ಬಡ ಮೀನುಗಾರರ ಕುಟುಂಬ ರಕ್ಷಣೆಗಾಗಿ ಮನೆ ಗೋಡೆಗೆ ತಮ್ಮ ಬದುಕಿನ ಮುಖ್ಯ ಭಾಗವಾದ ದೋಣಿಗಳನ್ನು ಅಡ್ದಲಾಗಿ ಇಡುತ್ತಿರುವುದು ಕಂಡು ಬಂತು. ಹೆಣ್ಣು ಮಕ್ಕಳು ಕಣ್ಣೀರು ಹಾಕುತ್ತಿರುವ ದೃಶ್ಯ ನೋಡಲಾಗುತ್ತಿಲ್ಲ. ಅವರ ಕಟ್ಟಿಕೊಂಡ ಬದುಕು ಯಾವ ಕ್ಷಣದಲ್ಲಾದರೂ ಕೊಚ್ಚಿ ಹೋಗುವ ಭಯ ಅವರನ್ನು ಆವರಿಸಿದೆ. ಯಾವ ಸಂದರ್ಭದಲ್ಲಾದರೂ ಸಮುದ್ರದ ರಕ್ಕಸ ಅಲೆಗಳು ಕಡಲ ತಡಿಯ ಮನೆಗಳಿಗೆ ಅಪ್ಪಳಿಸುವ ಸಾಧ್ಯತೆ ಇದೆ.
ಮರವಂತೆ: ಟೌಕ್ಟೇ ಚಂಡಮಾರತಕ್ಕೆ ಕರಾವಳಿ ಅಕ್ಷರಶ ನಡುಗಿ ಹೋಗಿದೆ. ಮರವಂತೆಯ 500ಕ್ಕೂ ಹೆಚ್ಚು ಮೀನುಗಾರರು ಕುಟುಂಬ ಜೀವವನ್ನು ಕೈಯಲ್ಲಿ ಹಿಡಿದು ಕೂತಿದ್ದಾರೆ. ಅವರ ಸದ್ಯದ ಸ್ಥಿತಿ ಶೋಚನೀಯವಾಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗ ಅವರಿಗೆ ನೆರವಿನ ಹಸ್ತವನ್ನು ಇನ್ನೂ ಚಾಚಿಲ್ಲ. ಇಲ್ಲಿನ ಕುಟುಂಬಗಳನ್ನು ಸ್ಥಳಾಂತರ ಮಾಡುವ ಯೋಚನೆ ಇನ್ನೂ ಸರಕಾರಕ್ಕೆ ಬಂದಂತಿಲ್ಲ.
ಸ್ಥಳೀಯರು ಸರಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಮರವಂತೆ ಕಡಲಾಕಿನಾರೆಯ ಸಮೀಪದ ಸಂಪರ್ಕ ರಸ್ತೆ ಸಮದ್ರ ಪಾಲಾಗಿದೆ. ಸಾವಿರಾರು ತೆಂಗಿನ ಮರಗಳು, ಮೀನುಗಾರಿಕಾ ದೋಣಿಗಳು ಸಮುದ್ರ ಸೇರಿವೆ. ಯಾವ ಸಂದರ್ಭದಲ್ಲೂ ಮನೆಗಳಿಗೆ ನೀರು ನುಗ್ಗುವ ಸಾಧ್ಯತೆ ಇದೆ. ಮೀನುಗಾರರ ಕುಟುಂಬಕ್ಕೆ ಈಗ ತುರ್ತಾಗಿ ಬೇಕಾಗಿರುವುದು ಗಂಜಿ ಕೇಂದ್ರ ಸ್ಥಾಪನೆ ಮತ್ತು ಸ್ಥಳಾಂತರ ವ್ಯವಸ್ಥೆ. ಆದರೆ ಜನಪ್ರತಿನಿಧಿಗಳು ಮತ್ತು ಜಿಲ್ಲೆಯ ಅಧಿಕಾರಿ ವರ್ಗ ಇನ್ನೂ ಈ ವಿಚಾರದ ಬಗ್ಗೆ ನಿರ್ಧಾರ ಕೈಗೊಂಡಿಲ್ಲ.
ಭಾನುವಾರ ಬೆಳಗ್ಗೆ ಮರವಂತೆ ಕಡಲಕಿನಾರೆಗೆ ಭೇಟಿ ನೀಡಿದಾಗ ಕೆಲವು ಮನಕುಲಕುವ ದೃಶ್ಯಗಳು ಕಣ್ಣಿಗೆ ಬಿದ್ದವು. ಬಡ ಮೀನುಗಾರರ ಕುಟುಂಬ ರಕ್ಷಣೆಗಾಗಿ ಮನೆ ಗೋಡೆಗೆ ತಮ್ಮ ಬದುಕಿನ ಮುಖ್ಯ ಭಾಗವಾದ ದೋಣಿಗಳನ್ನು ಅಡ್ದಲಾಗಿ ಇಡುತ್ತಿರುವುದು ಕಂಡು ಬಂತು. ಹೆಣ್ಣು ಮಕ್ಕಳು ಕಣ್ಣೀರು ಹಾಕುತ್ತಿರುವ ದೃಶ್ಯ ನೋಡಲಾಗುತ್ತಿಲ್ಲ. ಅವರ ಕಟ್ಟಿಕೊಂಡ ಬದುಕು ಯಾವ ಕ್ಷಣದಲ್ಲಾದರೂ ಕೊಚ್ಚಿ ಹೋಗುವ ಭಯ ಅವರನ್ನು ಆವರಿಸಿದೆ. ಯಾವ ಸಂದರ್ಭದಲ್ಲಾದರೂ ಸಮುದ್ರದ ರಕ್ಕಸ ಅಲೆಗಳು ಕಡಲ ತಡಿಯ ಮನೆಗಳಿಗೆ ಅಪ್ಪಳಿಸುವ ಸಾಧ್ಯತೆ ಇದೆ.
