ಜೂನ್ 14ರ ಬೆಳಗ್ಗೆ 6 ಗಂಟೆವರೆಗೆ ಲಾಕ್‌ಡೌನ್ ಮುಂದುವರಿಕೆ / ಯಾವುದಕ್ಕೂ ಸಡಿಲಿಕೆ ಇಲ್ಲ
ಬೆಂಗಳೂರು: ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ವಿಧಿಸಲಾಗಿರುವ ಲಾಕ್‌ಡೌನ್ ಇನ್ನೂ ಒಂದು ವಾರ ಕಾಲ ಮುಂದುವರಿಯುತ್ತದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.
ಜೂನ್ 14ರ ಬೆಳಗ್ಗೆ 6 ಗಂಟೆವರೆಗೆ ಈ ನಿಯಮಗಳು ಜಾರಿಯಲ್ಲಿರುತ್ತವೆ ಎಂದಿರುವ ಅವರು, ಈ ನಿಯಮಗಳಲ್ಲಿ ಯಾವುದೇ ಸಡಿಲಿಕೆ ಅಥವಾ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಅವರು. ಹೊಟೆಲ್ʼಗಳಿಂದ ಪಾರ್ಸೆಲ್ ಪಡೆಯಬಹುದು ಹಾಗೂ ರಫ್ತು ಆಧಾರಿತ ಕೈಗಾರಿಕಾ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ ಎಂದರು.
500 ಕೋಟಿ ರೂಪಾಯಿ ಪರಿಹಾರ ಪ್ಯಾಕೇಜ್ ವಿವರ
ವಿವಿಧ ವಲಯಗಳಿಗೆ ಹೊಸದಾಗಿ 500 ಕೋಟಿ ರೂ. ಮೊತ್ತದ ಪರಿಹಾರವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಆ ಬಗ್ಗೆ ವಿವರ ಇಲ್ಲಿದೆ.
- ಅನುದಾನರಹಿತ ಶಿಕ್ಷಕರು: 5,000 ರೂ.
- ಖಾಸಗಿ ಶಿಕ್ಷಕರು: 5,000 ರೂ.
- ಮೀನುಗಾರರು: 3,000 ರೂ.
- ಪವರ್ ಲೂಮ್ ನೇಕಾರರು: 3,000 ರೂ.
- ಅಂಗನವಾಡಿ ಸಹಾಯಕರು: 2,000 ರೂ.
- ಆಶಾ ಕಾರ್ಯಕರ್ತೆಯರು: 3,000 ರೂ.
- ಮುಜರಾಯಿ ಇಲಾಖೆ ದೇಗುಲಗಳ ಅರ್ಚಕರು: 3,000 ರೂ.
- ’ಸಿ’ ವರ್ಗದ ಮುಜರಾಯಿ ಇಲಾಖೆ ಅಡುಗೆ ಭಟ್ಟರು: 3,000 ರೂ.
- ಇಮಾಮ್ & ಮೌಲ್ವಿಗಳು: 3,000 ರೂ.
- ಸಿನಿಮಾ ಕಾರ್ಮಿಕರು: 3,000 ರೂ.
- ಕಿರುತೆರೆ ಕಲಾವಿದರು: 3,000 ರೂ.
1. ಪವರ್ ಲೂಮ್ ನೇಕಾರರು
ಪ್ರತಿ ಪವರ್ ಲೂಮ್‍ಗೆ ಇಬ್ಬರು ಕೆಲಸಗಾರರಿಗೆ ಮೀರದಂತೆ ತಲಾ ರೂ 3,000ದಂತೆ ಪರಿಹಾರ. ಇದರಿಂದ ಸುಮಾರು 59 ಸಾವಿರ ಪವರ್ ಲೂಮ್‍ಗಳಿಗೆ 35 ಕೋಟಿ ರೂ. ವೆಚ್ಚ.
2. ಚಲನಚಿತ್ರ & ದೂರದರ್ಶನ ಮಾಧ್ಯಮದ ಅಸಂಘಟಿತ ಕಾರ್ಮಿಕರು
ಚಲನಚಿತ್ರೋದ್ಯಮ ಹಾಗೂ ದೂರದರ್ಶನ ಮಾಧ್ಯಮದಲ್ಲಿ ತೊಡಗಿಸಿಕೊಂಡಿರುವ ನೋಂದಾಯಿತ ಅಸಂಘಟಿತ ಕಾರ್ಮಿಕರಿಗೆ (ಕಲಾವಿದರು, ತಂತ್ರಜ್ಞರು) ತಲಾ ರೂ.3,000 ದಂತೆ ಪರಿಹಾರ. ಇದರಿಂದ ಸುಮಾರು 22 ಸಾವಿರ ನೋಂದಾಯಿತ ಕಾರ್ಮಿಕರಿಗೆ ಅನುಕೂಲವಾಗಲಿದ್ದು ರೂ 6.6 ಕೋಟಿ ವೆಚ್ಚ.
