ಚಿಕ್ಕಬಳ್ಳಾಪುರದಲ್ಲಿ ಹೆಲ್ತ್ ಮಿನಿಸ್ಟರ್ ರೌಂಡ್ಸ್; ಕೋವಿಡ್ ಕೇರ್ ಸೆಂಟರ್‌ಗಳ ಪರಿಶೀಲನೆ
ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಲಾಕ್‌ಡೌನ್ ವಿಸ್ತರಣೆ ಮಾಡಬೇಕೋ, ಬೇಡವೋ ಅನ್ನುವುದರ ಬಗ್ಗೆ ತಜ್ಞರ ತಾಂತ್ರಿಕ ಸಲಹಾ ಸಮಿತಿಯು ಸೋಮವಾರ ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಿದೆ. ಈ ಬಗ್ಗೆ ಕೂಲಂಕಷವಾಗಿ ಚರ್ಚಿಸಲು ಮಂಗಳವಾರ ಸಚಿವ ಸಂಪುಟ ಸಭೆ ನಡೆಯಲಿದೆ. ಮುಖ್ಯಮಂತ್ರಿಗಳು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿಐಊ ಆಗಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ತಾಲೂಕಿನ ಆವಲಗುರ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂಲಕುಂಟೆ ಗ್ರಾಮದಲ್ಲಿ ಅಲೆಮಾರಿ-ಮತ್ತು ಅರೆ ಅಲೆಮಾರಿ ಜನಾಂಗ ಕುಟುಂಬಗಳಿಗೆ ಜಿಲ್ಲಾಡಳಿತ ಮತ್ತು ಇಷಾ ಪ್ರತಿಷ್ಠಾನ (ಫೌಂಡೇಷನ್) ವತಿಯಿಂದ ಉಚಿತ ಆಹಾರ ಧಾನ್ಯಗಳ ಕಿಟ್ ವಿತರಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ತಾಂತ್ರಿಕ ಸಲಹಾ ಸಮಿತಿಯು 15 ಪುಟಗಳ ವರದಿಯನ್ನು ಮುಖ್ಯಮಂತ್ರಿಗಳಿಗೆ ನೀಡಿದೆ. ಮಂಗಳವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಲಾಕ್‌ಡೌನ್ ವಿಸ್ತರಿಸಬೇಕೋ, ಬೇಡವೋ ಎಂಬುದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಈ ವಿಷಯದಲ್ಲಿ ನಾನು ಅಥವಾ ಇತರೆ ಶಾಸಕರ ಅಭಿಪ್ರಾಯಕ್ಕಿಂತ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಎಲ್ಲಾ ರೀತಿಯಲ್ಲೂ ಕೂಲಂಕಷವಾಗಿ ಅಧ್ಯಯನ ನಡೆಸಿ ನೀಡಿರುವ ತಾಂತ್ರಿಕ ಸಲಹಾ ಸಮಿತಿಯ ವರದಿಗೆ ಹೆಚ್ಚಿನ ಮಹತ್ತ್ವ ಇರುತ್ತದೆ. ಹಾಗಾಗಿ ವರದಿ ಆಧರಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು ಸಚಿವರು.
ಲಾಕ್‌ಡೌನ್ʼನಿಂದ ಸಾಕಷ್ಟು ಅನುಕೂಲವಾಗಿದೆ. 2ನೇ ಅಲೆ ಆರಂಭದ ಸಂದರ್ಭದಲ್ಲಿ ಶೇ.40ರ ಆಸುಪಾಸಿನಲ್ಲಿದ್ದ ಪಾಸಿಟೀವ್ ದರದ ಪ್ರಮಾಣ ಈಗ ಶೇ.14-15ಕ್ಕೆ ಇಳಿದಿದೆ. ಮೈಸೂರು ಸೇರಿದಂತೆ ಏಳೆಂಟು ಜಿಲ್ಲೆಗಳಲ್ಲಿ ಮಾತ್ರ ಶೇ.20-30ರಷ್ಟು ಇದ್ದು, ಉಳಿದ ಜಿಲ್ಲೆಗಳಲ್ಲಿ ಶೇ.12, 14ಕ್ಕೆ ಕಡಿಮೆಯಾಗಿದೆ. ಈ ದಿಸೆಯಲ್ಲಿ ಲಾಕ್‌ಡೌನ್ʼನಿಂದ ಸಾಕಷ್ಟು ಅನುಕೂಲವಾಗಿದೆ. ಮುಂದಿನ ದಿನಗಳಲ್ಲೂ ಇದು ಮತ್ತಷ್ಟು ಕಡಿಮೆ ಆಗಲಿದೆ. ಜನರೂ ಕೂಡ ಎರಡು ಡೋಸ್ ಲಸಿಕೆ ಹಾಕಿಕೊಳ್ಳುವವರೆಗೂ ಮುಂಜಾಗ್ರತೆ ವಹಿಸಬೇಕು. ಲಾಕ್‌ಡೌನ್ ತೆರವು ಮಾಡಿದ ಕೂಡಲೇ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಮೀರಿ ನಡೆದರೆ ಮತ್ತೆ ಎರಡನೇ ಅಲೆ ಹಾಗೆಯೇ ಮುಂದುವರಿಯುತ್ತದೆ. ಹಾಗಾಗಿ ನಮ್ಮ ಜಾಗ್ರತೆಯಲ್ಲಿ ನಾವು ಇರಬೇಕು ಎಂದು ಡಾ.ಸುಧಾಕರ್ ಸಲಹೆ ನೀಡಿದರು.
