ಸರಿಯಾದ ಅಂಕಿ ಅಂಶ ನೀಡಿ ಎಂದಷ್ಟೇ ನಾನು ಕೇಳಿದ್ದೆ. ವಾರ್ಡ್ ವೈಸ್ ಅಂಕಿ-ಅಂಶಗಳು ಎಷ್ಟಿದೆ ಎಂದು ಕೇಳಿದ್ದೆ ಅಷ್ಟೇ ಎಂದ ಜಿಲ್ಲಾಧಿಕಾರಿ
ಮೈಸೂರು: ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಮಾಡಿರುವ ಕಿರುಕುಳ ಆರೋಪದ ಬಗ್ಗೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಅವರು ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಕೊವಿಡ್ ಸಂದರ್ಭ ಎಲ್ಲರ ಸಹಕಾರ ಬೇಕಾಗುತ್ತದೆ. ಅಂಕಿ-ಅಂಶಗಳನ್ನು ಅಧಿಕೃತವಾಗಿ ನಾವು ಕೊಡ್ತಿದ್ದೇವೆ. ಕೊರೊನಾ ವಿಚಾರದಲ್ಲಿ ಅಂಕಿ-ಅಂಶ ತಪ್ಪಾಗಬಾರದು ಎಂಬ ಕಾರಣಕ್ಕೆ ನಮ್ಮ ಒತ್ತಡ ಅಷ್ಟೇ ಎಂದರು.
ಅಧಿಕಾರಿಗಳಿಗೆ ಕೆಲಸದಲ್ಲಿ ಒತ್ತಡ ಇರುತ್ತದೆ. ಯಾರಿಗೆ ಒತ್ತಡ ಇರುವುದಿಲ್ಲ ಹೇಳಿ? ಅದನ್ನು ಸಾಂಸ್ಥಿಕ ಚೌಕಟ್ಟಿನೊಳಗೆ ಮಾತನಾಡಿ ಬಗೆಹರಿಸಿಕೊಳ್ಳಬೇಕೇ ಹೊರತು ಬಹಿರಂಗವಾಗಿ ಆರೋಪ ಮಾಡುವುದು ಎಷ್ಟು ಸರಿ? ಎಂದು ಜಿಲ್ಲಾಧಿಕಾರಿ ಪ್ರಶ್ನಿಸಿದರು.
ಅಧಿಕಾರಿಗಳು ಸಮಸ್ಯೆ ಏನೇ ಇದ್ದರೂ ಫೋರಂ ಇರುತ್ತದೆ, ಅಲ್ಲಿ ಹೇಳಬಹುದು. ಹೈಯರ್ ಆರ್ಮಿ ಇರುತ್ತದೆ. ಅಲ್ಲೂ ಹೇಳಬಹುದಿತ್ತು ಎಂದು ಡಿಸಿ ತಿಳಿಸಿದರು.
ಜುಲೈ ಒಳಗೆ ಜಿಲ್ಲೆಯನ್ನು ಕೋವಿಡ್ ಮುಕ್ತ ಮಾಡಬೇಕು. ಹೀಗಾಗಿ ಅಧಿಕೃತ ಮಾಹಿತಿ ತಪ್ಪಾಗಬಾರದು ಎಂಬುದು ನನ್ನ ಉದ್ದೇಶ. ಈಗಾಗಲೇ ನಾನು ಹೇಳಬೇಕಾದುದನ್ನೆಲ್ಲಾ ಪತ್ರಿಕಾ ಹೇಳಿಕೆಯಲ್ಲಿ ಹೇಳಿದ್ದೇನೆ. ಸಮನ್ವಯತೆ ಸಮಸ್ಯೆಯಾಗಿತ್ತು ಎಂಬ ಭಾವನೆ ನನಗಿಲ್ಲ ಎಂದು ಡಿಸಿ ರೋಹಿಣಿ ಸಿಂಧೂರಿ ಹೇಳಿದರು.
ಸರಿಯಾದ ಅಂಕಿ ಅಂಶ ನೀಡಿ ಎಂದಷ್ಟೇ ನಾನು ಕೇಳಿದ್ದೆ. ವಾರ್ಡ್ ವೈಸ್ ಅಂಕಿ-ಅಂಶಗಳು ಎಷ್ಟಿದೆ ಎಂದು ಕೇಳಿದ್ದೆ, ಸಿಎಸ್‌ಆರ್ ಫಂಡ್ ಜಿಲ್ಲಾಧಿಕಾರಿ ನಿಯಂತ್ರಣದಲ್ಲಿದೆ. ಯಾವುದಕ್ಕೆ, ಯಾವ ವಾರ್ಡ್‌ಗೆ ಎಷ್ಟು ಖರ್ಚು ಮಾಡಿದ್ದೀರಿ. ಎಲ್ಲ 12 ಕೋಟಿ ಖರ್ಚು ಮಾಡಿದ್ದೀರಾ ಎಂದು ಕಾರ್ಪೋರೇಷನ್ʼನಲ್ಲಿ ಕೇಳಿದ್ದು ನಿಜ, ಹಳ್ಳಿ ಕಡೆ ವೈದ್ಯರ ನಡೆ ಕಾರ್ಯಕ್ರಮಕ್ಕೂ ನಾವು ಹಣ ನೀಡಬೇಕಾಗಿದೆ. ಈ ಬಗ್ಗೆ ನಾನು ವಿವರಣೆ ಕೇಳಿದ್ದು ತಪ್ಪೇ ಎಂದು ಸಿಂಧೂರಿ ಪ್ರಶ್ನಿಸಿದರು.
ಇಷ್ಟು ದಿನ ಇಲ್ಲದ ಸಮಸ್ಯೆ, ಆರೋಪ ಈಗ ಏಕೆ ಎಂದು ರೋಹಿಣಿ ಸಿಂಧೂರಿ ಕೇಳಿದರು.
- ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