ಅಗಾಧ ಅಕ್ಷರ ಸಂಪತ್ತನ್ನು ಕನ್ನಡಿಗರಿಗೆ ಬಿಟ್ಟುಹೊರಟ ಕವಿ ಸಿದ್ದಲಿಂಗಯ್ಯ ಅವರಿಗೆ ನಮ್ಮ ಅಂಕಣಕಾರ ಡಾ.ಗುರುಪ್ರಸಾದ್ ರಾವ್ ಹವಲ್ದಾರ್ ಅವರಿಂದ ಅಕ್ಷರ ನಮನ
ಇಕ್ರಲಾ ವದೀರ್ಲಾ, ಈ ನನ್ನ ಮಕ್ಕಳ ಚರ್ಮ ಎಬ್ರಲಾ, ದೇವ್ರು ಒಬ್ರೇ ಅಂತಾರೆ, ಓಣೆಗೊಂದ್ ತರ ಗುಡಿ ಕಟ್ಸವ್ರೆ ಎಂದೆನ್ನುತ್ತಾ… ಒಂದಿಡೀ ಸಮುದಾಯದ ತಲೆಮಾರುಗಳ ನೋವು-ಅಸಹನೆಗಳಿಗೆ ದನಿಯಾಗಿ ನಿಂತವರು ಸಿದ್ದಲಿಂಗಯ್ಯ.
ತಮ್ಮೆಲ್ಲ ಆಕ್ರೋಶವನ್ನು “ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ” ಕವನದ ಮೂಲಕ ಸಮಾಜದ ಮನದಾಳದಲ್ಲಿ ಮಡುಗಟ್ಟಿದ್ದ ಆಕ್ರೋಶಗಳಿಗೆ, ದಲಿತರ ನೋವನ್ನು ಸಮರ್ಥವಾಗಿ ದನಿಯಾಗಿ, ಅಕ್ಷರ ರೂಪಕ್ಕಿಳಿಸಿದ, ಸತ್ವಪೂರ್ಣ ಕಾವ್ಯಾಭಿವ್ಯಕ್ತಿಯಿಂದ ತನ್ನ ಒಡಲಾಳದ ಸಿಟ್ಟನ್ನು ಹೊರಹಾಕಿ ಒಂದು ತಲೆಮಾರನ್ನು ಜಾಗೃತಗೊಳಿಸಿದ ಹಿರಿಯ ಕವಿ ಡಾ.ಸಿದ್ದಲಿಂಗಯ್ಯನರು ಕೊರೊನಾದಿಂದಾಗಿ ನಮ್ಮನೆಲ್ಲ ಶುಕ್ರವಾರ ಅಗಲಿದ್ದಾರೆ, ಅವರಿಗೆ ಪತ್ನಿ, ಓರ್ವ ಪುತ್ರಿ ಹಾಗೂ ಪುತ್ರ ಇದ್ದಾರೆ.
ಸಿದ್ದಲಿಂಗಯ್ಯನವರು ಬಡ ಕುಟುಂಬವೊಂದರಲ್ಲಿ ದೇವಯ್ಯ ಮತ್ತು ವೆಂಕಟಮ್ಮನವರ ಪುತ್ರರಾಗಿ 1954ರ ಫೆಬ್ರವರಿ 3ರಂದು ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಮಂಚನಬೆಲೆಯಲ್ಲಿ ಜನಿಸಿದರು.
