ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರ ಉಸ್ತುವಾರಿಯಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೋವಿಡ್ ಸೋಂಕು ಕಂಟ್ರೋಲ್‌ಗೆ ಬರುತ್ತಿಲ್ಲ. ಪರಿಣಾಮ ಜಿಲ್ಲಾಡಳಿತ ಮತ್ತೆ ನಾಲ್ಕು ದಿನ ಲಾಕ್‌ಡೌನ್ ಘೋಷಣೆ ಮಾಡಿದೆ. ಷರತ್ತುಗಳಲ್ಲಿ ಏನಾದರೂ ಬದಲಾವಣೆ ಇದೆಯಾ? ಇಲ್ಲವಾ? ಇಲ್ಲಿದೆ ಕಂಪ್ಲೀಟ್ ಮಾಹಿತಿ…
ಚಿಕ್ಕಬಳ್ಳಾಪುರ: ಮೇ 27ರಿಂದ ಜಿಲ್ಲೆಯಲ್ಲಿ ಮತ್ತೆ 4 ದಿನ ಜಿಲ್ಲೆ ಸಂಪೂರ್ಣ ಲಾಕ್ಡೌನ್ʼಗೆ ಜಿಲ್ಲಾಧಿಕಾರಿ ಆರ್.ಲತಾ ಆದೇಶಿಸಿದ್ದಾರೆ.
ಜಿಲ್ಲಾಡಳಿತ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶುಕ್ರವಾರದ ವರೆಗೂ ಬಿಡುವು ನೀಡಲಾಗಿದ್ದು, ಮೇ 27ರಿಂದ ಪುನಾ ನಾಲ್ಕು ದಿನಗಳ ಕಾಲ ಜಿಲ್ಲೆಯನ್ನು ಸಂಪೂರ್ಣ ಲಾಕ್ಡೌನ್ ಮಾಡಲಾಗುವುದು” ಎಂದರು.
ಸೋಮವಾರ, ಮಂಗಳವಾರ, ಬುಧವಾರ ಕರ್ಫ್ಯೂ ಜಾರಿಯಲ್ಲಿರಲಿದೆ. ಗುರುವಾರದಿಂದ ಮತ್ತೆ 4 ದಿನ ಸಂಪೂರ್ಣ ಲಾಕ್ಡೌನ್ ಮಾಡಲಾಗುವುದು. ಕೊರೊನಾ ಪ್ರಕರಣಗಳು ಕಡಿಮೆಯಾಗದ ಹಿನ್ನೆಲೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಮೇ 20ರಿಂದ 23ರವರೆಗೆ ಜಾರಿಯಲ್ಲಿದ್ದ ಲಾಕ್‌ಡೌನ್ ವೇಳೆ ಜಾರಿಯಲ್ಲಿ ನಿಯಮಗಳೇ ಮುಂದುವರಿಯುತ್ತವೆ. ವೈದ್ಯಸೇವೆ, ಹಾಲು, ಪತ್ರಿಕೆ, ಆಸ್ಪತ್ರೆ ಇನ್ನಿತರೆ ಅತ್ಯಗತ್ಯ ಸೇವೆಗಳಿಗೆ ಮಾತ್ರ ವಿನಾಯಿತಿ ಇರುತ್ತದೆ ಎಂದಿದ್ದಾರೆ ಡೀಸಿ.
ಏನಿರುವುದಿಲ್ಲ?
- ಎಲ್ಲ ರೀತಿಯ ಮದ್ಯದಂಗಡಿಗಳು ಬಂದ್
- ಚಿಂತಾಮಣಿ ಎಪಿಎಂಸಿಯ ಗುರುವಾರ & ಶನಿವಾರದ ಮಾರುಕಟ್ಟೆ ಹೊರತುಪಡಿಸಿ
- 4 ದಿನ ಉಳಿದೆಲ್ಲ ಎಪಿಎಂಸಿ ಮಾರುಕಟ್ಟೆಗಳು ಸಂಪೂರ್ಣ ಬಂದ್
- ಕೋವಿಡ್ ಆಸ್ಪತ್ರೆಗಳ ಹತ್ತಿರದ ಹೋಟೆಲ್‌ಗಳು ಹೊರತುಪಡಿಸಿ ಉಳಿದ ಹೋಟೆಲ್‌ಗಳು ಇರುವುದಿಲ್ಲ
- ಅಂತರ ಜಿಲ್ಲೆ, ಅಂತಾರಾಜ್ಯ ವಾಹನಗಳಿಗೆ ನಿರ್ಬಂಧ
- ಎಟಿಎಂ ಹೊರತುಪಡಿಸಿ ಎಲ್ಲಾ ಬ್ಯಾಂಕುಗಳು ಕೂಡ ಸಂಪೂರ್ಣ ಬಂದ್
- ಹಾಲು ಖರೀದಿಗೆ ವಾಹನಗಳ ಬಳಕೆ ಮಾಡುವಂತಿಲ್ಲ
- ನಗರ & ಪಟ್ಟಣಗಳಲ್ಲಿರುವ ಪೆಟ್ರೋಲ್ ಬಂಕ್‌ಗಳು ಇರಲ್ಲ
ಏನಿರುತ್ತದೆ?
