ಕರ್ನಾಟಕದಲ್ಲಿ ಬೆಂಗಳೂರು ನಗರ ವಲಯ ಸಂಚಾಲರಾಗಿದ್ದ ತ್ಯಾಗಿ ತಪಸ್ವಿ ಮೂರ್ತಿಗಳಾಗಿದ್ದ ಬ್ರಹ್ಮಾಕುಮಾರಿ ಪದ್ಮಜೀ ಅವರು 52 ವರ್ಷಗಳಿಂದ ತಮ್ಮ ಜೀವನವನ್ನು ಈಶ್ವರೀಯ ಸೇವೆಯಲ್ಲಿ ಸಮರ್ಪಿಸಿದ್ದರು.
ಬೆಂಗಳೂರು: ಕರ್ನಾಟಕದ ಬೆಂಗಳೂರು ಸಿಟಿ ಸಂಚಾಲರಾಗಿದ್ದ ತ್ಯಾಗಿ, ತಪಸ್ವಿ ಮೂರ್ತಿಗಳಾಗಿದ್ದ ಬ್ರಹ್ಮಾಕುಮಾರಿ ಪದ್ಮ ಜೀ ಅವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಜಕ್ಕೂರಿನ ಬ್ರಹ್ಮಾಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದ ಶಿವಸುಂದರ ಪವಿತ್ರವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ತಿರುಪತಿ ಹಾಗೂ ಸಿಟಿ ವಲಯ ನೂತನ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾ ಜೀ ಅವರು ಪದ್ಮಬೆಹನ್ ಜೀ ಅವರ ಭಾವಚಿತ್ರಕ್ಕೆ ಪುಷ್ಪನಮನಗಳನ್ನು ಸಲ್ಲಿಸಿ ಅವರ ಸುದೀರ್ಘ ಸೇವಾ ಕಾರ್ಯವನ್ನು ಕೊಂಡಾಡಿದರು.
ನೂರಾರು ಸೇವಾ ಕೇಂದ್ರಗಳ ಅಭಿವೃದ್ದಿಯಲ್ಲಿ 52 ವರ್ಷಗಳಿಂದ ತಮ್ಮ ಜೀವನವನ್ನು ಸೇವೆಗೆ ಮುಡುಪಾಗಿಟ್ಟಿದ್ದರು. ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯ 1937ರಲ್ಲಿ ಸ್ಥಾಪನೆಯಾಗಿ 140 ದೇಶಗಳಲ್ಲಿ ವಿಶೇಷ ಸೇವೆಯನ್ನು ಮಾಡುತ್ತಾ ಬಂದಿರುವುದು ತಿಳಿದ ವಿಷಯ. ಕರ್ನಾಟಕದಲ್ಲಿ ಬೆಂಗಳೂರು ನಗರ ವಲಯ ಸಂಚಾಲರಾಗಿದ್ದ ತ್ಯಾಗಿ ತಪಸ್ವಿ ಮೂರ್ತಿಗಳಾಗಿದ್ದ ಬ್ರಹ್ಮಾಕುಮಾರಿ ಪದ್ಮಜೀ ಅವರು 52 ವರ್ಷಗಳಿಂದ ತಮ್ಮ ಜೀವನವನ್ನು ಈಶ್ವರೀಯ ಸೇವೆಯಲ್ಲಿ ಸಮರ್ಪಿಸಿದ್ದವರಾಗಿದ್ದರೆಂದು ಲೀಲಾ ಜೀ ಅವರು ಸ್ಮರಿಸಿದರು.
ಇದಲ್ಲದೆ ಕರ್ನಾಟಕ ಹಾಗೂ ಆಂಧ್ರ ಪ್ರದೇಶದಲ್ಲಿ ನೂರಾರು ಸೇವಾಕೇಂದ್ರಗಳನ್ನು ಸ್ಥಾಪನೆ ಮಾಡಿ ಲಕ್ಷಾಂತರ ಜನರ ಜೀವನವನ್ನು ಸುಖ-ಶಾಂತಿಮಯವನ್ನಾಗಿ ಮಾಡಿದ್ದಾರೆ. ಪದ್ಮಬೆಹನ್ ಜೀ ಬಹಳ ನಮ್ರಚಿತ್ತರು, ಉದಾರ ಮನಸ್ಸುಳ್ಳವರು, ದಯಾಹೃದಯಿಗಳು, ತ್ಯಾಗಿಗಳು, ಶಾಂತ ಚಿತ್ತರು, ಹರ್ಷಿತ ಮುಖವುಳ್ಳವರು ಆಗಿದ್ದರ ಬಗ್ಗೆ ಅವರು ಹೆಮ್ಮೆಯ ಮಾತುಗಳನ್ನಾಡಿದರು.