ಮಾಗಡಿಯ ಹೊಸಹಳ್ಳಿಯ ಬಿಸಿಲಮ್ಮನ ಗುಡಿಯಲ್ಲಿ ಅಕ್ಷರಾಭ್ಯಾಸ ಪ್ರಾರಂಭಿಸಿದ ಸಿದ್ದಲಿಂಗಯ್ಯ ನವರು 1974ರ ವರ್ಷದಲ್ಲಿ ಬೆಂಗಳೂರಿನ ಸರಕಾರಿ ಕಲಾ ಕಾಲೇಜಿನಿಂದ ಬಿ.ಎ. ಆನರ್ಸ್ (ಐಚ್ಛಿಕ ಕನ್ನಡ) ಪದವಿ ಪಡೆದರಲ್ಲದೆ. 1976ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪ್ರೊ.ಡಿ.ಎಲ್.ನರಸಿಂಹಾಚಾರ್ಯರ ಮಾರ್ಗದರ್ಶದಿಂದ ಸ್ವರ್ಣ ಪದಕದೊಂದಿಗೆ ಪ್ರಥಮ ಶ್ರೇಣಿಯಲ್ಲಿ ಎಂ.ಎ. ಪದವಿಯನ್ನೂ, ಪ್ರೊ.ಜಿ.ಎಸ್. ಶಿವರುದ್ರಪ್ಪನವರ ಮಾರ್ಗದರ್ಶನದಲ್ಲಿ ‘ಗ್ರಾಮದೇವತೆಗಳು’ ಎಂಬ ಪ್ರೌಢ ಪ್ರಬಂಧವನ್ನು ಮಂಡಿಸಿ 1989ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದ ಸಿದ್ದಲಿಂಗಯ್ಯನವರು, ಪ್ರಾಧ್ಯಾಪಕರಾಗಿ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ವಿದ್ಯಾರ್ಥಿ ದೆಸೆಯಿಂದಲೇ ಸಮಾಜದಲ್ಲಿನ ಅಸಮಾನತೆಗಳ ಬಗ್ಗೆ ತಮ್ಮೊಳಗೆ ಮೊಳೆಯುತ್ತಿದ್ದ ಸಿಟ್ಟು, ಆಕ್ರೋಶಗಳನ್ನೂ ವ್ಯಕ್ತಿಪಡಿಸಲು ಸಿದ್ದಲಿಂಗಯ್ಯನವರು ಆಯ್ದುಕೊಂಡದ್ದು ಕಾವ್ಯ ಮಾಧ್ಯಮವನ್ನು. ಹೀಗೆ ಅವರು ಬರೆದ ಹಲವಾರು ಕವನಗಳ ಸಂಕಲನ ‘ಹೊಲೆಮಾದಿಗರ ಹಾಡು’ 1975ರಲ್ಲಿ ಪ್ರಕಟಗೊಂಡಿತು. ಮುಂದೆ ಅವರ ‘ಸಾವಿರಾರು ನದಿಗಳು’, ‘ಕಪ್ಪುಕಾಡಿನ ಹಾಡು’, ‘ಮೆರವಣಿಗೆ’, ‘ನನ್ನ ಜನಗಳು ಮತ್ತು ಇತರ ಕವಿತೆಗಳು’, ‘ಆಯ್ದ ಕವನಗಳು’ ಮುಂತಾದ ಕವನ ಸಂಕಲನಗಳು ಪ್ರಕಟಗೊಂಡಿವೆ.
ಸಿದ್ದಲಿಂಗಯ್ಯನವರ ‘ಪಂಚಮ ಮತ್ತು ನೆಲಸಮ’, ‘ಏಕಲವ್ಯ’ ಪ್ರಮುಖ ನಾಟಕಗಳಾದರೆ ‘ಅವತಾರಗಳು’ ಪ್ರಬಂಧ ಕೃತಿ. ಇವಲ್ಲದೆ ರಸಗಳಿಗೆಗಳು, ಎಡಬಲ, ಹಕ್ಕಿನೋಟ, ಜನಸಂಸ್ಕೃತಿ, ಉರಿಕಂಡಾಯ ಮುಂತಾದ ಲೇಖನ ಸಂಗ್ರಹಗಳು, ಸದನದಲ್ಲಿ ಸಿದ್ದಲಿಂಗಯ್ಯ ಭಾಗ 1-2 ಮತ್ತು ಆತ್ಮಕಥನ ʼಊರು-ಕೇರಿʼ ಭಾಗ 1-2 ಪ್ರಕಟಗೊಂಡಿವೆ. ಬೆಂಗಳೂರು ವಿಶ್ವವಿದ್ಯಾಲಯದ ಪ್ರಸಾರಂಗಕ್ಕಾಗಿ ‘ಸಮಕಾಲೀನ ಕನ್ನಡ ಕವಿತೆಗಳು’ ಭಾಗ-3 ಮತ್ತು ಭಾಗ-4 ಅನ್ನು ಸಂಪಾದಿಸಿ ಕೊಟ್ಟಿದ್ದಾರೆ.
