ಜಗತ್ತಿನ ಗಮನ ಸೆಳೆದು ಅನೇಕ ವೈದ್ಯಕೀಯ ಸಂಶೋಧನೆಗಳ ತಾಣವಾಗಿದ್ದ ಬ್ರಿಟೀಷ್ ಕಾಲದ ಅತ್ಯಾಧುನಿಕ ಕೆಜಿಎಫ್ ಮೈನಿಂಗ್ ಆಸ್ಪತ್ರೆಯ ಸುವರ್ಣ ಅಧ್ಯಾಯವಿದು. ವಿಶ್ವ ಆರೋಗ್ಯ ಸಂಸ್ಥೆ (WHO) ಮೆಚ್ಚುಗೆ ಗಳಿಸಿದ್ದ ಈ ಆಸ್ಪತ್ರೆಯು ಸ್ವಾತಂತ್ರ್ಯಪೂರ್ವ ಮತ್ತೂ ನಂತರ ಕಾಲದ ಭಾರತದ ಉತ್ಕೃಷ್ಟ ಚಿಕಿತ್ಸಾಕೇಂದ್ರವಾಗಿತ್ತು! ಅದರ ರೋಚಕ ಕಥನ ಇದು.
ಹಿರಿಯ ಭೂವಿಜ್ಞಾನಿ ಡಾ.ಎಂ.ವೆಂಕಟಸ್ವಾಮಿ ಅವರು ಬರೆದ ಅಪರೂಪದ ಲೇಖನವಿದು. ಈ ವಾರಾಂತ್ಯಕ್ಕೆ ಚಿನ್ನದಂಥ ಓದು..
ಕೆಜಿಎಫ್ ಗಣಿಗಳ ಆಸ್ಪತ್ರೆ ಆ ಕಾಲಕ್ಕೆ ಭಾರತದಲ್ಲಿಯೇ ಅತ್ಯಾಧುನಿಕ ಆಸ್ಪತ್ರೆಯಾಗಿತ್ತು. ಗ್ರಾನೈಟ್ ಕಲ್ಲು ಕಟ್ಟಡದ ಈ ಆಸ್ಪತ್ರೆಯನ್ನು ಇತ್ತೀಚೆಗೆ ಕೋವಿಡ್-19 ರೋಗಿಗಳ ಶುಶ್ರೋಷೆಗೆ ಬಳಸಿಕೊಳ್ಳುವ ಆಲೋಚನೆ ಬಂದು 20 ದಿನಗಳ ಕಾಲ 200 ಜನರು ಸ್ವಚ್ಛ ಮಾಡಿ ಸಜ್ಜುಗೊಳಿಸಿದಾಗ ಅದರ ಗತವೈಭವವನ್ನು ನೋಡಿದ ಜನರು ಬೆರಗಾದರು.
ಬ್ರಿಟನ್‌ನ ಜಾನ್ ಟೇಲರ್ ಕಂಪನಿ 1880ರಲ್ಲಿ ಕೆಜಿಎಫ್‌ನಲ್ಲಿ ಆಧುನಿಕ ಚಿನ್ನದ ಗಣಿಗಳನ್ನು ಪ್ರಾರಂಭಿಸಿ ಹೇರಳ ಚಿನ್ನ ದೊರಕುತ್ತಿದ್ದ ಕಾರಣ ಒಮ್ಮೆಲೆ ಸಾವಿರಾರು ಕಾರ್ಮಿಕರನ್ನು ಕೆಲಸಕ್ಕೆ ಸೇರಿಸಿಕೊಂಡಿತು. ಅದೇ ಕಾಲಕ್ಕೆ ಗಣಿಗಳಲ್ಲಿ ಅಪಘಾತಗಳು ಹೆಚ್ಚಾಗಿದ್ದವು. ಜೊತೆಗೆ ಗಣಿ ಕಾಲೋನಿಗಳಲ್ಲಿ ಸೋಂಕು ರೋಗಗಳು ಕಾಣಿಸಿಕೊಳ್ಳುತ್ತಿದ್ದವು. ಇದನ್ನು ಗಮನಿಸಿದ ಜಾನ್ ಟೇಲರ್ 1884ರಲ್ಲಿ ಗಣಿ ಕಾರ್ಮಿಕರು ಅವರ ಕುಟುಂಬಗಳಿಗಾಗಿ ಆಸ್ಪತ್ರೆಯನ್ನು ಸ್ಥಾಪಿಸಿದರು.
