Movie Review
ಒಂದೇ ಗುಕ್ಕಿನಲ್ಲಿ ನೋಡಿಸಿಕೊಳ್ಳುವ ಕರ್ಣನ್ ಸಿನಿಮಾ ಕುರಿತು ರಾಘವನ್ ಚಕ್ರವರ್ತಿ ಅವರು ಬರೆದಿರುವ ವಿಮರ್ಶೆಗೂ ಅಂಥದ್ದೇ ಶಕ್ತಿ ಇದೆ. ಆರಂಭದಿಂದ ಅಂತ್ಯದವರೆಗೂ ಓದಿಸಿಕೊಳ್ಳುತ್ತಲೇ ಇಡೀ ಚಿತ್ರವನ್ನು ಕಣ್ಪದರೆಯ ಮೇಲೆ ಅರ್ಥಪೂರ್ಣವಾಗಿ ತೆರೆದಿಡುವ ಪ್ರತೀ ಅಕ್ಷರವೂ ಸಿನಿಮಾದಷ್ಟೇ ಕಾಡುತ್ತದೆ. ಸಿಕೆನ್ಯೂಸ್ ನೌ ಓದುಗರಗಾಗಿ ಈ ವಿಮರ್ಶೆ..
by Raghavan Chakravarthy
There is only one thing which gathers people into seditious commotion..and that is oppression..
ಸುಮಾರು ೧೬ನೇ ಶತಮಾನದಲ್ಲಿ ಬ್ರಿಟೀಶ್ ತತ್ತ್ವಜ್ಞಾನಿ ಜಾನ್ ಲಾಕ್ ಹೇಳಿದ ಈ ಅರ್ಥಪೂರ್ಣ ಮಾತುಗಳು ಪ್ರಸ್ತುತವೆನಿಸುತ್ತಿರುವುದು ವರ್ತಮಾನದ ಅಚ್ಚರಿ ಮಾತ್ರವಲ್ಲದೇ ಆತಂಕ ಕೂಡ. ’ಪರಿಯೇರುಮ್ ಪೆರುಮಾಳ್’ ಚಿತ್ರದ ಮೂಲಕ ಇಡೀ ಚಿತ್ರರಂಗದ ಗಮನ ಸೆಳೆದ ಮಾರಿ ಸೆಲ್ವರಾಜ್, ಇಂತಹ ಆತಂಕವೊಂದಕ್ಕೆ ಸಿನಿಮಾ ರೂಪ ಕೊಟ್ಟಿದ್ದಾರೆ. ಲೇಖನಿಯಷ್ಟೇ ರೂಪಕಗಳಿಂದಲೂ ಕಥೆ ಬರೆದಿದ್ದಾರೆ. ಆವರ ಕರ್ತೃತ್ವ ಶಕ್ತಿಯ ಅನಾವರಣವಾಗಿರುವುದು, ’ಕರ್ಣನ್’ ನನ್ನು ಅವರು ಹೇಳುತ್ತಾ ಹೋಗುವ ಪರಿಯಲ್ಲಿ. ಇಡೀ ತಂಡವನ್ನು (ಧನುಶ್, ರಜೀಶಾ, ಯೋಗಿಬಾಬು, ಲಾಲ್, ಷಣ್ಮುಗರಾಜನ್ ಹೊರತುಪಡಿಸಿದರೆ ಬಹುತೇಕ ಉಳಿದವರೆಲ್ಲಾ ಜನಪ್ರಿಯರಲ್ಲದವರು, ಇನ್ನಷ್ಟು ಕಲಾವಿದರು ಸ್ಥಳೀಯ ಗ್ರಾಮವಾಸಿಗಳೇ..) ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಸಿರುವುದರಲ್ಲಿ. ತಿರುನೆಲ್ವೇಲಿ-ತೂತ್ತುಕುಡಿಯ ಅಪ್ಪಟ ಮಣ್ಣಿನ ಆಡುಭಾಷೆ (dialect)ಯನ್ನೇ ಬಳಸಿರುವುದರಲ್ಲಿ. ಕೋಳಿ-ಹಂದಿ-ಕತ್ತೆ-ಕುದುರೆಗಳನ್ನು ಕಥಾ ನಿರೂಪಣೆಯಲ್ಲಿ ಬಳಸಿಕೊಂಡಿರುವ ವಿಧಾನದಲ್ಲಿ. ಜನಪದದಿಂದ ಹೆಕ್ಕಿದ ಸಂಕೇತಗಳನ್ನು ಬೆಸೆದಿರುವ ಬಗೆ ಪ್ರಶಂಸಾರ್ಹವಾಗಿದೆ.
