ರೆಡ್ ಝೊನ್‌ನಲ್ಲಿರುವ ಕೋಲಾರ ಜಿಲ್ಲೆಗೆ 20 ಆಮ್ಲಜನಕ ಸಾಂದ್ರಕ
ಕೆಜಿಎಫ್/ಬೆಂಗಳೂರು: ಪಾಳುಬಿದ್ದು ಅನೈತಿಕ ಚಟುವಟಿಕೆಗಳ ತಾಣವಾಗಿದ್ದ ಕೆಜಿಎಫ್‌ನ ಬಿಜಿಎಂಎಲ್ ಆಸ್ಪತ್ರೆಗೆ ಇದೀಗ ಪೂರ್ವವೈಭವ ಮರುಕಳಿಸಿದ್ದು, ಬಿಜೆಪಿ ಮತ್ತು ಆರ್‌ಎಸ್‌ಎಸ್ ಕಾರ್ಯಕರ್ತರ ಪರಿಶ್ರಮದಿಂದ ಜೀರ್ಣೋದ್ಧಾರವಾಗಿದೆ.
ಹೊಸರೂಪ ಪಡೆದು ನಳನಳಿಸುತ್ತಿರುವ ಈ ಆಸ್ಪತ್ರೆಯನ್ನು ಕೋವಿಡ್ ಕೇರ್ ಸೆಂಟರ್ ಆಗಿ ಬದಲಿಸಲಾಗಿದ್ದು, ಬುಧವಾರ ಕೇಂದ್ರದ ಸಂಸದೀಯ ವ್ಯವಹಾರ ಹಾಗೂ ಗಣಿ ಸಚಿವ ಪ್ರಹ್ಲಾದ ಜೋಶಿ ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಹ್ಲಾದ್ ಜೋಶಿ, ಶೀಘ್ರದಲ್ಲೇ ಈ ಆಸ್ಪತ್ರೆಗೆ 1,000 ಲೀಟರ್ ಆ್ಯಕ್ಸಿಜನ್ ಪ್ಲಾಂಟ್ ಮತ್ತು ಆಸ್ಪತ್ರೆಯನ್ನು ಮೇಲ್ದರ್ಜೆಗೆರಿಸಲು 20 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಪ್ರಕಟಿಸಿದರು.
ಕೋಲಾರ ರೆಡ್ ಝೊನ್‌ನಲ್ಲಿದೆ
ನಂತರ ಮಾತನಾಡಿದ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು, ಕೋವಿಡ್ ವಿಷಯದಲ್ಲಿ ಕೋಲಾರ ಜಿಲ್ಲೆಯು ಈಗ ರೆಡ್ ಝೋನ್‌ನಲ್ಲಿದೆ. ಸೋಂಕು ತಡೆಗೆ ಇನ್ನೂ ಹೆಚ್ಚಿನ ಕ್ರಮ ವಹಿಸಬೇಕಿದೆ. ಗ್ರಾಮೀಣ ಪ್ರದೇಶದಲ್ಲಿ ಸೋಂಕು ಹರಡದಂತೆ ಎಚ್ಚರಿಕೆ ವಹಿಸಬೇಕಿದೆ. ಸ್ಥಳೀಯ ಮಟ್ಟದಲ್ಲೇ ಟಾಸ್ಕ್‌ಪೋರ್ಸ್‌ಗಳನ್ನು ರಚನೆ ಮಾಡಿ ಮನೆಮನೆಗೂ ಹೋಗಿ ಸೋಂಕಿತರನ್ನು ಪತ್ತೆ ಮಾಡಬೇಕು. ಟೆಲಿ ಟ್ರಾಯಾಜಿಂಗ್ & ಭೌತಿಕ ಟ್ರಾಯಾಂಜಿಂಗ್ ಹೆಚ್ಚಿಸಬೇಕು. ಮನೆ ಮನೆಯನ್ನೂ ಸಮೀಕ್ಷೆ ಮಾಡಬೇಕು ಎಂದು ಸಭೆಯಲ್ಲಿ ಹಾಜರಿದ್ದ ಜಿಲ್ಲಾಧಿಕಾರಿಗಳಿಗೆ ಡಿಸಿಎಂ ಸೂಚಿಸಿದರು.
ಸೋಂಕಿತರ ಸಂಪರ್ಕಿತರನ್ನು ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ಪತ್ತೆ ಹಚ್ಚಲಾಗುತ್ತಿದೆ. ಆದರೆ, ಕೋವಿಡ್ ಪರೀಕ್ಷೆ ರಿಸಲ್ಟ್ ಕೊಡಲು ಎರಡು ದಿನಕ್ಕೂ ಹೆಚ್ಚಿನ ಸಮಯ ಆಗುತ್ತಿದೆ. 24 ಗಂಟೆಯೊಳಗೆ ಅಥವಾ ಅದಕ್ಕೂ ಮುನ್ನವೇ ರಿಸಲ್ಟ್ ಕೊಡುವ ವ್ಯವಸ್ಥೆ ಮಾಡಿ. ಇನ್ನು ಮುಂದೆ ಗ್ರಾಮೀಣ ಪ್ರದೇಶದಲ್ಲಿ ಯಾರನ್ನೂ ಹೋಮ್ ಐಸೋಲೇಶನ್ ಮಾಡಬೇಡಿ. ಎಲ್ಲರನ್ನು ಕಡ್ಡಾಯವಾಗಿ ಕೋವಿಡ್ ಕೇರ್‌ಗೆ ಶಿಫ್ಟ್ ಮಾಡಿ ಚಿಕಿತ್ಸೆ ಕೊಡಿ ಎಂದು ಡೀಸಿಗೆ ಡಿಸಿಎಂ ಸೂಚಿಸಿದರು.
ಕೋಲಾರಕ್ಕೆ 20 ಆಮ್ಲಜನಕ ಸಾಂದ್ರಕ
ಖಾಸಗಿ ಕಂಪನಿಯೊಂದು ರಾಜ್ಯಕ್ಕೆ ಉಚಿತವಾಗಿ 10 ಕೆ.ಎಲ್. ಸಾಮರ್ಥ್ಯದ 20 ಆಮ್ಲಜನಕ ಸಾಂದ್ರಕಗಳನ್ನು ನೀಡಿದ್ದು, ಇವುಗಳಲ್ಲಿ ಕೋಲಾರ ಜಿಲ್ಲೆಗೆ 20 ಕೊಡಲಾಗುತ್ತಿದೆ. ಇವತ್ತೇ ಕಳಿಸುವಂತೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ ಎಂದು ಈ ಇದೇ ವೇಳೆ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಕೋಲಾರ ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆ ವಿಚಾರದಲ್ಲಿ ಜಿಲ್ಲಾಸ್ಪತ್ರೆಯಷ್ಟೇ ಆಸರೆಯಾಗಿದೆ. ದೇವರಾಜ ಅರಸು ಮೆಡಿಕಲ್ ಕಾಲೇಜು ಹಾಗೂ ಕೆಜಿಎಫ್‌ನ ಸಂಭ್ರಮ್ ಕಾಲೇಜುಗಳಿಂದ ಸಹಕಾರ ಸಿಗುತ್ತಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಗಳು ಬಿಗಿ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.
ಸಂಸದ ಮುನಿಸ್ವಾಮಿ ನೇತೃತ್ವದಲ್ಲಿ ಈ ಆಸ್ಪತ್ರೆ ಜೀರ್ಣೋದ್ಧಾರವಾಗಿದ್ದು, ಈಗ ಜನರ ಸೇವಗೆ ಸಜ್ಜಾಗಿದೆ. ಕೆಜಿಎಫ್ ಜನರಿಗೆ ಹೆಚ್ಚು ಪ್ರಯೋಜನವಾಗಲಿದೆ. ಇಲ್ಲಿಗೆ ಅಗತ್ಯವಾದ ಎಲ್ಲ ವೈದ್ಯಕೀಯ ಸಾಮಗ್ರಿ ಸರಂಜಾಮುಗಳನ್ನು ಕೊಡುತ್ತೇವೆ. ಸಕಾಲಕ್ಕೆ ಎಲ್ಲ ಔಷಧಗಳನ್ನೂ ಪೂರೈಸುತ್ತೇವೆ ಎಂದು ಡಾ.ಸುಧಾಕರ್ ಭರವಸೆ ನೀಡಿದರು.
ಜಿಲ್ಲಾಧಿಕಾರಿ ಆರ್.ಸೆಲ್ವಮಣಿ, ಜಿಪಂ ಸಿಇಒ ನಾಗರಾಜ್, ಉಪ ವಿಭಾಗಾಧಿಕಾರಿ ಸೋಮಶೇಖರ್, ತಹಶಿಲ್ದಾರ್ ಸುಜಾತಾ, ಡಿ.ವೈ.ಎಸ್.ಪಿ ಉಮೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ. ವೇಣುಗೋಪಾಲ್, ಜಿಲ್ಲಾ ವಿಭಾಗ ಪ್ರಭಾರಿ ಕೇಶವ ಪ್ರಸಾದ್, ಕೋಲಾರ ಆರ್.ಎಸ್.ಎಸ್ ಹಿರಿಯ ಮುಖಂಡರಾದ ಶಂಕರ್ ನಾಯಕ್, ಕೆಜಿಎಫ್ ನಗರ ಅಧ್ಯಕ್ಷ ಕಮಲ್ ನಾಥ್ ಮುಂತಾದವರು ಉಪಸ್ಥಿತರಿದ್ದರು.