರೂ ಹೊರಗೆ ಕೂತು ಗಬ್ಬೆಬ್ಬಿಸುತ್ತಿದ್ದಾರೆ.
ಸೋಂಕಿಗೆ ಸುಗ್ಗಿಕಾಲ
ಬೆಂಗಳೂರಿನಲ್ಲಿ ಸೋಂಕು ವಿಜೃಂಭಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಸೋಮವಾರ ನಗರದಲ್ಲಿ 16,747 ಕೇಸುಗಳು ಪತ್ತೆಯಾಗಿ 347 ಜನ ಅಸುನೀಗಿದ್ದಾರೆ. ಸಕ್ರಿಯ ಪ್ರಕರಣಗಳು 3.52 ಲಕ್ಷ. ಮಂಗಳವಾರ ಈ ಸಂಖ್ಯೆ 4 ಲಕ್ಷ ಸನಿಹಕ್ಕೆ ಬರುವುದು ಗ್ಯಾರಂಟಿ. ಇಡೀ ದೇಶದಲ್ಲೇ ಬೆಂಗಳೂರು ನಗರ ಅತಿದೊಡ್ಡ ಕೋವಿಡ್ ಹಾಟ್‌ಸ್ಪಾಟ್ ಆಗಿಬಿಟ್ಟಿದೆ. ಇದೀಗ ಚಿಕ್ಕಬಳ್ಳಾಪುರ ಜಿಲ್ಲೆಗೂ ಇದರ ಭೀತಿ ಶುರುವಾಗಿದೆ.
ಪುಟ್ಟ ತಾಲೂಕು ಕೇಂದ್ರ ಗುಡಿಬಂಡೆಯಲ್ಲಿ ಈಗಾಗಲೇ ಸೋಂಕಿತರ ಪ್ರಮಾಣ ಅರ್ಧ ಸೆಂಚುರಿ ಮೀರಿದೆ. ಈಗ ಸಿಟಿಜನರು ದಾಂಗುಡಿ ಇಡುತ್ತಿರುವ ಕಾರಣ ಪಟ್ಟಣದಲ್ಲಿ ಸೋಂಕು ಮತ್ತಷ್ಟು ಬಿಗಡಾಯಿಸುವ ಅಪಾಯ ಹೆಚ್ಚಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಪಟ್ಟಣ ಪಂಚಾಯಿತಿ ಚುನಾವಣೆ ಎದುರಿಸಿದ್ದ ಈ ಪಟ್ಟಣದಲ್ಲಿ ಏಕಾಎಕಿ ಸೋಂಕಿತರ ಸಂಖ್ಯೆ ಹೆಚ್ಚಾಗುವಂತೆ ಮಾಡಿತ್ತು. ಈಗ ಸೋಂಕು ಮತ್ತೂ ಉಲ್ಬಣವಾಗುವ ಅಪಾಯವಿದೆ. ಜಿಲ್ಲೆಯಲ್ಲಿ ಸೋಮವಾರ ಒಂದೇ 642 ಪಾಸಿಟೀವ್ ಕೇಸ್‌ಗಳು ಕಂಡು ಬಂದಿದ್ದು, ಐವರು ಸಾವನ್ನಪ್ಪಿದ್ದಾರೆ. ಇನ್ನು ಕೋಲಾರ ಜಿಲ್ಲೆಯಲ್ಲೂ 755 ಕೇಸ್‌ಗಳು ಪತ್ತೆಯಾಗಿದ್ದು, ಏಳು ಸೋಂಕಿತರು ಬಲಿಯಾಗಿದ್ದರು. ಪರಿಸ್ಥಿತಿ ಇಷ್ಟು ಗಂಭೀರವಾಗಿದ್ದರೂ ಜಿಲ್ಲಾಡಳಿತಗಳು ನಿರ್ಲಕ್ಷ್ಯ ನೀತಿಯನ್ನೇ ಮುಂದವರಿಸಿವೆ. ಕಠಿಣ ಲಾಕ್‌ಡೌನ್ ಮೊದಲ ದಿನವೇ ಹೀಗೆ ಬೆಂಗಳೂರಿಗರು ಗ್ರಾಮೀಣ ಪ್ರದೇಶಕ್ಕೆ ಧಾವಿಸಿ ಅಲ್ಲೂ ಸೋಂಕನ್ನು ಹರಡುತ್ತಿರುವುದು ಸ್ಥಳೀಯರ ಆಕ್ರೋಶಕ್ಕೂ ಕಾರಣವಾಗಿದೆ.
