Lead Photo courtesy: Wikipedia
ಗುಣಮುಖರಾದ ಸೋಂಕಿತರ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಡೀಸಿ
ಚಿಕ್ಕಬಳ್ಳಾಪುರ: ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪಾಸಿಟಿವಿಟಿ ದರ ಕಡಿಮೆ ಇದೆ. ಆದರೂ ಕೂಡ ಶೇಕಡ 20ರ ಆಸುಪಾಸಿನಲ್ಲಿ ಇರುವುದು ಒಳ್ಳೆಯ ಬೆಳವಣಿಗೆಯಲ್ಲ. ಈ ಪಾಸಿಟಿವಿಟಿ ದರವನ್ನು ಶೇ.5ಕ್ಕೆ ತಗ್ಗಿಸಲು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು.
ಬ್ಲ್ಯಾಕ್ ಫಂಗಸ್‌ಗೆ ಹೆದರಬೇಕಿಲ್ಲ. ಜಿಲ್ಲಾಸ್ಪತ್ರೆಯಲ್ಲಿ ಒಂದು ವಿಶೇಷ ವಾರ್ಡ್ ವ್ಯವಸ್ಥೆ ಮಾಡಲಾಗಿದೆ.
ಈಗಾಗಲೇ ಗುಣಮುಖರಾದ ಸೋಂಕಿತರ ವಿಡಿಯೋಗಳನ್ನು ಮಾಡಿ. ಅವುಗಳನ್ನು ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿ..
ಸದ್ಯಕ್ಕೆ ಕಂಪ್ಲೀಟ್ ಲಾಕ್‌ಡೌನ್‌ನಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಪರಿಸ್ಥಿತಿಯ ಬಗ್ಗೆ ಚಿಂತಾಮಣಿ ತಾಲೂಕು ಮಟ್ಟದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಆರ್.ಲತಾ ಅವರು ಹೇಳಿದ ಮಾತುಗಳಿವು.
ಚಿಂತಾಮಣಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕೊರೊನಾ ನಿಯಂತ್ರಣ ಕುರಿತ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಲ್ಗೊಂಡು ಮಾತನಾಡಿದ ಅವರು, ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳನ್ನು ಸಂಪೂರ್ಣವಾಗಿ ನಿಯಂತ್ರಿಸಬೇಕಾದರೆ ಟಾಸ್ಕ್ʼಫೋರ್ಸ್ ಸಮಿತಿಗಳು ಚುರುಕಾಗಿ ಕೆಲಸ ಮಾಡಬೇಕು. ಅಗತ್ಯವಿರುವ ಸೋಂಕಿತರಿಗೆ ತ್ವರಿತವಾಗಿ ಕೋವಿಡ್ ಆರೈಕೆ ಕೇಂದ್ರಗಳಿಗೆ ಸೇರಿಸಬೇಕು. ಆರೈಕೆ ಕೇಂದ್ರಗಳಲ್ಲಿ ಗುಣಮಟ್ಟದ ಆಹಾರ ಹಾಗೂ ವೈದ್ಯಕೀಯ ಸೇವೆ ಸೇರಿದಂತೆ ಸಕಲ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಡೀಸಿ ಸೂಚಿಸಿದರು.
ಅಲ್ಲದೆ, ಈಗಾಗಲೇ ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದವರ ಅನುಭವಗಳನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಿಸಬೇಕು. ಸೋಂಕಿತರು ಇಚ್ಛೆಪಟ್ಟು ಆರೈಕೆ ಕೇಂದ್ರಗಳಿಗೆ ಬರುವಂತಾಗಬೇಕು. ಕೋವಿಡ್ ರೋಗಿಗಳಿಗೆ ನೀಡುವ ಔಷಧಿಗಳನ್ನು ನಿಯಮಿತವಾಗಿ ಖರೀದಿಸಿ ಕನಿಷ್ಠ 20 ದಿನಗಳಿಗಾಗುವಷ್ಟು ಔಷಧ ದಾಸ್ತಾನಿನ ಸಂಗ್ರಹವನ್ನು ಇಟ್ಟುಕೊಂಡಿರಬೇಕು. ಆಮ್ಲಜನಕ ಸರಬರಾಜಿನಲ್ಲಿ ಯಾವುದೇ ವ್ಯತ್ಯಯವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಔಷಧ, ಆಮ್ಲಜನಕ ಸೇರಿ ಯಾವುದೇ ರೀತಿಯ ಕೊರತೆಗಳು ಉಂಟಾಗದಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕೋವಿಡ್ ನೋಡೆಲ್ ಅಧಿಕಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದು ಅವರು ಹೇಳಿದರು.
ಖಾಸಗಿ ಆಸ್ಪತ್ರೆಗಳ ಮೇಲೆ ನಿಗಾ
ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳನ್ನು ದಾಖಲು ಮಾಡಿಕೊಂಡು ಕಾಟಾಚಾರಕ್ಕೆ ಚಿಕಿತ್ಸೆ ನೀಡಿ ರೋಗಿಯು ತೀವ್ರ ಅಸ್ವಸ್ಥನಾಗಿ ಆಕ್ಸಿಜನ್ ಲೆವೆಲ್ ಕಡಿಮೆಯಾಗಿ ಆರೋಗ್ಯ ತೀರಾ ಹದಗೆಟ್ಟಾಗ ಐಸಿಯು ಬೆಡ್ ಕೊಡಿ ಎಂದು ಸರಕಾರಿ ಕೋವಿಡ್ ಆಸ್ಪತ್ರೆಗೆ ಬಂದರೆ ಗುಣಪಡಿಸುವುದು ಕಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಪ್ರತೀ ಖಾಸಗಿ ಕೋವಿಡ್ ಆಸ್ಪತ್ರೆಗೆ ನೇಮಕಗೊಂಡಿರುವ ನೋಡೆಲ್ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಖಾಸಗಿ ಆಸ್ಪತ್ರೆಗಳ ಆರೋಗ್ಯ ಸೇವೆಗಳ ಕಾರ್ಯವೈಖರಿಯನ್ನು ಪ್ರತಿನಿತ್ಯ ಪರಿಶೀಲಿಸಿ ಮೇಲಧಿಕಾರಿಗಳಿಗೆ ತಿಳಿಸಬೇಕು. ಈ ಆಸ್ಪತ್ರೆಗಳಲ್ಲಿ ರೋಗಿ ದಾಖಲಾದ ಆರಂಭದ ದಿನದಿಂದ ಗುಣಮುಖರಾಗುವವರೆಗೆ ಸಮರ್ಪಕ ಆರೋಗ್ಯ ಸೇವೆ ಒದಗಿಸುವಂತೆ ನೋಡಿಕೊಳ್ಳಬೇಕು. ನಿರ್ಲಕ್ಷ ವಹಿಸುವ ಆಸ್ಪತ್ರೆಗಳ ಮೇಲೆ ಮುಲಾಜಿಲ್ಲದೆ ಶಿಸ್ತು ಕ್ರಮ ಜರುಗಿಸುವಂತೆ ತಾಲೂಕು ಆರೋಗ್ಯ ಅಧಿಕಾರಿಗಳಿಗೆ ಡೀಸಿ ತಾಕೀತು ಮಾಡಿದರು.
ಬ್ಲ್ಯಾಕ್ ಫಂಗಸ್ ಭಯ ಬೇಡ
ಮೇ 19ರಂದು ಚಿಂತಾಮಣಿ ಆಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್ ರೋಗಲಕ್ಷಣ ಕಂಡುಬಂದ ಇಬ್ಬರು ರೋಗಿಗಳನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಸೇರಿಸಲಾಗಿದೆ. ಪ್ರಸ್ತುತ ನಮ್ಮಲ್ಲಿ ಯಾವುದೇ ಬ್ಲ್ಯಾಕ್ ಫಂಗಸ್ ರೋಗ ಪ್ರಕರಣಗಳು ಇರುವುದಿಲ್ಲ. ಆದರೂ ಕೂಡ ಮುನ್ನೆಚ್ಚರಿಕೆ ಕ್ರಮವಾಗಿ ಈ ರೋಗಿಗಳ ವೈದ್ಯಕೀಯ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಒಂದು ವಿಶೇಷ ವಾರ್ಡ್ ಮಾಡಲಾಗಿದೆ ಅಲ್ಲದೆ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಕಂಡು ಬಂದಲ್ಲಿ ಏನೆಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂಬ ಬಗ್ಗೆ ಆರೋಗ್ಯ ತಜ್ಞರ ಜತೆ ಚರ್ಚಿಸಿ ಅಗತ್ಯ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜನರು ಭಯಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸಭೆಯ ನಂತರ ಚಿಂತಾಮಣಿ ತಾಲ್ಲೂಕಿನ ಕೆ.ರಾಗುಟ್ಟಹಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ಮಾದರಿ ವಸತಿ ಶಾಲೆಯಲ್ಲಿ ತೆರೆದಿರುವ ಕೋವಿಡ್ ಆರೈಕೆ ಕೇಂದ್ರಕ್ಕೆ ಭೇಟಿ ಕೊಟ್ಟು ಸೋಂಕಿತರ ಸ್ಥಿತಿಗತಿಯನ್ನು ಪರಿಶೀಲಿಸಿದರು. ಆ ನಂತರ ತಾಲೂಕಿನ ಮನಗನಹಳ್ಳಿ ಹಾಗೂ ಕೈವಾರ ಗ್ರಾಮಗಳ ಟಾಸ್ಕ್ʼಫೋರ್ಸ್ ಸಮಿತಿಗಳ ಕಾರ್ಯವೈಖರಿಯನ್ನು ಗಮನಿಸಿದರು ಹಾಗೂ ಹೋಮ್ ಐಸೋಲೇಷನ್ʼನಲ್ಲಿರುವ ಸೋಂಕಿತರ ಆರೋಗ್ಯವನ್ನು ಕೂಡ ವಿಚಾರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್, ಉಪ ವಿಭಾಗಾಧಿಕಾರಿ ರಘುನಂದನ್, ತಹಸಿಲ್ದಾರ್ ಹನುಮಂತರಾಯಪ್ಪ, ತಾಲೂಕು ಆರೋಗ್ಯಾಧಿಕಾರಿ ಸ್ವಾತಿ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಮಂಜುನಾಥ್, ತಾಲೂಕು ಕೋವಿಡ್ ನೋಡಲ್ ಅಧಿಕಾರಿ ಪ್ರಸಾದ್ ಹಾಗೂ ಆರೋಗ್ಯ ಇಲಾಖೆಯ ಆರೋಗ್ಯಾಧಿಕಾರಿಗಳು, ಗ್ರಾಮಪಂಚಾಯಿತಿಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಇದ್ದರು.