ಮೇ 26ರಂದು ತಮ್ಮ ನೂರಾನಾಲ್ಕು ವರ್ಷಗಳ ಪರಿಪೂರ್ಣ ಮತ್ತು ಆದರ್ಶಮಯ ಸ್ಫೂರ್ತಿದಾಯಕ ಬದುಕಿಗೆ ವಿದಾಯ ಹೇಳಿದ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರ ಜತೆಗಿನ ತಮ್ಮ ಒಡನಾಟವನ್ನು ಇಲ್ಲಿ ಸ್ಮರಿಸಿದ್ದಾರೆ ಸುಪ್ರೀಂ ಕೋರ್ಟ್‌ನ ಗೌರವಾನ್ವಿತ ವಿಶ್ರಾಂತ ನ್ಯಾಯಮೂರ್ತಿಗಳಾದ ಜಸ್ಟೀಸ್ ವಿ. ಗೋಪಾಲ ಗೌಡ ಅವರು.
ಎಚ್.ಎಸ್.ದೊರೆಸ್ವಾಮಿ ಅವರು ಶತಾಯುಷಿ ಮತ್ತು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಸರಳತೆ, ನಮ್ರತೆ ಹಾಗೂ ಪ್ರಾಮಾಣಿಕತೆಗೆ ಹೆಸರಾಗಿದ್ದರಲ್ಲದೆ, ಸಮಾಜಕ್ಕಾಗಿ ತಮ್ಮ ಬದುಕನ್ನು ಮೀಸಲಿಟ್ಟಿದ್ದರು.
ಅವರ ಅಗಲಿಕೆ ದೇಶಕ್ಕಾದ ಬಹುದೊಡ್ಡ ನಷ್ಟ. ಯಾವಾಗಲೂ ಜನರ ಪರವಾಗಿಯೇ ಇದ್ದರು ಅವರು. ಈಗ ನಮ್ಮ ಜತೆಯಲ್ಲಿ ಭೌತಿಕವಾಗಿ ಇಲ್ಲದಿರಬಹುದು. ಆದರೆ, ತಮ್ಮ ಚಿಂತನೆಗಳು, ಆದರ್ಶಗಳು ಹಾಗೂ ಇನ್ನೂ ಮಾಡಬೇಕಿರುವ ಕೆಲಸಗಳ ಮೂಲಕ ಇಡೀ ದೇಶದ ಜನರೆಲ್ಲರ ಮನಸ್ಸಿನಲ್ಲಿ ಉಳಿದುಕೊಂಡಿದ್ದಾರೆ. ತಮ್ಮ ಜೀವನಪೂರ್ತಿ ಸಮಾಜದ ಹಿಂದುಳಿದ ವರ್ಗದ ಜನರ ಪರವಾಗಿ ಹೋರಾಟ ನಡೆಸಿದರಲ್ಲದೆ, ಶೋಷಿತ ಸಮುದಾಯಗಳ ದನಿಯಾಗಿದ್ದರು.
ಅಲ್ಲದೆ, ಸಮಾಜದ ಹಿಂದುಳಿದ ಜನರ ಪರವಾಗಿದ್ದುಕೊಂಡೇ ಅವರೆಲ್ಲರಿಗೂ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಮಾನತೆ ತಂದುಕೊಡಲು ಅವಿರತ ಹೋರಾಟ ನಡೆಸಿದರು. ಸಮಾಜದಲ್ಲಿ ತುಳಿತಕ್ಕೆ ಒಳಗಾಗಿದ್ದ ಶೋಷಿತ ಜನರಿಗೆ ಸಮಾನತೆಯನ್ನು ತಂದುಕೊಡುವುದು ಅವರ ಕನಸಾಗಿತ್ತು.
ರಾಷ್ಟ್ರಪಿತ ಮಹಾತ್ಮ ಗಾಂದೀಜಿ ಅವರಿಂದ ಪ್ರಭಾವಿತರಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ದೊರೆಸ್ವಾಮಿ ಅವರು ಕಾರ್ಯ ನಿರ್ವಹಿಸಿದ್ದರು. ಸ್ವಾತಂತ್ರ್ಯ ಚಳವಳಿ ಕಾಲದಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ಜೈಲಿನಲ್ಲಿದ್ದರು ಮತ್ತೂ ತುರ್ತುಪರಿಸ್ಥಿತಿ ಕಾಲದಲ್ಲೂ ಇಂದಿರಾ ಗಾಂಧಿ ಅವರ ಸರ್ವಾಧಿಕಾರಿ ನೀತಿಯನ್ನು ಪ್ರಶ್ನಿಸಿ ಪುನಾ ಜೈಲು ಪಾಲಾಗಿದ್ದರು.
ಅಲ್ಲದೇ, ದೊರೆಸ್ವಾಮಿ ಅವರ ತತ್ತ್ವಾದರ್ಶಗಳು ಯುವಕರು, ರೈತರು, ಕೃಷಿ ಕಾರ್ಮಿಕರು, ಸಾಮಾಜಿಕ ಕಾರ್ಯಕರ್ತರು, ಹೋರಾಟಗಾರರು, ಬುದ್ಧಿಜೀವಿಗಳು, ಬರಹಗಾರರು ಹಾಗೂ ಸಮಾಜದಲ್ಲಿನ ತುಳಿತಕ್ಕೆ ಒಳಗಾದ ಜನರಿಗೆ ದಾರಿ ದೀಪವಾಗಿದ್ದವು.
