ಕೋವಿಡ್‌ನಿಂದ ಗುಣವಾದೆವು ಎಂದು ನಿರಾಳವಾಗುತ್ತಿದ್ದ ಜನರು ಈಗ ಮತ್ತೊಂದು ಸಂಕಷ್ಟ ಎದುರಿಸುತ್ತಿದ್ದಾರೆ. ಅದರಲ್ಲೂ ಮಧುಮೇಹ ಇರುವವರ ಎದುರು ಹೊಸ ಭೂತವೊಂದು ಧುತ್ತೆಂದು ಎದ್ದುಕೂತಿದೆ? ಏನದು? ಅದರ ಪತ್ತೆ & ಚಿಕಿತ್ಸೆ ಹೇಗೆ? ನಮ್ಮ ಅಂಕಣಕಾರ ಡಾ.ಗುರುಪ್ರಸಾದ ಎಚ್ ಎಸ್ ಇಲ್ಲಿ ಬೆಳಕು ಚೆಲ್ಲಿದ್ದಾರೆ.
ಕಳೆದ ವರ್ಷದಿಂದ ಇಲ್ಲಿಯವರೆಗೆ ಭಾರತ ಸೇರಿದಂತೆ ಹಲವಾರು ರಾಷ್ಟ್ರಗಳು ಕೊರೊನಾದಿಂದಾಗಿ ಸಾವು-ನೋವುಗಳನ್ನು ನೋಡಿವೆ. ಅತ್ಯಂತ ಅಪಾಯಕಾರಿ ಕೊರೊನಾ 2ನೇ ಆಲೆಯಿಂದ ಭಾರತದಲ್ಲಿ ಸೋಂಕಿತರ ಪ್ರಮಾಣದಲ್ಲಿ ಮತ್ತೂ ಸಾವು ಸಂಭವಿಸುವುದು ಹೆಚ್ಚಳವಾಯಿತು, ಈಗಾಗಲೇ ಜನರು ತಮ್ಮ ಕುಟುಂಬದವರನ್ನು, ಆತ್ಮೀಯರನ್ನು ಕಳೆದುಕೊಂಡು ದುಃಖದಲ್ಲಿದ್ದಾರೆ. ಇಂಥ ನೋವಿನ ಸಂದರ್ಭದಲ್ಲಿ ಬ್ಲ್ಯಾಕ್ ಫಂಗಸ್ ಎಂಬ ಅನಾಹುತಕಾರಿ ರೋಗ ಅಪ್ಪಳಿಸಿರುವುದು ಜನರಲ್ಲಿ ಆತಂಕ ಉಂಟು ಮಾಡಿದೆ.
ಕೊರೊನಾ ಸೋಂಕಿನ ಆತಂಕ ಒಂದೆಡೆಯಾದರೆ, ಸೋಂಕಿನಿಂದ ಗುಣಮುಖರಾದವರಲ್ಲಿ ಕಂಡು ಬರುತ್ತಿರುವ ಬ್ಲ್ಯಾಕ್ ಫಂಗಸ್ನ ಆತಂಕ ಮತ್ತೊಂದೆಡೆ. ಕೋವಿಡ್ ಎರಡನೇ ಅಲೆ ಕಾಣಿಸಿಕೊಂಡ ಬಳಿಕ ಈ ಕಾಯಿಲೆಗೆ ಒಳಪಡುವವರ ಸಂಖ್ಯೆ ಹೆಚ್ಚಾಗಿದೆ. ದೇಶದ ಕೆಲವು ರಾಜ್ಯಗಳಲ್ಲಿ ಸಾವು ಸಂಭವಿಸುತ್ತಿರುವುದು ಕೂಡ ಕಂಡು ಬಂದಿದೆ.
ಏನಿದು ಬ್ಲ್ಯಾಕ್ ಫಂಗಸ್ (ಕಪ್ಪು ಶಿಲೀಂದ್ರ)?
