ಜಿಲ್ಲಾಡಳಿತಕ್ಕೆ 12.5 ಲಕ್ಷ ರೂ. ಮೌಲ್ಯದ ಆರೋಗ್ಯ ಕಿಟ್ಗಳ ಹಸ್ತಾಂತರ
ಚಿಕ್ಕಬಳ್ಳಾಪುರ: ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಉತ್ತಮವಾಗಿ ಕೆಲಸ ಮಾಡಿದೆ. ಜಿಲ್ಲೆಯ ಪಾಸಿಟಿವಿಟಿ ದರ 7% ಮಟ್ಟಕ್ಕೆ ಇಳಿದಿದೆ. ಸಕ್ರಿಯ ಪ್ರಕರಣಗಳು ಸಂಖ್ಯೆಯೂ ಕಡಿಮೆಯಾಗಿರುವುದೇ ಇದಕ್ಕೆ ಸಾಕ್ಷಿ ಎಂದು ಸಂಸದ ಬಿ.ಎನ್.ಬಚ್ಚೇಗೌಡ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿಡ್ ಸೋಂಕಿತರಿಗೆ ನೀಡುವ ಔಷಧಿಗಳನ್ನು ಒಳಗೊಂಡ ಆರೋಗ್ಯ ಕಿಟ್ʼಗಳನ್ನು ಜಿಲ್ಲಾಧಿಕಾರಿಗಳ ಮುಖಾಂತರ ಜಿಲ್ಲಾಡಳಿತಕ್ಕೆ ಹಸ್ತಾಂತರ ಮಾಡಿದ ನಂತರ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಕೋವಿಡ್ ಟಾಸ್ಕ್ ಪೋರ್ಸ್ ಸಮಿತಿಗಳು ಹೆಚ್ಚು ಪರಿಣಾಮಯಾಗಿ ಕೆಲಸ ಮಾಡುತ್ತಿವೆ. ಸ್ಥಳೀಯ ಮಟ್ಟದ ಅಧಿಕಾರಿಗಳು ಹೆಚ್ಚು ಸಮನ್ವಯತೆಯಿಂದ ಕೆಲಸ ಮಾಡಿ ಪರಿಸ್ಥಿತಿ ಕೈ ಮೀರದಂತೆ ನೋಡಿಕೊಂಡಿದ್ದಾರೆ. ಕೊರೋನಾ ನಿಯಂತ್ರಣ ಕಾರ್ಯದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದ ತಂಡ ಬಹಳ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ. ಈ ಅಧಿಕಾರಿಗಳಿಗೆ ಬೆನ್ನೆಲುಬಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಕೆ.ಸುಧಾಕರ್ ಅವರೂ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಟಾಸ್ಕ್ ಪೋರ್ಸ್ ಸಮಿತಿಗಳು ತಮ್ಮ ವ್ಯಾಪ್ತಿಯ ಕೋವಿಡ್ ಸೋಂಕಿತರಿಗೆ ರೋಗಲಕ್ಷಣ ಇಲ್ಲದ ಹಾಗೂ ಎಲ್ಲಾ ಸವಲತ್ತುಗಳು ಇರುವವರಿಗೆ ಹೋಂ ಐಸೋಲೇಶನ್ʼನಲ್ಲಿಟ್ಟು ಸೂಕ್ತ ಆರೋಗ್ಯ ಸೇವೆ ಒದಗಿಸುತ್ತಿದ್ದಾರೆ, ಹೋಂ ಕ್ವಾರಂಟೈನ್ ಇರಲು ವ್ಯವಸ್ಥೆ ಇಲ್ಲದವರನ್ನು ಕೋವಿಡ್ ಆರೈಕೆ ಕೇಂದ್ರಗಳಲ್ಲಿಟ್ಟು ಚಿಕಿತ್ಸೆ ನೀಡುತ್ತಿದ್ದಾರೆ. ತೀವ್ರ ಬಾಧಿತ ಕೋವಿಡ್ ಪೀಡಿತರಿಗೆ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಅಲ್ಲದೆ. ಕೋವಿಡ್ ಒಬ್ಬರಿಂದ ಮತ್ತೋಬ್ಬರಿಗೆ ಪ್ರಸರಣವಾಗದಂತೆ ಹೆಚ್ಚು ನಿಗಾ ವಹಿಸುವ ನಿಟ್ಟಿನಲ್ಲಿಯೂ ಸಹ ಕೋವಿಡ್ ಟಾಸ್ಕ್ ಪೋರ್ಸ್ ಸಮಿತಿಗಳು ಪರಿಣಾಮಕಾರಿ ಕೆಲಸ ನಿರ್ವಹಿಸಿವೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಕೋವಿಡ್ ರೋಗಿಗಳಿಗೆ ನೀಡುವ ಔಷಧಿ, ಆಮ್ಲಜನಕದ ಕೊರತೆಯಾಗಲಿ ಇಲ್ಲ, ಹಾಸಿಗೆ ಸಮಸ್ಯೆಯೂ ಇಲ್ಲ. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹೆಚ್ಚು ಶ್ರಮವಹಿಸಿ ವ್ಯವಸ್ಥೆಗಳನ್ನು ಸಮರ್ಪಕವಾಗಿ ಸಿಗುವಂತೆ ಮಾಡಿದ್ದಾರೆ. ಈ ಎಲ್ಲಾ ಸೌಲಭ್ಯಗಳನ್ನು ಬಹಳ ಉತ್ತಮವಾಗಿ ಜಿಲ್ಲಾಧಿಕಾರಿಗಳು ಬಳಸಿಕೊಂಡು ಕೊರೋನಾ ನಿಯಂತ್ರಣ ಕ್ರಮಗಳನ್ನು ಸರಿಯಾಗಿ ಅನುಷ್ಠಾನಗೊಳಿಸಿದ್ದಾರೆ. ಕೋವಿಡ್ ಸೋಂಕಿತರಿಗೆ ನೀಡುವ ಔಷಧಿ ಒಳಗೊಂಡ 12.5 ಲಕ್ಷ ಮೌಲ್ಯದ ಆರೋಗ್ಯ ಕಿಟ್ʼನ್ನು ಜಿಲ್ಲಾಧಿಕಾರಿ ಮುಂಖಾತರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ನೀಡಿ, ಕೋವಿಡ್ ಸೋಂಕನ್ನು ಸಂಪೂರ್ಣವಾಗಿ ನಿಯಂತ್ರಿಸಿ ಸಕ್ರಿಯ ಪ್ರಕರಣಗಳನ್ನು ಶೂನ್ಯಕ್ಕೆ ಪ್ರಯತ್ನಿಸುವಂತೆ ಜಿಲ್ಲಾಡಳಿತಕ್ಕೆ ಸಂಸದರು ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದಿರಾ ಆರ್. ಕಬಾಡೆ ಇದ್ದರು.