ದೊರೆಸ್ವಾಮಿ ಅವರು ಯಾವಾಗಲೂ ಸರಕಾರಗಳ ಜನವಿರೋಧಿ ನೀತಿಗಳನ್ನು ಪ್ರಶ್ನೆ ಮಾಡುತ್ತಿದ್ದರು. ಜನರಿಗೆ ಆಗುತ್ತಿದ್ದ ಅನ್ಯಾಯದ ವಿರುದ್ಧ ದನಿ ಎತ್ತುತ್ತಿದ್ದದ್ದನ್ನು ಮತ್ತೂ ಅವರಿಗೆ ಎಚ್ಚರಿಕೆ, ಮಾರ್ಗದರ್ಶನ ನೀಡುತ್ತಿದ್ದದ್ದನ್ನು ಸ್ವತಃ ನಾನೇ ಕಣ್ಣಾರೆ ಕಂಡಿದ್ದೇನೆ.
ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಆಡಳಿತ ವ್ಯವಸ್ಥೆಗಳಿಂದ ಉತ್ತಮ ಆಡಳಿತವನ್ನು ಪಡೆಯಲು ಅವರು ತಮ್ಮ ಜೀವನದುದ್ದಕ್ಕೂ ಪಟ್ಟುಬಿಡದೆ ಎಲ್ಲಾ ಹೋರಾಟಗಾರರಿಗೆ ಪ್ರೇರಣೆ ಮತ್ತು ಶಕ್ತಿಯನ್ನು ತುಂಬುತ್ತಿದ್ದರು.
ಗೌರವಾನ್ವಿತ ಸುಪ್ರೀಂ ಕೋರ್ಟ್ ಸೇವೆಯಿಂದ ನಿವೃತ್ತಿಯಾದ ಮೇಲೆ ನಿರಂತರವಾಗಿ ನಾನು ಅವರ ಸಂಪರ್ಕದಲ್ಲಿದ್ದೆ. ಅನೇಕ ಸಲ ಅವರನ್ನು ಭೇಟಿಯಾಗಿ ತುಂಬಾ ಹೊತ್ತು ಜನರ ಸಮಸ್ಯೆಗಳು, ಪ್ರಚಲಿತ ವಿಷಯಗಳು, ಜ್ವಲಂತ ಸಮಸ್ಯೆಗಳ ಬಗ್ಗೆ ಬಹಳಷ್ಟು ಹೊತ್ತು ಮಾತನಾಡುತ್ತಿದ್ದೆ. ಅಲ್ಲದೇ ಅವರ ಆರೋಗ್ಯವನ್ನೂ ವಿಚಾರಿಸಿಕೊಳ್ಳುತ್ತಿದ್ದೆ. ಕೆಲ ಪಟ್ಟಭದ್ರ ಹಿತಾಸಕ್ತಿಯುಳ್ಳ ರಾಜಕಾರಣಿಗಳು ದೊರೆಸ್ವಾಮಿ ಅವರ ಸ್ವಾತಂತ್ರ್ಯ ಹೋರಾಟವನ್ನು ಶಂಕಿಸುವ ಅಥವಾ ಅಪಮಾನಿಸುವ ರೀತಿಯಲ್ಲಿ ಮಾತನಾಡಿದಾಗ ನಾನು ಖಂಡಿಸಿದ್ದೆ ಕೂಡ.
ಅವರ 104ನೇ ಜನ್ಮದಿನದಂದು ಅವರ ಹಿತೈಷಿಗಳು, ಅಭಿಮಾನಿಗಳು ಒಂದು ವೆಬಿನಾರ್ ಆಯೋಜನೆ ಮಾಡಿದ್ದರು. ಆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರಿಗೆ ಉತ್ತಮ ಆರೋಗ್ಯ ಸಿಗಲಿ ಎಂದು ಹಾರೈಸುವ ಅವಕಾಶ ನನಗೆ ಸಿಕ್ಕಿತ್ತು. ಅವರು ಇನ್ನಷ್ಟು ದೀರ್ಘಕಾಲ ನಮ್ಮ ದೇಶದ ಜನರಿಗೆ ಮಾರ್ಗದರ್ಶನ ನೀಡಲಿ ಎಂದು ಪ್ರಾರ್ಥಿಸಿದ್ದೆ.
ಅವರು ರಾಷ್ಟ್ರದ ಜನರಿಗೆ, ವಿಶೇಷವಾಗಿ ಯುವಕರಿಗೆ, ಸಾಮಾಜಿಕ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡುವುದನ್ನು ಮುಂದುವರಿಸುತ್ತಾ ದೀರ್ಘಕಾಲ ಆರೋಗ್ಯಕರವಾಗಿ ಮತ್ತು ದೃಢವಾಗಿರುತ್ತಿದ್ದರು. ನಾನು ಹಂಚಿಕೊಳ್ಳಲು ಬಯಸಿದ ಸವಿನೆನಪು ಇದಾಗಿದೆ.
ಅವರು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಜನಪರ ಸರಕಾರವನ್ನು ತರಲು ಮತ್ತು ದೇಶದ ಜನರಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಮಾನತೆಯನ್ನು ಸಾಧಿಸಲು ಯುವಕರು, ವಿದ್ಯಾರ್ಥಿಗಳು ಮತ್ತು ಜನರಪರ ಗುಂಪುಗಳ ಆಂದೋಲನವನ್ನು ಸಶಕ್ತವಾಗಿ ಕಟ್ಟಲು ಬಹುವಾಗಿ ಶ್ರಮಿಸಿದರು.
ಅವರ ಅಗಲಿಕೆಗೆ ಸಮಾಜದ ಶೋಷಿತ ಸಮುದಾಯವು ಅರ್ಥಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತದೆ. ಅವರಿಗೆ ನಮ್ಮೆಲ್ಲರ ಹೃದಯಪೂರ್ವಕ ನಮನಗಳನ್ನು ಸಲ್ಲಿಸುತ್ತಾ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.
- ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..