ಮೊತ್ತಮೊದಲಿಗೆ, ಲಡಾಕಿನಲ್ಲಿ ಚೀನಾದ ಕೆಂಪು ಕಿರಾತಕರಿಗೆ ಬಲಿಯಾಗಿ ಹುತಾತ್ಮರಾದ ನಮ್ಮ ವೀರಯೋಧರಿಗೆ ನನ್ನ ಪ್ರಣಾಮಗಳು.
**
ಕೆಲ ದಿನಗಳ ಹಿಂದೆ ತೆಲುಗಿನಲ್ಲಿ ಒಂದು ಸಿನಿಮಾ ಬಂದಿತ್ತು. ಹೆಸರು ’ಸರಿಲೇರು ನೀಕೆವ್ವರು’. ಕನ್ನಡಕ್ಕೆ ನೇರವಾಗಿ ಅನುವಾದಿಸಿದರೆ ’ಸಾಟಿಯಿಲ್ಲ ನಿನಗಾರು’ ಎಂದಾಗುತ್ತದೆ. ಪ್ರಿನ್ಸ್ ಮಹೇಶ್ ಬಾಬು, ಕನ್ನಡದ ಹುಡುಗಿ ರಶ್ಮಿಕಾ ಮಂದಣ್ಣ ಲೀಡ್ ರೋಲುಗಳಲ್ಲಿ ನಟಿಸಿದ್ದರು. ಜತೆಗೆ, ನಮ್ಮ ಪ್ರಕಾಶ್ ರೈ ಕೂಡ ಇದ್ದಾರೆ.
ಕಂಪ್ಲೀಟ್ ಫ್ಯಾಮಿಲಿ ಎಂಟರ್ಟೇನರ್ ಆದ ಈ ಸಿನಿಮಾದಲ್ಲಿ ಕೆಲ ಒಳ್ಳೆಯ ಅಂಶಗಳಿವೆ. ನಿಮ್ಮಲ್ಲಿ ಯಾರಾದರೂ ಸಿನಿಮಾ ನೋಡಿರಬಹುದು. ರೆಫರೆನ್ಸಿಗಿರಲಿ ಎಂದು ಹೇಳುತ್ತಿದ್ದೇನೆ.
ಕಥೆಯ ಲೈನ್ ಹೀಗಿದೆ…
ಸಿನಿಮಾ ಕಥೆಯಲ್ಲಿ ಸ್ವಲ್ಪಭಾಗ ಜಮ್ಮು-ಕಾಶ್ಮೀರದಲ್ಲಿ ಉಳಿದದ್ದು ಕರ್ನೂಲಿನಲ್ಲಿ ನಡೆಯುತ್ತದೆ. ಆ ಕರ್ನೂಲಿನಲ್ಲಿ ಒಬ್ಬ ಡಾನ್ ಕಂ ಪಾಲಿಟಿಶಿಯನ್ ಒಬ್ಬ ಇರುತ್ತಾನೆ. ಪ್ರಕಾಶ್ ರೈ ನಟಿಸಿರುವ ಪಾತ್ರವದು. ಕೊಲೆ, ಸುಲಿಗೆ, ಭೂ ದಂಧೆ, ಕಿಡ್ನಾಪ್, ಬೆದರಿಕೆಯಂತಹ ಕುಕೃತ್ಯಗಳನ್ನು ಮಾಡುವುದೇ ಇವನ ಕೆಲಸ. ಜತೆಗೆ ಇನ್ನೊಂದು ದೊಡ್ಡ ಕ್ರೈಂ ಕೂಡ ಮಾಡುತ್ತಾನೆ. ಕೇಂದ್ರ-ರಾಜ್ಯ ಸರಕಾರಗಳಿಂದ ಬಡಜನರ (ಕ್ಷಮಿಸಿ, ಭಾರತಕ್ಕೆ ಸ್ವಾತಂತ್ರ್ಯ ಬಂದು ಅರವತ್ತು ವರ್ಷ ಕಳೆದರೂ ನಮ್ಮ ದೇಶದಲ್ಲಿ ಇನ್ನೂ ಬಡವರಿದ್ದಾರೆ!!!!) ಬ್ಯಾಂಕ್ ಖಾತೆಗಳಿಗೆ ಬರುವ ಹಣವನ್ನು ಲಪಟಾಯಿಸುತ್ತಿರುತ್ತಾನೆ. ಈಗ ಪ್ರತಿಯೊಂದಕ್ಕೂ ಆನ್ಲೈನೇ ಗತಿ. ಪಿನ್ನು, ಓಟಿಪಿ ಅಂತೆಲ್ಲ ಏನೇನೋ.. ಅದರ ಜತೆಯಲ್ಲೇ ಖೊಟ್ಟಿ ಅಕೌಂಟುಗಳನ್ನು ಸೃಷ್ಟಿಸಿ ಕೋಟ್ಯಂತರ ರೂಪಾಯಿಗಳನ್ನು ಎಗರಿಸಿರುತ್ತಾನೆ. ಕೊನೆಗೆ ಅವನ ಗ್ರಹಚಾರ ಕೆಟ್ಟು ಹೀರೋಗೆ ತಗುಲಾಕಿಕೊಳ್ಳುತ್ತಾನೆ.