’ಪರಿಯೇರುಮ್ ಪೆರುಮಾಳ್’ ನ ನಾಯಕನಂತೆ ’ಸಹಿಸಿಕೊಂಡಿರುವ’ ನಾಯಕ ಇಲ್ಲಿ ಕಾಣಸಿಗಲಾರ. ಇಲ್ಲಿನ ನಾಯಕ ಸೆಟೆದು ನಿಲ್ಲುವಾತ. ಭಯ-ಭಕ್ತಿಗಳಿಂದ ಮುಕ್ತನಾದವ. ಇದು ಮಾರಿ ಸೆಲ್ವರಾಜ್ ’ಪರಿಯನ್’ ನಿಂದ ’ಕರ್ಣನ್’ ಗೆ ಪಲ್ಲಟವಾದ ಸಂಕ್ರಮಣ ಘಟ್ಟವೂ ಆಗಿದೆ. ’ಕರ್ಣನ್’ ನ ಕಥಾಹಂದರದ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಗಳಾಗಿವೆ. ಹಾಗಾಗಿ ಅದರ ಕಥೆ ಇಲ್ಲಿ ಬರೆಯುವ ಅಗತ್ಯವಿಲ್ಲ. ಮೂರ್ಛೆ (fits)ಬಂದು ಅನಾಥಳಾಗಿ ನಡುರಸ್ತೆಯಲ್ಲಿ ಮಲಗಿರುವ ಬಾಲಕಿಯ ರೂಪಕವೇ ಚಿತ್ರಕ್ಕೆ ಮಾರ್ಮಿಕ ಆರಂಭವೊದಗಿಸಿದೆ. ಆಕೆಯ ಸುತ್ತಲೂ ಸಂಚರಿಸುವ ವಾಹನಗಳು… ಯಾರಿಗೂ ಇಳಿದು ನೋಡುವ ಇರಾದೆಯಿಲ್ಲ. ಅವಳ ಪಕ್ಕವೇ ಬಾಗುತ್ತಾ ಕೆಲವು ವಾಹನಗಳು ಸಾಗಿದರೆ, ಒಂದೆರೆಡು ಅವಳ ಮೇಲೆಯೇ ಹೋಗಿಬಿಡುತ್ತವೆ. ಸರ್ಕಾರೀ ದಾಖಲೆಗಳಲ್ಲಿ ಹತ್ತಾರು ಸಾವುಗಳಂತೆ ಇದೂ ಒಂದಷ್ಟೇ. ಆದರೆ ಆಕೆಯ ಕುಟುಂಬದ ಮೇಲೆ ಆಗುವ ಆಘಾತವನ್ನು ದಾಖಲೆಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಬಿದ್ದ ಹುಡುಗಿಯನ್ನು ಕಡೆಗಣಿಸಿ ಸಾಗುವ ವಾಹನಗಳು ನಮ್ಮ ಬೇಜವಾಬ್ದಾರಿಯ, ಸಂವೇದನೆಗಳಿಲ್ಲದ ವ್ಯವಸ್ಥೆಯ ಪ್ರತಿರೂಪದಂತೆ ಕಾಣುತ್ತವೆ. ಬದುಕು-ಸಾವುಗಳೆರೆಡೂ ಘನತೆ ತರದಾದಾಗ ’ದೈವ’ ಆ ಘನತೆ ತರುತ್ತದೆ ಎಂಬ ಮಾತಿಗೆ ಪೂರಕವಾಗುವಂತೆ, ಆಕೆ ’ದೇವಿ’ಯಾಗುತ್ತಾಳೆ (ಕಾಟ್ಟು ಪೇಚಿ)…ಇಡೀ ಚಿತ್ರ ಆವರಿಸಿಕೊಳ್ಳುತ್ತಾಳೆ… ಆರಂಭದ ಈ ಮಾರ್ಮಿಕತೆ ಸ್ಥಾಯಿ (consistent) ಯಾಗಿ ಚಿತ್ರ ಪೂರಾ ಆವರಿಸಿಕೊಳ್ಳುವುದರಲ್ಲಿ ಸೆಲ್ವರಾಜ್ ಜಾಣ್ಮೆಯಿದೆ. ಚಿತ್ರದ ಆರಂಭದಲ್ಲಿ ಬೆಂಕಿಯಲ್ಲಿ ಮೂಡುವ ಕರ್ಣನ್ʼನ ಚಿತ್ರ, ಅವನ ವ್ಯಕ್ತಿತ್ವ-ಹಿನ್ನಲೆಗಳನ್ನು ಸೂಚ್ಯವಾಗಿ ಬಿಚ್ಚಿಡುತ್ತದೆ.