ಇನ್ನು ಸಮಸ್ತರ ಕಷ್ಟ-ಸುಖಗಳಿಗೆ ಸ್ಪಂದಿಸುತ್ತ ಎಲ್ಲರಿಗೂ ತಾಯಿಯ ಪಾಲನೆ ನೀಡುವ ಮಾತೃ ಸ್ವರೂಪಿಯಾಗಿಯೂ ಇದ್ದು, ಇದೇ ತಿಂಗಳ 17ರಂದು ತಮ್ಮ ಹಳೆಯ ಶರೀರ ತ್ಯಜಿಸಿ ಪರಮಾತ್ಮನ ಮಡಿಲು ಸೇರಿದ್ದಾರೆ. ಅವರ ಆತ್ಮ ಅಮರವಾಗಿರಲಿದೆ ಎಂದರು.
ಇದೇ ವೇಳೆ ದೇಶ ವಿದೇಶಗಳಲ್ಲಿ ಲಕ್ಷಾಂತರ ಸಹೋದರ ಸಹೋದರಿಯರು ಪದ್ಮ ಬೆಹನ್ ಜೀ ಅವರ ಶ್ರದ್ಧಾಂಜಲಿ ಕಾರ್ಯಕ್ರಮದ ನೇರಪ್ರಸಾರ ವೀಕ್ಷಿಸುತ್ತ ಶ್ರದ್ದಾಂಜಲಿ ಅರ್ಪಿಸಿದರು.
ಇದೇ ದಿನ ನೂರಾರು ಸೇವಾಕೇಂದ್ರಗಳಲ್ಲಿ ಶ್ರದ್ದಾಂಜಲಿ ಅರ್ಪಿಸುವುದರ ಮೂಲಕ ಪದ್ಮ ಬೆಹನ್ ಜೀ ಅವರಿಗೆ ಗೌರವ ಸಲ್ಲಿಸಲಾಯಿತು. ಅವರ ಸ್ಮರಣಾರ್ಥ ಹಲವು ಸೇವಾಕೇಂದ್ರಗಳ ಮೂಲಕ ಬಡವ ಬಲ್ಲಿದರಿಗೆ ಹಾಗೂ ಸಂಕಷ್ಟದ ಹಾದಿಯಲ್ಲಿರುವ ಅನೇಕ ಕುಟುಂಬಗಳಿಗೆ ದವಸ ಧಾನ್ಯಗಳ ವಿತರಣೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಬೆಂಗಳೂರು ಸಿಟಿ ವಲಯದ ನೂತನ ಸಂಚಾಲಕರನ್ನಾಗಿ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾ ಜೀ ಅವರನ್ನು ನೇಮಿಸಲಾಯಿತು. ಈ ಸಂದರ್ಭದಲ್ಲಿ ಜಾಲಹಳ್ಳಿ ಕ್ರಾಸ್‌ನ ಸುಭದ್ರ ಬೆಹನ್ ಜೀ, ನೆಲಮಂಗಲದ ವಿಜಿಯಾ ಬೆಹನ್ ಜೀ, ಪುತ್ತೂರಿನ ರಮಣಿ ಬೆಹನ್ ಜೀ ಸೇರಿದಂತೆ ತಿರುಪತಿ ಹಾಗೂ ಬೆಂಗಳೂರು ನಗರದ ಚಾಮರಾಜಪೇಟೆ ವಲಯದ ಸೇವಾ ಕೇಂದ್ರಗಳ ಬ್ರಹ್ಮಾಕುಮಾರೀ ಸಹೋದರಿ ಸಹೋದರರು ಇದ್ದರು.