1884ರಲ್ಲಿ ಡಾ.ಟಿ.ಜೆ.ಓ.ಡೊನ್ನೆಲ್ ಬ್ರಿಟಿಷ್ ವೈದ್ಯ ಸಹೋದರರಿಬ್ಬರು ಮೈನಿಂಗ್ ಆಸ್ಪತ್ರೆಯ ವೈದ್ಯರಾಗಿ ನೇಮಕಗೊಂಡರು. 1893ರವರೆಗೂ ಆಸ್ಪತ್ರೆಯಲ್ಲಿ ಕೇವಲ 10 ಹಾಸಿಗೆಗಳಿದ್ದು, 5 ಹಾಸಿಗೆಗಳು ಯುರೋಪ್ ಅಧಿಕಾರಿಗಳಿಗೆ ಮತ್ತು 5 ಹಾಸಿಗೆಗಳನ್ನು ಸ್ಥಳೀಯರಿಗೆ ಕಾದಿರಿಸಲಾಗಿತ್ತು. ಆಗ ನಾಲ್ಕು ಗಣಿ ಕಂಪನಿಗಳಲ್ಲಿ ಒಟ್ಟು 22,500 ಕಾರ್ಮಿಕರಿದ್ದರೂ ಆಸ್ಪತ್ರೆ ಕಡೆಗೆ ಒಬ್ಬರೂ ಬರುತ್ತಿರಲಿಲ್ಲ. ತಳವರ್ಗಕ್ಕೆ ಸೇರಿದ ಕೂಲಿ ಕಾರ್ಮಿಕರ ಮಧ್ಯೆ ಜಾತಿ, ಅಸ್ಪೃಶ್ಯತೆ, ಅಧಿಕಾರದ ಗೋಡೆಗಳು ಅಡ್ಡ ನಿಂತಿದ್ದವು. ನಂತರದ ದಿನಗಳಲ್ಲಿ ಡೊನ್ನೆಲ್ ಸಹೋದರರು ಎಲ್ಲರನ್ನೂ ಪ್ರೀತಿಯಿಂದ ನೋಡುತ್ತಿದ್ದರಿಂದ ಕಾರ್ಮಿಕರು ನಿಧಾನವಾಗಿ ಆಸ್ಪತ್ರೆಯ ಕಡೆಗೆ ಬರತೊಡಗಿದರು.
19ನೇ ಶತಮಾನದ ಪ್ರಾರಂಭದಲ್ಲಿ ಕಾರ್ಮಿಕರಿದ್ದ ಕಾಲೋನಿಗಳು ಮತ್ತು ಸುತ್ತಮುತ್ತಲ ಹಳ್ಳಿಗಳಲ್ಲಿ ಕಾಲರಾ, ಪ್ಲೇಗು, ಸಿಡುಬು, ಇನ್‌ಫ್ಲುಯೆಂಜಾ ಸೋಂಕು ರೋಗಗಳು ಇದ್ದಕ್ಕಿದ್ದಂತೆ ಉದ್ಭವಿಸುತ್ತಿದ್ದವು. ಕಂಪನಿ ಆಡಳಿತ ಮತ್ತು ವೈದ್ಯರು ಈ ರೋಗಗಳನ್ನು ತಡೆಗಟ್ಟಲು ಅನೇಕ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದರು. ಗಣಿಗಳಲ್ಲಿ ಸಂಭವಿಸುತ್ತಿದ್ದ ಅಪಘಾತಗಳು ಮತ್ತು ಸಾಂಕ್ರಾಮಿಕ ರೋಗಗಳಿಂದ ಕಾರ್ಮಿಕರು ಅವರ ಕುಟುಂಬಗಳನ್ನು ಪಾರು ಮಾಡುವುದು ದೊಡ್ಡ ಸವಾಲಾಗಿತ್ತು. ಸೋಂಕು ರೋಗಿಗಳಿಗೆ ಆಸ್ಪತ್ರೆಯ ಪಕ್ಕದಲ್ಲೆ ದೊಡ್ಡದೊಡ್ಡ ಶೆಡ್ಡುಗಳನ್ನು ನಿರ್ಮಿಸಲಾಗಿತ್ತು. 1900ರಲ್ಲಿ ಪೆನ್ನಾರ್ ನದಿಗೆ ಅಡ್ಡವಾಗಿ ಕಟ್ಟಿರುವ ಹತ್ತಿರದ ಬೇತಮಂಗಲದ ಕೆರೆ ನೀರನ್ನು ಗಣಿ ಪ್ರದೇಶಗಳಿಗೆ ತಂದ ಮೇಲೆ ಕಾಲರಾ ರೋಗ ಸ್ವಲ್ಪಮಟ್ಟಿಗೆ ಕಡಿಮೆಯಾಯಿತು.
