ಚುನಾವಣೆಯಲ್ಲಿ ಗೆಲ್ಲಲೇಬೇಕು ಅಂತ ಹಠಕ್ಕೆ ಬಿದ್ದರು, ಗೆಲ್ಲುವ ಉಮೇದಿನಲ್ಲಿ ಕೊರೊನಾ ನಿರ್ವಹಣೆ ಮರೆತರು
ಬೆಂಗಳೂರು: ಪಂಚರಾಜ್ಯಗಳ ಚುನಾವಣೆಯಿಂದಲೇ ದೇಶದಲ್ಲಿ ಕೊರೊನ ಹೆಚ್ಚಾಗಿದೆ. ಈ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಂಕಿನ ಬಗ್ಗೆ ಹೆಚ್ಚು ಗಮನ ಕೊಡಲಿಲ್ಲ. ಚುನಾವಣೆ ಬದಲು ಕೊರೊನಾ ಕಡೆ ಗಮನ ಕೊಟ್ಡಿದ್ದರೆ ಇಷ್ಟು ದೊಡ್ಡ ಮಟ್ಟದಲ್ಲಿ ಅನಾಹುತ ಆಗುತ್ತಿರಲಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೇಳಿದ್ದಾರೆ.
ಸೋಮವಾರ ಬೆಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು. ಕೇಂದ್ರ ಸರ್ಕಾರದವರು ಈ ರಾಜ್ಯಗಳ ಚುನಾವಣೆ ಕಡೆ ಹೆಚ್ಚು ಗಮನ ಕೊಟ್ಟರು. ಪ್ರಧಾನಿ ಕೂಡ ಹೆಚ್ಚು ತೊಡಗಿಸಿಕೊಂಡರು. ಸ್ವತಃ ಅವರ ಕ್ಷೇತ್ರದಲ್ಲೂ ಸೋಂಕು ಹೆಚ್ಚಾಗಿದೆ. ಹೀಗಾಗಿ ಸ್ವಲ್ಪ ಅವರು ಭಾವೋದ್ವೇಗಕ್ಕೆ ಒಳಗಾಗಿ ಮಾತಾಡಿದ್ದಾರೆ ಎಂದರು.
ಚುನಾವಣೆ ಕೆಲಸದಿಂದ ಕೊರೊನಾ ಕೆಲಸದಲ್ಲಿ ಮೋದಿ ಅವರು ಸ್ವಲ್ಪ ಅಲಕ್ಷ್ಯ ಮಾಡಿದ್ರು ಅಂತ ಎಲ್ಲರೂ ಮಾತನಾಡುತ್ತಿದ್ದಾರೆ. ಹೀಗಾಗಿ ಈ ಬಾರಿ ಹೆಚ್ಚು ಸಮಸ್ಯೆ ಆಗೋದಕ್ಕೆ ಕಾರಣ ಆಗಿರಬಹುದು. ಚುನಾವಣೆಯಲ್ಲಿ ಗೆಲ್ಲಲೇಬೇಕು ಅಂತ ಪಣಕ್ಕೆ ಬಿದ್ದರು. ಗೆಲ್ಲುವ ಉಮೇದಿನಲ್ಲಿ ಕೊರೊನಾ ನಿರ್ವಹಣೆ ಮರೆತರು ಎಂದು ಗೌಡರು ಟೀಕಿಸಿದರು.
ಕೇಂದ್ರದಿಂದ ಲಸಿಕೆ, ಔಷಧಿ, ವೆಂಟಿಲೇಟರ್, ಆಕ್ಸಿಜನ್ ನಿಡುವುದರಲ್ಲಿ ಮಲತಾಯಿ ಧೋರಣೆ ತೋರಿದೆ ಅನ್ನುವ ವಿಚಾರ ಈ ಬಗ್ಗೆ ನಾನು ಮೋದಿ ಅವರಿಗೆ ಪತ್ರ ಬರೆದಿದ್ದೇನೆ. ಕುಮಾರಸ್ವಾಮಿ ಕೂಡ ಈ ಬಗ್ಗೆ ಅನೇಕ ಬಾರಿ ಮಾತಾಡಿದ್ದಾರೆ. ಜತೆಗೆ, ಹಣಕಾಸು ಹಂಚಿಕೆಯಲ್ಲೂ ನಮಗೆ ಅನ್ಯಾಯ ಆಗಿದೆ. ಚಿಕ್ಕ ರಾಜ್ಯಗಳಿಗೆ ಹೆಚ್ಚು ಹಣ ಬಿಡುಗಡೆ ಮಾಡ್ತಾರೆ. ನಮಗೆ ಕಡಿಮೆ ಹಣ ಬಿಡುಗಡೆ ಮಾಡಿದ್ದಾರೆ. ಈ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯ ಆಗಿದೆ ಎಂದು ಗೌಡರು ಹೇಳಿದರು.
