ಕಡು ಬಡವರನ್ನು ಹುಡುಕಿಕೊಂಡು ಹೋಗಿ ಆಹಾರ ಕಿಟ್ ಕೊಟ್ಟ ಖ್ಯಾತ ವೈದ್ಯ
ಬಂಗಾರಪೇಟೆ: ಖ್ಯಾತ ವೈದ್ಯ ಹಾಗೂ ರಾಜ್ಯ ಬಿಜೆಪಿ ಕಾರ್ಯಕಾರಿ ಸದಸ್ಯ ಡಾ.ನರೇಂದ್ರ ಅವರು ತಾಲೂಕಿನ ವಿವಿಧೆಡೆ ವಿಶ್ವ ಹಿಂದೂ ಪರಿಷತ್ ಸಹಯೋಗದಲ್ಲಿ ಕೋವಿಡ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಬಡಜನರಿಗೆ ಅತ್ಯಗತ್ಯವಾದ ಆಹಾರ ಕಿಟ್‌ಗಳನ್ನು ಭಾನುವಾರ ಹಂಚಿಕೆ ಮಾಡಿದ್ದಾರೆ.
ಪಟ್ಟಣದ ವಿಬಿಆರ್ ಕಲ್ಯಾಣ ಮಂಟಪ, ವಿಜಯನಗರದ ಶ್ರೀ ಆಂಜನೇಯ ಸ್ವಾಮಿ ದೇವಾಲಯ, ಮಾಗೊಂದಿಯ ಶ್ರೀ ಶನಿಮಹಾತ್ಮ ಸ್ವಾಮಿ ದೇವಾಲಯ ಹಾಗೂ ಐನೋರ ಹೊಸಹಳ್ಳಿ ಗ್ರಾಮದಲ್ಲಿ ಬಡವರನ್ನು ಗುರುತಿಸಿ 620 ಆಹಾರ ಕಿಟ್‌ಗಳನ್ನು ಡಾ.ನರೇಂದ್ರ ನೀಡಿದ್ದಾರೆ.
ಅಕ್ಕಿ, ಗೋದಿ, ಅಡುಗೆ ಎಣ್ಣೆ, ಸಾಮಬಾರು ಪದಾರ್ಥ, ಸಕ್ಕರೆ ಸೇರಿದಂತೆ ವಿವಿಧ ಆಹಾರ ಸಾಮಗ್ರಿ ಜತೆ ಉತ್ತಮ ಆರೋಗ್ಯಕ್ಕಾಗಿ ಕಷಾಯ ಸಾಮಗ್ರಿಗಳನ್ನೂ ಅವರು ಆಹಾರ ಕಿಟ್ ಮೂಲಕ ಕೊಟ್ಟಿದ್ದಾರೆ.
ಸಿಕೆನ್ಯೂಸ್ ನೌ ಜತೆ ಮಾತನಾಡಿದ ಡಾ.ನರೇಂದ್ರ ಅವರು, “ಕೋವಿಡ್ ಕಾರಣದಿಂದ ಪ್ರತಿಯೊಬ್ಬರೂ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಡವರ ಪರಿಸ್ಥಿತಿ ಕಷ್ಟಕರವಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಜನರಿಗಾಗಿ ಸಾಕಷ್ಟು ಸೌಲಭ್ಯಗಳನ್ನು ನೀಡಿವೆ. ಇಂಥ ಸಂಕಷ್ಟದ ಸಮಯದಲ್ಲಿ ನನ್ನದು ಅಳಿಲು ಸೇವೆಯಷ್ಟೇ. ನನ್ನ ಕೈಲಾದ ಮಟ್ಟಿಗೆ ಬಡವರಿಗೆ ಆಹಾರ ಪದಾರ್ಥ ನೀಡಿದ್ದೇನೆ. ಯಾರೂ ಹಸಿವಿನಿಂದ ಬಳಲಬಾರದು. ಅಗತ್ಯ ಇರುವವರು ನಮ್ಮಲ್ಲಿಗೇ ಬರದೆ, ನಾವೇ ಅವರನ್ನು ಹುಡುಕಿಕೊಂಡು ಹೋಗಿ ಕಡು ಬಡವರನ್ನು ಗುರುತಿಸಿ ಕಿಟ್‌ಗಳನ್ನು ನೀಡಿದ್ದೇವೆ. ವಿಶ್ವ ಹಿಂದೂ ಪರಿಷತ್ ನನ್ನ ಕೆಲಸಕ್ಕೆ ಪ್ರೇರಣೆಯಾಗಿದೆ” ಎಂದರು.
ಕೋವಿಡ್ ಇಡೀ ವ್ಯವಸ್ಥೆಯನ್ನು ಬದಲಿಸಿಬಿಟ್ಟಿದೆ. ಈಗ ಎಲ್ಲ ವಿಷಯಗಳಿಗಿಂತ ಆರೋಗ್ಯ ಬಹಳ ಮುಖ್ಯವಾದದ್ದು. ಈ ನಿಟ್ಟಿನಲ್ಲಿ ನಾನು ಬಂಗಾರಪೇಟೆ ತಾಲೂಕಿನಲ್ಲಿ ಕೆಲಸ ಮಾಡಲಿದ್ದೇನೆ.
-ಡಾ.ನರೇಂದ್ರ
ಡಾ.ನರೇಂದ್ರ ಅವರು ಕೋವಿಡ್ ಮೊದಲ ಅಲೆ ಬಂದಾಗಲೂ ಬಂಗಾರಪೇಟೆ ತಾಲೂಕಿನ ಬಡ ಜನರಿಗೆ ಆಹಾರ ಒದಗಿಸುವ ಕೆಲಸ ಮಾಡಿದ್ದರು. ಹದಿನೈದು ದಿನ ನಿರಂತರವಾಗಿ 15,250 ಜನರಿಗೆ ಅವರು ಆಹಾರವನ್ನು ಪೂರೈಸಿದ್ದರು. ಎರಡನೇ ಅಲೆ ಸಂದರ್ಭದಲ್ಲೂ ತಮ್ಮ ಸೇವೆಯನ್ನು ಮುಂದುವರಿಸಿದ್ದಾರೆ.
ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಆರೋಗ್ಯ ಶಿಬಿರಗಳನ್ನು ಆಯೋಜಿಸಿ ಜನರಿಗೆ ಉಚಿತ ಆರೋಗ್ಯ ಸೇವೆ, ಚಿಕಿತ್ಸೆ ನೀಡುವುದರ ಜತೆಗೆ ಕೋವಿಡ್ ಜಾಗೃತಿಯಂಥ ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಡಾ.ನರೇಂದ್ರ ನಿರ್ಧರಿಸಿದ್ದಾರೆ.