ಸಿದ್ದಲಿಂಗಯ್ಯನವರ ‘ಊರು ಕೇರಿ’ ಆತ್ಮಕಥೆ ಇಂಗ್ಲಿಷ್ ಹಾಗೂ ತಮಿಳಿಗೂ ಅನುವಾದಗೊಂಡಿದ್ದು ಇಂಗ್ಲಿಷ್ ಅನುವಾದವನ್ನು ಕೇಂದ್ರ ಸಾಹಿತ್ಯ ಅಕಾಡಮಿ ಪ್ರಕಟಿಸಿದೆ. ಸಿದ್ದಲಿಂಗಯ್ಯನವರ ಹಲವಾರು ಕವಿತೆಗಳು ಇಂಗ್ಲಿಷ್, ಹಿಂದಿ, ತಮಿಳು, ಬಂಗಾಳಿ, ಮಲೆಯಾಳಂ ಮತ್ತು ತೆಲುಗು ಭಾಷೆಗಳಲ್ಲಿ ಅನುವಾದಗೊಂಡಿವೆ.
ಕನ್ನಡ ನಾಡು ನುಡಿಯ ಬಗ್ಗೆ, ಕನ್ನಡಿಗರ ಉದ್ಯೋಗ ಮೀಸಲಾತಿ, ಇಂದಿನ ದಲಿತ ಸಮುದಾಯದ ಬಗ್ಗೆ ಅಪಾರವಾದ ಕಳಕಳಿಯನ್ನು ಅವರ ಚಿಂತನೆಗಳಲ್ಲಿ ಕಾಣಬಹುದು.
- ಸಿದ್ದಲಿಂಗಯ್ಯ ಅವರ ಜೀವನಚಿತ್ರಗಳನ್ನು ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..
ಕನ್ನಡ ಶಾಲೆ ಉಳಿಸಿಕೊಳ್ಳಲು ಇಂಗ್ಲಿಷ್ ಮಾಧ್ಯಮ ಆರಂಭಿಸುವುದು ಸರಿಯಲ್ಲ. ಕನ್ನಡ ಶಾಲೆ ಗುಣಮಟ್ಟದ ಸುಧಾರಿಸಬೇಕು. ಒಂದು ಭಾಷೆಯಾಗಿ ಇಂಗ್ಲಿಷ್ ಅನ್ನು ಸರಿಯಾಗಿ ಕಲಿಸುವಂತಾಗಬೇಕು. ಕನ್ನಡದ ಸಾಹಿತ್ಯ ಬೇರೆ ಭಾಷೆಗಳಿಗೆ ಅನುವಾದವಾಗುವ ಮೂಲಕ ಕನ್ನಡ ಸಾಹಿತ್ಯ ಭಾಷೆಯ ಮಹತ್ವ ಹೆಚ್ಚಾಗುತ್ತಿದೆ. ಹಳಗನ್ನಡ ಸಾಹಿತ್ಯದ ಬಗ್ಗೆ ಅಧ್ಯಾಪಕರಲ್ಲೇ ಆಸಕ್ತಿ ಕಡಿಮೆಯಾಗುತ್ತಿರುವುದು ದುರದೃಷ್ಟಕರ. ಹಳಗನ್ನಡ ಪಠ್ಯವು ಪಠ್ಯಕ್ರಮದಿಂದ ಹೊರಹೋಗುತ್ತಿದೆ. ಸಾಹಿತ್ಯದ ಸ್ವಾರಸ್ಯ, ಆ ಸಂತೋಷ ಅನುಭವಿಸಲು ಹಳಗನ್ನಡ ಸಾಹಿತ್ಯಕ್ಕೆ ಹಿಂದಿರುಗಬೇಕಾಗಿದೆ. ಪ್ರಾಚೀನ ಸಾಹಿತ್ಯದ ಬಗ್ಗೆ ಮಾತನಾಡುವ ವಿದ್ವಾಂಸರನ್ನು ಗುರುತಿಸಬೇಕು. ಗಮಕಿಗಳ ನೆರವು ಪಡೆಯಬೇಕು ಎಂದು ಸಿದ್ದಲಿಂಗಯ್ಯ ಪ್ರತಿಪಾದನೆ ಮಾಡುತ್ತಿದ್ದರು.
