ಮಹಾಮಾರಿ ಸರ್ವಾಂತರ್ಯಾಮಿ ಆಗುತ್ತಿದೆ. ಅಂಟಾರ್ಟಿಕದ ನಂತರ ಇದೀಗ ಗೌರಿಶಂಕರವನ್ನು ಮುಟ್ಟಿದೆ. ಈ ಮಹಾ ಪರ್ವತದ ಸುತ್ತ ಹರಡಿಕೊಂಡಿರುವ ಮೂರು ದೇಶಗಳಿಗೆ ದುಃಸ್ವಪ್ನವಾಗಿ ಕಾಡುತ್ತಿದೆ ವೈರಸ್. ಆ ಬಗೆಗಿನ ಒಂದು ರೋಚಿಕ ಕಥನ ಇಲ್ಲಿದೆ. ಲೇಖಕ ಮತ್ತು ಹಿರಿಯ ಭೂ ವಿಜ್ಞಾನಿ ಡಾ.ಎಂ.ವೆಂಕಟಸ್ವಾಮಿ ಅವರು ಸಿಕೆನ್ಯೂಸ್ ನೌ ಓದುಗರಿಗಾಗಿ ಬರೆದಿದ್ದಾರೆ.
All photo’s Courtesy: Wikipedia
ಈಗಾಗಲೆ ಚೀನಾ ಕಡೆಯಿಂದ ಹೊರಟಿರುವ ಎವರೆಸ್ಟ್ ಪರ‍್ವತಾರೋಹಿಗಳಿಗೆ ಪ್ರತ್ಯೇಕ ದಾರಿಯನ್ನು ನಿರ್ಮಾಣ ಮಾಡುತ್ತಿರುವುದಾಗಿ ಚೀನಾ ಮಾಧ್ಯಮಗಳು ತಿಳಿಸಿವೆ. ಎವರೆಸ್ಟ್ ಶಿಖರ ಏರಲು ಚೀನಾ (ಟಿಬೆಟ್) ಮತ್ತು ನೇಪಾಳದ ಕಡೆಯಿಂದ ಪ್ರತ್ಯೇಕ ದಾರಿಗಳಿವೆ. ಆದರೆ ಒಂದು ಹಂತದಲ್ಲಿ ಎರಡೂ ಕಡೆಯಿಂದ ಬರುವ ಪರ‍್ವತಾರೋಹಿಗಳು ಮುಖಾಮುಖಿಯಾಗುವ ಸ್ಥಳವಿದ್ದು ನೇಪಾಳದ ಕಡೆಯಿಂದ ಬರುತ್ತಿರುವ ಸಂಭವನೀಯ ಕೋವಿಡ್ ಸೋಂಕಿರುವ ಪರ‍್ವತಾರೋಹಿಗಳ ಬೇಟೆಯನ್ನು ತಪ್ಪಿಸಲು ಚೀನಾ ಹರಸಾಹಸ ಮಾಡುತ್ತಿದೆ. ನೇಪಾಳದಿಂದ ಹೊರಟ ಬೇಸ್ ಕ್ಯಾಂಪ್‌ನಲ್ಲಿ ತಂಗಿರುವ 30 ಪರ‍್ವತಾರೋಹಿಗಳಿಗೆ ಈಗಾಗಲೇ ಸೋಂಕು ತಗುಲಿ ಅವರನ್ನು ಹಿಂದಕ್ಕೆ ಕಳಿಹಿಸಿದ ಕಾರಣ ಚೀನಾದಲ್ಲಿ ಆತಂಕ ಹುಟ್ಟಿಕೊಂಡಿದೆ.