ಪರೀಕ್ಷೆ ನಡೆಯುತ್ತಿಲ್ಲ
ಬೆಂಗಳೂರು ಮತ್ತು ಹೊರಗಿನಿಂದ ಬಂದು ಲಸಿಕೆ ಹಾಕಿಸಿಕೊಳ್ಳುತ್ತಿರುವವರ ಕೋವಿಡ್ ಪರೀಕ್ಷೆ ಮಾಡುತ್ತಿಲ್ಲ. ಗುಡಿಬಂಡೆ ಆಸ್ಪತ್ರೆ ಮಟ್ಟಿಗೆ ಹೇಳುವುದಾದರೆ, ಸ್ಥಳೀಯರಲ್ಲಿ ಅನೇಕರು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಕ್ಕಳು, ಮಹಿಳೆಯರು, ವೃದ್ಧರು, ಬಾಣಂತಿಯರು ಚಿಕಿತ್ಸೆ ಪಡೆಯುತ್ತಿದ್ದಾರೆ. ನವಜಾತ ಶಿಶುಗಳು ಕೂಡ ಆಸ್ಪತ್ರೆಯಲ್ಲಿವೆ. ಪರಿಸ್ಥಿತಿ ಇಷ್ಟು ಸೂಕ್ಷ್ಮವಾಗಿದ್ದರೂ ತಾಲೂಕು ವೈದ್ಯಾಧಿಕಾರಿ ಯಾವುದೇ ಮುನ್ನೆಚ್ಚರಿಕೆ ಕ್ರಮ ವಹಿಸದೇ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡು ಬಂದವರಿಗೆಲ್ಲ ಲಸಿಕೆ ಕೊಡಿಸುತ್ತಿದ್ದಾರೆ. ಕೊನೆಪಕ್ಷ ಬಂದವರ ಬಳಿ ಕೋವಿಡ್ ನೆಗಟೀವ್ ಪತ್ರ ಕೇಳುವ ಅಥವಾ ಅವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸುವ ಕೆಲಸವನ್ನೂ ಮಾಡುತ್ತಿಲ್ಲ. ಒಂದು ವೇಳೆ ತಾಲೂಕಿನಲ್ಲಿ ಸೋಂಕು ಉಲ್ಬಣವಾದರೆ ಈ ವೈದ್ಯಾಧಿಕಾರಿ & ಜಿಲ್ಲಾಡಳಿತವೇ ಹೊಣೆ ಹೊರಬೇಕಾಗುತ್ತದೆ ಎನ್ನುತ್ತಾರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬರು.
ಸ್ಥಳೀಯರಿಗೆ ಲಸಿಕೆ ಇಲ್ಲ
ಸೋಮವಾರ ನಮಗೂ ಲಸಿಕೆ ಹಾಕಿ ಎಂದು ಸ್ಥಳೀಯರು ಆಸ್ಪತ್ರೆಗೆ ಬಂದರು. ಅನಕ್ಷಸ್ಥರಾದ ಕಾರಣ ಅವರು ಪೋರ್ಟಲ್‌ನಲ್ಲಿ ನೋಂದಣಿ ಮಾಡಿಸಿಕೊಂಡಿರಲಿಲ್ಲ. ಅವರಿಗಾಗಿ ಆಸ್ಪತ್ರೆಯಲ್ಲಿ ಯಾವುದೇ ಹೆಲ್ಪ್‌ಡೆಸ್ಕ್ ಇರಲಿಲ್ಲ. ಹೀಗಾಗಿ ತಮ್ಮ ಕಣ್ಣೆದುರೇ ಬೆಂಗಳೂರು ಜನ ಲಸಿಕೆ ಪಡೆಯುತ್ತಿದ್ದರೆ ಗುಡಿಬಂಡೆ ಜನ ಅಸಹಾಯಕತೆಯಿಂದ ನೋಡುತ್ತಿದ್ದರು. ಹಾಗೆ, ನೋಡಿದರೆ, ಸ್ಥಳೀಯರಿಗೆ ಪೂರೈಕೆ ಮಾಡಿದ್ದ ಲಸಿಕೆಯನ್ನೇ ಹೊರಗಿನವರಿಗೆ ಕೊಡಲಾಗಿದೆ. ಕೊನೆಪಕ್ಷ ಆಸ್ಪತ್ರೆ ವೈದ್ಯಾಧಿಕಾರಿ ಸ್ಥಳೀಯರ ಬಗ್ಗೆ ಅರೆ ಕ್ಷಣ ಯೋಚನೆ ಮಾಡಬೇಕಿತ್ತು.
ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದೇನು?
ಗುಡಿಬಂಡೆಯಂಥ ಸಣ್ಣ ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ನಡೆಯುತ್ತಿರವ ವ್ಯಾಕ್ಸಿನ್ ಜಾತ್ರೆಯ ಬಗ್ಗೆ ಉಪ ಮುಖ್ಯಮಂತ್ರಿ ಹಾಗೂ ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷ ಡಾ.ಸಿ.ಎನ್.ಅಶ್ವತ್ಥನಾರಾಯಣ ತೀವ್ರ ಅಚ್ಚರಿ ವ್ಯಕ್ತಪಡಿಸಿದ್ದಾರೆ.
“ಬೆಂಗಳೂರು ಜನರು ಲಾಕ್‌ಡೌನ್ ಸಮಯದಲ್ಲಿ ಅಷ್ಟು ದೂರ ಹೋಗಿ ಲಸಿಕೆ ಪಡೆಯುವುದು ಸರಿಯಲ್ಲ. ಬೆಂಗಳೂರಿನಲ್ಲೇ ಲಸಿಕೆ ಪಡೆಯಬಹುದು. ನಗರದ ಎಲ್ಲ ಕಡೆಗೂ ಲಸಿಕೆಯನ್ನು ಒದಗಿಸಲಾಗುತ್ತಿದೆ. ಇವರು ಗ್ರಾಮೀಣ ಪ್ರದೇಶಕ್ಕೆ ಹೋದರೆ ಅಲ್ಲಿನ ಜನರಿಗೆ ಲಸಿಕೆ ಕೊರತೆ ಉಂಟಾಗುತ್ತದೆ. ಜತೆಗೆ, ಅಲ್ಲಿನ ಆಸ್ಪತ್ರೆಗಳಲ್ಲಿ ಏಕಕಾಲಕ್ಕೆ ನೂರಾರು ಜನರಿಗೆ ಲಸಿಕೆ ಕೊಡುವಷ್ಟು ಮೂಲಸೌಕರ್ಯ ಇರುವುದಿಲ್ಲ. ತುರ್ತು ಸಂದರ್ಭಗಳು ಎದುರಾದರೆ ಕಷ್ಟವಾಗುತ್ತದೆ. ಈ ಪರಿಸ್ಥಿತಿಯನ್ನು ಜಿಲ್ಲಾಡಳಿತ ಸರಿಯಾಗಿ ನಿಭಾಯಿಸಬೇಕು. ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಗಳಲ್ಲಿ ಈ ಬಗ್ಗೆ ಬಹಳಷ್ಟು ದೂರುಗಳು ಬಂದಿವೆ. ಎರಡೂ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ಮಾತನಾಡುತ್ತೇನೆ” ಎಂದು ಅವರು ಸಿಕೆನ್ಯೂಸ್ ನೌ ಜತೆ ಮಾತನಾಡುತ್ತಾ ತಿಳಿಸಿದ್ದಾರೆ ಉಪ ಮುಖ್ಯಮಂತ್ರಿಗಳು.
ಜಿಲ್ಲಾಧಿಕಾರಿ ಹೇಳಿದ್ದೇನು?