ಚಳವಳಿಗಳು ಸಂವಿಧಾನದ ಚೌಕಟ್ಟಿನಲ್ಲಿ, ಪ್ರಜಾಸತ್ತಾತ್ಮಕವಾಗಿ ನಡೆದರೆ ಅದಕ್ಕೆ ಅಡ್ಡಿ ಬರಲಾರದು. ನಿರ್ದಿಷ್ಟ ಗುಂಪು, ಪಕ್ಷ, ಜನಾಂಗ ಇಟ್ಟುಕೊಂಡು ಚಳವಳಿ ವಿರೋಧಿಸುವುದು ಸರಿಯಲ್ಲ. ಕಾಲ ಬದಲಾದಂತೆ ಚಳವಳಿಗಳು ತೀವ್ರವಾಗುತ್ತವೆ. ಚಳವಳಿಗಳ ತೀವ್ರತೆಯನ್ನು ಕಾಲವೇ ನಿರ್ಧರಿಸುತ್ತದೆ. ಮೀಸಲಾತಿ, ಉದ್ಯೋಗ, ಶಿಕ್ಷಣದ ಕಾರಣದಿಂದ ದಲಿತರಲ್ಲಿ ಹೊಸ ಮಧ್ಯಮ ವರ್ಗ ಸೃಷ್ಟಿಯಾಗುತ್ತಿದೆ. ಆ ಮಧ್ಯಮ ವರ್ಗಕ್ಕೆ ಚಳವಳಿಯ ಅಗತ್ಯ ಇಲ್ಲದಿರಬಹುದು. ಇನ್ನುಳಿದ ಶೇ 90ರಷ್ಟು ಜನರು ಅದೇ ಸ್ಥಿತಿಯಲ್ಲಿದ್ದಾರೆ. ರೈತರು, ಕಾರ್ಮಿಕರು, ಮಹಿಳೆಯರು ಈ ಎಲ್ಲ ಹೋರಾಟಗಳ ಭಾಗವಾಗಿ ದಲಿತ ಹೋರಾಟ ನಡೆಯಬೇಕು. ಎಲ್ಲರ ವಿಮೋಚನೆಯಲ್ಲಿ ದಲಿತ ವಿಮೋಚನೆ ಅಡಗಿದೆ ಎಂದು ದಲಿತ ಚಳವಳಿಯ ಮಾರ್ಗಕ್ಕೆ ಸ್ಪಷ್ಟರೂಪ ನೀಡಬೇಕು ಎನ್ನುತ್ತಿದ್ದರು ಸಿದ್ದಲಿಂಗಯ್ಯ ಅವರು.
ಹೀಗೆ ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮ ಸಾಹಿತ್ಯದ ಮೂಲಕ ಹೊಸ ಹೊಳಹುವನ್ನು ನೀಡಿದ ಕವಿ ಸಿದ್ದಲಿಂಗಯ್ಯನವರಿಗೆ ಈ ಮೂಲಕ ಅಕ್ಷರ ನಮನ.
****
- ಈ ಸುದ್ದಿ ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..
ಡಾ.ಗುರುಪ್ರಸಾದ್ ರಾವ್ ಹವಲ್ದಾರ್
- ಮೂಲತಃ ಉಪನ್ಯಾಸಕರು. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನ ಹಳ್ಳಿಯವರು. ಪ್ರಸ್ತುತ ಹಗರಿಬೊಮ್ಮನಹಳ್ಳಿ ಜಿವಿಪಿಪಿ ಪದವಿ ಕಾಲೇಜನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತ ಜೊತೆಗೆ ಪತ್ರಿಕೆಗಳಿಗೆ ವೆಬ್ ನ್ಯೂಸ್ ಪೋಟ್೯ಲ್ ಗಳಿಗೆ ಲೇಖನ ಬರೆಯುತ್ತಿದ್ದಾರೆ.
Comments 1