ಲಾಕ್ಡೌನ್ ಘೋಷಣೆಯಾದ್ದರಿಂದ ಕೆಲ ಶಾಲೆಗಳಿಗೆ ಎರಡನೇ ಹಂತದ ಆಹಾರ ಧಾನ್ಯಗಳನ್ನು ವಿತರಿಸಲು ಸಾಧ್ಯವಾಗಿಲ್ಲ. ಲಾಕ್ಡೌನ್ ಮುಗಿದ ಕೂಡಲೇ ಪ್ರಕ್ರಿಯೆ ಪ್ರಾರಂಭಿಸಿ ಉಳಿದ ಶಾಲೆಗಳಿಗೆ ಮೇ ಅಂತ್ಯದೊಳಗೆ ವಿತರಿಸಲು ಸರಕಾರ ಸೂಚನೆ ನೀಡಿದೆ.
ಬೆಂಗಳೂರು: ಶಾಲಾ ವಿದ್ಯಾರ್ಥಿಗಳಿಗೆ ನೀಡಬೇಕಾದ ಬಾಕಿ ಉಳಿದಿರುವ ಅಹಾರ ಧಾನ್ಯಗಳನ್ನು ಮೇ ತಿಂಗಳ ಅಂತ್ಯದೊಳಗೆ ಪೂರ್ಣವಾಗಿ ವಿತರಿಸಲು ಸೂಚನೆ ನೀಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಮಾತನಾಡಿದ ಅವರು, “ಶಾಲಾ ಮಕ್ಕಳಿಗೆ ಮಧ್ಯಾಹ್ನದ ಉಪಹಾರದ ಬದಲಿಗೆ ನೀಡಲಾಗುತ್ತಿದ್ದ ಬಾಕಿ ಉಳಿದಿರುವ ಅಡುಗೆ ಎಣ್ಣೆ ಸೇರಿ ಆಹಾರ ಧಾನ್ಯಗಳನ್ನು ಲಾಕ್ಡೌನ್ ಅವಧಿ ಮುಗಿದ ತಕ್ಷಣವೇ ವಿತರಿಸಬೇಕೆಂದು ನಿರ್ದೇಶನ ನೀಡಲಾಗಿದೆ” ಎಂದು ತಿಳಿಸಿದರು.
ಈ ಆಹಾರ ಧಾನ್ಯಗಳಿಗೆ ಈಗಾಗಲೇ ಹಣ ಬಿಡುಗಡೆ ಮಾಡಲಾಗಿದೆ. ಪೂರ್ಣ ದಿನಗಳಿಗೆ ವಿತರಣೆ ಮಾಡಲು ಅಗತ್ಯವಿರುವ ಆಹಾರ ಧಾನ್ಯ ಕೆಎಸ್ಎಫ್ʼಸಿ ಗೋದಾಮುಗಳಲ್ಲಿ ಏಕಕಾಲದಲ್ಲಿ ಸಂಗ್ರಹಣೆ ಮಾಡಿ ಎತ್ತುವಳಿ ಮಾಡಲು ಕಷ್ಟಸಾಧ್ಯ ಆಗಿರುವುದರಿಂದ ಎರಡು ಹಂತಗಳಲ್ಲಿ ವಿತರಿಸಲು ತೀರ್ಮಾನಿಸಿ ಈಗಾಗಲೇ ಒಂದು ಹಂತದ ವಿತರಣೆ ಪೂರ್ಣಗೊಳಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಮೊದಲ ಹಂತದ 108 ದಿನಗಳ ಆಹಾರ ಧಾನ್ಯಗಳನ್ನು ಎಲ್ಲ ಶಾಲೆಗಳಿಗೆ ವಿತರಿಸಲಾಗಿದೆ. ಉಳಿದ ಅವಧಿಯಾದ 2021ರ ನವೆಂಬರ್ ನಿಂದ 2021ಮಾರ್ಚ್ ವರೆಗಿನ 132 ದಿನಗಳಿಗೆ ಸಂಬಂಧಿಸಿದ ಆಹಾರ ಧಾನ್ಯಗಳನ್ನು ಕೆಲ ಶಾಲೆಗಳಿಗೆ ವಿತರಿಸಲಾಗಿದೆ. ಲಾಕ್ಡೌನ್ ಘೋಷಣೆಯಾದ್ದರಿಂದ ಕೆಲ ಶಾಲೆಗಳಿಗೆ ಎರಡನೇ ಹಂತದ ಆಹಾರ ಧಾನ್ಯಗಳನ್ನು ವಿತರಿಸಲು ಸಾಧ್ಯವಾಗಿಲ್ಲ. ಲಾಕ್ಡೌನ್ ಮುಗಿದ ಕೂಡಲೇ ಪ್ರಕ್ರಿಯೆ ಪ್ರಾರಂಭಿಸಿ ಉಳಿದ ಶಾಲೆಗಳಿಗೆ ಮೇ ಅಂತ್ಯದೊಳಗೆ ವಿತರಿಸಲು ಸೂಚನೆ ನೀಡಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.
