ರಾಜ್ಯದ 5,000 ಬಂಕ್‌ಗಳ ಮುಂದೆ ಪ್ರತಿಭಟನೆ
ಬೆಂಗಳೂರು: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರುದ್ದ ರಾಜ್ಯವ್ಯಾಪಿ ಐದು ದಿನಗಳ ಪ್ರತಿಭಟನೆ ಆರಂಭಿಸಿರುವ ಕಾಂಗ್ರೆಸ್ ಪಕ್ಷವು, ‘100 ನಾಟ್ ಔಟ್’ ಅಭಿಯಾನವನ್ನು ಶುರು ಮಾಡಿದ್ದು, ಕೇಂದ್ರ ಸರಕಾರ ಬೆಲೆ ಏರಿಸುವ ಮೂಲಕ ಜನರ ರಕ್ತ ಹೀರುತ್ತಿದೆ ಎಂದು ಟೀಕಿಸಿದೆ.
ಬೆಳಗ್ಗೆಯೇ ಬೆಂಗಳೂರಿನ ಗಾಂಧಿನಗರ ವಿಧಾನಸಭೆ ಕ್ಷೇತ್ರದ ಶೇಷಾದ್ರಿಪುರಂನ ಶಿವಾನಂದ ಸರ್ಕಲ್ ಸಮೀಪದ ರೆಡ್ಡಿ ಪೆಟ್ರೋಲ್ ಬಂಕ್ ಬಳಿ ಪ್ರತಿಭಟನೆ ಆರಂಭಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮುಂತಾದವರು ಕೈಯ್ಯಲ್ಲಿ ‘100 ನಾಟ್ ಔಟ್’ ಫಲಕ ಹಿಡಿದು ಧರಣಿ ಕೂತರು.
ಬೆಂಗಳೂರು ಮಾತ್ರವಲ್ಲದೆ, ರಾಜ್ಯಾದ್ಯಂತ ಸುಮಾರು ಐದು ಸಾವಿಕ್ಕೂ ಹೆಚ್ಚು ಪೆಟ್ರೋಲ್ ಬಂಕ್ʼಗಳ ಎದುರು ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಸೇರಿ ಎಲ್ಲ ಮುಂಚೂಣಿ ಘಟಕಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ದರ ಏರಿಕೆ ಅಮಾನುಷ
ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿರಂತರವಾಗಿ ಏರಿಸುವ ಮೂಲಕ ಕೊರೊನಾದಿಂದ ಸಂಕಷ್ಟದಲ್ಲಿರುವ ಜನರ ಮೇಲೆ ಗದಾ ಪ್ರಹಾರ ಮಾಡುತ್ತಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ನಾಯಕರು ಟೀಕಾ ಪ್ರಹಾರ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, “ಪ್ರಧಾನಮಂತ್ರಿ ನರೇಂದ್ರ ಮೋದಿ ಜನರ ರಕ್ತ ಹೀರುತ್ತಿದ್ದಾರೆ. ನಿರಂತರ ತೈಲ ಬೆಲೆ ಏರಿಕೆ ಮೂಲಕ ತಿಗಣೆಯಂತೆ ಜನರ ರಕ್ತ ಹೀರಲಾಗುತ್ತಿದೆ. ಇದು ಅತ್ಯಂತ ಅಮಾನುಷ” ಎಂದರು.
“ಪೆಟ್ರೋಲ್, ಡೀಸೆಲ್ ದರ ಹೆಚ್ಚಳದ ಮೂಲಕ ಬಿಜೆಪಿ ಸರಕಾರ ಜನಸಾಮಾನ್ಯರ ಬೆನ್ನುಮೂಳೆಯನ್ನೇ ಮುರಿದಿದೆ. ಕೊರೊನಾ ಸಂಕಷ್ಟದಿಂದ ಬದುಕು ಕಟ್ಟಿಕೊಳ್ಳಲು ಪರದಾಡುತ್ತಿರುವ ಜನರನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಲಾಗಿದೆ” ಎಂದರು ಸಿದ್ದರಾಮಯ್ಯ.
”ಕೊರೊನಾ ಸಾಂಕ್ರಾಮಿಕದ ಅವಧಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ ₹25.72 ರೂ. ಹಾಗೂ ಡೀಸೆಲ್ ಗೆ ₹23.93 ರೂ. ಹೆಚ್ಚಳ ಮಾಡುವ ಮೂಲಕ ಸರಕಾರ ತೆರಿಗೆ ನೆಪದಲ್ಲಿ ಸಾರ್ವಜನಿಕರನ್ನು ಲೂಟಿ ಮಾಡಿದೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಜತೆಗೆ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ರಾಜ್ಯಸಭೆ ಸದಸ್ಯ ಎಲ್.ಹನುಮಂತಯ್ಯ ಮುಂತಾದವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.