ಕೊರೊನಾ ವಿಚಾರದಲ್ಲಿ ಪ್ರಧಾನಿ ಮೋದಿ ಹಾಗೂ ನಮ್ಮ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಸಲಹೆ ಕೊಟ್ಟಿದ್ದೀನಿ. ನಾನು 12 ಸಲಹೆಗಳನ್ನು ಕೊಟ್ಟಿದ್ದೆ. ಅದರಲ್ಲಿ ಕೆಲವು ಸಲಹೆಗಳನ್ನಷ್ಟೇ ಕಾರ್ಯಗತ ಮಾಡುತ್ತಿದ್ದಾರೆ. ಮೊದಲ ಅಲೆಯಲ್ಲಿ ಯಶಸ್ವಿಯಾಗಿ ನಿರ್ವಹಣೆ ಮಾಡಿದ್ರು ಅಂತ ಮೋದಿಯನ್ನ ಎಲ್ಲರೂ ಹೊಗಳಿದ್ದರು. ಎರಡನೇ ಅಲೆಯಲ್ಲಿ ಸೋಂಕು ತೀವ್ರವಾಗಿ ಹೆಚ್ಚಳ ಆಗಿದೆ. ಜತೆಗೆ, ಬ್ಲ್ಯಾಕ್ ಮತ್ತು ವೈಟ್ ಫಂಗಸ್ ಬಗ್ಗೆ ಆತಂಕ ಹುಟ್ಟುಕೊಂಡಿದೆ. ದೇಶ ವಿದೇಶಗಳ ಎಕ್ಸ್ʼಪರ್ಟ್ʼಗಳು ಇದರ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು ಅವರು.
ಕುಮಾರಸ್ವಾಮಿ ಪ್ರತಿ ಹಂತದಲ್ಲೂ ಸರಕಾರವನ್ನು ಎಚ್ಚರಿಸುವ ಕೆಲಸ ಮಾಡ್ತಿದ್ದಾರೆ. ಕೊರೊನಾ ಹಿನ್ನಲೆಯಲ್ಲಿ ಬೀದಿಗಳಿದು ಹೋರಾಟ ಮಾಡುವ ಸ್ಥಿತಿ ಇಲ್ಲ. ಆದ್ರೆ ಸರಕಾರವನ್ನು ಎಚ್ಚರಿಸುವ ಕೆಲಸವನ್ನು ನಾವು ಮಾಡ್ತೀವಿ. ಜತೆಗೆ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜನತೆಯ ಸಂಕಷ್ಟಕ್ಕೆ ನೆರವಾಗಬೇಕೆಂದು ಮಾಧ್ಯಮದವರ ಮುಖೇನ ಮನವಿ ಮಾಡುತ್ತೇನೆ ಎಂದು ದೇವೇಗೌಡರು ಹೇಳಿದರು.
“ನನ್ನ ಜೀವಿತಾವಧಿಯಲ್ಲಿ ಇಂತಹ ದೊಡ್ಡ ಸಾಂಕ್ರಾಮಿಕ ರೋಗ ನೋಡಿಲ್ಲ ಇದರಿಂದ ದೇಶದ ಜನ ಸಮಸ್ಯೆಗೆ ಸಿಲುಕಿದ್ದಾರೆ.”
ರೆಮಿಡಿಸ್ವೀರ್, ಲಸಿಕೆ ಕಳ್ಳದಾರಿಯಲ್ಲಿ ಮಾರಾಟ ಮಾಡ್ತಿದ್ದಾರೆ. ಈಗಾಗಲೇ ಅನೇಕ ಜನರನ್ನು ಬಂಧನ ಮಾಡಿದ್ದಾರೆ. ಆಡಳಿತದಲ್ಲಿ ಕೆಲ ಲೋಪಗಳು ಇರಬಹುದು. ಇದೆಲ್ಲವನ್ನೂ ಸರಿ ಮಾಡುವ ಕೆಲಸ ಸರಕಾರ ತಕ್ಷಣ ಮಾಡಬೇಕು. ಸರಕಾರಕ್ಕೆ ಕುಮಾರಸ್ವಾಮಿ ಒಂದು ತಿಂಗಳ ಮುಂಚೆಯೇ ಸಲಹೆ ಕೊಟ್ಟಿದ್ದರು. ಆದರೆ ಆಗ ಸರಕಾರ ಎಚ್ಚೆತ್ತುಕೊಳ್ಳಲಿಲ್ಲ. ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಹಳ್ಳಿಗಳಲ್ಲೂ ಸೋಂಕು ಹೆಚ್ಚುತ್ತಿದೆ. ಹೀಗಾಗಿ ಇನ್ನು ಹೆಚ್ಚಿನ ಕಠಿಣ ಕ್ರಮಗಳನ್ನು ಜಾರಿಗೆ ತರಬೇಕಾಗಿದೆ ಎಂದು ಅವರು ಒತ್ತಾಯ ಮಾಡಿದರು.