ತೊಗರಿ ಬೇಳೆ ಸರಬರಾಜುದಾರರಿಗೆ ಏ. 27ರಂದು ಮತ್ತು ಅಡುಗೆ ಎಣ್ಣೆ ಸರಬರಾಜುದಾರರಿಗೆ ಮೇ 7ರಂದು ಸರಬರಾಜು ಕಾರ್ಯಾದೇಶ ನೀಡಲಾಗಿದೆ ಎಂದು ತಿಳಿಸಿದ ಸಚಿವರು, ದಾಸ್ತಾನಿನಲ್ಲಿರುವ ಆಹಾರ ಧಾನ್ಯಗಳನ್ನು ಡಿಡಿಪಿಐ ಮತ್ತು ಜಿಪಂ ಸಿಇಒಗಳೊಂದಿಗೆ ಚರ್ಚಿಸಿ ತಕ್ಷಣವೇ ಕೂಡಲೇ ವಿತರಿಸಲು ಸೂಚನೆ ನೀಡಲಾಗಿದೆ. ಎಲ್ಲ ಶಾಲೆಗಳ ಮುಖ್ಯಸ್ಥರು ಶಾಲೆಗಳಲ್ಲಿ ಹಾಜರಿರುವಂತೆ ಸೂಚಿಸಿ ಸೂಚಿತ ಅವಧಿಗೆ ಆಹಾರ ಧಾನ್ಯಗಳ ವಿತರಣೆಗೆ ಕ್ರಮ ವಹಿಸಲಾಗುತ್ತದೆ ಎಂದು ಅವರು ಹೇಳಿದರು.
ಶಾಲೆಗಳು ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಪ್ರಸ್ತುತ ಆರು ತಿಂಗಳ ಅವಧಿಗೆ ಒಂದು ಬಾರಿ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದ್ದು, ಮುಂದಿನ ಶೈಕ್ಷಣಿಕ ಸಾಲಿನಿಂದ ಇದನ್ನು ಸರಿಪಡಿಸಲಾಗುತ್ತದೆ. ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪ್ರತಿ ತಿಂಗಳು ವಿದ್ಯಾರ್ಥಿಗಳ ಮನೆಗೆ ಆಹಾರ ಧಾನ್ಯ ವಿತರಣೆಗೆ ನೀಲನಕ್ಷೆ ತಯಾರಿಸಲು ಸೂಚಿಸಲಾಗಿದೆ ಎಂದೂ ಸಚಿವರು ಹೇಳಿದರು.
ಆರ್ಟಿಇ ಹಣ ಮರುಪಾವತಿಗೆ ಸೂಚನೆ
ಈಗಾಗಲೇ ಬಹುತೇಕ ಶಾಲೆಗಳಿಗೆ ಆರ್ಟಿಇ ಅನುದಾನ ಮರು ಪಾವತಿಸಲಾಗಿದೆ. ಉಳಿದ ಶಾಲೆಗಳಿಗೆ ತಕ್ಷಣವೇ ಹಣ ಬಿಡುಗಡೆಗೆ ಕ್ರಮ ವಹಿಸಬೇಕೆಂದು ಅಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ಸೂಚನೆ ನೀಡಲಾಗಿದೆ ಎಂದೂ ಸುರೇಶ್ ಕುಮಾರ್ ತಿಳಿಸಿದರು.