1890ರಲ್ಲಿಯೆ ಒಳ ರೋಗಿಗಳಾಗಿ ಆಸ್ಪತ್ರೆಯ ಒಳಗೆ ಗ್ರಂಥಾಲಯ ಸ್ಥಾಪಿಸಲಾಗಿತ್ತು. 1897, ಜುಲೈಯಲ್ಲಿ ಆಸ್ಪತ್ರೆಗೆ ಆಗಮಿಸಿದ ಅಂದಿನ ಮೈಸೂರು ದಿವಾನರಾದ ಶೇಷಾದ್ರಿ ಐಯ್ಯರ್ ಅವರು ಆಸ್ಪತ್ರೆಯ ಸ್ವಚ್ಛತೆಯನ್ನು ನೋಡಿ “ಈ ಆಸ್ಪತ್ರೆ ನೋಡಿ ನನಗೆ ತುಂಬಾ ಸಂತೋಷವಾಗಿದೆ. ಎಲ್ಲವೂ ಕ್ರಮಬದ್ಧವಾಗಿದೆ” ಎಂದಿದ್ದರು.
ಸಂಶೋಧನೆಗಳ ತಾಣ
1898ರಲ್ಲಿ ಆಧುನಿಕ ಶಸ್ತ್ರಚಿಕಿತ್ಸೆಯ ಕೋಣೆಯನ್ನು ಅಳವಡಿಸಲಾಯಿತು. ಜೊತೆಗೆ ಇನ್ನಷ್ಟು ವಾರ್ಡುಗಳನ್ನು ನಿರ್ಮಿಸಲಾಯಿತು. 1889ರಲ್ಲಿ ಗಣಿ ನಿಯಮ ಕಾಯಿದೆ ಜಾರಿಗೆ ಬಂದಾಗ ಗಣಿಯಲ್ಲಿ ಯಾವುದೇ ಅಪಘಾತ ಸಂಭವಿಸಿದರೂ ಅದನ್ನು ಕೂಲಂಕಷವಾಗಿ ಪರಿಶೀಲಿಸಿ ವರದಿ ಸಲ್ಲಿಸಬೇಕಾಗಿತ್ತು. ಅದೇ ಕಾಲಕ್ಕೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಧನುರ್ವಾಯು ಕಾಯಿಲೆಯ ಬಗ್ಗೆಯೂ ಸಂಶೋಧನೆಯನ್ನು ನಡೆಸುವಂತೆ ವೈದ್ಯರಿಗೆ ಆಡಳಿತ ಆದೇಶಿಸಿತ್ತು.