ಕೋವಿಡ್-19 ನಿಂದ ಚೇತರಿಸಿಕೊಂಡವರಲ್ಲಿ ಮಿದುಳು, ಮುಖದ ನೋವು, ಮರಗಟ್ಟುವಿಕೆ ಅಥವಾ ಊತ, ಮೂಗಿನ ಮೇಲೆ ಕಪ್ಪು ಬಣ್ಣ, ಹಲ್ಲು, ದವಡೆಗಳನ್ನು ಸಡಿಲಗೊಳಿಸುವುದು, ನೋವು, ಜ್ವರ, ಚರ್ಮದ ಗಾಯ, ಥ್ರಂಬೋಸಿಸ್ ಮತ್ತು ನೆಕ್ರೋಸಿಸ್ (ಎಸ್ಚಾರ್), ಎದೆನೋವು, ಪ್ಲೆರಲ್ ಎಫ್ಯೂಷನ್, ಹಿಮೋಪ್ಟಿಸಿಸ್ ಮತ್ತು ಉಸಿರಾಟದ ತೊಂದರೆಯಂಥ ಲಕ್ಷಣಗಳು ಕಾಣಿಸಿಕೊಂಡರೆ ಇದನ್ನು ʼಮ್ಯೂಕೋರ್ಮೈಕೋಸಿಸ್ʼ ಅಥವಾ ʼಕಪ್ಪು ಶಿಲೀಂಧ್ರʼ ಸೋಂಕು ಎಂದು ಕರೆಯಲಾಗುತ್ತದೆ, ಈ ಸೋಂಕು ಅಪಾಯಕಾರಿ ಅಲ್ಲದೇ ಕಣ್ಣುಗಳ ಮೇಲೆ ಪರಿಣಾಮ ಬೀರಿ ದೃಷ್ಟಿಹೀನತೆ ಅಥವಾ ಪ್ರಾಣಕ್ಕೇ ಕುತ್ತಾಗುವ ಅಪಾಯ ಉಂಟು ಮಾಡುತ್ತಿದೆ.
ರೋಗ ನಿರೋಧಕ ಶಕ್ತಿ ಕಡಿಮೆ ಇದ್ದವರಲ್ಲಿ ಕೋವಿಡ್‌ನಿಂದ ಚೇತರಿಸಿಕೊಂಡ ಒಂದು ತಿಂಗಳ ಒಳಗಡೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಈ ಸೋಂಕು ಕಣ್ಣು, ಕಿವಿ ಮತ್ತು ಮಿದುಳಿಗೆ ವ್ಯಾಪಿಸಿಕೊಂಡು, ಜೀವಕ್ಕೆ ಅಪಾಯವನ್ನುಂಟು ಮಾಡತ್ತದೆ. ಈ ಸೋಂಕು ಪ್ರಮುಖವಾಗಿ ಚಿಕಿತ್ಸೆಯಲ್ಲಿರುವ ಅಥವಾ ಇತರೆ ಆರೋಗ್ಯ ಸಮಸ್ಯೆಗಳಿಗೆ ಔಷಧಿ ಪಡೆಯುತ್ತಿರುವ ವ್ಯಕ್ತಿಗಳಲ್ಲಿ ಹೆಚ್ಚಾಗಿ ಕಂಡಬರುತ್ತಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಈ ಶಿಲೀಂದ್ರ ಸೋಂಕು ಹೆಚ್ಚಾಗಿ ಕೋವಿಡ್ ಸೋಂಕಿತರಲ್ಲಿ, ಮುಖ್ಯವಾಗಿ ಮಧುಮೇಹಿಗಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಕುಂದಿಸುತ್ತದೆ ಎನ್ನುತ್ತಾರೆ ವೈದ್ಯಕೀಯ ತಜ್ಞರು.
ವೈದ್ಯರು ಹೇಳುವ ಹಾಗೆ ʼಕೋವಿಡ್ ಕಾಣಿಸಿಕೊಳ್ಳುವ ಪೂರ್ವದಲ್ಲಿ ಇದು ಅಷ್ಟಾಗಿ ಗಮನಕ್ಕೆ ಬರುತ್ತಿರಲಿಲ್ಲ. ಗಂಭೀರವಾಗಿ ಅಸ್ವಸ್ಥಗೊಂಡ ಕೊರೊನಾ ಸೋಂಕಿತರಿಗೆ ಸ್ಟೆರಾಯ್ಡ್ ಬಳಸುವುದರಿಂದ ದೇಹದಲ್ಲಿನ ಸಕ್ಕರೆ ಅಂಶ ಹೆಚ್ಚಳವಾಗುತ್ತದೆ. ಅದೇ ರೀತಿ, ರೋಗ ನಿರೋಧಕ ಶಕ್ತಿ ಕಡಿಮೆ ಇದ್ದಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಇದನ್ನು ಬೇಗ ಪತ್ತೆ ಮಾಡದಿದ್ದಲ್ಲಿ ವ್ಯಕ್ತಿ ದೃಷ್ಟಿ ಕಳೆದುಕೊಳ್ಳುತ್ತಾನೆ. ಚಿಕಿತ್ಸೆ ನೀಡುವುದು ವಿಳಂಬವಾದಲ್ಲಿ ಮಿದುಳಿಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಂಡು, ವ್ಯಕ್ತಿ ಮೃತಪಡುವ ಸಾಧ್ಯತೆ ಇರುತ್ತದೆʼ ಎಂದು ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ.