ಕಥೆ ಇಷ್ಟೇ ಅಲ್ಲ, ಸ್ವಾರಸ್ಯ ಮುಂದಿದೆ. ಸೇನೆಯಲ್ಲಿ ಅಧಿಕಾರಿಯಾಗಿರುವ ಹೀರೋ ಕರ್ನೂಲಿಗೆ ಬಂದು ಇವನನ್ನು ಹಿಡಿದು, ತದುಕಿ ಒಳ್ಳೆಯ ದಾರಿಗೆ ತರುತ್ತಾನೆ. ’ನಾನು ಕಾಪಾಡಿಕೊಳ್ಳುವ ಪ್ರಾಣ ನಿನ್ನದು. ಸಮಾಜದಲ್ಲಿ ಹೇಗೆ ವರ್ತಿಸಬೇಕು ಅನ್ನೋದು ಗೊತ್ತಿಲ್ವ? ಬುದ್ಧಿ ಇಲ್ವ?’- ಇದು ಆ ಕ್ರಿಮಿನಲ್ ಗೆ ಹೀರೋ ಹೇಳುವ ಮಾತು. ವಿಲನ್ ಪಾಲಿಗೆ ಇದು ಯಾವತ್ತೂ ಕೇಳದ ಮಾತು. ಅವನನ್ನು ಕಾನೂನಿನ ಕಟಕಟೆಗೆ ಒಪ್ಪಿಸದೇ ತನ್ನದೇ ಸ್ಟೈಲಿನಲ್ಲಿ ಹೀರೋ ಬದಲಿಸುತ್ತಾನೆ. ಕಥೆ ಕ್ಲೈಮ್ಯಾಕ್ಸಿಗೆ ಬರುವ ಹೊತ್ತಿಗೆ ವಿಲನ್ ಕಾಶ್ಮೀರದ ಸೇನೆಯ ಯಾವುದೋ ಕ್ಯಾಂಪಿನಲ್ಲಿ ಯೋಧನ ಸಮವಸ್ತ್ರದಲ್ಲಿ ಇರುತ್ತಾನೆ. ನಮ್ಮ ತಿರಂಗದ ಮುಂದೆ ದೇಶಭಕ್ತನಾಗಿ ನಿಂತು ಹಿಂದೆ ತಾನು ಮಾಡಿದ ತಪ್ಪುಗಳೆಲ್ಲಕ್ಕೂ ಪಶ್ಚಾತ್ತಾಪಪಟ್ಟು ಯೋಧನಾಗಿದ್ದಕ್ಕೆ ಹೆಮ್ಮೆಪಡುತ್ತಾ ಆ ತ್ರಿವರ್ಣ ಧ್ವಜಕ್ಕೆ ಶರಣಾಗಿರುತ್ತಾನೆ.. ಹೆಚ್ಚಿನ ಡೀಟೆಲ್ ಬೇಕು ಎಂದರೆ ಒಮ್ಮೆ ಈ ಸಿನಿಮಾ ನೋಡಿ, ಅಮೆಝಾನ್ ಪ್ರೈಮಿನಲ್ಲಿದೆ.
