- ಮೇಲಿನ ಚಿತ್ರಗಳು: ಶಿಲ್ಪಾ ನಾಗ್ & ರೋಹಿಣಿ ಸಿಂಧೂರಿ
ಮೈಸೂರು ನಗರ ಪಾಲಿಕೆ ಆಯುಕ್ತೆ ಹುದ್ದೆ ಮತ್ತು ಭಾರತೀಯ ಆಡಳಿತಾತ್ಮಕ ಸೇವೆ ಎರಡನ್ನೂ ತ್ಯಜಿಸಿ ಸರಕಾರಕ್ಕೆ ಪತ್ರ ಬರೆದ ಶಿಲ್ಪಾ ನಾಗ್
ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಮಹಾನಗರ ಪಾಲಿಕೆ ಆಯುಕ್ಕೆ ತಮ್ಮ ಹುದ್ದೆ ಹಾಗೂ ಸರಕಾರಿ ಸೇವೆಗೆ ಶಿಲ್ಪಾ ನಾಗ್ ಅವರು ರಾಜೀನಾಮೆ ನೀಡಿದ್ದಾರೆ.
ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಆರೋಪಿಸಿರುವ ಶಿಲ್ಪಾ ನಾಗ್, ಈ ರೀತಿಯ ಜಿಲ್ಲಾಧಿಕಾರಿ ಯಾವುದೇ ಜಿಲ್ಲೆಗೂ ಸಿಗಬಾರದು ಎಂದಿದ್ದಾರಲ್ಲದೆ, ರಾಜ್ಯದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ.
ಶಿಲ್ಪಾ ನಾಗ್ ಅವರ ರಾಜೀನಾಮೆ ನಿರ್ಧಾರ ಹೊರಬೀಳುತ್ತಿದ್ದಂತೆ ಮೈಸೂರು ಜಿಲ್ಲೆಯ ಸರಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ವಲಯದಲ್ಲಿ ತೀವ್ರ ಕಂಪನ ಉಂಟಾಗಿದೆ.
ಇನ್ನೊಂದೆಡೆ, ಜಿಲ್ಲಾಧಿಕಾರಿ ವಿರುದ್ಧ ಮೈಸೂರು ಸಂಸದರು, ಕೆಲ ಶಾಸಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ರಚ್ಚೆಗೆ ಬಿದ್ದವರಂತೆ ಟೀಕಾ ಪ್ರಹಾರ ನಡೆಸುತ್ತಿರುವ ಬೆನ್ನಲ್ಲಿಯೇ ಇದೀಗ ಪಾಲಿಕೆ ಆಯುಕ್ತರ ರಾಜೀನಾಮೆ ಬಾಂಬ್ ಜಿಲ್ಲೆ ಮಾತ್ರವಲ್ಲ, ಇಡೀ ಜಿಲ್ಲೆಯಲ್ಲಿ ಡೊಡ್ಡ ಚರ್ಚೆಯನ್ನೇ ಹುಟ್ಟು ಹಾಕಿದೆ.
ಮತ್ತೊಂದೆಡೆ, ಜಿಲ್ಲೆಯಲ್ಲಿ ವಿಪರೀತವಾಗಿರುವ ಭೂ ಮಾಫಿಯಾ ಬುಡಕ್ಕೆ ಕೈಹಾಕಿದ್ದೇ ರೋಹಿಣಿ ಸಿಂಧೂರಿ ಅವರಿಗೆ ಕಂಟಕವಾಯಿತಾ? ಶಿಲ್ಪಾ ನಾಗ್ ರಾಜೀನಾಮೆ ಇದೊಂದು ಭಾಗವಾ? ಎಂಬ ಪ್ರಶ್ನೆಯೂ ಜನರನ್ನು ಕಾಡುತ್ತಿದೆ. ಅಲ್ಲದೆ, ಕೆಲವರ ಹಿತಾಸಕ್ತಿಗೆ ಪೂರಕವಾಗಿದ್ದ ಹದಿನಾರು ಕೋವಿಡ್ ಕೇರ್ ಸೆಂಟರ್‌ಗಳನ್ನು ಜಿಲ್ಲಾಧಿಕಾರಿ ಮುಚ್ಚಿಸಿದ್ದರು. ಈ ಬಗ್ಗೆ ಆಡಳಿತ ಪಕ್ಷದ ಶಾಸಕ ರಾಮದಾಸ್ ಅವರಿಂದ ತನಿಖೆ ಮಾಡಿಸಿ ವರದಿ ಪಡೆದಿದ್ದರು.