ಏಕೆ ಹೀಗೆ? ಹೇಗೆ ಬರುತ್ತದೆ?
ಶಿಲೀಂದ್ರ ಸೋಂಕು ಹೆಚ್ಚಳಕ್ಕೆ ಸ್ಟೆರಾಯ್ಡ್‌ಗಳ ಅತಿ ಬಳಕೆಯೇ ಕಾರಣ ಎಂದು ಹೇಳುವ ವೈದ್ಯರು, ಪ್ರಮುಖವಾಗಿ ಮಧುಮೇಹಿಗಳಲ್ಲಿ ಇದು ಹೆಚ್ಚಿನ ಪರಿಣಾಮ ಬೀರುತ್ತದೆ. ಹೀಗಾಗಿ ಹೆಚ್ಚಿನ ನಿಗಾ ಅತ್ಯಗತ್ಯ. ಬೆಂಗಳೂರಿನ ಜಯನಗರದ ಅಪೊಲೊ ಆಸ್ಪತ್ರೆಯಲ್ಲಿ ಕಳೆದ ಒಂದು ತಿಂಗಳಲ್ಲಿ ಇಂತಹ ಸುಮಾರು 10 ಕಪ್ಪು ಶಿಲೀಂದ್ರ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಅಂತೆಯೇ ಮಣಿಪಾಲ್, ಆಸ್ಟರ್ ಮತ್ತು ಇತರೆ ಖಾಸಗಿ ಮತ್ತು ಸರಕಾರಿ ಆಸ್ಪತ್ರೆಗಳಲ್ಲೂ ಕೂಡ ಪ್ರಕರಣಗಳು ಕಂಡುಬಂದಿವೆ. ಮೊದಲ ಅಲೆಯ ವೇಳೆ ಈ ಸೋಂಕು ಕೋವಿಡ್ʼನಿಂದ ಚೇತರಿಸಿಕೊಂಡ ಬಳಿಕ ಪ್ರಮುಖವಾಗಿ ವಯಸ್ಸಾದವರಲ್ಲಿ ಕಂಡು ಬಂದಿತ್ತು. ಆದರೆ ಈಗ 2ನೇ ಅಲೆಯಲ್ಲಿ ಸೋಂಕಿತರು ಚಿಕಿತ್ಸೆಯಲ್ಲಿರುವಾಗಲೇ ಕಂಡುಬರುತ್ತಿದೆ. ಇಂತಹ ಬೆಳವಣಿಗೆಗೆ ಸ್ಟಿರಾಯ್ಡ್ʼಗಳ ಹೆಚ್ಚಿನ ಬಳಕೆ ಕಾರಣ ಎಂದು ವೈದ್ಯರು ಶಂಕಿಸಿದ್ದಾರೆ.
ಪತ್ತೆ ಹಚ್ಚುವುದು ಹೇಗೆ?
ಮುಖ್ಯವಾಗಿ ಕೋವಿಡ್ ಸಮಯದಲ್ಲಿ ಸ್ಟೆರಾಯ್ಡ್ ತೆಗೆದುಕೊಂಡ ರೋಗಿಗಳಲ್ಲಿ ಕೋವಿಡ್ ಸೋಂಕಿಗೆ ಒಳಗಾದ ಎರಡನೇ ವಾರದ ನಂತರ ಈ ಕಪ್ಪು ಶಿಲೀಂದ್ರ ಸೋಂಕು ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಸೋಂಕು ಇರುವ ರೋಗಿಗಳಲ್ಲಿ ಸಕ್ಕರೆ ಪ್ರಮಾಣ ಮತ್ತು ರಕ್ತದೊತ್ತಡ ಅತ್ಯಂತ ಹೆಚ್ಚಾಗಿರುತ್ತದೆ. ಅಂತೆಯೇ ಮೂಗಿನಲ್ಲಿ ಕಪ್ಪು ದ್ರವ ವಿಸರ್ಜನೆಯಾಗುತ್ತಿರುತ್ತದೆ. ಸೀಟಿ ಮತ್ತು ಎಂಆರ್‌ಐ ಸ್ಕ್ಯಾನ್ ಮೂಲಕವೂ ಈ ಶಿಲೀಂಧ್ರಗಳ ಸೋಂಕನ್ನು ಪತ್ತೆ ಮಾಡಬಹುದು. ಮೂಗಿನ ಬಯಾಪ್ಸಿ ಮೂಲಕ ಈ ಸೋಂಕು ಇರುವಿಕೆಯನ್ನು ಖಚಿತಪಡಿಸಿಕೊಳ್ಳಬಹುದು.