ಕಥೆಯಲ್ಲಿ ನನ್ನನ್ನು ಸೆಳೆದ ಲೈನು ಎಂದರೆ, ಪಾತಕಿಗಳನ್ನು ಸೇನೆಯೆಂಬ ಶಿಸ್ತಿನ ಕೋಟೆಯೊಳಕ್ಕೆ ಹಾಕಿ ಸಜ್ಜನರನ್ನಾಗಿ ರೂಪಿಸಿ ದೇಶಭಕ್ತರನ್ನಾಗಿ ಪರಿವರ್ತಿಸುವುದು.. ಕ್ರಿಮಿನಲ್ಲುಗಳಾಗಿ, ಕೊಲೆಪಾತಕರಾಗಿ, ಸಮಾಜವಿದ್ರೋಹಿ ಶಕ್ತಿಗಳಾಗಿ, ರೌಡಿ ಶೀಟರುಗಳಾಗಿ ಬೆಂಗಳೂರು, ಹೈದರಾಬಾದು, ಕರ್ನೂಲು ಅಂತೆಲ್ಲ ಸಿಕ್ಕಸಿಕ್ಕ ಕಡೆಯಲ್ಲ ಪೊಲೀಸರಿಗೂ ತಲೆನೋವಾಗಿರುವ ಇಂತಹ ಕ್ರಿಮಿಗಳನ್ನು ಒಮ್ಮೆ ಬಾರ್ಡರಿಗೆ ಕಳಿಸಬಾರದೇಕೆ? ಓದನ್ನು ಅರ್ಧಕ್ಕೆ ಬಿಟ್ಟು ಉಂಡಾಡಿಗುಂಡರಾಗಿ ಹೋತ್ಲ ಹೊಡೆಯುವ, ತಂದೆ-ತಾಯಿ ಪಾಲಿಗೆ ಹೊರೆಯಾಗಿರುವ, ಸಣ್ಣಪುಟ್ಟ ಅಪರಾಧಗಳನ್ನು ಮಾಡಿ ಪೊಲೀಸರ ಖೆಡ್ಡಕ್ಕೆ ಬಿದ್ದಿರುವ ಕೇಡಿಗಳನ್ನು ಗುರುತಿಸಿ ದೇಶದ ಆರ್ಮಿ ಕ್ಯಾಂಪುಗಳಲ್ಲಿ ಕೂಡಿಹಾಕಿ ರುಬ್ಬಿದರೆ ಹೇಗೆ? ಅಟ್ಲೀಸ್ಟ್, ಇಂಡೋ-ಪಾಕ್ ಗಡಿ, ಭಾರತ-ಚೀನಾ ಗಡಿ ಅಥವಾ ಭಾರತ-ಬಾಂಗ್ಲಾ ಗಡಿಯಲ್ಲಿ ಹೊಸದಾಗಿ ರೋಡು ಹಾಕುವ, ಇಲ್ಲವೇ ಕಿತ್ತುಹೋಗಿರುವ ರೋಡುಗಳನ್ನು ರಿಪೇರಿ ಮಾಡುವ, ಸೇತುವೆ ಕಟ್ಟುವ ಕೆಲಸಗಳಿಗೆ ನಿಯೋಜಿಸಿ ಅವರ ಬೆವರು ಹಿಂಡಿದರೆ..? ಅದೂ ಬೇಡವೆಂದರೆ ನಮ್ಮ ಯೋಧರ ಬಟ್ಟೆ ಒಗೆಯುವ, ಅವರ ಶೌಚಾಲಯಗಳನ್ನು ಸ್ವಚ್ಚ ಮಾಡುವುದನ್ನಾದರೂ ಮಾಡಿಸಬಹುದು. ಅದೆಂಥಾ ಕೆಟ್ಟವನಾದರೂ ಒಮ್ಮೆ ಸೇನೆಯ ಕೈಗೆ ಸಿಕ್ಕಿಬಿದ್ದು ಪಳಗಿದರೆ ಒಳ್ಳೆಯ ಮನುಷ್ಯನಾಗದೇ ಇರುತ್ತಾನಾ? ಆಗುತ್ತಾನೆ. ನನಗೆ ಡೌಟೇ ಇಲ್ಲ.