3. ಮೀನುಗಾರರಿಗೆ ಪರಿಹಾರ
ಭಾರತ ಸರಕಾರದ ಉಳಿತಾಯ ಮತ್ತು ಪರಿಹಾರ ಯೋಜನೆಯಡಿ ನೋಂದಾಯಿಸಿದ 18,746 ಮೀನುಗಾರರಿಗೆ ತಲಾ ರೂ 3000 ಗಳ ಪರಿಹಾರ. ಇದರಿಂದ ರೂ 5.6 ಕೋಟಿ ವೆಚ್ಚ.
ಇದಲ್ಲದೆ ಒಟ್ಟು 7,668 ಇನ್‍ಲ್ಯಾಂಡ್ ದೋಣಿ ಮಾಲಿಕರಿಗೆ ತಲಾ ರೂ 3,000 ರಂತೆ ಪರಿಹಾರ ನೀಡಲು ನಿರ್ಧಾರ. ಇದರಿಂದ ರೂ. 2.3 ಕೋಟಿ ವೆಚ್ಚ. ಇದಲ್ಲದೆ ಮೀನುಗಾರರ ಸಂಘಗಳಿಂದ ಒಳನಾಡು ಮೀನುಗಾರಿಗೆಕೆ ಸರಕಾರಕ್ಕೆ ನೀಡಬೇಕಾಗಿರುವ ಕಾಂಟ್ರಾಕ್ಟ್ ಫೀಸ್‍ನಲ್ಲಿ ಶೇ.25 ರೀಯಾಯಿತಿ.
4. ಮುಜರಾಯಿ ದೇವಸ್ಥಾನದ ಅರ್ಚಕರು ಮತ್ತು ಸಿಬ್ಬಂದಿ
ಮುಜರಾಯಿ ಇಲಾಖೆಯ “ಸಿ” ವರ್ಗದ ದೇವಸ್ಥಾನಗಳಲ್ಲಿ ಕೆಲಸ ಮಾಡುವ ಅರ್ಚಕರು, ಅಡಿಗೆ ಕೆಲಸಗಾರರು ಮತ್ತು ಸಿಬ್ಬಂದಿಗಳಿಗೆ ತಲಾ ರೂ. 3,000 ಗಳನ್ನು ನೀಡಲು ನಿರ್ಧಾರ. ಈ ವರ್ಗದಲ್ಲಿ ಸುಮಾರು 36,047 ಜನರಿದ್ದು ಇದರಿಂದ ರೂ 10.8 ಕೋಟಿ ವೆಚ್ಚ.
5. ಮಸೀದಿಗಳಲ್ಲಿ ಕಾರ್ಯ ನಿರ್ವಹಿಸುವ ಪೇಶ್ ಇಮಾಮ್ ಮತ್ತು ಫೌಜಿಂ ಗಳಿಗೆ ತಲಾ 3,000 ರೂ. ನೆರವು.
6. ಆಶಾ ಕಾರ್ಯಕರ್ತೆಯರು
ಆಶಾ ಕಾರ್ಯಕರ್ತೆಯರು ಕೋವಿಡ್-19ನ ಸೋಂಕನ್ನು ತಡೆಯಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಈ ವರ್ಗದವರಿಗೆ ಸಹಾಯ ಮಾಡುವುದು ಸರಕಾರದ ಕರ್ತವ್ಯ. ಸರಕಾರವು ಕೋವಿಡ್-19 ತಡೆಗಟ್ಟುವಲ್ಲಿ ಫ್ರಂಟ್ʼಲೈನ್ ವಾರಿಯರ್ಸ್ ಆದ ಆಶಾ ಕಾರ್ಯಕರ್ತರಿಗೆ ತಲಾ ರೂ. 3,000 ಪರಿಹಾರ ನೀಡಲು ನಿರ್ಧರಿಸಿದೆ. ಇದರಿಂದ ಒಟ್ಟು 42,574 ಆಶಾ ಕಾರ್ಯಕರ್ತರಿಗೆ ಸಹಾಯವಾಗಲಿದ್ದು ಅಂದಾಜು ರೂ. 12.75 ಕೋಟಿ ವೆಚ್ಚವಾಗಲಿದೆ.
7. ಅಂಗನವಾಡಿ ಕಾರ್ಯಕರ್ತೆಯರು
64,423 ಅಂಗನವಾಡಿಯ ಕಾರ್ಯಕರ್ತರು ಹಾಗೂ 59,169 ಅಂಗನವಾಡಿ ಸಹಾಯಕರಿಗೆ ತಲಾ ರೂ. 2,000 ಗಳಂತೆ ಪರಿಹಾರ ನೀಡಲು ನಿರ್ಧರಿಸಲಾಗಿದ್ದು, ಇದರಿಂದ ಅಂದಾಜು ರೂ 24.7 ಕೋಟಿ ವೆಚ್ಚವಾಗಲಿದೆ.