“ನಮ್ಮ ರಕ್ಷಣೆಗೆ ಯಾರು ಇದುವರೆಗೂ ಯಾರೂ ಬಂದಿಲ್ಲ. ಎರಡು ವಾರದ ಹಿಂದೆ ಅಧಿಕಾರಿಗಳು ಭೇಟಿ ನೀಡಿ, ವಿಡಿಯೋ ಮಾಡಿಕೊಂಡು ಹೋಗಿದ್ದರು. ನಮಗೆ ಯಾವುದೇ ಸ್ಪಷ್ಟ ಭರವಸೆಯನ್ನೂ ನೀಡಿಲ್ಲ. ಸಂಪರ್ಕ ರಸ್ತೆ ನೀರು ಪಾಲಾದ ಮೇಲೆ ಎರಡು ಲೋಡು ಕಲ್ಲು ತಂದು ಹಾಕಿದ್ದಾರೆ. ಇದೇ ಕೆಲಸವನ್ನು ಮೂರು ದಿನದ ಹಿಂದೆ ಮಾಡಿದ್ದರೆ, ರಸ್ತೆಯಾದರೂ ಉಳಿತಿತ್ತು. ಇನ್ನಾದರೂ ಸರಕಾರ ಮತ್ತು ಅಧಿಕಾರಿ ವರ್ಗ ಇಲ್ಲಿಗೆ ಭೇಟಿ ನೀಡಿ ಸಮಸ್ಯೆ ಪರಿಹರಿಸಲಿ” ಎಂದು ಸ್ಥಳೀಯ ಮೀನುಗಾರ ಕುಟುಂಬದ ಮಹಿಳೆಯೊಬ್ಬರು ಅಳಲು ತೋಡಿಕೊಂಡರು.
ಸಮುದ್ರದ ಅಲೆಯ ರಭಸಕ್ಕೆ ಮನೆಗಳಿಗೆ ಉಪ್ಪು ನೀರಿನ ಸತತ ಸಿಂಪಡಣೆ ಆಗುತ್ತಿದ್ದು, ಮನೆಯಲ್ಲಿ ಕೂರಲು ಮಲಗಲೂ ಅಗದ ಸ್ಥಿತಿ ಇದೆ. ಮೀನುಗಾರರ ಕುಟುಂಬ ಕಡಲಕ್ಕೊರೆತ ತಡೆಗೆ ತಾನೆ ಮುಂದಾಗಿದೆ. ಮರಳಿನ ಚೀಲವನ್ನು ಜೋಡಿಸಿಡುವ ಕಾರ್ಯದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಿದ್ದಾರೆ. ಸ್ಥಳೀಯ ಮೀನುಗಾರರ ಮುಖ್ಯಸ್ಥರ ನೇತೃತ್ವದಲ್ಲಿ ಈ ಕಾರ್ಯನಡೆಯುತ್ತಿದೆ.
ನಮಗೆ ಬೇಕಾಗಿರುವುದು ತುರ್ತಾಗಿ ಬೇಕಾಗಿರುವವುದು ದೊಡ್ಡ ಬಂಡೆ ಕಲ್ಲುಗಳು. ಬಂಡೆ ಕಲ್ಲುಗಳಿಂದ ಮಾತ್ರ ಸಮುದ್ರ ಕೊರೆತವನ್ನುಸಲ್ಪ ಮಟ್ಟಿಗೆ ತಡೆಯಬಹುದು. ಸಚಿವರು ಮತ್ತು ಶಾಸಕರು ತಕ್ಷಣವೇ ಇದಕ್ಕೆ ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಸಿಎಂ ಪರಿವೇಕ್ಷಣೆ
ಇನ್ನೊಂದೆಡೆ ಇಡೀ ಪರಿಸ್ಥಿತಿಯನ್ನು ಪರಿವೇಕ್ಷಣೆ ಮಾಡುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕರಾವಳಿ ಭಾಗದ ಸಚಿವರನ್ನು ಸ್ಥಳಕ್ಕೆ ಹೋಗುವಂತೆ ಸೂಚಿಸಿದ್ದಾರೆ.
ಜತೆಗೆ, ಚಂಡಮಾರುತದಿಂದ ಹಾನಿಗೆ ಒಳಗಾಗಿರುವ ಪ್ರದೇಶಗಳಿಗೆ ತಕ್ಷಣವೇ ಭೇಟಿ ನೀಡಿ ಪರಿಹಾರ ಕಾಋಯಗಳನ್ನು ಕೈಗೊಳ್ಳುವಂತೆ ಸಂಬಂಧಿತ ಜಿಲ್ಲಾಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ. ಜತೆಗೆ, ತಕ್ಷಣವೇ ಸಂಕಷ್ಟದಲ್ಲಿರುವ ಜನರಿಗೆ ಪರಿಹಾರ ನೀಡುವಂತೆ ಆದೇಶಿಸಿದ್ದಾರೆ. ಭಾನುವಾರ ಬೆಳಗ್ಗೆ ಕರಾವಳಿಯ ಎಲ್ಲ ಜಿಲ್ಲಾಧಿಕಾರಿಗಳು, ಜಿಪಂ ಸಿಇಒಗಳು & ಪೊಲೀಸ್ ವರಿಷ್ಠಾಧಿಕಾರಿಗಳ ಜತೆ ಆನ್‌ಲೈನ್ ಸಭೆ ನಡೆಸಿದರು.