ಹಳ್ಳಿಗಳಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲೇ ಡ್ರಾಪೌಟ್ ಆದರೆ, ಅಟ್ಲೀಸ್ಟ್ ಆ ಹುಡುಗರು ವ್ಯವಸಾಯ ದಲ್ಲಾದರೂ ಹೆತ್ತವರಿಗೆ ನೆರವಾಗುತ್ತಾರೆ. ಅದೂ ಇಲ್ಲವೆಂದರೆ ಯಾವುದೋ ಕೆಲಸ ಹಿಡಿದೋ ಕೂಲಿನಾಲಿಯಾದರೂ ಮಾಡಿ ಮರ್ಯಾದೆಯ ಜೀವನ ನಡೆಸುತ್ತಾರೆ. ತಪ್ಪುದಾರಿಗೆ ಹೋಗುವ ಸಾಧ್ಯತೆ ಕಡಿಮೆ. ಸಿಟಿಗಳಲ್ಲಿ ಹಾಗಲ್ಲ. ಎಲ್ಲೂ ಡುಮಕಿ ಹೊಡೆಯದೇ ಪಾಸಾಗುತ್ತ ಹೋದರೆ ಪರವಾಗಿಲ್ಲ. ಕೊನೆಪಕ್ಷ ತುಸು ಸಂಸ್ಕಾರ ಬರುತ್ತದೆ. ಆದರೆ ಹೈಸ್ಕೂಲಿನಲ್ಲೋ ಕಾಲೇಜಿನಲ್ಲೋ ನಪಾಸಾಗಿಬಿಟ್ಟರೆ ಅವನು ಮುಂದೇನಾಗುತ್ತಾನೆ? ಅಪ್ಪಅಮ್ಮನ ಬುದ್ಧಿವಾದ ಕೇಳದ ಬಿಸಿರಕ್ತದ ಸ್ಥಿತಿಯದು. ಕೆಟ್ಟದರತ್ತ ಸೆಳೆತವೇ ಜಾಸ್ತಿ. ಹೀಗೆ ದಾರಿ ತಪ್ಪಿ ಸಣ್ಣಪುಟ್ಟ ತಪ್ಪುಗಳನ್ನು ಮಾಡುವುದೇ ಚಟವಾಗಿರುವ ಸಾವಿರಾರು ಕಿಡಿಗೇಡಿಗಳು, ಪುಂಡರು ಬೆಂಗಳೂರಿನಲ್ಲಿ ಇರಬಹುದು, ಇದ್ದಾರೆ ಕೂಡ. ಸರಗಳ್ಳತನ, ದರೋಡೆ, ಸುಲಿಗೆ, ರೇಪು ಅಂತೆಲ್ಲ ಪ್ರಕರಣಗಳಲ್ಲಿ ಸಿಕ್ಕಿಬಿದ್ದು ಸ್ಲೇಟು ಹಿಡಿದು ಪೋಸು ಕೊಡುವ ಕಂಟಕರ ಮೇಲೆ ಇಂತಹ ಪ್ರಯೋಗ ಮಾಡಿದರೆ ಹೇಗೆ? ಈ ಪ್ರಶ್ನೆ ನನ್ನಲ್ಲಿದೆ.
ಮನೆಯಲ್ಲಿ ಹತೋಟಿ ಇಲ್ಲದೆ ಹಾದಿ ತಪ್ಪುವ ಇವರು ಖರ್ಚಿಗೆ ಹಣ ಸಿಗದಿದ್ದಾಗ ಅವರಿವರ ಮನೆಬಾಗಿಲು ಕಾಯುವುದು, ಪುಂಡಾಟಿಕೆ ಮಾಡುವುದು, ಹಫ್ತಾ ವಸೂಲಿ ಮಾಡುವುದು, ಕೊನೆಗೆ ಇಡೀ ಬದುಕನ್ನೇ ಹಾಳು ಮಾಡಿಕೊಳ್ಳುವುದು ಬೇಕಾದಷ್ಟು ನಡೆದಿದೆ. ಅದರ ಜತೆಜತೆಯಲ್ಲೇ ಅಪರಾಧ ಜಗತ್ತಿಗೆ ಕಾಲಿಟ್ಟು ಜನಕಂಟಕರಾಗಿ ಕೊನೆಗೆ ಪೊಲೀಸರ ಗುಂಡಿಗೆ ಬಲಿಯಾಗಿ ಶಾಶ್ವತವಾಗಿ ಹೆತ್ತವರ ಪುತ್ರಶೋಕಕ್ಕೆ ಕಾರಣವಾಗುತ್ತಿರುವ ಇಂಥ ಹುಡುಗರನ್ನು ಆರ್ಮಿಗೆ ಕಳಿಸಿ ವೀರಯೋಧರನ್ನಾಗಿ ರೂಪಿಸಲು ಅವಕಾಶವಿದ್ದರೆ ಸಂಬಂಧಪಟ್ಟವರು ಯೋಚಿಸಲಿ. ಎಲ್ಲರೂ ಯೋಧರೇ ಆಗಬೇಕು ಅಂತಲ್ಲ, ಅವರ ವಿದ್ಯಾರ್ಹತೆ, ಸಾಮರ್ಥ್ಯಕ್ಕೆ ತಕ್ಕಂತೆ ಅವರನ್ನು ದೇಶ ಸೇವೆಗೆ ಬಳಲಸಿಕೊಳ್ಳಬಹುದು. ಯಾವುದಾದರೂ ವಿಭಾಗಕ್ಕೆ ನಿಯೋಜಿಸಬಹುದು. ಅಲ್ಲವೇ? ಅಲ್ಲೂ ಅವರು ಬದಲಾಗದಿದ್ದರೆ ಅಂಥವರನ್ನು ಏನು ಮಾಡಬೇಕು ಎಂಬುದು ಸೇನೆಗೆ ಗೊತ್ತಿದೆ. ಏಕೆಂದರೆ, ಹೊಡೆಯುವ ಗುಂಡುಗಳಿಗೆ ಸೇನೆ ಲೆಕ್ಕ ಕೊಡಬೇಕಿಲ್ಲ.