ಚೀನಾ 21 ಪರ‍್ವತಾರೋಹಿಗಳನ್ನು ಆಯ್ಕೆ ಮಾಡಿಕೊಂಡು ಅವರನ್ನೆಲ್ಲ ಏಪ್ರಿಲ್‌ನಲೇ ಕ್ವಾರಂಟೈನ್ ಕ್ಯಾಂಪ್‌ಗಳಲ್ಲಿ ಇಟ್ಟುಕೊಂಡು ನಿಗಾ ವಹಿಸಿದೆ. ಚೀನಾದಲ್ಲಿ 2019ರಲ್ಲಿ ಕೋವಿಡ್-19 ಕಾಣಿಸಿಕೊಂಡಿದ್ದೆ ಚೀನಾ ಎವರೆಸ್ಟ್ ಯಾತ್ರೆಯನ್ನು ನಿಷೇಧ ಮಾಡಿತ್ತು. ಎವರೆಸ್ಟ್ ಏರುವ ಪರ‍್ವತಾರೋಹಗಳಿಂದ ಬರುವ ಹಣ ನೇಪಾಳಕ್ಕೆ ಮುಖ್ಯ ಆದಾಯವಾಗಿದ್ದು ಈ ವರ್ಷ ಹೆಚ್ಚು ಪರ‍್ವತಾರೋಹಿಗಳಿಗೆ ಅನುಮತಿ ಕೊಟ್ಟಿದೆ. ಎವರೆಸ್ಟ್ ಏರುವ ಪ್ರತಿಯೊಬ್ಬರಿಂದ (ಪರವಾನಿಗೆಗೆ 11 ಸಾವಿರ ಮತ್ತು ಇತರೆ ಖರ್ಚುಗಳಿಗೆ 40 ಸಾವಿರ) ಒಟ್ಟು 50 ಸಾವಿರ ಅಮೆರಿಕನ್ ಡಾಲರ್ ಪಡೆದುಕೊಳ್ಳುತ್ತದೆ.
ನೇಪಾಳದ ಮೂಲ ಶಿಬಿರ ಅಥವಾ ಬೇಸ್ ಕ್ಯಾಂಪ್ ʼಲುಕ್ಲಾʼ ಅಥವಾ ʼಗೇಟ್ ವೇ ಆಫ್ ಎವರೆಸ್ಟ್’ ಎಂದು ಕರೆಯುವ ಪಟ್ಟಣದಲ್ಲಿ ಪರ‍್ವತಾರೋಹಿಗಳು ಮತ್ತು ಅವರ ಜೊತೆಗೆ ಹೋಗುವ ಮಾರ್ಗದರ್ಶಿಗಳ ಸಂಖ್ಯೆ ಕನಿಷ್ಟ ಸಾವಿರಕ್ಕಿಂತ ಹೆಚ್ಚಾಗಿರುತ್ತದೆ. ಕಳೆದ ಮೂರು ವಾರಗಳಿಂದ ನೇಪಾಳದಲ್ಲಿ ಪ್ರತಿ ಐದು ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ ಅವರಲ್ಲಿ ಇಬ್ಬರಿಗೆ ಸೋಂಕು ಇರುವುದು ಪತ್ತೆಯಾಗುತ್ತಿದೆ. ಇದು ಭಾರತದ ಕಡೆಯಿಂದ ಹೆಚ್ಚಾಗಿ ಹರಡುತ್ತಿದೆ ಎನ್ನಲಾಗಿದೆ.
ಎರಡೂ ದಾರಿಗಳು ಸಂಧಿಸುವ ದುರ್ಗಮ ಸ್ಥಳ ʼಕೊಮೊಲಾಂಗ್ಮಾ’ ಪರ್ವತದ 27,230 ಅಡಿಗಳ ಎತ್ತರದಲ್ಲಿ ಹಗ್ಗಗಳಿಂದ ಏಣಿ-ಛಾವಣಿ ನಿರ್ಮಿಸಿ ಪ್ರತ್ಯೇಕ ದಾರಿಗಳನ್ನು ನಿರ್ಮಿಸಲಾಗುತ್ತಿದೆ ಮತ್ತು ಒಂದೇ ದಿನ ಎರಡೂ ಕಡೆಯಿಂದ ಎವರೆಸ್ಟ್ ಶಿಖರದಲ್ಲಿ ಯಾತ್ರಿಗಳು ಸೇರದಂತೆ ನೋಡಿಕೊಳ್ಳುವುದಾಗಿ ಚೀನಾ ಹೇಳಿಕೊಂಡಿದೆ. ನೇಪಾಳದ ಮೂಲ ಶಿಬಿರದಲ್ಲಿ ಈಗಾಗಲೆ 30 ಜನರಿಗೆ ಸೋಂಕು ತಗುಲಿ ಅವರನ್ನು ಕಾಠ್ಮಂಡುವಿಗೆ ವಾಪಸ್ ಕಳುಹಿಸಿರುವುದಾಗಿ ತಿಳಿದುಬಂದಿದೆ. ಇನ್ನು ನೇಪಾಳದಲ್ಲಿ ಪ್ರಸ್ತುತ 4 ಸಾವಿರ ಜನರು ಸಾವನ್ನಪ್ಪಿದ್ದು 93,000 ಜನರು ಸೋಂಕಿನಿಂದ ನರಳುತ್ತಿದ್ದಾರೆ.
