by Ra Na Gopala Reddy Bagepalli
ಬಾಗೇಪಲ್ಲಿ: ಮುಂಗಾರಿಗೆ ಮುನ್ನವೇ ಬರಪೀಡಿತ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಂಪನೆಯ ನಗೆ ಬೀರಿದೆ.
ಹನಿಹನಿ ನೀರಿಗೂ ಪರದಾಡುವ ಬಾಗೇಪಲ್ಲಿ ತಾಲೂಕಿನಲ್ಲಿ ಬುಧವಾರ-ಗುರುವಾರ ರಾತ್ರಿ ಬಿದ್ದ ಮಳೆ ಜಾದು ಮಾಡಿದೆ. ಈ ಮಳೆಯಿಂದಾಗಿ ತಾಲೂಕಿನ ಪಾತಪಾಳ್ಯ ಸಮೀಪ ಗುಡಿಪಲ್ಲಿಯಲ್ಲಿ ಸುಂದರ ಜಲಪಾತ ಸೃಷ್ಟಿಯಾಗಿದ್ದು, ಬರದ ನಾಡಿನಲ್ಲಿ ಜನರಿಗೆ ಮಲೆನಾಡಿನ ಅನುಭವವಾಗುತ್ತಿದೆ.
ನೋಡಲು ಕೊಡಗಿನ ʼಅಬ್ಬಿʼ ಜಲಪಾತದಂತೆ ಕಾಣುವ ಈ ಕಿರು ಜಲಧಾರೆ, ಒಂದೆಡೆ ಒತ್ತಗೆ ನೀರು ಧುಮ್ಮಿಕ್ಕಿದರೆ, ಮತ್ತೆ ಅಕ್ಕಪಕ್ಕದಲ್ಲಿ ಟಿಸಿಲೊಡೆದು ಪುಟ್ಟ ಪುಟ್ಟ ಧಾರೆಗಳಾಗಿ ಕೆಳಕ್ಕೆ ಜಾರುತ್ತದೆ. ಈ ದೃಶ್ಯವನ್ನು ನೋಡುವುದೇ ಹಬ್ಬದಂತೆ ಇರುತ್ತದೆ.
ಕೆಲ ದಿನಗಳಿಂದ ಬರಕ್ಕೆ ತುತ್ತಾಗಿದ್ದ ತಾಲೂಕು ಸಕಾಲಕ್ಕೆ ಮಳೆ ಬಾರದ ಪರಿಣಾಮ ಕೆರೆ ಕುಂಟೆಗಳು ಖಾಲಿಯಾಗಿದ್ದವು. ಪಶು-ಪಕ್ಷಿಗಳಿಗೂ ನೀರಿಗಾಗಿ ತತ್ವಾರ ಉಂಟಾಗಿತ್ತು. ಆದರೆ ಬುಧವಾರ ರಾತ್ರಿ ಇದ್ದಕ್ಕಿದ್ದಂತೆ ಗುಡುಗು ಸಹಿತ ಜೋರು ವರ್ಷಧಾರೆಯಾಗಿದೆ. ಗುಡಿಪಲ್ಲಿ ಗ್ರಾಮದ ಬಳಿ ಇರುವ ಬೆಟ್ಟಗುಡ್ಡಗಳ ನಡುವೆ ಜಲಪಾತವೊಂದು ಧುಮ್ಮಿಕ್ಕಿ ಹರಿಯುತ್ತದೆ. ಸ್ಥಳೀಯರು ಜಲಪಾತದ ನೀರಿನಲ್ಲಿ ಜಲಕ್ರೀಡೆಯಾಡುತ್ತಿದ್ದಾರೆ.
ಈ ನೀರು ಮುಂದಿನ ವಂಡಮಾನ್ ಜಲಾಶಯಕ್ಕೆ ಹೋಗಿ ಸೇರುತ್ತದೆ. ಅಲ್ಲಿ ಕೋಡಿ ಹೋದರೆ ಆಂಧ್ರ ಪ್ರದೇಶದ ಬುಕ್ಕಾಪಟ್ನಂ ಕೆರೆಗೆ ನೀರು ಹರಿಯುತ್ತದೆ.
ಪೊಲೀಸರ ಬಿಗಿ ಕಾವಲು
ಕಳೆದ ವರ್ಷದ ಇದೇ ಹಂಗಾಮಿನಲ್ಲಿ ಇಲ್ಲಿ ಇದೇ ರೀತಿಯ ಮಳೆಯಾಗಿ ಜಲಪಾತ ಸೃಷ್ಟಿಯಾಗಿತ್ತು. ಈ ಸಂದರ್ಭದಲ್ಲಿ ಆಟ ಆಡಲು ಹೋದ ಹುಡುಗರು ಅಪಾಯಕ್ಕೆ ಸಿಲುಕಿದ್ದರು. ಮೇಲಿನಿಂದ ಸುಮಾರು ನೂರು ಅಡಿಗಳಷ್ಟು ಜಾರಿಕೊಂಡು ಬರುವ ಕ್ರೀಡೆ ಆಡುತ್ತಿದ್ದರು. ಆಗ ಕೆಲವರು ತಲೆ ಮತ್ತಿತರೆ ಕಡೆ ತೀವ್ರ ಗಾಯ ಮಾಡಿಕೊಂಡಿದ್ದರೆ ನಾಲ್ಕು ಯುವಕರು ದುರ್ಮರಣಕ್ಕೀಡಾಗಿದ್ದರು. ಹೀಗಾಗಿ ಈ ಸಲ ಪೊಲೀಸರು ಪಹರೆ ಕಾಯುತ್ತಿದ್ದಾರೆ. ಯಾರಿಗೂ ನೀರಿನಲ್ಲಿ ಆಟವಾಡಲು ಬಿಡುತ್ತಿಲ್ಲ.