- ಬೆಳಗ್ಗೆ 6ರಿಂದ 10ವರೆಗೂ ಹಾಲು ಖರೀದಿಗೆ ಅವಕಾಶ
- ಮೆಡಿಕಲ್ ಶಾಪ್, ಆಸ್ಪತ್ರೆಗಳು ಎಂದಿನಂತೆ ತೆರೆದಿರುತ್ತವೆ
- ಗುರುವಾರ, ಶನಿವಾರ ಚಿಂತಾಮಣಿ ಎಪಿಎಂಸಿ ಮಾರುಕಟ್ಟೆ
- ಎಟಿಎಂ ಕೇಂದ್ರಗಳು ಇರುತ್ತವೆ
- ಹೆದ್ದಾರಿಗಳಲ್ಲಿರುವ ಪೆಟ್ರೋಲ್ ಬಂಕ್‌ಗಳು
- ಆಸ್ಪತ್ರೆಗಳ ಹತ್ತಿರದ ಹೋಟೆಲ್‌ಗಳಲ್ಲಿ ಪಾರ್ಸೆಲ್‌ಗೆ ಅವಕಾಶ
- ಕೃಷಿ ಆಧಾರಿತ ಕೈಗಾರಿಕೆಗಳಿಗೆ ಅವಕಾಶ
- ಫಾರ್ಮಾ ಆಧಾರಿತ ಕೈಗಾರಿಕೆಗಳಿಗೆ ನಿರ್ಬಂಧ ಇಲ್ಲ
- ಆಹಾರ ಸಂಸ್ಕರಣೆ ಘಟಕಗಳಿಗೆ ಅವಕಾಶ
- ಸರಕು ಸಾಗಾಟ ವಾಹನಗಳಿಗೆ ಮುಕ್ತ ಅವಕಾಶ
- ವೈದ್ಯಕೀಯ ಉದ್ದೇಶಕ್ಕಾಗಿ ಹಾಗೂ ಅನಿವಾರ್ಯ ತುರ್ತು ಸಂದರ್ಭಗಳಲ್ಲಿ ಸೂಕ್ತ ದಾಖಲೆ ತೋರಿಸಿದರೆ ಸಂಚಾರಕ್ಕೆ ಅವಕಾಶ
ಡೀಸಿ ಇನ್ನೇನು ಹೇಳಿದರು?
ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣವನ್ನು ಶೇ.5ಕ್ಕೆ ಇಳಿಸುವ ಗುರಿ ಹಾಕಿಕೊಳ್ಳಲಾಗಿದೆ. ಆ ನಿಟ್ಟಿನಲ್ಲಿ ಮತ್ತೆ ಲಾಕ್‌ಡೌನ್ ವಿಧಿಸಲಾಗುತ್ತಿದೆ. ಎಲ್ಲ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತೇವೆ. ನಿಯಮ ಉಲ್ಲಂಘನೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಪ್ರತ್ಯೇಕ ಕೊಠಡಿ, ಶೌಚಾಲಯ ಇಲ್ಲದಿದ್ದರೆ ಹಳ್ಳಿಗಳಲ್ಲಿ ಪತ್ತೆಯಾಗುವ ಸೋಂಕಿತರನ್ನು ಹೋಮ್ ಐಸೋಲೇಷನ್ ಮಾಡೋದಿಲ್ಲ. ಅವರನ್ನು ಕೋವಿಡ್ ಕೇರ್ ಸೆಂಟರ್‌ಗಳಿಗೆ ಶಿಫ್ಟ್ ಮಾಡಲಾಗುತ್ತದೆ. 20ರಿಂದ 23ರವರೆಗೆ ಜಾರಿಯಲ್ಲಿದ್ದ ಲಾಕ್‌ಡೌನ್ ಮೊದಲು ಜಿಲ್ಲೆಯಲ್ಲಿ 336 ಸಕ್ರಿಯ ಪ್ರಕರಣಗಳಿದ್ದವು. ಲಾಕ್‌ಡೌನ್ ನಂತರ 1,500ಕ್ಕೆ ಏರಿವೆ. ಹೀಗಾಗಿ ಪುನಾ ಲಾಕ್‌ಡೌನ್ ಅನಿವಾರ್ಯವಾಗಿದೆ.
ಇದಲ್ಲದೆ, ಭಾನುವಾರ ಒಂದೇ ದಿನ 689 ಜನರಿಗೆ ಕೋವಿಡ್ ವಕ್ಕರಿಸಿ, ಚಿಕಿತ್ಸೆ ಫಲಕಾರಿಯಾಗದೇ ಜಿಲ್ಲೆಯಾದ್ಯಂತ 7 ಜನ ಸಾವನ್ನಪ್ಪಿದ್ದಾರೆ. ಈಗ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 35,094ಕ್ಕೆ ಮುಟ್ಟಿದ್ದು, ಸದ್ಯಕ್ಕೆ ಸಕ್ರಿಯ ಪ್ರಕರಣಗಳೇ 5,108 ಇವೆ. ಈ ಎಲ್ಲ ಕಾರಣಗಳೂ ಪುನಾ ಲಾಕ್‌ಡೌನ್‌ಗೆ ದಾರಿ ಮಾಡಿಕೊಟ್ಟಿವೆ.
ಸುದ್ದಿಗೋಷ್ಠಿಯಲ್ಲಿ ಎಸ್‌ಪಿ ಮಿಥುನ್ ಕುಮಾರ್, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ.ಶಿವಶಂಕರ್, ಡಿಎಚ್‌ಓ ಡಾ.ಇಂದಿರಾ ಕಬಾಡೆ ಇದ್ದರು.