ಮುಂದಿನ ದಶಕಗಳಲ್ಲಿ ವಿಶಾಲವಾದ ದ್ವಾರವನ್ನು ಮತ್ತು ಇನ್ನಷ್ಟು ಕೋಣೆಗಳನ್ನು ನಿರ್ಮಿಸಿ ಅದಕ್ಕೆ “ಎಡ್‌ವರ್ಡ್ ವಾರ್ಡ್” ಎಂದು ಹೆಸರಿಡಲಾಯಿತು. 1906ರಲ್ಲಿ ಬ್ರಿಟೀಷ್ ವ್ಯೆದ್ಯರಾದ ಡಾ.ಸ್ಟೋಕ್ಸ್ ಮತ್ತು ಡಾ.ಪೆಡ್ಜ್ಮಾರೈಸ್ ಡೊನ್ನೆಲ್ ಸಹೋದರರ ಜೊತೆಗೆ ಸೇರಿಕೊಂಡರು. ಡೊನ್ನೆಲ್ ಸಹೋದರರು ದಶಕಗಳ ಕಾಲ ಆಸ್ಪತ್ರೆಗಾಗಿ ದುಡಿದು, ಆಸ್ಪತ್ರೆಯನ್ನು ಒಂದು ಹಂತಕ್ಕೆ ತಂದುದಲ್ಲದೆ, ಆ ಕಾಲಕ್ಕೆ ಆಸ್ಪತ್ರೆಗೆ ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿಯನ್ನು ತಂದುಕೊಟ್ಟರು. 1910ರಲ್ಲಿ ಬ್ರಿಟೀಷ್ ಚಕ್ರಾಧಿಪತಿ, ಡಾ.ಡೊನ್ನೆಲ್ ಅವರಿಗೆ “ಕೈಸರ್ ಇ ಹಿಂದ್” ಚಿನ್ನದ ಪದಕವನ್ನು ನೀಡಿ ಗೌರವಿಸಿತು.
ಮುಂದಿನ ದಿನಗಳಲ್ಲಿ ಗಣಿ ಕಾಯಿಲೆ ನ್ಯುಮೊಕೊನಿಯೋಸಿಸ್/ಸಿಲಿಕೋಸಿಸ್ ಬಗ್ಗೆ ಸಂಶೋಧನೆಗಳನ್ನು ನಡೆಸಲಾಯಿತು. 1936-37ರಲ್ಲಿ ಡಾ.ರೋಹನ್‌ಟ್ರಿ ಅವರು ಕೊಕ್ಕೆ ಹುಳುಗಳಿಗಾಗಿ ಉಪಯೋಗಿಸುವ ಔಷಧಿಗಳ ಬಗ್ಗೆ ಸಂಶೋಧನೆ ನಡೆಸಿ, ಡಬ್ಲಿನ್ ವಿಶ್ವವಿದ್ಯಾಲಯದಿಂದ ಎಂ.ಡಿ ಪದವಿ ಪಡೆದುಕೊಂಡರು. ಇದೇ ಕಾಲದಲ್ಲಿ ಆಸ್ಪತ್ರೆಯ ಪಕ್ಕದಲ್ಲಿಯೆ ಕೊಕ್ಕೆಹುಳು ರೋಗಿಗಳಿಗೆ ಒಂದು ದೊಡ್ಡ ಶೆಡ್ಡು ಕಟ್ಟಿಲಾಗಿ ಅದನ್ನು ಸ್ಥಳೀಯರು “ರೋಹನ್‌ಟ್ರಿ ಪೂಚಿ (ಹುಳು)ಶೆಡ್” ಎಂದು ಕರೆಯುತ್ತಿದ್ದರು.
ದಿನಗಳು ಕಳೆಯುತ್ತಾ ಹೋದ೦ತೆ ಅದರ ಹೆಸರು ವ್ಯಾಪಿಸುತ್ತಾ ಹೋಯಿತು. ಡಾ.ಸ್ಟೋಕ್ಸ್ ಅವರ ಉಸ್ತುವಾರಿಯಲ್ಲಿ ಎಲೆಕ್ಟ್ರಿಕ್ ಸ್ಟೆರಿಲೈಸರ್ ಕೋಣೆಯನ್ನು ಹೊಸದಾಗಿ ನಿರ್ಮಿಸಲಾಯಿತು. ಇದನ್ನು ನೋಡಿದ ಸರ್.ಮಿರ್ಜಾ ಇಸ್ಮಾಯಿಲ್ ಅವರು ಮೈಸೂರಿನ ಸರಕಾರಿ ಆಸ್ಪತ್ರೆಗಳಲ್ಲಿ ವಿದ್ಯುತ್ ಇರುವ ಕಡೆಯಲ್ಲೆಲ್ಲ ಸ್ಟೆರಿಲೈಸರ್ ಕೋಣೆಗಳನ್ನು ನಿರ್ಮಿಸಲು ಯೋಚಿಸುವುದಾಗಿ ಹೇಳಿದರು. 1933ರಲ್ಲಿ ಆಧುನಿಕ ಕ್ಷ-ಕಿರಣವನ್ನು ಸ್ಥಾಪನೆ ಮಾಡಲಾಗಿ, ಇದರ ಮೂಲಕ ಸಿಲಿಕೊಸಿಸ್ ರೋಗದ ಬಗ್ಗೆ ಮೊದಲ ಬಾರಿಗೆ ಸಂಶೋಧನೆ ಪ್ರಾರಂಭವಾಯಿತು.
