Lead photo courtesy: Wikipedia
ನಮ್ಮದು ಫೆಡರಲ್ ವ್ಯವಸ್ಥೆ; ಕೇರಳದ ಸಾರಿಗೆ ಜತೆ ಪೈಪೋಟಿ ನಡೆಸುವ ಉದ್ದೇಶ ನಮಗಿಲ್ಲ
ಬೆಂಗಳೂರು: ಕೇರಳವು ʼಕೆಎಸ್ಆರ್ಟಿಸಿʼ ಎಂಬ ಶಬ್ದವನ್ನು ತಾವೇ ಮೊದಲು ಬಳಸಿದ್ದರಿಂದ ಕರ್ನಾಟಕವು ಈ ಶಬ್ದವನ್ನು ಬಳಸಬಾರದು ಎಂದು ತಕರಾರು ತೆಗೆದ ಬಗ್ಗೆ ಈಗ ಟ್ರೇಡ್ಮಾರ್ಕ್ ರಿಜಿಸ್ಟ್ರಿ ತೀರ್ಪು ನೀಡಿರುವ ಬಗ್ಗೆ ಸಾರಿಗೆ ಸಚಿವರೂ ಆದ ಡಿಸಿಎಂ ಲಕ್ಷ್ಮಣ ಸವದಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ತೀರ್ಪಿನಲ್ಲಿ ಏನಿದೆ ಎಂಬ ಅಂಶವು ನಮಗೆ ಇನ್ನೂ ಅಧಿಕೃತವಾಗಿ ಇನ್ನೂ ಬಂದಿಲ್ಲ, ಅದು ಲಭ್ಯವಾದ ನಂತರ ಕರ್ನಾಟಕ ರಾಜ್ಯದ ಮುಂದಿನ ನಿಲುವು ಮತ್ತು ಕಾನೂನು ಹೋರಾಟ ಏನು ಎಂಬುದರ ಬಗ್ಗೆ ತೀರ್ಮಾನಿಸಲಾಗುವುದು ಎಂದು ಅವರು ಗುರುವಾರ ತಿಳಿಸಿದ್ದಾರೆ.
ನಮ್ಮದು ಒಕ್ಕೂಟ ವ್ಯವಸ್ಥೆ. ಅಂದರೆ, ಫೆಡರಲ್ ಸಿಸ್ಟಮ್. ಒಂದು ರಾಜ್ಯವು ಮತ್ತೊಂದು ರಾಜ್ಯದ ಜತೆಗೆ ಯಾವುದೇ ಸಂಘರ್ಷವಿಲ್ಲದೆ ಸೌಹಾರ್ದಯುತವಾಗಿ ಸಂಬಂಧ ಇಟ್ಟುಕೊಂಡು ಹೋಗಬೇಕೆಂದು ಈ ಫೆಡರಲ್ ಸಿಸ್ಟಮ್ ಹೇಳುತ್ತದೆ. ಆದರೆ, ದುರದೃಷ್ಟವಶಾತ್ ಈ ವಿವಾದ ಅನಗತ್ಯವಾಗಿ ಎದ್ದಿದೆ. ಏಕೆಂದರೆ ಖಾಸಗಿ ಸಂಸ್ಥೆಗಳಲ್ಲಾದರೆ ಈ ರೀತಿಯ ಹೆಸರು ಅಥವಾ ಟ್ರೇಡ್ಮಾರ್ಕ್ʼಗಳಿಂದ ಅವರ ವ್ಯವಹಾರ ಮತ್ತು ಲಾಭಗಳ ಮೇಲೆ ಪ್ರಭಾವ ಬೀಳುತ್ತದೆ. ಆದರೆ ಸರಕಾರಿ ಸಂಸ್ಥೆಗಳು ಹಾಗಲ್ಲ. ಇಲ್ಲಿ ಜನರ ಸೇವೆಯ ಮುಖ್ಯ. ಕರ್ನಾಟಕವಾಗಲಿ ಕೇರಳವಾಗಲಿ ಪರಸ್ಪರ ಸಾರಿಗೆ ಕ್ಷೇತ್ರದಲ್ಲಿ ಲಾಭ ಗಳಿಸುವ ಮೇಲಾಟಕ್ಕೆ ಅಥವಾ ಸ್ಪರ್ಧೆಗೆ ಮುಂದಾಗದೆ ಸಾರ್ವಜನಿಕರ ಹಿತಾಸಕ್ತಿ ಮತ್ತು ಸೇವೆಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿವೆ ಎಂದು ಅವರು ಹೇಳಿದ್ದಾರೆ.
ಹೀಗಾಗಿ ಈ ವಿಷಯವನ್ನು ಯಾವುದೇ ರಾಜ್ಯಗಳು ಪ್ರತಿಷ್ಠೆಯ ವಿಷಯವನ್ನಾಗಿ ಮಾಡಿಕೊಳ್ಳಬಾರದು. ಇದು ಕೇರಳಕ್ಕೇನು ಸಂಭ್ರಮಪಡುವಂಥ ವಿಚಾರವೇನಲ್ಲ. ಕರ್ನಾಟಕದಲ್ಲಿ ʼಕೆಎಸ್ಆರ್ಟಿಸಿʼ ಎಂಬ ಹೆಸರಿದ್ದರೆ ಅದರಿಂದ ಕೇರಳ ರಾಜ್ಯದ ʼಕೆಎಸ್ಆರ್ಟಿಸಿʼ ಸಂಸ್ಥೆಗೆ ಯಾವುದೇ ನಷ್ಟವೇನಿಲ್ಲ. ಕರ್ನಾಟಕವು ಕೇರಳದ ಸಾರಿಗೆ ಸಂಸ್ಥೆಗಳೊಂದಿಗೆ ಯಾವತ್ತೂ ಪೈಪೋಟಿಗೆ ಇಳಿದಿದ್ದಿಲ್ಲ ಎಂಬುದನ್ನು ಕೇರಳ ಮೊದಲು ಅರ್ಥಮಾಡಿಕೊಳ್ಳಬೇಕು ಎಂದಿದ್ದಾರೆ ಸವದಿ.
ಇಂತಹ ವಿಷಯಗಳಲ್ಲಿ ಅನಗತ್ಯವಾಗಿ ವಿವಾದಗಳನ್ನು ಹೆಚ್ಚು ಮಾಡುತ್ತಾ ಪರಸ್ಪರ ರಾಜ್ಯಗಳಲ್ಲಿ ವಿವಾದಗಳನ್ನು ಬೆಳೆಸುವ ಪರಿಪಾಠಕ್ಕೆ ನಾವೆಲ್ಲರೂ ಅಂತ್ಯ ಹಾಡಬೇಕು. ದೇಶದ ಹಿತದೃಷ್ಟಿಯಿಂದ ರಾಜ್ಯ ರಾಜ್ಯಗಳ ನಡುವಿನ ಬಾಂಧವ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯವಾದ ವಿಷಯ ಎಂದು ಅವರು ಪ್ರತಿಪಾದಿಸಿದ್ದಾರೆ.