ಕೋವಿಡ್ ಸಂಕಷ್ಟದ ಸಮಯದಲ್ಲೂ ಮಕ್ಕಳಿಗೆ ಶಿಕ್ಷಣ ನೀಡಲು ಶಾಲೆಗಳು ಕ್ರಮ ವಹಿಸಿದ್ದು, ಬಾಕಿ ಆರ್ಟಿಇ ಹಣವನ್ನು ಮೇ ಅಂತ್ಯದೊಳಗೆ ಬಿಡುಗಡೆ ಮಾಡಬೇಕೆಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಬಾಕಿ ಹಣ ನೀಡದೇ ಬಾಕಿ ಉಳಿಸಿಕೊಂಡಿರುವ ಬಿಇಒ ಮತ್ತು ಡಿಡಿಪಿಐಗಳಿಗೆ ಎಚ್ಚರಿಕೆ ನೀಡಿ ತಕ್ಷಣವೇ ಹಣ ಬಿಡುಗಡೆಗೆ ಕ್ರಮ ವಹಿಸಬೇಕೇಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಸಚಿವರು ಸೂಚಿಸಿದರು.
ಶಿಸ್ತು ಕ್ರಮ
ಅನಗತ್ಯವಾಗಿ ಶಾಲೆಗಳಿಗೆ ನೀಡಬೇಕಾದ ಹಣವನ್ನು ತಮ್ಮ ಖಾತೆಯಲ್ಲೇ ಉಳಿಸಿಕೊಂಡಿರುವ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮಕ್ಕೆ ಕೂಡಲೇ ಪ್ರಸ್ತಾವನೆ ಮಂಡಿಸಲೂ ಸಹ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ ನಾಯಕ್, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿ.ಅನ್ಬುಕುಮಾರ್, ಮಧ್ಯಾಹ್ನ ಉಪಹಾರ ಯೋಜನೆ ಅಧಿಕಾರಿಗಳು ಸೇರಿದಂತೆ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಖಾಸಗಿ ಪಿಯು ಆಡಳಿತ ಮಂಡಳಿಗಳ ಜತೆ ಚರ್ಚೆ
ಇದೇ ಸಂದರ್ಭದಲ್ಲಿ ಬೆಂಗಳೂರು ವಿಭಾಗದ ದಾವಣಗೆರೆ, ಶಿವಮೊಗ್ಗ ಮತು ಚಿತ್ರದುರ್ಗ ಜಿಲ್ಲೆಗಳಿಗೆ ಸೇರಿದ ಖಾಸಗಿ ಅನುದಾನರಹಿತ ಪದವಿ ಪೂರ್ವ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಚಿವ ಸುರೇಶ್ ಕುಮಾರ್ ಸಭೆ ನಡೆಸಿದರು. ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಕೋವಿಡ್ ಸಂಕಷ್ಟದ ಸಮಯದಲ್ಲಿ ಎದುರಿಸುತ್ತಿರುವ ಸವಾಲುಗಳು, ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗದ ರೀತಿಯಲ್ಲಿ ಅನುಸರಿಸಬೇಕಾದ ಕ್ರಮಗಳು, ಪರೀಕ್ಷಾ ಪ್ರಕ್ರಿಯೆ ಕುರಿತಂತೆ ಸಚಿವರ ಗಮನ ಸೆಳೆದರು.
ಸಭೆಯಲ್ಲಿ ಮಾಜಿ ವಿಧಾನ ಪರಿಷತ್ ಮುಖ್ಯ ಸಚೇತಕ ಶಿವಯೋಗಿ ಸ್ವಾಮಿ ಸೇರಿ ಆ ಭಾಗದ 45ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಪದವಿಪೂರ್ವ ಶಿಕ್ಷಣ ನಿರ್ದೇಶಕಿ ಸ್ನೇಹಲ್ ಹಾಜರಿದ್ದರು.