WHO ಕೂಡ ಮೆಚ್ಚಿಕೊಂಡಿತ್ತು!
1938ರಲ್ಲಿ ಆಸ್ಪತ್ರೆಯನ್ನು ಇನ್ನಷ್ಟು ವಿಸ್ತರಿಸಲಾಯಿತು. ಹೊಸ ವಾರ್ಡುಗಳು, ಹೊಸ ಶಸ್ತ್ರಚಿಕಿತ್ಸೆ ಕೋಣೆ, ವಿದ್ಯುತ್, ಅಡುಗೆ ಕೋಣೆ ಮತ್ತು ಹೊರರೋಗಿಗಳ ವಿಭಾಗವನ್ನು ಇನ್ನಷ್ಟು ವಿಸ್ತರಿಸಲಾಯಿತು. 1940-52ರ ನಡುವೆ ಆಸ್ಪತ್ರೆಯ ಹೆಸರು ದೇಶದಲ್ಲಿಯೆ ಉನ್ನತ ಮಟ್ಟಕ್ಕೆ ತಲುಪಿತು. ಡಾ.ರೋಹನ್‌ಟ್ರಿ, ಡಾ.ಡನ್‌ಕರ‍್ಲೆ ಮತ್ತು ಡಾ.ಚಾಪ್ಲಿನ್ ಅವರು ಇದಕ್ಕೆ ಮುಖ್ಯ ಕಾರಣರಾಗಿದ್ದರು. 1940ರಲ್ಲಿ ಬ್ರಿಟಿಷ್ ಸಂಜಾತರಾದ ಮಿ.ಕ್ರಾಪ್ಟನ್ ಆಸ್ಪತ್ರೆಯನ್ನು ನೋಡಿ ತುಂಬಾ ಉತ್ಸಾಹದಿಂದ “ಈ ಆಸ್ಪತ್ರೆ ಟಿಪಿಕಲ್ ಮೈಸೂರು ರಾಜ್ಯವನ್ನು ಪ್ರತಿಬಿಂಬಿಸುತ್ತಿದೆ” ಎಂದಿದ್ದರು. ರೋಗಿಗಳು ಯಾವುದೇ ಕ್ಲಿಷ್ಟ ಪರಿಸ್ಥಿತಿಯಲ್ಲಿ ಬಂದರೂ, ವ್ಯೆದ್ಯರು ಶಸ್ತ್ರಚಿಕಿತ್ಸೆಯನ್ನು ಸಫಲವಾಗಿ ನಡೆಸುತ್ತಿದ್ದರು. 1951ರಲ್ಲಿ ಆಸ್ಪತ್ರೆಯನ್ನು ನೋಡಿದ ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರತಿನಿಧಿ ಡಾ.ಹಬ್ಜಬರ್ಗ್ ಅವರು “ಭಾರತದಲ್ಲಿ ನಾನು ನೋಡಿದ ಅತ್ಯಂತ ಸ್ವಚ್ಛ ಮತ್ತು ಆಧುನಿಕ ಸವಲತ್ತುಗಳುಳ್ಳ ಆಸ್ಪತ್ರೆ” ಎಂದು ಪ್ರಶಂಸಿದ್ದರು.