ಡಿಸಿಎಂ ಅಶ್ವತ್ಥನಾರಾಯಣ ಅವರು ನಮ್ಮ ಜಿಲ್ಲೆಗೂ ವೆಂಟಿಲೇಟರ್, ಔಷಧಿ ಎಲ್ಲಾ ಕಳಿಸಿದ್ದಾರೆ.
ಸರಕಾರ ಏನು ಮಾಡಿಲ್ಲ ಅಂತ ನಾನು ಹೇಳೊದಿಲ್ಲ. ಆದರೆ ಇನ್ನು ಸಾಕಷ್ಟು ಕೆಲಸ ಮಾಡುವ ಅವಶ್ಯಕತೆ ಇದೆ ಎಂದಷ್ಟೇ ಹೇಳಬಲ್ಲೆ. ಅರಸೀಕೆರೆ ತಾಲೂಕಿನಲ್ಲಿ ಸೋಂಕಿತರೊಬ್ಬರಿಗೆ ಖಾಸಗಿ ಆಸ್ಪತ್ರೆಯಲ್ಲಿ 4 ಲಕ್ಷ ಖರ್ಚಾಗಿದೆ ಅದೇ ಮನೆಯಲ್ಲಿ ತಾಯಿ, ಹೆಂಡತಿ, ತಂದೆಗೂ ಸೋಂಕು ಬಂದಿದೆ. ನಾನೇ ಮೆಡಿಕಲ್ ಅಧಿಕಾರಿಗಳಿಗೆ ಕರೆ ಮಾಡಿ ಕ್ರಮ ವಹಿಸಲು ಸೂಚನೆ ನೀಡಿದೆ ಎಂದರು ಅವರು.
ಪುತ್ರನ ಕೃಷಿಭೂಮಿ ನೋಡಲು ಬಂದ ಅಪ್ಪ
ರಾಮನಗರದ ಕೇತಗಾನಹಳ್ಳಿಯಲ್ಲಿ ನಾನು ಅತೀವ ಪ್ರೀತಿ, ಮಮತೆಯಿಂದ ಸೃಷ್ಟಿ ಮಾಡಿಕೊಂಡಿರುವ ‘ಕೃಷಿಭೂಮಿ’ಗೆ ಇಂದು (ಮೇ ೨೪) ನಾಡಿನ ಮಣ್ಣಿನ ಮಗ, ರೈತರ ನಾಯಕ, ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಆಗಮಿಸಿದ್ದರು. ಹಸಿರಿನಿಂದ ಕಂಗೊಳಿಸುತ್ತಾ, ಸಂಭ್ರಮಿಸುತ್ತಿರುವ ನನ್ನ ತೋಟವನ್ನು ಕಂಡು ‘ರೈತನ ಮಗ’ ದೇವೇಗೌಡರು ಅಷ್ಟೇ ಸಂಭ್ರಮ ಪಟ್ಟರು. ದೇವೇಗೌಡರು, ತಾಯಿ ಚನ್ನಮ್ಮರಿಗೆ ಇಂದು 67ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ. ದಂಪತಿ ಈ ಶುಭ ದಿನ ನನ್ನ ಪ್ರೀತಿಯ ತೋಟಕ್ಕೆ ಆಗಮಿಸಿದ್ದು, ಕಲ್ಪವೃಕ್ಷವಾದ ತೆಂಗಿನ ಸಸಿ ನೆಟ್ಟಿದ್ದು ಅವರ ಮಗನಾದ ನನ್ನನ್ನು ಭಾವಪರವಶನಾಗುವಂತೆ ಮಾಡಿತು. ಈ ಅಪರೂಪದ ಸನ್ನಿವೇಶ ಸೃಷ್ಟಿಸಿದ ದೇವರಿಗೆ ನನ್ನ ನಮನಗಳು. ದೇವೇಗೌಡ ದಂಪತಿಗೆ ಶುಭಾಶಯಗಳು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಲ್ಲ ಜಾಲತಾಣದಲ್ಲಿ ಬರೆದುಕೊಂದಿದ್ದಾರೆ.