ಈಗ ಎರಡೂ ಕಡೆಯಿಂದ ಪರ‍್ವತಾರೋಹಿಗಳು ಒಂದೆರಡು ಕ್ಯಾಂಪ್‌ಗಳನ್ನು ದಾಟಿ ಎವರೆಸ್ಟ್ ಕಡೆಗೆ ಏರಿ ಹೋಗುತ್ತಿದ್ದಾರೆ. ಐದನೇ ಕ್ಯಾಂಪ್ ತಲುಪಿದ ಮೇಲೆ ಆಕಾಶದಲ್ಲಿ ಶುಭ್ರ ವಾತಾವರಣ ಮೂಡಿದರೆ ಮಾತ್ರ ಎವರೆಸ್ಟ್ ಕಡೆ ಏರಲು ಅಪ್ಪಣೆ ದೊರಕುತ್ತದೆ. ಇಲ್ಲವೆಂದರೆ ದಿನಗಳಗಟ್ಟಳೇ ಕಾಯಬೇಕಾಗುತ್ತದೆ. ಸಾಮಾನ್ಯವಾಗಿ ಬೆಳಗ್ಗೆ ನಾಲ್ಕು ಗಂಟೆಗೆ ಕೊನೆ ಕ್ಯಾಂಪ್ ಬಿಡುವ ಪರ‍್ವತಾರೋಹಿಗಳು ಹತ್ತು/ಹನ್ನೊಂದು ಗಂಟೆಗೆಲ್ಲ ಎವರೆಸ್ಟ್ ಶಿಖರ ಏರಿ ಹಿಂದಕ್ಕೆ ಇಳಿಯಲು ಪ್ರಾರಂಭಿಸಿಬಿಡಬೇಕು. ಅಲ್ಲಿ ಕೇವಲ ಹತ್ತಿಪ್ಪತ್ತು ನಿಮಿಷಗಳು ಮಾತ್ರ ಉಳಿದುಕೊಳ್ಳಲು ಸಾದ್ಯವಾಗುತ್ತದೆ. ಅವರ ಹಿಂದೆ ಹಗ್ಗದಂತಹ ರಸ್ತೆಯಲ್ಲಿ ಪರ‍್ವತಾರೋಹಿಗಳು ಸಾಲಿನಲ್ಲಿ ನೂಕುನುಗ್ಗಲಿನಲ್ಲಿ ನಿಂತಿರುತ್ತಾರೆ. ಜೊತೆಗೆ ಆಮ್ಲಜನಕವೂ ಖಾಲಿಯಾಗಬಹುದು.
***
ಈಗ ಹಿಮಾಲಯದ ಇನ್ನೊಂದು ಮುಖವನ್ನು ನೋಡೋಣ. ಭೂಮಿಯ ಮೇಲಿನ ಅತಿ ಎತ್ತರದ ಶಿಖರ ಎವರೆಸ್ಟ್ ಹೆಸರು ಕೇಳಿದ್ದೆ ಜನರ ಮನಸ್ಸಿನಲ್ಲಿ ಒಂದು ರೀತಿಯ ಪುಳುಕ ಕಾಣಿಸಿಕೊಳ್ಳುತ್ತದೆ. ಜಗತ್ತಿನಾದ್ಯಂತ ಪರ‍್ವತಾರೋಹಿಗಳಿಗೆ ಎವರೆಸ್ಟ್ ಏರದೇ ಹೋದರೂ ಪರವಾಗಿಲ್ಲ ದೂರದಿಂದಲಾದರು ಶಿಖರವನ್ನು ನೋಡಿ ಕಣ್ಣುಗಳಲ್ಲಿ ತುಂಬಿಕೊಳ್ಳಬೇಕು ಎನ್ನುವ ಅದಮ್ಯ ಆಸೆ ಹೊಂದಿರುತ್ತಾರೆ. ಚೀನಾ-ನೇಪಾಳ ಗಡಿ ಎವರೆಸ್ಟ್ ಶಿಖರದ ಉದ್ದಕ್ಕೂ ಸಾಗುತ್ತದೆ. ಶಿಖರದ ಎತ್ತರ 8,848.86 ಮೀಟರುಗಳು ಅಥವಾ 29,031.70 ಅಡಿಗಳು.