ವೈದ್ಯರು ಹೊಸಹೊಸ ಸಂಶೋಧನೆಗಳನ್ನು ಮಾಡಿ ವರದಿಗಳನ್ನು ಪ್ರಕಟಿಸಿದರು. ಡಾ.ಚಾಪ್ಲಿನ್ ಉದ್ಯೋಗಕ್ಕೆ ಸಂಬಂಧಪಟ್ಟ ರೋಗಗಳಿಗಾಗಿ ಔಷಧಿಗಳ ಸಂಶೋಧನೆ ನಡೆಸಿದರು. ಮುಖ್ಯವಾಗಿ ಪರಿಸರ ಆರೋಗ್ಯ, ಗಣಿ ಕಾರ್ಮಿಕರು ಮೂರ್ಛೆ ಹೋಗುವುದರ ಬಗ್ಗೆಯೂ ಸಂಶೋಧನೆ ನಡೆಸಿದರು. ಆಳದ ಗಣಿಗಳಲ್ಲಿ ಉಂಟಾಗುವ ಉಷ್ಣತೆಯಿ೦ದ ಕಾರ್ಮಿಕರ ಮೇಲೆ ಬೀರುವ ಪರಿಣಾಮಗಳ ಬಗ್ಗೆಯೂ ವರದಿಗಳನ್ನು ಪ್ರಕಟಿಸಲಾಯಿತು. ಈ ವರದಿಗಾಗಿ ಡಾ.ಚಾಪ್ಲಿನ್ ಮತ್ತು ಡಾ.ಲಿಂಡ್ಸೆ ಅವರಿಗೆ ದಕ್ಷಿಣ ಆಫ್ರಿಕಾದಿಂದ 1948ರಲ್ಲಿ ಚಿನ್ನದ ಪದಕ ದೊರಕಿತ್ತು.
ಕೋಲಾರ ಪಟ್ಟಣದ ಹೊರವಲಯದಲ್ಲಿ ಗಣಿ ಕಾರ್ಮಿಕರಿಗಾಗಿ ವಿಶೇಷವಾಗಿ ಕಮಲಾ-ನೆಹರು ಸ್ಯಾನಿಟೋರಿಯಂ ಆಸ್ಪತ್ರೆಯನ್ನು ನಿರ್ಮಿಸಲಾಯಿತು. ಗಣಿಗಳಲ್ಲಿ ಕೆಲಸ ಮಾಡುವುದರಿಂದ ಸಿಲಿಕಾ, ಕಾರ್ಮಿಕರ ದೇಹ ಸೇರಿ, ಅದು ಉಸಿರುಗೂಡಿನ ಮೇಲೆ ಕುಳಿತು ನಿಧಾನವಾಗಿ ಕೊಳೆತು, ತೂತುಗಳಾಗಿ ಕೊನೆಗೆ ರಕ್ತ ಸಾವ್ರವಾಗುತ್ತಿತ್ತು. ಉಸಿರುಗೂಡು ಎಷ್ಟು ಅಪಾಯಕ್ಕೆ ಸಿಲುಕಿದೆ ಎನ್ನುವುದನ್ನು ಪಾಯಿಂಟ್ಸ್ ಆಧಾರದಲ್ಲಿ ಗುರುತಿಸಲಾಗುತ್ತಿತ್ತು. ಪಾಯಿಂಟ್‌ಗಳು ಹೆಚ್ಚಾಗಿದ್ದಲ್ಲಿ ಕಾರ್ಮಿಕರನ್ನು ಕೆಲಸಕ್ಕೆ ಅನರ್ಹ ಎಂದು ಘೋಷಿಸುತ್ತಿದ್ದರು.
115 ವರ್ಷಗಳ ನಿರಂತರ ಸೇವೆ
ಕೆಲಸ ಕಳೆದುಕೊಂಡ ಕಾರ್ಮಿಕರನ್ನು ಕಂಪನಿ ಅವರ ಊರುಗಳಿಗೆ ಕಳುಹಿಸಿಬಿಡುತ್ತಿತ್ತು. ಅನಾರೋಗ್ಯ ಕಾರ್ಮಿಕರಿಗೆ ಒಳ್ಳೆಯ ಗಾಳಿ ದೊರಕಿ ಕಾಯಿಲೆ ವಾಸಿಯಾದರೂ ಆಗಬಹುದು ಎಂಬುದಾಗಿ ವೈದ್ಯರು ಹೇಳುತ್ತಿದ್ದರು. ಕಾರ್ಮಿಕರು ನರಳಿ ಸಾಯುವುದನ್ನು ಇತರೆ ಕಾರ್ಮಿಕರು ನೋಡದೆ ಇರಲಿ ಎನ್ನುವುದು ಒಂದು ಕಾರಣವಾದರೆ, ಕೆಜಿಎಫ್ ಪ್ರದೇಶದಲ್ಲಿ ತಂಪು ಹವೆ ಇರುವುದರಿ೦ದ ರೋಗಿಗಳಿಗೆ ತೊಂದರೆಯಾಗುತ್ತದೆ ಎನ್ನುವುದು ಇನ್ನೊಂದು ಕಾರಣವಾಗಿತ್ತು. ನ್ಯುಮಾಟೋಸಿಸ್/ಸಿಲಿಕೋಸಿಸ್ ರೋಗಿಗಳನ್ನು ಬಿಸಿ ವಾತಾವರಣ ಇರುವ ಅವರ ರಾಜ್ಯ ತಮಿಳುನಾಡಿನಲ್ಲಿ ಬಿಟ್ಟುಬರಲು ಕಂಪನಿಗಳು ಏರ್ಪಾಡು ಮಾಡುತ್ತಿದ್ದವು.
