ತಲೆ ತಿರುಗಿಸುತ್ತವೆ ಲೆಕ್ಕಗಳು / ಕೊರೊನಾ ನಡುವೆ ಕಾಮನ್‌ಮ್ಯಾನ್ ಪರಿಸ್ಥಿತಿ ಅಯೋಮಯ
ಬೆಂಗಳೂರು: ಕೋವಿಡ್ ಸಂಕಷ್ಟದ ನಡುವೆಯೂ 2021ರ ಜನವರಿ ತಿಂಗಳಿಂದೀಚೆಗೆ ಕೇಂದ್ರದ ನರೇಂದ್ರ ಮೋದಿ ಸರಕಾರ ನಿರಂತರ ತೈಲ ಬೆಲೆ ಏರಿಕೆ ಮೂಲಕ ಎಷ್ಟು ಅದಾಯ ಗಳಿಸಿದೆ ಗೊತ್ತಾ?
ಬರೋಬ್ಬರಿ 21.60 ಲಕ್ಷ ಕೋಟಿ ರೂಪಾಯಿ!!.
ಕಳೆದ ಒಂದು ವರ್ಷದ ಅವಧಿಯಲ್ಲಿ ಬಿಜೆಪಿ ಸರಕಾರ 48 ಬಾರಿ ತೈಲ ದರ ಹೆಚ್ಚಳ ಮಾಡಿದೆ. ಕಳೆದ ಜನವರಿಯಲ್ಲಿ 10 ಬಾರಿ, ಫೆಬ್ರವರಿಯಲ್ಲಿ 16 ಬಾರಿ, ಮೇ ತಿಂಗಳಲ್ಲೂ 16 ಬಾರಿ, ಜೂನ್ ತಿಂಗಳಲ್ಲಿ ಕೇವಲ 9 ದಿನಗಳಲ್ಲಿ 6 ಬಾರಿ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದರು.
ಕೇಂದ್ರದಲ್ಲಿ ಡಾ.ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರ ಇದ್ದಾಗ ತೈಲ ಬೆಲೆಗಳ ಮೇಲೆ ಸರಕಾರ ಪೂರ್ಣ ನಿಯಂತ್ರಣ ಹೊಂದಿತ್ತು. ತೈಲ ಬೆಲೆ ವರ್ಷಕ್ಕೆ ಒಮ್ಮೆಯೋ ಅಥವಾ ಎರಡು ಹೆಚ್ಚಿದರೆ ಅದೇ ದೊಡ್ಡದು. ಆದರೆ, ನರೇಂದ್ರ ಮೋದಿ ಅವರು 2014ರಲ್ಲಿ ಪ್ರಧಾನಿಯಾಗುತ್ತಿದ್ದಂತೆ ಸುಧಾರಣೆಗಳ ನೆಪದಲ್ಲಿ ತೈಲ ಬೆಲೆಗಳ ಮೇಲಿನ ನಿಯಂತ್ರಣವನ್ನು ತೆಗೆದುಹಾಕಿದರು. ಪರಿಣಾಮ ಕಂಪನಿಗಳ ಕೈಯ್ಯಲ್ಲಿ ಬೆಲೆಗಳ ಕೀಲಿ ಕೈ ಇದ್ದು, ಅವು ತಮಗಿಷ್ಟ ಬಂದಂತೆ ಆಟವಾಗುತ್ತಿವೆ ಎಂದು ಅವರು ದೂರಿದರು.
”ಕೊರೊನಾ ಸಾಂಕ್ರಾಮಿಕದ ಅವಧಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ ₹25.72 ರೂ. ಹಾಗೂ ಡೀಸೆಲ್ ಗೆ ₹23.93 ರೂ. ಹೆಚ್ಚಳ ಮಾಡುವ ಮೂಲಕ ಸರಕಾರ ತೆರಿಗೆ ನೆಪದಲ್ಲಿ ಸಾರ್ವಜನಿಕರನ್ನು ಲೂಟಿ ಮಾಡಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೆಟ್ರೋಲಿಯಂ ಉತ್ಪನ್ನಗಳ ದರ ಹೆಚ್ಚಳದ ಮೂಲಕ ಬಿಜೆಪಿ ಸರಕಾರ ಜನಸಾಮಾನ್ಯರ ಜೀವನದವನ್ನೇ ದುರ್ಬರ ಮಾಡಿದೆ. ನಿರಂತರ ಬೆಲೆ ಏರಿಕೆಯಿಂದ ಶ್ರೀಸಾಮಾನ್ಯನ ಬದುಕು ನರಕವಾಗಿದೆ. ಅಡುಗೆ ಎಣ್ಣೆ ಬೆಲೆ 200 ರೂ. ಗಡಿ ದಾಟಿದೆ ಎಂದು ಅವರು ಹೇಳಿದರು.
ಹೀಗಾಗಿ ತೈಲ ಬೆಲೆ ಏರಿಕೆ ಖಂಡಿಸಿ ಎಲ್ಲ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ. ಒಟ್ಟು 5 ಸಾವಿರ ಪೆಟ್ರೋಲ್ ಬಂಕ್ʼಗಳ ಎದುರು ಪ್ರತಿಭಟನೆಗಳು ನಡೆಯಲಿವೆ ಎಂದು ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದರು.