ಒಂದು ಗಿಡದಲ್ಲಿ 180ರಿಂದ 200 ಕಾಯಿ!!
by Ra Na Gopala Reddy Bagepalli
ಬಾಗೇಪಲ್ಲಿ: ಇಡೀ ರಾಜ್ಯದಲ್ಲಿ ಬಯಲು ಸೀಮೆಯಲ್ಲಿ ಮಳೆ ಕಡಿಮೆ. ಇನ್ನೂ ಬಾಗೇಪಲ್ಲಿ ತಾಲೂಕಿಗೆ ಬಂದರೆ ವರುಣರಾಯನಿಗೆ ಸದಾ ಮುನಿಸು. ಆದರೂ ಈ ಭಾಗದ ರೈತರ ಉತ್ಸಾಹಕ್ಕೇನು ಕಮ್ಮಿ ಇಲ್ಲ.
ಬಾಗೇಪಲ್ಲಿ ತಾಲೂಕಿನ ಕಸಬಾ ಹೋಬಳಿಯ ದೇವರಗುಡಿಪಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಪೆನಮಲೆ ಗ್ರಾಮದ ಪ್ರಗತಿಪರ ರೈತ ರಾಮಕೃಷ್ಣಪ್ಪ ಅವರು ಸುಧಾರಿತ ಕೃಷಿ ಅಳವಡಿಸಿಕೊಂಡು ಬರಡು ಭೂಮಿಯಲ್ಲೇ ಚಮತ್ಕಾರ ಮಾಡಿ ಉತ್ಕೃಷ್ಟ ಶೇಂಗಾ ಬೆಳೆ ಬೆಳೆದಿದ್ದಾರೆ.
ತಮ್ಮ ಪಾಲಿನ ಎರಡು ಎಕರೆ ಜಮೀನಿನಲ್ಲಿ ಅಧಿಕ ಇಳುವರಿ ತೆಗೆದು ಗುಣಮಟ್ಟದ ಶೇಂಗಾ ಬೆಳೆಯುವ ಮೂಲಕ ಅವರು ತಾಲೂಕಿನ ಇತರೆ ರೈತರು ಹಾಗೂ ಕೃಷಿ ಇಲಾಖೆ ಅಧಿಕಾರಿಗಳ ಗಮನ ಸೆಳೆದಿದ್ದಾರೆ.
ಲಭ್ಯವಿರುವ ಪ್ರಾಕೃತಿಕ ಸಂಪತ್ತು ಹಾಗೂ ಮಳೆಯನ್ನೇ ನೆಚ್ಚಿಕೊಂಡು ಅವರು ಭರ್ಜರಿ ಫಸಲು ತೆಗೆದಿದ್ದಾರೆ. ಅಲ್ಲದೆ, ಇತರೆ ರೈತರು ಸಾವಿರಾರು ಅಡಿ ಬೋರ್‌ವೆಲ್ ಕೊರೆಸಿ ನೀರು ಸಿಗದೆ ಕೈಸುಟ್ಟುಕೊಳ್ಳುತ್ತಿರುವ ಹೊತ್ತಿನಲ್ಲಿಯೇ ಈ ಭಾಗದ ಸಾಂಪ್ರದಾಯಿಕ ಬೆಳೆ ಶೇಂಗಾದಲ್ಲೇ ಸಂತೃಪ್ತಿ ಕಂಡಿದ್ದಾರೆ.
ಈ ಬಗ್ಗೆ ರೈತ ರಾಮಕೃಷ್ಣಪ್ಪ ಹೇಳಿದ್ದಿಷ್ಟು
“ಬಿತ್ತನೆ ಬೀಜದಿಂದ ಹಿಡಿದು ಪ್ರತಿ ಹಂತದಲ್ಲೂ ಕೃಷಿ ಅಧಿಕಾರಿಗಳ ಸಲಹೆ ಮತ್ತು ಮಾರ್ಗದರ್ಶನ ಪಡೆದು ಜಿಪ್ಸಮ್ ಪೊಟ್ಯಾಶಿಯಮ್ ರಂಜಕ ಹಾಗೂ ಕೆರೆ ಮಣ್ಣನ್ನು ಜಮೀನಿಗೆ ಹಾಕಿ ಶೇಂಗಾ ಒಂದು ಗಿಡದಲ್ಲಿ 180 ರಿಂದ 200 ಕಾಯಿಗಳನ್ನು ಬೆಳೆದಿದ್ದೇನೆ. ಇದು ಅತ್ಯಂತ ಉತ್ತಮ ಇಳುವರಿ” ಎಂದು ಸಂತಸ ವ್ಯಕ್ತಪಡಿಸಿದರು.
“ಎಲ್ಲರಿಗೂ ಗೊತ್ತಿರುವಂತೆ ಶೇಂಗಾ (ಕಡಲೆ ಕಾಯಿ) ಬಡವರ ಬಾದಾಮಿ. ನೀರಾವರಿ ಹೆಚ್ಚಿದಂತೆ ಅನೇಕ ರೈತರು ಶೇಂಗಾ ಬೆಳೆಯುವುದನ್ನೇ ನಿಲ್ಲಿಸಿಬಿಟ್ಟಿದ್ದಾರೆ. ಇದು ಕೂಡ ಲಾಭದಾಯಕ ಬೆಳೆ ಎನ್ನುವುದನ್ನು ಮರೆಯಬಾರದು”