ಹದ್ದೊಂದು ಕೋಳೀಮರಿಗಳನ್ನು ಹೊತ್ತೋಯ್ದಾಗ, ಓಡೋಡಿ ಹದ್ದಿನ ಹಿಂದೆ ಹೋಗುವ ಅಜ್ಜಿಯನ್ನು ಖಂಡಿಸಿ, ’ಹದ್ದುಗಳು ಕರುಣೆ ತೋರಬೇಕು ಎಂದು ಕೂಗಿಕೊಳ್ಳುವುದರಲ್ಲಿ ಅರ್ಥವಿಲ್ಲ’ ಎನ್ನುವ ಕರ್ಣನಿಗೆ ತನ್ನ ಮುಂದಿನ ದಾರಿಯ ಬಗ್ಗೆ ಸ್ಪಷ್ಟತೆಯಿದೆ. ರುಂಡವಿಲ್ಲದ ಹಲವು ಆಕೃತಿಗಳು ಅಸ್ಮಿತೆಯಿಲ್ಲದ ವ್ಯಕ್ತಿತ್ವವೊಂದಕ್ಕೆ ರೂಪಕಗಳಾಗಿವೆ. ಸತ್ತ ಹುಡುಗಿ (ಕರ್ಣನ್ʼನ ತಂಗಿ)ಯ ನಿಜರೂಪ ಮರೆಮಾಚಿ, ಪೊಡಿಯಾಂಕುಲಮ್ʼನ ಗ್ರಾಮ ದೇವತೆಯ ಮುಖವೇ ಅವಳದಾಗುತ್ತದೆ. ಹಾಡಿನ ಚಿತ್ರಣವೊಂದರಲ್ಲಿ ಕರ್ಣನ್ ತಂಗಿ ಮಾತ್ರವಲ್ಲದೇ ಇನ್ನೂ ಹಲವು ಬಾಲಕಿಯರದೂ ದೇವಿಯ ಮುಖವೇ… ಕಿರುಕುಳ, ತಾತ್ಸಾರಕ್ಕೊಳಗಾದ, ತುಳಿತಕ್ಕೊಳಪಟ್ಟ ಅಥವಾ ಗತಿಸಿದ ಜೀವಗಳಿಗೆಲ್ಲಾ ದೈವಿಕ ’ಅಸ್ಮಿತೆ’ ಕೊಟ್ಟು, ಅವರ ನೋವು-ಹತಾಶೆಗಳನ್ನು ಜೀವಂತವಾಗಿಡುವ ಇಂತಹ ಪ್ರತಿಮಾ ಸೃಷ್ಟಿ, ನಿರ್ದೇಶಕರ ಪ್ರತಿಭೆಗೆ ಮಾತ್ರವಲ್ಲದೇ, ಅವರಲ್ಲಿರುವ ಅಂತಃಕರಣಕ್ಕೂ ಸಾಕ್ಷಿಯಾಗುತ್ತವೆ.
ಪೋಡಿಯಾಂಕುಲಮ್ ಕುಗ್ರಾಮವಾಸಿಯೊಬ್ಬ ಆನೆಯ ಮೇಲೆ ಬರುವ ’ಉದ್ಧಟತನ’ ವನ್ನು ಸಹಿಸದ ಶೋಷಕ ಜಾತಿವಂತರು, ಆ ಗ್ರಾಮದವರೆಲ್ಲಾ ಶೋಷಿತರಾಗಿಯೇ ಉಳಿಯಬೇಕೆಂದು ಆಶಿಸುತ್ತಾರೆ. ಪೊಡಿಯಾಂಕುಲಮ್’ನ ಗ್ರಾಮಸ್ಥರ ಚರ್ಚೆ-ಪಂಚಾಯಿತಿಗಳೆಲ್ಲಾ ಪ್ರಕೃತಿಯ ಮಡಿಲಲ್ಲಿ ಅವರ ಸಾಕುಪ್ರಾಣಿಗಳೆಲ್ಲದರ ಸಮ್ಮುಖದಲ್ಲಿ ನಡೆದರೆ, ಶೋಷಕರ ಮಾತುಕತೆಗಳೆಲ್ಲಾ ಅವರ ಗ್ರಾಮದ ದೊಡ್ಡ ಬಂಗಲೆಯಂತಹ ಮನೆಗಳಲ್ಲಿ ನಡೆಯುತ್ತದೆ. ಪೊಡಿಯಾಂಕುಲಮ್ ಜನರಿಗೆ ಬೇಕಿರುವುದು ನೈಸರ್ಗಿಕ ನ್ಯಾಯ ಎಂಬುದನ್ನು ಇದು ಪ್ರತಿಪಾದಿಸುತ್ತದೆ. ಹೀಗೆಯೇ ಜಾತಿ-ವರ್ಗ ತಾರತಮ್ಯವನ್ನು ಸಂಕೇತಿಸುವ ಹಲವು ದೃಶ್ಯಗಳಿವೆ.
ಸತ್ತ ಮಗಳು ದೈವ ರೂಪದಲ್ಲಿ ತಂದೆಯ ಕನಸಲ್ಲಿ ಬಂದು ಈ ಮನೆಯಲ್ಲಿ ನಿಧಿ ಇದೆಯೆಂದು ಹೇಳಿದಾಗ, ಆವಾಹನೆಗೊಳಗಾದ ತಂದೆ ಹಾಗೂ ಮನೆಯವರ ಬಲವಂತಕ್ಕೆ, ಇಷ್ಟವಿಲ್ಲದಿದ್ದರೂ ಕರ್ಣ ಮನೆಯ ಹಜಾರ ಅಗೆಯುತ್ತಾನೆ. ಸತ್ತ ತಂಗಿ ಡಬ್ಬಿಯೊಂದರಲ್ಲಿ ಕೂಡಿಟ್ಟ ಸ್ವಲ್ಪಹಣ ಸಿಗುತ್ತದೆ. ತಮ್ಮ ಇನ್ನಿಲ್ಲವಾದ ಮಗಳನ್ನು ನೆನೆದು ತಂದೆ-ತಾಯಿ ಮತ್ತಷ್ಟು ಭಾವುಕರಾಗುತ್ತಾರೆ. ತಮಗೆ ಬೇಕಾದ್ದೆಲ್ಲವೂ ಇದೆ. ಅದರೆ ನೆಲದಾಳದಲ್ಲಿ ಹುದುಗಿ ಹೋಗಿದೆ. ಅದನ್ನು ಅಗೆದು ಹೆಕ್ಕಿ ತೆಗೆಯಬೇಕು ಎಂಬ ಸೂಚನೆ ಗ್ರಹಿಸಿದ ಕರ್ಣನ ವರ್ತನೆಯಲ್ಲೂ ಬದಲಾವಣೆಗಳಾಗುತ್ತವೆ.
ವಿಚಾರಣೆಗೆ ಬಂದಾಗ ಕುಳಿಕೊಳ್ಳಲು ಕುರ್ಚಿ ಕೊಡಲಿಲ್ಲವೆಂದು ಉರಿದುಬೀಳುವ ಪೊಲೀಸ್ ಅಧಿಕಾರಿ, ಪರಿಸ್ಥಿತಿ ಉದ್ವಿಗ್ನಗೊಂಡಾಗ ’ಏನು ಬೇಕಾದ್ರೂ ಮಾಡ್ಕೊಳಿ…ಯಾರ ಜೀವವೂ ಹೋಗಬಾರದು’ ಎಂದು ಉಪದೇಶಿಸಿ, ಸ್ಥಳದಿಂದ ಕಂಬಿಕೀಳುವ ಬೇಜವಾಬ್ದಾರಿಯ ಕಲೆಕ್ಟರ್, ಶಾಪಗ್ರಸ್ಥ ಪ್ರಭುತ್ವದ ಎರಡು ಭಿನ್ನ ಮುಖಗಳನ್ನು ತೋರುತ್ತಾರೆ. ವಿಚಾರಣೆಗೆ ಬಂದ ಗ್ರಾಮಸ್ಥರನ್ನು ಗಂಟೆಗಟ್ಟಲೇ ನಿಂತುಕೊಳ್ಳುವಂತೆ ಮಾಡುವ, ತಲೆಗೆ ಸುತ್ತಿದ ಮುಂಡಾಸು ಕಳಚಲಿಲ್ಲವೆಂದು ಹೀನಾಮಾನವಾಗಿ ದೌರ್ಜನ್ಯವೆಸಗುವ ಪೊಲೀಸ್ ಅಧಿಕಾರಿ, ಈ ಶೋಷಿತರಿಗೆ ಮಹಾಭಾರತದ ಪಾತ್ರಗಳ ಹೆಸರಿರುವುದನ್ನು ಕಂಡು ರೊಚ್ಚಿಗೇಳುತ್ತಾನೆ. ಪ್ರಭುತ್ವ, ಜಾತಿ-ಪ್ರತಿಷ್ಟೆಗಳು ತಂದುಕೊಡುವ ಠೇಂಕಾರ, ಅಧಿಕಾರಿಯೊಬ್ಬನನ್ನು ಇಷ್ಟೆಲ್ಲಾ ಅಮಾನವೀಯಗೊಳಿಸಬೇಕೆ ಎಂಬ ಪ್ರಶ್ನೆ ಕಾಡುತ್ತದೆ.
ಎದ್ದು ಕಾಣುವ ಅಂಶವೆಂದರೆ, ಯಾವುದೇ ದೃಶ್ಯ ಚಿತ್ರಣದಲ್ಲಾಗಲೀ, ಗಣೇಶ ಅಥವಾ ಆಂಜನೇಯನ ಮುಖವಾಡ ಧರಿಸಿದವರಿಲ್ಲ. ’ಊರ ಮುಂದೆ ಆಂಜನೇಯನ ಗುಡಿ’ ಎಂಬ ನುಡಿಗಟ್ಟಿಗೆ ಸಡ್ಡು ಹೊಡೆಯುವಂತೆ, ಇಡೀ ಊರಲ್ಲಿ ಒಂದು ಆಂಜನೇಯನ ಗುಡಿಯೂ ಇಲ್ಲ… ತಲೆಯಿಲ್ಲದ ಆಕೃತಿಯೊಂದಕ್ಕೆ ಊರ ಮಂದಿಯೆಲ್ಲಾ ನಡೆದುಕೊಳ್ಳುತ್ತಾರೆ. ಕರ್ಣನ ಕೈಗೆ ಮಚ್ಚು ಕೊಡದೇ ಕತ್ತಿ ಕೊಟ್ಟಿರುವುದೂ ಗಮನಾರ್ಹ. ಈ ಕತ್ತಿ ಸದಾ ಕರ್ಣನ ಕೈಯಲ್ಲಿರುವುದಿಲ್ಲ. ಚಿತ್ರದ ಕೊನೆಗೆ ಕೈಯಲ್ಲಿ ಕತ್ತಿ ಹಿರಿದು ಕಪ್ಪು ಕುದುರೆಯೇರಿ ಯೋಧನೊಬ್ಬ ರಣರಂಗಕ್ಕೆ ಆಗಮಿಸುವಂತೆ ದೌರ್ಜನ್ಯದ ವಿರುದ್ಧ ಹೋರಾಡಲು ಕರ್ಣನ್ ಬರುವ ದೃಶ್ಯವೂ ಸಾಂಕೇತಿಕ.
ಎಲ್ಲಾ ಪಾತ್ರಧಾರಿಗಳೂ ತಮ್ಮ ಪಾತ್ರವನ್ನು ಜೀವಿಸಿದ್ದಾರೆ. ಲಾಲ್ ಮತ್ತು ರಜೀಶಾ ಅಭಿನಯ ಎದ್ದು ನಿಲ್ಲುತ್ತದೆ. ಹಲವು ದೃಶ್ಯಗಳಲ್ಲಿ ಬಂದುಹೋಗುವ ಅಜ್ಜಿಯಂದಿರು, ಮನಸ್ಸು ಕಲಕುತ್ತಾರೆ. ಅಜ್ಜಿಯರ ದೃಶ್ಯಗಳು ನೈಜವಾಗಿ ಮೂಡಿಬಂದಿವೆ. ಚಿತ್ರವನ್ನು ಮನಮುಟ್ಟುವಂತೆ ಚಿತ್ರಿಸಿರುವ ಥೇನಿ ಈಶ್ವರ್ ಅವರ ಏರಿಯಲ್ ಶಾಟ್ʼಗಳು ಚಿತ್ರದ ದೃಶ್ಯಮೌಲ್ಯವನ್ನು ಹೆಚ್ಚಿಸಿವೆ. ಸಂತೋಷ್ ನಾರಾಯಣನ್ʼರ ಹಿನ್ನಲೆ ಸಂಗೀತ ಮತ್ತು ಹಾಡುಗಳಲ್ಲಿನ ರಾಗ ಸಂಯೋಜನೆ, ’ಕರ್ಣನ್’ ತರದ ಚಿತ್ರಕ್ಕೆ ಹೇಳಿ ಮಾಡಿಸಿದಂತಿದೆ.
ಹಲವರು ಈಗಾಗಲೇ ’ಅಸುರನ್’ ಜೊತೆ ’ಕರ್ಣನ್’ ನನ್ನು ಹೋಲಿಕೆ ಮಾಡಿದ್ದಾರೆ. ಇದು ತಾರತಮ್ಯ-ಅಸಡ್ಡೆಗೊಳಗಾದವರು ತಮಗೆ ಸಿಗಬೇಕಾದ ಸಹಜ ನ್ಯಾಯಕ್ಕಾಗಿ ಕೂಗೆಬ್ಬಿಸುವ ಕಥನವಾದ್ದರಿಂದ ಇಲ್ಲಿ ’ಅಸುರನ್’ ನ ರೋಚಕತೆಗೆ ಅವಕಾಶವಿಲ್ಲ. ಅಂತೆಯೇ ಕತ್ತೆಯ ಮುಂಗಾಲಿಗೆ ಕಟ್ಟಿದ ಹಗ್ಗ ಕಿತ್ತೆಸೆದು ಬಂಧಮುಕ್ತಗೊಳಿಸುವ ಅರ್ಥಪೂರ್ಣ ದೃಶ್ಯವೊಂದನ್ನು ’ಅಸುರನ್’ ನಲ್ಲಿ ಕಾಣಲಾಗದು. ಈ ಎರಡೂ ಚಿತ್ರಗಳ ಕಥಾಹಂದರ-ಹಿನ್ನಲೆಗಳನ್ನು ಒಮ್ಮೆ ಅವಲೋಕಿಸಬೇಕಾಗುತ್ತದೆ.
Stardom ಎಂಬ ಭ್ರಮಾಲೋಕದ ಪಾಶಕ್ಕೊಳಗಾಗದ ಧನುಶ್, ಕಳೆದ ೩-೪ ವರ್ಷಗಳಿಂದ ಆಯ್ದುಕೊಳ್ಳುತ್ತಿರುವ ಪಾತ್ರಗಳ ಬಗ್ಗೆ ಹೆಮ್ಮೆ ಮೂಡುತ್ತದೆ. ’ಧನುಶ್ ನಂತಹ ಜನಪ್ರಿಯ ನಟನನ್ನು’ ಆಯ್ದುಕೊಂಡಿದ್ದರ ಬಗ್ಗೆ ಹಲವರು ಆಕ್ಷೇಪಿಸಿದ್ದಾರೆ. ’ಶಿವಸಾಮಿ’, ’ಕರ್ಣನ್’ ತರದ ಪಾತ್ರಗಳನ್ನು ಧನುಶ್ ಮಟ್ಟಕ್ಕೆ ಜೀವಿಸುವ ಮತ್ತೊಬ್ಬ ಕಲಾವಿದ ಸದ್ಯಕ್ಕಂತೂ ಸಿಕ್ಕಲಾರ. ಮೋಹನ್ ಲಾಲ್ ತರದ ನಟರು ’ವಾನಪ್ರಸ್ಥಮ್’, ’ವಸ್ತುಹರಾ’ ಚಿತ್ರದ ಪಾತ್ರಗಳಿಗೆ ತಮ್ಮನ್ನು ಹಿಗ್ಗಿಸಿಕೊಂಡಿರುವ ಜೀವಂತ ಉದಾಹರಣೆಗಳಿವೆ. ’ಇರುವರ್’, ’ಕಾಂಜೀವರಮ್’ನ ಪಾತ್ರಗಳನ್ನು ಅನುಭವಿಸಿ ಅಭಿನಯಿಸಿದ ಪ್ರಕಾಶ್ ರಾಜ್ ನಮ್ಮ ನಡುವೆ ಇದ್ದಾರೆ. ಧನುಶ್ ಈ ಮಾರ್ಗದಲ್ಲಿ ಸಾಗಿದರೆ ಖಂಡಿತಾ ಸ್ವಾಗತಾರ್ಹ. ಏಕತಾನತೆಯತ್ತ ವಾಲದೇ, ತಮ್ಮ ಜನಪ್ರಿಯತೆಯನ್ನೂ ಕಡೆಗಣಿಸದೇ ಧನುಶ್ ಇಡಬೇಕಾದ ಮುಂದಿನ ಹೆಜ್ಜೆಗಳು ಕುತೂಹಲ ಮೂಡಿಸಲಿವೆ.
ಭಾರತಿರಾಜಾ ಕಟ್ಟಿಕೊಟ್ಟ ಗ್ರಾಮಭಾರತವನ್ನು, ಮಾರಿ ಸೆಲ್ವರಾಜ್ ಮತ್ತಷ್ಟು ಕ್ರಮಿಸುತ್ತಿದ್ದಾರೆ. ಅವರ ಸಿನಿಮಾ ವ್ಯಾಕರಣದಲ್ಲಿ ಹೆಚ್ಚು ಸ್ಪಷ್ಟತೆಯಿದೆ. ಹಳ್ಳಿಯ ಮಧ್ಯೆ ನಿಂತು ಇಡೀ ಹಳ್ಳಿಯನ್ನು ಅವಲೋಕಿಸುವ ಧೋರಣೆ ಇಲ್ಲಿಲ್ಲ. ಸಮಾಜದ ಕೆಳಸ್ಥರಗಳು ವಾಸಿಸುವ ಕೇರಿಗಳತ್ತ ಅವರ ಸೂಕ್ಷ್ಮದೃಷ್ಟಿ ಸಾಗುತ್ತದೆ. ತಮ್ಮ ಕಾಣ್ಕೆಯನ್ನು ಸಿನಿಮಾ ಭಾಷೆಗೆ ಅಳವಡಿಸುವಲ್ಲಿ ವಿವೇಕವಿದೆ. ಅವರ ಇದುವರೆಗಿನ ಎರಡು ಚಿತ್ರಗಳು ಈ ಮಾತುಗಳಿಗೆ ಪೂರಕವಾಗಿವೆ. ಅವರ ಮುಂದಿನ ಚಿತ್ರಗಳ ಬಗ್ಗೆ ತೀವ್ರ ಕುತೂಹಲವಿದೆ.
ಕನ್ನಡ ಚಿತ್ರರಂಗ ಹೊಸ-ಅಲೆಗೆ, ಪ್ರಯೋಗಕ್ಕೆ ತೆರೆದುಕೊಂಡ ದಶಕಗಳ ನಂತರವೇ ತಮಿಳು ಚಿತ್ರರಂಗದಲ್ಲಿ ಗಮನಾರ್ಹ ಪ್ರಯೋಗಗಳು ಬಂದಿದ್ದು ನಿಜ. ’ನಾಂದಿ’ಯಿಂದ ’ಗ್ರಹಣ’ ದವರೆಗಿನ ಕನ್ನಡ ಸಿನಿಮಾದ ಓಟವನ್ನು ಕಡೆಗಣಿಸುವಂತಿಲ್ಲ. ’ಚೋಮನ ದುಡಿ’ ಯಂತಹ ಸಾರ್ವಕಾಲಿಕ ಕ್ಲಾಸಿಕ್ ಬೇರೆ ಭಾಷೆಗಳಲ್ಲಿ ಬಂದಿಲ್ಲ ಎಂಬುದನ್ನೂ ನೆನಪಿಡೊಣ. ಆದರೆ ವರ್ತಮಾನದ ತಲ್ಲಣಕ್ಕೆ ಸ್ಪಂದಿಸುವ ತವಕವೊಂದು ಇತ್ತೀಚಿನ ದಿನಗಳಲ್ಲಿ ತಮಿಳು-ಮಲಯಾಳಂ ಚಿತ್ರಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿರುವುದನ್ನು ಅಲ್ಲಗೆಳೆಯಲಾಗದು. ’ಅಸುರನ್’, ’ಪರಿಯೇರುಂ ಪೆರುಮಾಳ್’, ’ಮದ್ರಾಸ್’ ಚಿತ್ರಗಳು ಸೃಷ್ಟಿಸಿದ ಸಂಚಲನವನ್ನು ಮರೆಮಾಚಲಾಗುವುದಿಲ್ಲ. ೮೦ರ ದಶಕದಲ್ಲಿ. ಸಾಂಸಾರಿಕ, ಮಹಿಳಾ ಸಬಲೀಕರಣಗಂತಹ ವಿಷಯಗಳ ಬಗ್ಗೆ ಕೇಂದ್ರೀಕೃತರಾಗಿದ್ದ ಕೆ.ಬಾಲಚಂದರ್, ಜನಪ್ರಿಯವಾಗಿದ್ದ ’ತಣ್ಣೀರ್ ತಣ್ಣೀರ್’ ಎಂಬ ಬೀದಿನಾಟಕವನ್ನು ಸಿನಿಮಾಕ್ಕೆ ಅಳಡಿಸಿದರು. ಆಗ ತಮಿಳುನಾಡಿನಲ್ಲಿ ನೀರಿಗಾಗಿ ಬರವಿತ್ತು. ಬಾಲಚಂದರ್ʼರ ಈ ಸಿನಿಮಾ ಕೃತಿ ಒಂದು ಮೈಲಿಗಲ್ಲಾಯಿತು. ಕನ್ನಡದ ಸಂದರ್ಭವನ್ನೂಮ್ಮೆ ನೋಡಿದರೆ, ಇಲ್ಲೂ ೮೦ರ ದಶಕದಲ್ಲೇ ಸತ್ಯು ನಿರ್ದೇಶಿಸಿದ ’ಬರ’ ನೆನಪಾಗುತ್ತದೆ.
ಪ್ರಯೋಗ ಮಾಡಬೇಕೆಂಬ ಹುಮ್ಮಸ್ಸು ಮಾತ್ರವಲ್ಲದೇ, ಅದು ಜನರನ್ನು ಹೇಗೆ, ಎಷ್ಟು ಮಾತ್ರ ತಲಪಬಹುದು ಎಂಬ ದೂರದರ್ಶಿತ್ವದ ಅಗತ್ಯವಿದೆ. ಎಷ್ಟೋ ಪ್ರಯೋಗಾತ್ಮಕ ಚಿತ್ರಗಳು ಡಬ್ಬದಿಂದ ಹೊರಗೇ ಬರದ ಉದಾಹರಣೆಗಳಿವೆ. (ದೂರದರ್ಶನ ಇಂತಹ ಹಲವು ಚಿತ್ರಗಳನ್ನು ಹಲವು ಬಾರಿ ಪ್ರದರ್ಶಿಸಿದೆ). ಸಮಾಜದ ಓರೆ-ಕೋರೆಗಳಿಗೆ ಕಾಲಾಕಾಲಕ್ಕೆ ಸ್ಪಂದಿಸುವ ಎಚ್ಚರ, ಕಳಕಳಿ ಚಿತ್ರರಂಗದಲ್ಲಿ ಜಾಗೃತವಾಗಿರಬೇಕು.
ಮಾರಿ ಸೆಲ್ವರಾಜ್,
ಮೂಲತಃ ಕವಿ-ಬರಹಗಾರರಾದ ಮಾರಿ ಸೆಲ್ವರಾಜ್, ’ಆನಂದ ವಿಕಟನ್’ ಪತ್ರಿಕೆಯಲ್ಲಿ ತಮ್ಮ ಲೇಖನ ಸರಣಿ ಬರೆಯುತ್ತಿದ್ದರು. ಅವರ ಸಣ್ಣ ಕಥೆಗಳ ಸಂಕಲನ ’ತಾಮಿರಪರಣಿಯಿಲ್ ಕೊಲ್ಲಪಡಾತವರ್ಗಳ್’ 2013ರಲ್ಲಿ ಪ್ರಕಟವಾಯಿತು. 1999ರಲ್ಲಿ ನಡೆದ ’ಮಂಜೋಲೈ ಟೀ ಎಸ್ಟೇಟ್’ ನ ಕಾರ್ಮಿಕರ ಹತ್ಯಾಕಾಂಡ ಕುರಿತಾದ ಈ ಕೃತಿ ಮಾರಿ ಸೆಲ್ವರಾಜ್ʼರ ಜನಪ್ರಿಯ ಕೃತಿ. 1999ರ ಜುಲೈ ತಿಂಗಳ 23ರಂದು, ಶೋಷಣೆಗೊಳಗಾದ ಟೀ ಕಾರ್ಮಿಕರು ನ್ಯಾಯಬದ್ಧವಾಗಿ ಸಲ್ಲಬೇಕಿದ್ದ ಬೇಡಿಕೆಗಳ ಈಡೇರಿಕೆಗಾಗಿ, ತಿರುನೆಲ್ವೇಲಿಯ ಜಿಲ್ಲಾಧಿಕಾರಿ ಕಚೇರಿಯತ್ತ ಶಾಂತವಾಗಿಯೇ ಮೆರವಣಿಗೆಯಲ್ಲಿ ಸಾಗುತ್ತಿದ್ದರು. ಯಾರೋ ಕುಹಕಿಗಳು ಕಲ್ಲೆಸೆದಾಗ, ಕಾಯುತ್ತಿದ್ದ ಪೋಲೀಸರು ತೀವ್ರ ಲಾಠೀ ಪ್ರಯೋಗ ಆರಂಭಿಸಿದರು. ದಿಕ್ಕಾಪಾಲಾಗಿ ಚದುರಿದ ಕಾರ್ಮಿಕರಲ್ಲಿ ಅನೇಕರು ಹತ್ತಿರದಲ್ಲಿ ಹರಿಯುತ್ತಿದ್ದ ’ತಾಮಿರಪರಣಿ’ (ತಾಮ್ರಪರ್ಣಿ) ನದಿಗೆ ಧುಮಿಕಿದರು. ಜೀವವುಳಿಸಿಕೊಳ್ಳಲಾಗದೇ 17 ಜನ ನದಿಯಲ್ಲೇ ಮುಳುಗಿ ಪ್ರಾಣಬಿಟ್ಟರು. ಈ ಘಟನೆಯಿಂದ ತೀವ್ರ ನೊಂದ ಮಾರಿ ಸೆಲ್ವರಾಜ್, ತಮ್ಮ ನೋವಿಗೆ ಬರಹದ ರೂಪ ನೀಡಿದರು.
’ಹೊಸ ತಲೆಮಾರಿನವರು ಕಲಾಸೃಷ್ಟಿಗಿಳಿದಾಗ ಭೂಕಂಪವೇ ಸಂಭವಿಸುತ್ತದೆ’
ಎಂದು ಮಾರಿ ಸೆಲ್ವರಾಜ್ ಸಂದರ್ಶನವೊಂದರಲ್ಲಿ ಹೇಳಿದ್ದರು. ’ಕರ್ಣನ್’ ಪರ-ವಿರೋಧ ಬರುತ್ತಿರುವ ವಿಮರ್ಶೆಗಳನ್ನು ಕಂಡಾಗ ಅವರ ಮಾತು ನಿಜವಾಗುತ್ತಿದೆ ಎಂಬುದು ನಿರ್ವಿವಾದ.