ಜತೆಗೆ, 2016ರಲ್ಲಿ ನಡೆದ ಭೂ ಹಗರಣವೊಂದು ಜಿಲ್ಲಾಧಿಕಾರಿ ವಿರುದ್ಧ ಕೆಲವರು ಗರಂ ಆಗಲು ಕಾರಣ ಎನ್ನಲಾಗುತ್ತಿದೆ. ಮೈಸೂರು ನಗರ ಹಾಗೂ ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆದಿದೆ ಎನ್ನಲಾದ ಭೂ ಅಕ್ರಮಗಳ ವಿರುದ್ಧ ಅವರು ಕ್ರಮಕ್ಕೆ ಮುಂದಾಗಿದ್ದಾರೆ ಎನ್ನಲಾಗಿದ್ದು, ಈ ಕಾರಣಕ್ಕೆ ರೋಹಿಣಿ ಸಿಂಧೂರಿ ಟಾರ್ಗೆಟ್ ಆಗುತ್ತಿದ್ದಾರೆ ಎಂದು ಹೇಳಲಾಗಿದೆ.
ಶಿಲ್ಪಾ ನಾಗ್ ಹೇಳಿದ್ದೇನು?
ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿಲ್ಪಾ ನಾಗ್ ಅವರು, “ಓರ್ವ ಐಎಎಸ್ ಅಧಿಕಾರಿಗೆ ಮತ್ತೊಬ್ಬ ಐಎಎಸ್ ಅಧಿಕಾರಿಯಿಂದ ಕಿರುಕುಳ ಸರಿಯಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂಬಂಧ ಸಿಎಸ್ ಅವರಿಗೆ ಪತ್ರ ಬರೆದಿದ್ದೇನೆ” ಎಂದು ಮಾಹಿತಿ ನೀಡಿದರು.
ಕೋವಿಡ್ ಸಮಯದಲ್ಲಿ ಎಷ್ಟೇ ಕಷ್ಟಪಟ್ಟು ಕೆಲಸ ನಿವರ್ವಹಿಸುತ್ತಿದ್ದರೂ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಕಿರುಕುಳದಿಂದ ಕೆಲಸ ಮಾಡಲು ಆಸಕ್ತಿಯೇ ಇಲ್ಲದಂತಾಗಿದೆ. ಇಂತಹ ಡಿಸಿ ಯಾರಿಗೂ ಸಿಗುವುದು ಬೇಡ ಎಂದು ಸುದ್ದಿಗೋಷ್ಠಿಯಲ್ಲಿ ಅಳಲು ತೋಡಿಕೊಂಡರು.
ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಂದ ಭಾವೋದ್ವೇಗಕ್ಕೆ ಒಳಗಾದ ಶಿಲ್ಪಾ ನಾಗ್ ಅವರು, ನನಗೆ ಕೆಲಸ ಮಾಡಲಾಗುತ್ತಿಲ್ಲ. ಅದಕ್ಕಾಗಿಯೇ ರಾಜಿನಾಮೆ ನೀಡುವ ಬಗ್ಗೆ ನಿರ್ಧಾರ ಕೈಗೊಂಡಿರುವುದಾಗಿ ಹೇಳಿಕೊಂಡರು.