ಕಫ ಪರೀಕ್ಷೆಯ ಮೂಲಕ ರೋಗ ನಿರ್ಣಯ ಮಾಡಬಹುದು ಮತ್ತು ಆರಂಭಿಕ ಹಂತದಲ್ಲಿ ಬಂದರೆ ರೋಗಿಗಳು ಬೇಗ ಚೇತರಿಸಿಕೊಳ್ಳಬಹುದು ಎಂದು ಅಪೊಲೊ ಆಸ್ಪತ್ರೆಯ ಶ್ವಾಸಕೋಶಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ರವೀಂದ್ರ ಮೆಹ್ತಾ ಹೇಳುತ್ತಾರೆ.
ಮಹಾರಾಷ್ಟ್ರ, ಗುಜರಾತ್, ಕರ್ನಾಟಕಗಳಲ್ಲಿ ಈ ರೀತಿಯ ನೂರಾರು ಪ್ರಕರಣಗಳು ವರದಿಯಾಗುತ್ತಿದೆ ಎಂದು ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮ್ಯೂಕೋರ್ಮೈಕೋಸಿಸ್ ಫಂಗಲ್ ಸೋಂಕು ದೃಷ್ಟಿ ಹೀನತೆ ಹಾಗೂ ಜೀವಕ್ಕೆ ಅಪಾಯಕಾರಿಯಾಗಿದ್ದು, ಇದನ್ನು ನಿವಾರಿಸುವ ಚಿಕಿತ್ಸೆಯೂ ದುಬಾರಿಯಾಗಿರುವುದು ಮತ್ತೊಂದು ಆತಂಕದ ಅಂಶ ಎನ್ನುತ್ತಾರೆ ವೈದ್ಯರು.
ಚಿಕಿತ್ಸೆಯ ಖರ್ಚು ದುಬಾರಿ
ಇದಕ್ಕೆ ʼಆ್ಯಂಫೊಸೆರಟಿನ್ ಬಿʼ ಅನ್ನುವ ಚುಚ್ಚುಮದ್ದು ಬಳಸಲಾಗುತ್ತದೆ. ಪ್ರತಿದಿನಕ್ಕೆ ಏನಿಲ್ಲವೆಂದರೂ ₹35 ರಿಂದ ₹54,೦೦೦ ಒಂದೇ ಚುಚ್ಚುಮದ್ದಿನ ಖರ್ಚು ಬರುತ್ತದೆ. 10ರಿಂದ 14 ದಿವಸ ಇದನ್ನು ಕೊಡಬೇಕಾಗುತ್ತದೆ. ಒಬ್ಬ ರೋಗಿಗೆ ಈ ಚುಚ್ಚುಮದ್ದಿಗೆ ₹5 ರಿಂದ ₹7 ಲಕ್ಷ ಖರ್ಚು ಆಗುತ್ತದೆ. ಆಗಲೇ ಲಕ್ಷಾಂತರ ರೂಪಾಯಿಯನ್ನು ಕೋವಿಡ್ ಚಿಕಿತ್ಸೆಗೆ ಖರ್ಚು ಮಾಡಿರುವ ಜನ, ಈಗ ಮತ್ತೆ ಈ ಸೋಂಕು ತಗುಲಿವರ ಪರಿಸ್ಥಿತಿ ಕಷ್ಟವಾಗಿದೆ. ಸರಕಾರ ಈ ಔಷಧಿಯ ಮೇಲೆ ಇರುವ ತೆರಿಗೆ ಮನ್ನಾ ಮಾಡಿ ಮತ್ತು ಬೆಲೆಯನ್ನೂ ಕಡಿಮೆ ಮಾಡಬೇಕಿದೆ. ವಿಜ್ಞಾನಿಗಳು ಕೊರೊನಾ ಎದುರಿಸಲು ಕಂಡುಹಿಡಿದಂತೆ ಪರ್ಯಾಯವಾಗಿ ಲಸಿಕೆಯಾಗಲಿ ಔಷಧಯಾಗಲಿ ಕಂಡುಹಿಡಿದು ಇದಕ್ಕೂ ಬೇಗ ಸುಲಭ ಪರಿಹಾರ ಒದಗಿಸಬೇಕಿದೆ. ಇಂತಹ ಸೋಂಕುಗಳಿಂದ ಕಾಪಾಡಿಕೊಳ್ಳಲಿಕ್ಕಾದರೂ ನಾವುಗಳೆಲ್ಲ ಮನೆಯಲ್ಲಿ ಇರುವುದು ಅತ್ಯಗತ್ಯ.