ಬ್ಲಾಕ್ ಫಂಗಸ್ʼಗೆ ಚಿಕಿತ್ಸೆ ಪ್ರಾರಂಭ
ರಾಜ್ಯದಲ್ಲಿ ಈವರೆಗೆ 1,250 ಬ್ಲಾಕ್ ಫಂಗಸ್ ಸೋಂಕಿತರು ಪತ್ತೆಯಾಗಿದ್ದಾರೆ. ಇವರಿಗೆ ಈಗಾಗಲೇ ಚಿಕಿತ್ಸೆ ಪ್ರಾರಂಭಿಸಿದ್ದೇವೆ. ಆದರೆ, ಇದಕ್ಕೆ ಸಂಬಂಧಿಸಿದಂತೆ ಔಷಧಿ ಸಿಗಬೇಕಾದಷ್ಟು ಸಿಗುತ್ತಿಲ್ಲ. ಆದರೂ ಕೇಂದ್ರ ಸರಕಾರ ಎಲ್ಲಾ ರೀತಿಯಲ್ಲೂ ಪ್ರಯತ್ನ ಮಾಡಿ ಕೇಂದ್ರ ಸಚಿವ ಸದಾನಂದಗೌಡ ಅವರು ಕಳುಹಿಸಿ ಕೊಡುತ್ತಿದ್ದಾರೆ. ಇನ್ನೂ ಹೆಚ್ಚಿನ ಬೇಡಿಕೆ ಇಟ್ಟಿದ್ದೇವೆ. ನಮಗೆ ಪ್ರತಿದಿನ ಕನಿಷ್ಠ ಅಂದರೂ 8,000-10,000 ಬಂದರೆ ಒಬ್ಬೊಬ್ಬರಿಗೆ 6 ವಯಲ್ಸ್ ಕೊಡಬಹುದು. ಆದರೂ ನಿರ್ವಹಣೆ ಮಾಡಲಾಗುತ್ತಿದೆ ಎಂದ ಅವರು, ಹೆಚ್ಚಿನ ಸ್ಟೀರಾಯ್ಡ್ ಬಳಕೆ, ದೀರ್ಘಾವಧಿ ಕಾಲ ಆಮ್ಲಜನಕ ಬಳಕೆ ಹಾಗೂ ಇನ್ನಿತರೆ ಕಾರಣಗಳಿಂದ ಬ್ಲಾಕ್ ಫಂಗಸ್ ಬರಬಹುದು. ಆದರೆ, ಯಾವ ಕಾರಣಕ್ಕೆ ಫಂಗಸ್ ಬರುತ್ತದೆ ಎಂಬುದರ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಸದ್ಯ ಆಕ್ಸಿಜನ್ ಸಮಸ್ಯೆ ಏನೂ ಇಲ್ಲ. ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿರುವಂತೆ ಐಸಿಯು, ವೆಂಟಿಲೇಟರ್ ಹಾಗೂ ಆಕ್ಸಿಜನ್ ಮೇಲೆ ಬೇಡಿಕೆ ಕಡಿಮೆಯಾಗಿದೆ. ಎಲ್ಲೂ ಕೂಡ ಆಕ್ಸಿಜನ್ ಸಮಸ್ಯೆ ಕಂಡುಬರುತ್ತಿಲ್ಲ ಎಂದು ಸಚಿವರು ಹೇಳಿದರು.
ಕೋವಿಡ್ ಆರೈಕೆ ಕೇಂದ್ರಕ್ಕೆ ಭೇಟಿ
ಆಹಾರ ಕಿಟ್ ವಿತರಣೆಯ ನಂತರ ತಾಲೂಕಿನ ಕುಲುಮೇನಹಳ್ಳಿ ಗ್ರಾಮದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯಲ್ಲಿ ತೆರೆದಿರುವ ಕೋವಿಡ್ ಆರೈಕೆ ಕೇಂದ್ರಕ್ಕೆ ಭೇಟಿ ಕೊಟ್ಟು, ಅಲ್ಲಿನ ಸೋಂಕಿತರ ಯೋಗಕ್ಷೇಮವನ್ನು ವಿಚಾರಿಸಿದರು. ನಂತರ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ” ವೈದ್ಯರ ನಡೆ ಹಳ್ಳಿಯ ಕಡೆ “ಕಾರ್ಯಕ್ರಮದ ಅಂಗವಾಗಿ ಮೊಬೈಲ್ ಕ್ಲಿನಿಕ್ ವಾಹನಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಈ ವಾಹನದಲ್ಲಿ ವೈದ್ಯರು ಹಾಗೂ ಸಹಾಯಕ ಸಿಬ್ಬಂದಿ ತಂಡ ತಮ್ಮ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ಕೊಟ್ಟು ಅಲ್ಲಿನ ಸಾರ್ವಜನಿಕರಿಗೆ ರ್ಯಾಫಿಡ್ ಆಂಟಿಜನ್(RAT) ಕರೋನಾ ಪರೀಕ್ಷೆ ಮಾಡಿ ಸೋಂಕು ದೃಢಪಟ್ಟವರಿಗೆ ಸೂಕ್ತ ಚಿಕಿತ್ಸೆ ಮಾಡಿ ಅಗತ್ಯವಿರುವರಿಗೆ ಆರೋಗ್ಯ ಕಿಟ್ ಗಳನ್ನು ಸ್ಥಳದಲ್ಲಿಯೇ ವಿತರಿಸುವ ವ್ಯವಸ್ಥೆಯನ್ನು ಹೊಂದಿರುತ್ತದೆ. ವ್ಯಾಪಕವಾಗಿ ಸೋಂಕು ಪ್ರಸರಿಸುತ್ತಿರುವ ಹಳ್ಳಿಗಳಲ್ಲಿ ಪರೀಕ್ಷೆ ಮಾಡಿ ಸೂಕ್ತ ಮುನ್ನೆಚ್ಚರಿಕಾ ಕ್ರಮ ವಹಿಸುವುದರಿಂದ ಮತ್ತಷ್ಟು ಸೋಂಕು ಹರಡುವುದನ್ನು ಕೂಡಲೇ ತಪ್ಪಿಸಬಹುದು. ಕೋವಿಡ್ ಸೋಂಕಿನ ಸರಪಳಿಯನ್ನು ತುಂಡರಿಸಲು ಈ ಕಾರ್ಯಕ್ರಮ ಪರಿಣಾಮಕಾರಿಯಾಗಿ ಅನುಕೂಲವಾಗಲಿದೆ. ರೋಗ ಲಕ್ಷಣಗಳಿದ್ದು RAT ಪರೀಕ್ಷೆಯಲ್ಲಿ ನೆಗೆಟೀವ್ ವರದಿ ಬಂದ ಪಕ್ಷದಲ್ಲಿ ಗಂಟಲು ಮತ್ತು ಮೂಗಿನ ದ್ರವ ಸಂಗ್ರಹಿಸಿ ಆರ್ ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಲು ಸಹಾ ಕ್ರಮ ತೆಗೆದುಕೊಳ್ಳಲಾಗುತ್ತದೆ. ಈ ಸೌಲಭ್ಯವನ್ನು ಜನರು ಸದುಪಯೋಗ ಪಡಿಸಿಕೊಳ್ಳುವಂತೆ ಸಚಿವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪಂಚಾಯಿತಿ ಸಿಇಒ ಪಿ.ಶಿವಶಂಕರ್, ನಗರಸಭೆ ಅಧ್ಯಕ್ಷ ಆನಂದರೆಡ್ಡಿ, ಉಪವಿಭಾಗಾಧಿಕಾರಿ ಎ.ಎನ್.ರಘುನಂದನ್, ತಹಸೀಲ್ದಾರ್ ಗಣಪತಿಶಾಸ್ತ್ರಿ, ತಾಲೂಕು ಪಂಚಾಯಿತಿ ಇಒ ಹರ್ಷವರ್ದನ್, ಪೌರಾಯುಕ್ತ ಲೋಹಿತ್ ಕುಮಾರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.