ಸದ್ಯಕ್ಕೆ ನಾವು ಚೀನಾ ಜತೆ ಬಿಕ್ಕಟ್ಟಿನಲ್ಲಿದ್ದೇವೆ. ಅವರ ಸೇನೆ, ನಮ್ಮ ಸೇನೆಯ ಶಕ್ತಿ ಸಾಮರ್ಥ್ಯಗಳನ್ನು ಓರೆಗೆ ಹಚ್ಚುವ ವರದಿಗಳನ್ನು ಮಾಧ್ಯಮಗಳು ಕೊಂಚ ಅತಿರೇಖವಾಗಿಯೇ ನೀಡುತ್ತಿವೆ. ಕೆಲ ವಾಹಿನಿಗಳಂತೂ ಚೀನಾದಲ್ಲಿ ಅಷ್ಟು ಸೈನಿಕರಿದ್ದಾರೆ, ನಮ್ಮಲ್ಲಿ ಇಷ್ಟೇ ಸೈನಿಕರಿದ್ದಾರೆ. ಅವರಲ್ಲಿ ಅಷ್ಟು ವಿಮಾನಗಳಿವೆ, ನಮ್ಮಲ್ಲಿ ಮಾತ್ರ ಇಷ್ಟೇ ವಿಮಾಗಳಿವೆ ಎಂದು ಜೋರುದನಿಯಲ್ಲಿ ಕಿರುಚುತ್ತಿವೆ. ದೇಶರಕ್ಷಣೆಗೆ ಸಂಬಂಧಪಟ್ಟ ಇಂಥ ಸೂಕ್ಷ್ಮ ಸಂಗತಿಗಳನ್ನು ಬಹಿರಂಗವಾಗಿ ಚರ್ಚಿಸಬೇಕೇ ಬೇಡವೇ ಎಂಬ ಬಗ್ಗೆ ಮಾಧ್ಯಮಗಳು ಆತ್ಮಾವಲೋಕನ ಮಾಡಿಕೊಳ್ಳುವುದಕ್ಕೆ ಇದು ಸಕಾಲ. ದೇಶದ ಸಾರ್ವಭೌಮತೆಯ ಮುಂದೆ ಟಿಆರ್ಪಿ, ಸರುಕ್ಯೂಲೇಷನ್ ಎಂಬುದು ತೀರಾ ಕ್ಷುಲ್ಲಕ.
ನಮ್ಮ ಪದಾತಿದಳವನ್ನು ಮತ್ತಷ್ಟು ಬಲಶಾಲಿಯನ್ನಾಗಿಸುವ, ಅದರ ಸಂಖ್ಯಾಬಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಮ್ಮ ದೇಶದ ಮೂವತ್ತೂ ರಾಜ್ಯಗಳಲ್ಲಿರುವ ಕ್ರಿಮಿನಲ್ಲುಗಳನ್ನು ಹೀಗೆ ಹುಡುಕಿಹುಡುಕಿ ಹೊರತೆಗೆದು ಗಡಿಗೆ ಬಿಡಬಾರದೇ? ಅವರಲ್ಲೂ ದೇಶಪ್ರೇಮವನ್ನು ಉಕ್ಕಿಸಬಾರದೇ? ಹಾಗೆ ಮಾಡಿದರೆ ದೇಶದೊಳಗೆ ಕ್ರಿಮಿನಲ್ಲುಗಳ ಹುಟ್ಟನ್ನು ಹುಟ್ಟಡಗಿಸಬಹುದು.
ಪೊಲೀಸರು, ಸೇನಾಧಿಕಾರಿಗಳು ಮತ್ತು ನಮ್ಮ ನಾಯಕರಾದವರು ಈ ಬಗ್ಗೆ ಯೋಚಿಸುತ್ತಾರೆಯೇ? ಯೋಚಿಸುತ್ತಾರೆಂಬ ನಂಬಿಕೆ ನನಗಿದೆ.
#ಜೈಹಿಂದ್ #ಜೈಜವಾನ್
***
ಶೀರ್ಷಿಕೆ: ಸರಿಲೇರು ನೀಕೆವ್ವರು ಚಿತ್ರದಲ್ಲಿ ಯೋಧನ ಪಾತ್ರದಲ್ಲಿ ಮಹೇಶ್ ಬಾಬು.