ಯಾವುದೇ ಜಿಲ್ಲೆಗೆ ಇಂತಹ ಜಿಲ್ಲಾಧಿಕಾರಿ ಬರಬಾರದು. ಉಸಿರುಗಟ್ಟುವ ವಾತಾವರಣದಲ್ಲಿ ಕೆಲಸ ಮಾಡುವುದಕ್ಕೆ ಆಗ್ತಿಲ್ಲ. ಜಿಲ್ಲಾಧಿಕಾರಿಗಳಿಗೆ ನನ್ನ ಬಗ್ಗೆ ವೈಯಕ್ತಿಕ ದ್ವೇಷ ಇದ್ದರೇ ದ್ವೇಷ ಮಾಡಲಿ. ಅದನ್ನು ಬಿಟ್ಟು ಪಾಲಿಕೆಯ ಅಧಿಕಾರಿಗಳು, ಸಿಬ್ಬಂದಿ ಮೇಲೆ ಅಧಿಕಾರ ಚಲಾಯಿಸುತ್ತಿದ್ದಾರೆ. ಕೋವಿಡ್-19 ಮಿತ್ರ ನನ್ನದು ಅಂತ ಪ್ರಧಾನಿ ಅವರ ಬಳಿ ಹೆಸರು ತೆಗೆದುಕೊಂಡಿದ್ದಾರೆ. ಆ ಜಾತಿ ಈ ಜಾತಿ ಅಂತ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ನನ್ನ ಮನಸ್ಸಿಗೆ ತುಂಬ ನೋವಾಗಿದೆ. ನಾನು ನನ್ನ ಕೆಲಸಕ್ಕೆ ರಿಸೈನ್ ಮಾಡ್ತೀದ್ದೀನಿ ಎಂದು ಪಾಲಿಕೆ ಆಯುಕ್ತೆ ಕಣ್ಣೀರು ಹಾಕಿದರು.
ರಾಜೀನಾಮೆ ಅಂಗೀಕರಿಸಲ್ಲ ಎಂದ ಉಸ್ತುವಾರಿ ಸಚಿವ
ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಶಿಲ್ಪಾ ನಾಗ್ ದಕ್ಷತೆಯಿಂದ ಮೈಸೂರಿನಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಅವರ ರಾಜಿನಾಮೆಯನ್ನು ಸರ್ಕಾರ ಯಾವ ಕಾರಣಕ್ಕೂ ಅಂಗೀಕಾರ ಮಾಡುವುದಿಲ್ಲ. ಈ ವಿಚಾರವಾಗಿ ಮುಖ್ಯಮಂತ್ರಿ ಜತೆ ಮಾತನಾಡುತ್ತೇನೆ. ಶಿಲ್ಪಾ ನಾಗ್ ಅವರು ಸೇವೆಯಲ್ಲಿ ಮುಂದುವರಿಯುವಂತೆ ಮನವೊಲಿಸಲಾಗುವುದು. ಅವರೊಂದಿಗೆ ದೂರವಾಣಿ ಮೂಲಕ ಮಾತನಾಡುತ್ತೇನೆ. ಶುಕ್ರವಾರ ನಾನು ಮೈಸೂರು ಪ್ರವಾಸ ಕೈಗೊಂಡಿದ್ದು, ಆ ವೇಳೆ ಖುದ್ದು ಭೇಟಿಯಾಗಿ ಮಾತನಾಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ಇದೇ ವೇಳೆ ಇಡೀ ಬೆಳವಣಿಗೆ ಬಗ್ಗೆ ತೀವ್ತ ಆಘಾತ ವ್ಯಕ್ತಪಡಿಸಿರು ಹಿರಿಯ ಶಾಸಕ ರಾಮದಾಸ್ ತೀವ್ರ ಆಘಾತ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಮೈಸೂರು ನಗರಪಾಲಿಕಾ ಆಯುಕ್ತರಾದ ಶಿಲ್ಪಾ ನಾಗ್ ಅವರು ರಾಜೀನಾಮೆ ಕೊಟ್ಟಿದ್ದಾರೆ ಎನ್ನುವ ವಿಷಯ ಕೇಳಿ ನಿಜಕ್ಕೂ ಆಶ್ಚರ್ಯ ಹಾಗೂ ಬೇಸರವಾಯಿತು. ಮೈಸೂರಿನಲ್ಲಿ ಕೋವಿಡ್ ಮಿತ್ರ, ಮನೆ ಮನೆ ಸರ್ವೆ, ಟೆಲಿ ಮೆಡಿಸಿನ್ ನಂತಹ ಎಲ್ಲಾ ಮಹತ್ತರವಾದ ಕೋವಿಡ್ ಗೆ ಸಂಬಂಧಿಸಿದ ಯೋಜನೆಗಳನ್ನು ತಂದವರು ಇವರು.