ಆರೋಗ್ಯ ಸಚಿವರು ಏನಂತಾರೆ?
ಗುರುವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಕೂಡ ಬ್ಲ್ಯಾಕ್ ಫಂಗಸ್ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು.
ಅತಿ ಸ್ಟೆರಾಯಿಡ್ ಬಳಕೆ ಹಾಗೂ ಔಷಧಿಗಳ ಹೆಚ್ಚು ಬಳಕೆಯಿಂದ ಮಧುಮೇಹ ಮತ್ತಿತರೆ ರೋಗಳನ್ನು ಹೊಂದಿರುವವರಿಗೆ ಬ್ಲ್ಯಾಕ್ ಫಂಗಸ್ ಕಾಯಿಲೆ ಬರುತ್ತಿದೆ. ಮಹಾರಾಷ್ಟ್ರದಲ್ಲಿ ಈಗಾಗಲೇ ಈ ರೋಗ ಕಾಣಿಸಿಕೊಂಡಿದೆ. ನಮ್ಮಲ್ಲೂ ಕಾಣಿಸಿಕೊಂಡಿತ್ತು. ನಾನು ನೇತ್ರತಜ್ಞ ಡಾ.ಭುಜಂಗ ಶೆಟ್ಟಿ ಅವರ ಜತೆ ಮಾಡಿದ್ದೇನೆ. ಅದನ್ನು ಮ್ಯೂಕೋರ್ಮೈಕೋಸಿಸ್ ಅಂತ ವೈದ್ಯಕೀಯ ಭಾಷೆಯಲ್ಲಿ ಹೇಳುತ್ತೇವೆ. ಅದು ಬಂದರೆ ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಅಪಾಯವೂ ಇರುತ್ತದೆ. ಅತಿಯಾದ ಪ್ರಮಾಣದಲ್ಲಿ ಸ್ಟೆರಾಯಿಡ್, ಆಕ್ಸಿಜನ್, ರೆಮಿಡಿಸಿವರ್ ಬಳಕೆ ಮಾಡಿದಾಗ ಬ್ಲ್ಯಾಕ್ ಫಂಗಸ್ ಬರುತ್ತದೆ. ಇದು ಕೋವಿಡ್ ನಂತರದ ಎಫೆಕ್ಟ್ ಅಂತ ವರದಿಗಳು ಬಂದಿವೆ. ತಕ್ಷಣವೇ ಇದಕ್ಕೂ ಔಷಧಿ ಒದಗಿಸಬೇಕಾಗಿದೆ. ಇದಕ್ಕೆ ʼಆಂಪ್ಕೋಟೆರಿಸಿನ್ʼ ಅಂತ ಔಷಧಿ ಇದೆ. ಇದನ್ನು ರಾಜ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ ಮಾಡುವಂತೆ ಕೇಂದ್ರ ಆರೋಗ್ಯ ಸಚಿವರನ್ನು ಕೋರಿದ್ದೇವೆ. ತಕ್ಷಣ 25,000 ಪೂರೈಕೆ ಮಾಡಬೇಕು ಎಂದು ಮನವಿ ಮಾಡಿದ್ದೇವೆ. ಈಗ ತಕ್ಷಣಕ್ಕೆ 1050 ಔಷಧಿಯನ್ನು ಖರೀದಿ ಮಾಡಲು ಸರಕಾರ ನಿರ್ಧರಿಸಿದೆ. ಗುರುವಾರವೇ ಖರೀದಿ ಆದೇಶವನ್ನೂ ಕೊಟ್ಟಿದ್ದೇವೆ ಎಂದು ಅವರು ಹೇಳಿದ್ದಾರೆ.
ಡಾ.ಗುರುಪ್ರಸಾದ ಹವಲ್ದಾರ್
- ಮೂಲತಃ ಉಪನ್ಯಾಸಕರು. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನ ಹಳ್ಳಿಯವರು. ಪ್ರಸ್ತುತ ಹಗರಿಬೊಮ್ಮನಹಳ್ಳಿ ಜಿವಿಪಿಪಿ ಪದವಿ ಕಾಲೇಜನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತ ಜೊತೆಗೆ ಪತ್ರಿಕೆಗಳಿಗೆ ವೆಬ್ ನ್ಯೂಸ್ ಪೋಟ್೯ಲ್ ಗಳಿಗೆ ಲೇಖನ ಬರೆಯುತ್ತಿದ್ದಾರೆ.
Lead Photo Courtesy: Wikipedia