ಬೆಂಗಳೂರು ಜನರು ಬಹಳ ಬುದ್ಧಿವಂತರು. ಆದ್ದರಿಂದ ಅವರೆಲ್ಲರೂ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡು ಬಂದು ಲಸಿಕೆ ಪಡೆಯುತ್ತಿದ್ದಾರೆ. ಈ ಬಗ್ಗೆ ಮಂಗಳವಾರ ಬೆಳಗ್ಗೆಯೇ ಜಿಲ್ಲಾ ಉಸ್ತುವಾರಿ ಸಚಿವರ ಜತೆ ಚರ್ಚೆ ನಡೆಸಲಾಗಿದೆ. ನಮ್ಮ ಜಿಲ್ಲೆ ಜತೆಗೆ ಪಕ್ಕದ ಕೋಲಾರ ಜಿಲ್ಲೆಯಲ್ಲೂ ಸಮಸ್ಯೆಯಾಗುತ್ತಿದೆ. ಹೀಗಾಗಿ ನಮ್ಮ ಭಾಗಕ್ಕೆ ಆನ್‌ಲೈನ್ ಬದಲು ಆಫ್‌ಲೈನ್‌ನಲ್ಲಿಯೇ ಹೆಸರು ನೋಂದಾಯಿಸಿಕೊಂಡು ಲಸಿಕೆ ನೀಡುವ ಬಗ್ಗೆ ಸಚಿವರಲ್ಲಿ ಮನವಿ ಮಾಡಿದ್ದೇವೆ. ಜಿಲ್ಲಾ ವೈದ್ಯಾಧಿಕಾರಿ ಜತೆ ಕೂಡ ಚರ್ಚಿಸಲಾಗಿದೆ. ಸ್ಥಳೀಯರಿಗೆ ವ್ಯಾಕ್ಸಿನ್ ಸಿಗದೇ ಇರುವುದು ಹಾಗೂ ಸಿಟಿ ಜನರಿಂದ ಗ್ರಾಮೀಣ ಭಾಗದಲ್ಲಿ ಸೋಂಕು ಹೆಚ್ಚುವ ಆತಂಕದ ಬಗ್ಗೆಯೂ ಚರ್ಚಿಸಿದ್ದೇವೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಅವರು ಸಿಕೆನ್ಯೂಸ್ ನೌ ಜತೆ ಮಾತನಾಡುತ್ತಾ ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ಫ್ಯಾಮಿಲಿ ಪ್ಲ್ಯಾನಿಂಗ್ ಆಪರೇಷನ್‌ಗಳ ಮೂಲಕ ಸುದ್ದಿಯಾಗಿದ್ದ ಗುಡಿಬಂಡೆ ಆಸ್ಪತ್ರೆ ಇದೀಗ ವ್ಯಾಕ್ಸಿನೇಷನ್ ಮೂಲಕ ರಾಜ್ಯಾದ್ಯಂತ ಸುದ್ದಿಯಾಗುತ್ತಿದೆ.
ಮಂಗಳವಾರವೂ ಗುಡಿಬಂಡೆ ಆಸ್ಪತ್ರೆಯಲ್ಲಿ ಬೆಂಗಳುರು ಜನರಿಗೆ ವ್ಯಾಕ್ಸಿನ್ ಜಾತ್ರೆ ನಡೆಯುತ್ತಿದೆ. 200ಕ್ಕೂ ಹೆಚ್ಚು ಬೆಂಗಳೂರು ಜನರು ಆಸ್ಪತ್ರೆಯ ಮುಂದೆ ಕ್ಯೂ ನಿಂತಿದ್ದಾರೆ. ಆಸ್ಪತ್ರೆ ಸಮೀಪ ಸುಮಾರು 100ಕ್ಕೂ ಹೆಚ್ಚು ಕಾರುಗಳು ಪಾರ್ಕ್ ಆಗಿವೆ. ಬೇಸಿಗೆಯಲ್ಲಿ ಹುಲ್ಲುಗಾವಲಿಗೆ ಬೆಂಕಿ ಬೀಳುವಂತೆ, ವೈರಸ್‌ನಿಂದ ಕೊಂಚ ಸುರಕ್ಷಿತವಾಗಿದ್ದ ಗುಡಿಬಂಡೆಯಲ್ಲಿ ಕೊರೊನಾ ಮಹಾಸ್ಫೋಟವಾಗುವ ಕ್ಷಣಗಳು ದೂರವಿಲ್ಲ.