8. ಶಾಲಾ ಮಕ್ಕಳಿಗೆ ಹಾಲಿನ ಪುಡಿ
ಈ ಸಮಯದಲ್ಲಿ ಹಾಲಿನ ಬೇಡಿಕೆ ಕಡಿಮೆಯಾಗಿದ್ದು ಹೈನು ಉದ್ಯಮದಲ್ಲಿ ತೊಡಗಿಸಿಕೊಂಡ ರೈತರಿಗೆ ಸಮಸ್ಯೆಯಾಗದಂತೆ ಹೆಚ್ಚುವರಿ ಹಾಲಿನಿಂದ ಪುಡಿ ತಯಾರಿಸಲು ನಿರ್ಧರಿಸಲಾಗಿದೆ. ಎಲ್ಲಾ ಶಾಲೆಗಳು ಕಠಿಣ ನಿರ್ಬಂಧಗಳ ಹಿನ್ನೆಲೆಯಲ್ಲಿ ಮುಚ್ಚಿದ್ದರೂ ಆಹಾರ ಧಾನ್ಯಗಳನ್ನು ಶಾಲಾ ಮಕ್ಕಳಿಗೆ ವಿತರಿಸಲಾಗುತ್ತಿದ್ದು, ಹೆಚ್ಚುವರಿಯಾಗಿ ಆಹಾರ ಧಾನ್ಯಗಳ ಜೊತೆಗೆ ಅರ್ಧ ಕೆ.ಜಿ ಹಾಲಿನ ಪುಡಿಯನ್ನು ಜೂನ್ ಮತ್ತು ಜುಲೈ ತಿಂಗಳಿನಲ್ಲಿ ನೀಡಲು ತೀರ್ಮಾನಿಸಲಾಗಿದೆ. ಇದರಿಂದ ಅಂದಾಜು ರೂ 100 ಕೋಟಿ ವೆಚ್ಚವಾಗಲಿದೆ.
9. ಅನುದಾನ ರಹಿತ ಶಾಲೆಗಳ ಶಿಕ್ಷಕರು
ಅನುದಾನ ರಹಿತ ಶಾಲೆಗಳ ಶಿಕ್ಷಕರಿಗೆ ತಲಾ 5,000 ರೂ. ಪರಿಹಾರ ನೀಡಲಾಗುವುದು. ಇದಕ್ಕಾಗಿ ಸುಮಾರು 100 ಕೋಟಿ ರೂ. ವೆಚ್ಚವಾಗಲಿದೆ.
10. ನ್ಯಾಯವಾದಿಗಳಿಗೆ ಪರಿಹಾರ
ನ್ಯಾಯವಾದಿಗಳ ಕಲ್ಯಾಣ ನಿಧಿಗೆ ರೂ 5 ಕೋಟಿ ನೀಡಲು ತೀರ್ಮಾನಿಸಲಾಗಿದೆ. ಈ ನಿಧಿಯನ್ನು ಅಗತ್ಯವಿರುವ ನ್ಯಾಯವಾದಿಗಳು ಮತ್ತು ಬೆಂಚ್ ಗುಮಾಸ್ತರುಗಳಿಗೆ ಉಪಯೋಗಿಸಲಾಗುವುದು.
11. ಕೈಗಾರಿಕೆಗಳಿಗೆ ಪರಿಹಾರ
MSME ಕೈಗಾರಿಕೆಗಳಿಗೆ ಮೇ ಮತ್ತು ಜೂನ್ 2021ರ ಮಾಹೆಗಳ ಮಾಸಿಕ ವಿದ್ಯುತ್ ನಿಗಧಿತ ಶುಲ್ಕಗಳನ್ನು (Fixed charges) ಪಾವತಿಸುವುದರಿಂದ ವಿನಾಯಿತಿಯನ್ನು ನೀಡಲಾಗುವುದು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ರೂ .114.70 ಕೋಟಿ ಹೆರೆಯಾಗುತ್ತದೆಂದು ಅಂದಾಜಿಸಿದೆ. MSME ಕೈಗಾರಿಕೆಗಳನ್ನು ಹೊರತುಪಡಿಸಿ ಇತರೆ ಕೈಗಾರಿಕೆಗಳ ಗ್ರಾಹಕರು ಮೇ ಮತ್ತು ಜೂನ್ 2021ರ ಮಾಹೆಗಳ ಮಾಸಿಕ ವಿದ್ಯುತ್ ನಿಗಧಿತ ಶುಲ್ಕ ಪಾವತಿಸುವುದನ್ನು ದಿನಾಂಕ: 30-7-2021 ರವರೆಗೆ ಮುಂದೂಡಲಾಗುವುದು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ರೂ 5.56 ಕೋಟಿ ಹೊರೆಯಾಗುತ್ತದೆಂದು ಅಂದಾಜಿಸಿದೆ. ಈ ಎರಡು ಕ್ರಮಗಳಿಂದ ಸುಮಾರು 3 ಲಕ್ಷ ಕೈಗಾರಿಕೆಗಳಿಗೆ ಅನುಕೂಲವಾಗಲಿದೆ.