ಆ ಕಾಲಕ್ಕೆ ದೇಶದಲ್ಲಿಯೆ ಮೊದಲ ಬಾರಿಗೆ ಮಹಿಳೆಯರು ಈ ಗಣಿ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. 1890ರಲ್ಲಿ ಕೇವಲ ಹತ್ತು ಹಾಸಿಗೆಗಳಿದ್ದ ಆಸ್ಪತ್ರೆ 1980ರ ಹೊತ್ತಿಗೆ 270 ಹಾಸಿಗೆಗಳನ್ನು ಹೊಂದಿತ್ತು. ಜೊತೆಗೆ ಎಲ್ಲಾ ವಿಭಾಗಗಳಲ್ಲೂ ವಿಶೇಷ ವೈದ್ಯರು ಆಸ್ಪತ್ರೆಯಲ್ಲಿದ್ದರು. ಆಸ್ಪತ್ರೆಗೆ ಬರುತ್ತಿದ್ದ ಹೊರ ರೋಗಿಗಳ ಸಂಖ್ಯೆ ದಿನ ಒಂದಕ್ಕೆ 2,000ಕ್ಕೂ ಮೀರಿತ್ತು. ಆಸ್ಪತ್ರೆಯಲ್ಲಿ ಹೊಸ ವೈದ್ಯರಿಗೆ ಮತ್ತು ದಾದಿಯರಿಗೆ ತರಬೇತಿಯನ್ನು ಕೊಡಲಾಗುತ್ತಿತ್ತು. 115 ವರ್ಷಗಳ ಕಾಲ ನಿರಂತರವಾಗಿ ಬಂದವರಿಗೆಲ್ಲ ಆರೋಗ್ಯದ ಶುಶ್ರೂಷೆಯನ್ನು ನೀಡಿದ ಈ ಆಸ್ಪತ್ರೆ 2001ರಲ್ಲಿ ಬಾಗಿಲುಗಳನ್ನು ಮುಚ್ಚಿಕೊಂಡು ಅನಾಥವಾಗಿತ್ತು.
ಈಗ ಕೋವಿಡ್-19ರ ಕಾರಣದಿಂದ ಮತ್ತೆ ರೋಗಗಿಗಳ ಶುಶ್ರೋಷೆಗೆ ಬಾಗಿಲು ತೆರೆದುಕೊಂಡಿದೆ. ಈ ಅಸ್ಪತ್ರೆಯನ್ನು ಮೆಡಿಕಲ್ ಆಸ್ಪತ್ರೆಯಾಗಿ ಮಾಡಬೇಕು ಎನ್ನುವ ಮಾತುಕತೆಗಳು ಕೇಳಿಬರುತ್ತಿವೆ. ಜಗತ್ತಿನ ಅದ್ಭುತ ಗಣಿ ಪ್ರವಾಸೋದ್ಯಮ ಆಗುವ ಎಲ್ಲಾ ಲಕ್ಷಣಗಳಿರುವ ಈ ಪ್ರದೇಶದಲ್ಲಿ ಒಂದು ವೈದ್ಯಕೀಯ ಕಾಲೇಜಾದರೂ ಬರಬಹುದೆ? ಕಾದು ನೋಡಬೇಕು.
***
- ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ…