ಸೆಂಟ್ರಲ್ ಕಾಲೇಜ್ ಆವರಣದಲ್ಲಿ ಶುಕ್ರವಾರದವರೆಗೆ ಲಸಿಕೆ
ಬೆಂಗಳೂರು: ವಿದೇಶಗಳಲ್ಲಿ ವ್ಯಾಸಂಗ ಮಾಡುತ್ತಿರುವ ರಾಜ್ಯದ ವಿದ್ಯಾರ್ಥಿಗಳು, ಉದ್ಯೋಗ ಮಾಡುವವರಿಗೆ ನಗರದ ಸೆಂಟ್ರಲ್ ಕಾಲೇಜ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಲಸಿಕೆ ಅಭಿಯಾನವು ಶುಕ್ರವಾರ (ಜೂನ್ 11)ದ ವರೆಗೂ ನಡೆಯಲಿದೆ ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಈ ಬಗ್ಗೆ ಮಂಗಳವಾರ ಹೇಳಿಕೆ ನೀಡಿರುವ ಆವರು, ಕಳೆದ ಮಂಗಳವಾರದಿಂದ ಅರಂಭಿಸಲಾದ ಈ ವ್ಯಾಕ್ಸಿನೇಷನ್ ಕ್ಯಾಂಪ್‌ನಲ್ಲಿ ಈವರೆಗೆ 1,200 ಜನರಿಗೆ ಕೋವಿಶೀಲ್ಡ್ ಲಸಿಕೆ ನೀಡಲಾಗಿದೆ. ಇಂದು ಕೂಡ 50 ಜನ ಬಂದು ಲಸಿಕೆ ಪಡೆದಿದ್ದಾರೆ. ಶುಕ್ರವಾರ ಸಂಜೆಯೊಳಗೆ ವಿದೇಶಕ್ಕೆ ಹೋಗುವವರು ಇದ್ದರೆ ಬಂದು ಲಸಿಕೆ ತೆಗೆದುಕೊಳ್ಳಬಹುದು ಎಂದರು ಅವರು ಕೋರಿದ್ದಾರೆ.
ಆದ್ಯತಾ ಗುಂಪಿನ ಕೋಟಾದಲ್ಲಿ ಇವರೆಲ್ಲರಿಗೂ ಲಸಿಕೆ ಕೊಡಲಾಗಿದ್ದು, 2ನೇ ಡೋಸ್ ನೀಡುವ ದಿನಾಂಕವನ್ನು ಶೀಘ್ರವೇ ತಿಳಿಸಲಾಗುವುದು. ಇವರೆಗೆ ನೀಡಲಾಗುವ ಎರಡನೇ ಡೋಸ್ ಅವಧಿಯನ್ನು 4ರಿಂದ 6 ವಾರಗಳಿಗೆ ಕುಗ್ಗಿಸುವ ರಾಜ್ಯದ ಕ್ರಮಕ್ಕೆ ಕೇಂದ್ರ ಸರಕಾರ ಒಪ್ಪಿಗೆ ಸೂಚಿಸಿದೆ. ಈ ಬಗ್ಗೆ ರಾಜ್ಯ ಸರಕಾರ ಪತ್ರ ಬರೆದು ಮನವಿ ಮಾಡಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ.
ಜಿಲ್ಲೆಗಳ್ಲಲೂ ಇವರಿಗೆ ಲಸಿಕೆ
ಬೆಂಗಳೂರಿನಲ್ಲಿ ಈ ಲಸಿಕೆ ಶಿಬಿರ ಯಶಸ್ವಿಯಾದ ಬೆನ್ನಲ್ಲೇ ಎಲ್ಲ ಜಿಲ್ಲೆಗಳಲ್ಲಿಯೂ ವಿದೇಶಗಳಲ್ಲಿ ವ್ಯಾಸಂಗ ಮತ್ತು ಉದ್ಯೋಗ ಮಾಡುವ ಕನ್ನಡಿಗರಿಗೆ ಇದೇ ರೀತಿಯ ಲಸಿಕೆ ಅಭಿಯಾನ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಡಿಸಿಎಂ ತಿಳಿಸಿದ್ದಾರೆ.