ಎವರೆಸ್ಟ್ ಶಿಖರ ಹತ್ತಲು ಎರಡು ದಾರಿಗಳಿವೆ. ಒಂದು ದಾರಿ ನೇಪಾಳದ ಆಗ್ನೇಯ ಕಡೆಯಿಂದ ಹೋಗುವ ದಾರಿಯಾದರೆ (ಪ್ರಮಾಣಿತ ರಸ್ತೆ), ಇನ್ನೊಂದು ಉತ್ತರದ ಕಡೆಯಿಂದ ಟಿಬೆಟ್ (ಈಗ ಚೀನಾ) ಮೂಲಕ ಹೋಗುವ ದಾರಿ. ಪ್ರಮಾಣಿಕ ದಾರಿಯಲ್ಲಿ ಗಣನೀಯ ತಾಂತ್ರಿಕ ಸವಾಲುಗಳನ್ನು ಎದುರಿಸದಿದ್ದರೂ, ಎತ್ತರದ ಕಾಯಿಲೆ, ಗಾಳಿ-ಹವಾಮಾನ ವ್ಯತಿರಿಕ್ತತೆಯ ಪರಿಣಾಮಗಳು ಮತ್ತು ಕುಂಭ ಹಿಮಪಾತದ ಅಪಾಯಗಳನ್ನು ಅನುಭವಿಸಬೇಕಾಗುತ್ತದೆ.
ಇತಿಹಾಸದಲ್ಲಿ ಮೊದಲ ಬಾರಿಗೆ ಎವರೆಸ್ಟ್ ಏರಲು ಪ್ರಯತ್ನಪಟ್ಟಿದ್ದು 1921ರಲ್ಲಿ ಬ್ರಿಟಿಷ್ ಪರ‍್ವತಾರೋಹಿಗಳು. ಆಗ ನೇಪಾಳದ ಕಡೆಯಿಂದ ಅಪ್ಪಣೆ ದೊರಕದ ಕಾರಣ ಇವರು ಟಿಬೆಟ್ ಕಡೆಯಿಂದ ಪ್ರಯತ್ನ ನಡೆಸಿದ್ದರು. ಆ ಯಾತ್ರೆಯಲ್ಲಿ ಇವರು 7,000 ಮೀಟರುಗಳವರೆಗೂ ಏರಿದ್ದರು. ಮತ್ತೆ 1922ರಲ್ಲಿ 8,320 ಮೀಟರುಗಳವರೆಗೂ (27,300 ಅಡಿಗಳು) ಏರಿ ದಾಖಲೆ ಸ್ಥಾಪಿಸಿದ್ದರು. ಅಲ್ಲಿಂದ ಇಳಿದು ಬರುವಾಗ ಹಿಮಪಾತಕ್ಕೆ ಅವರ ಜೊತೆಯಲ್ಲಿದ್ದ 7 ಶೆರ್ಪಾಗಳು ಪ್ರಾಣ ಕಳೆದುಕೊಂಡಿದ್ದರು.
1924ರಲ್ಲಿ ನಡೆದ ಪರ‍್ವತಾರೋಹಣ ಒಂದು ದೊಡ್ಡ ರಹಸ್ಯವಾಗಿ ದಶಕಗಳ ಕಾಲ ಉಳಿದುಹೋಗಿತ್ತು. ಬ್ರಿಟನ್ʼನ ಜಾರ್ಜ್ ಮಲ್ಲೊರಿ ಮತ್ತು ಆಂಡ್ರ್ಯೂ ಇರ್ವಿನ್ ಜೂನ್ ೮ರಂದು ಅಂತಿಮವಾಗಿ ಎವರೆಸ್ಟ್ ಏರಲು ಪ್ರಯತ್ನ ನಡೆಸಿದ್ದರು. ಆದರೆ ಅವರು ಕೊನೆಗೆ ಹಿಂದಿರುಗಲಿಲ್ಲ. ಆದರೆ, ಅವರು ಎವರೆಸ್ಟ್ ಶಿಖರವನ್ನು ಮುಟ್ಟಿದರೊ ಇಲ್ಲವೊ ಎನ್ನುವ ಕುತೂಹಲವನ್ನು ಮಾತ್ರ ಹುಟ್ಟಾಕಿದರು. ಆ ದಿನ ಅವರನ್ನು ಪರ್ವತದ ಮೇಲೆ ಎತ್ತರದಲ್ಲಿ ಶೆರ್ಪಾಗಳು ನೋಡಿದ್ದರು. ಆದರೆ ಅವರು ಆ ನಂತರ ಮೋಡಗಳಲ್ಲಿ ಮಾಯವಾಗಿದ್ದರು. ಮತ್ತೆ ಅವರನ್ನು ಯಾರೂ ನೋಡಲಿಲ್ಲ. ಕೊನೆಗೆ ಮಲ್ಲೊರಿ ದೇಹವನ್ನು ಎವರೆಸ್ಟ್ ಶಿಖರದ ಉತ್ತರದಲ್ಲಿ 1999ರಲ್ಲಿ 26,755 ಅಡಿಗಳ ಮೇಲೆ ಪತ್ತೆ ಮಾಡಲಾಯಿತು.
ನ್ಯೂಜಿಲ್ಯಾಂಡ್ʼನ ಎಡ್ಮಂಡ್ ಹಿಲರಿ ಮತ್ತು ಟೆನ್ಜಿಂಗ್ ನಾರ್ಗೆ
ನೇಪಾಳದ ಟೆನ್ಜಿಂಗ್ ನಾರ್ಗೆ ಮತ್ತು ನ್ಯೂಜಿಲ್ಯಾಂಡ್ʼನ ಎಡ್ಮಂಡ್ ಹಿಲರಿ ನೇಪಾಳ ಕಡೆಯ ದಾರಿಯಿಂದ 1953ರಲ್ಲಿ ಎವರೆಸ್ಟ್ ಶಿಖರವನ್ನು ಏರಿ ನಿಂತರು. ನಾರ್ಗೆ ಹಿಂದಿನ ವರ್ಷ 1952ರಲ್ಲಿ 8,595 (28,199 ಅಡಿಗಳು) ಏರಿ ಇಳಿದಿದ್ದರು. ನಂತರ ಚೀನಾದ ಪರ‍್ವತಾರೋಹಿಗಳಾದ ವಾಂಗ್‌ಫು, ಗೊನ್ಪೋ ಮತ್ತು ಕ್ವಿ ಯಿನ್ಹುವಾ ಮೇ 25, 1960ರಲ್ಲಿ ಟಿಬೆಟ್ ಕಡೆಯಿಂದ ಏರಿದ್ದರು. ಇದುವರೆಗೂ 4,000 ಪರ‍್ವತಾರೋಹಿಗಳು ಎವರೆಸ್ಟ್ ಏರಿ ಇಳಿದಿದ್ದಾರೆ, ಅದರಲ್ಲಿ 13 ವರ್ಷದ ಹುಡುಗ ಜೋರ್ಡಾನ್ ರೊಮೆರು, ಅಂಗವಿಕಲೆ ಅರುಣಿಮಾ ಸಿನ್ಹಾ ಮತ್ತು 70 ವರ್ಷದ ಯುಚಿರೋ ಮಿಯುರಾ ಕೂಡ ಸೇರಿದ್ದಾರೆ.
1960ರ ನಂತರ ವರ್ಷಕ್ಕೆ ಸರಾಸರಿ 700 ರಿಂದ 1,000 ಜನರು ಶಿಖರ ಏರಲು ಪ್ರಯತ್ನಿಸುತ್ತಾರೆ. ಅದು ಮೇ ತಿಂಗಳಿಂದ ಅಗಸ್ಟ್ ತಿಂಗಳ ಮಧ್ಯದ ಬಿಸಿಲು ಕಾಲದಲ್ಲಿ. ಎವರೆಸ್ಟ್ ಶಿಖರ ಮತ್ತು ಸುತ್ತಮುತ್ತಲಿನ ಹವಾಗುಣ, ಬೆಳಕು, ಗಾಳಿ ಮತ್ತು ಹಿಮಪಾತ ಇತ್ಯಾದಿಗಳ ಅನುಕೂಲತೆಗಳನ್ನು ನೋಡಿಕೊಂಡು ಶಿಖರ ಏರಲು ಅಪ್ಪಣೆ ಕೊಡಲಾಗುತ್ತದೆ. 1922ರ ಮೊದಲನೇ ಪರ‍್ವತಾರೋಹಣದಿಂದ 2019ರವರೆಗೆ ಸುಮಾರು 300 ಜನರು ಎವರೆಸ್ಟ್ ಏರುವ ದಾವಂತದಲ್ಲಿ ಮತ್ತು ಏರಿ ಹಿಂದಿರುಗುವಾಗ ಪ್ರಾಣ ಕಳೆದುಕೊಂಡಿದ್ದಾರೆ. ಅವರ ಹೆಣಗಳು ಇನ್ನೂ ಕೂಡ ಹಿಮಪರ್ವತಗಳ ಕೊರಕಲುಗಳಲ್ಲಿ ಮುಚ್ಚಿಹೋಗಿದ್ದು ಅವುಗಳನ್ನು ತೆಗೆಯದೆ ಹಾಗೇ ಉಳಿದುಕೊಂಡಿವೆ. ಕಾರಣ ಈ ಪ್ರದೇಶವನ್ನು ʼಎವರೆಸ್ಟ್ ಮಸಣʼ ಎಂದೇ ಕರೆಯಲಾಗುತ್ತದೆ.
ಈಗ ಮುಖ್ಯವಾದ ಆತಂಕದ ವಿಷಯವೆಂದರೆ ಎರಡನೇ ಅಲೆ. ಮೂಲ ಶಿಬಿರ ಬಿಟ್ಟರೆ ಉಷ್ಣಾಂಶ ಝೀರೋದಿಂದ ಕೆಳಕ್ಕೆ ಬಿದ್ದುಬಿಡುತ್ತದೆ. ಎತ್ತರಕ್ಕೆ ಹೋದಂತೆಲ್ಲ ಆಮ್ಲಜನಕದ ಅಂಶ ಕಡಿಮೆಯಾಗಿ ಪರ‍್ವತಾರೋಹಿಗಳು ತಮ್ಮ ಬೆನ್ನಿನ ಮೇಲೆ ಎರಡು ಆಮ್ಲಜನಕ ಸಿಲೆಂಡರ್‌ಗಳನ್ನು ಹೊತ್ತುಕೊಂಡು ನಡೆಯಬೇಕು. ಜೊತೆಗೆ ಬೆಚ್ಚನೆಯ ದಪ್ಪದ ಉಡುಪು ಒಂದಷ್ಟು ಆಹಾರ ಇರುತ್ತದೆ. ಕೊನೆ ಹಂತದಲ್ಲಿ ಉಷ್ಣಾಂಶ -35ಕ್ಕಿಂತ ಕೆಳಕ್ಕೆ ಹೋಗಿ ಆಮ್ಲಜನಕ ತೀರಾ ಕಡಿಮೆಯಾಗಿ ಉಸಿರಾಡುವುದೇ ಕಷ್ಟವಾಗಿಬಿಡುತ್ತದೆ. ಅಂತಹ ಸಮಯದಲ್ಲಿ ಕೊರೋನ ಏನಾದರೂ ಅಂಟಿಕೊಂಡುಬಿಟ್ಟರೆ ಪರ‍್ವತಾರೋಹಿಗಳ ಪ್ರಾಣ ಕಷ್ಟಕ್ಕೆ ಸಿಲುಕಿಕೊಂಡುಬಿಡುತ್ತದೆ. ಆದರೂ ಪರ‍್ವತಾರೋಹಿಗಳು ಎವರೆಸ್ಟ್ ಏರುವುದಕ್ಕೆ ತಮ್ಮ ಪ್ರಾಣವನ್ನೇ ಒತ್ತೆ ಇಟ್ಟು ಹುಮ್ಮಸ್ಸಿನಿಂದ ಹೋಗುತ್ತಾರೆ. ಈ ಪರ‍್ವತಾರೋಹಿಗಳನ್ನು ಕೋವಿಡ್-19ರ ಈ ಸಂಕಷ್ಟ ಕಾಡದೇ ಇರಲಿ ಎಂದು ಹಾರೈಸೋಣ.
- (ಇನ್ನೊಂದೆಡೆ. ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪಿನಲ್ಲಿ ಈಗ 100 ಕೋವಿಡ್ ಸೋಂಕಿತರು ಇದ್ದಾರೆಂದು ಮಾಹಿತಿ ಭಾನುವಾರದ ಹೊತ್ತಿಗೆ ಬಂದಿದೆ. ಕೆಲ ದೇಶಗಳಲ್ಲಿ ಪರ‍್ವತಾರೋಹವನ್ನು ರದ್ದುಪಡಿಸಲಾಗಿದೆ. ನೇಪಾಳ ಕೂಡ ಇದೇ ದಿಕ್ಕಿನಲ್ಲಿ ಯೋಚಿಸಿದೆ. ಕೆಲ ದೇಶಗಳು ಈ ಬಗ್ಗೆ ನೇಪಾಳಕ್ಕೆ ಸಲಹೆ ಮಾಡಿವೆ.)