ಹಾಡುತ್ತಿವೆ ಕಣ್ಣಗಳು..
ಬಹಳ ದಿನಗಳ ಹಿಂದೆ ನನ್ನ ವಾಟ್ಸಾಪು ಸ್ಟೇಟಸ್ ಮೇಲೆ ಮೂಡಿದ್ದ ಇವೆರಡು ಪದಗಳು ನನ್ನ ಆಪ್ತ ಬಳಗದಲ್ಲಿ ವೈರಲ್ ಆಗಿದ್ದವು.., ಸುಳ್ಳಲ್ಲ. ಇದಾದ ಮೇಲೆ ’ಚೆಲುವಾದ ರಾಕ್ಷಸಿ’, ’ಮಧುವಂತಿ’ ಎಂಬ ಇನ್ನೆರಡು ಸ್ಟೇಟಸ್ಸುಗಳು ಇಷ್ಟೇ ಸದ್ದು ಮಾಡಿ ಅಷ್ಟೇ ಗೆಳೆಯರ ಪಾಲಿಗೆ ಬಿಡಿಸಲಾಗದ ಒಗಟುಗಳಾಗಿದ್ದವು. ಅದರಲ್ಲೂ ಅಕ್ಕಪಕ್ಕದ ಕೆಲ ಪಾಪರಾಜ್ಜಿಗಳು ನನ್ನ ಕಣ್ಣುಗಳಲ್ಲೇ ಹಾಡುವ ಕಣ್ಣುಗಳನ್ನು ಹುಡುಕಲು ಯತ್ನಿಸಿದ್ದವು. ಅದಾದ ಮೇಲೆ ನನ್ನ ಚೇಷ್ಟೆಗಳಲ್ಲಿ ಆ ಚೆಲುವಾದ ರಾಕ್ಷಸಿಯನ್ನು ಹುಡುಕೀಹುಡುಕಿ ಧಣಿದುಹೋಗಿದ್ದವು. ಇನ್ನು ಮಧುವಂತಿಗೆ ಬಂದರೆ, ಆ ಮಧುವಂತಿಗೆ ಹಾಕಿದ ಪಾತಾಳಗರಡಿ ಒಂದು ವ್ಯರ್ಥ ಯತ್ನವಾಗಿತ್ತಷ್ಟೇ.
ಯಾರಿಗೂ ಕಾಣದೇ ಹೃದಯದಲ್ಲೋ ಅಥವಾ ಪ್ರಾಣವಾಯುವಿನ ಯಾವುದೋ ಸೆಲೆಯ ಪಾತಾಳದಲ್ಲಿ ಮಡುಗಟ್ಟಿ ಗುಡಿ ಕಟ್ಟಿಕೊಳ್ಳುವ ಇಂಥ ಭಾವನೆಗಳು ಯಾವಾಗಲೂ ಅಜ್ಞಾತವೇ. ಆ ಅಗಾಧ ಅಜ್ಞಾತದಲ್ಲಿ ನಾನು ಕೂಡ ಆಜ್ಞಾತವಾಸಿಯೇ. ಹೀಗಾಗಿ ಇದನ್ನು ಅಜ್ಞಾತವಾಸಿಯೊಬ್ಬನ ಸ್ವಗತ ಎನ್ನಬಹುದು ಅಥವಾ ಆಲಾಪನೆ ಎಂತಲೂ ಕರೆಯಬಹುದು.
ಇರಲಿ, ಇಲ್ಲಿ ನಾನು ಬರೆಯಲು ಹೊರಟಿದ್ದು ಇದನ್ನಲ್ಲ, ಪೀಠಿಕೆ ಉದ್ದವಾಗಿದ್ದಕ್ಕೆ ಕ್ಷಮೆ ಇರಲಿ..
ಕೆಲ ದಿನಗಳಿಂದ ನೆಟ್ಮನೆಯಲ್ಲಿ ಬಹಳ ಸದ್ದು ಮಾಡಿ ಪ್ರತಿಯೊಬ್ಬರನ್ನೂ ಸೂಜಿಗಲ್ಲಿನಂತೆ ಸೆಳೆದುಬಿಟ್ಟವರು ಮಾನಸಿ ಸುಧೀರ್ ಅವರು. ನಮ್ಮ ಬಯಲುಸೀಮೆಯ ಅದರಲ್ಲೂ ಅವಿಭಜಿತ ಕೋಲಾರ ಜಿಲ್ಲೆಯ ಬಹದೊಡ್ಡ ಕಾವ್ಯಕೃಷಿಕ ಶ್ರೀ ಬಿ.ಆರ್. ಲಕ್ಷ್ಮಣರಾಯರ ’ಏನೀ ಅದ್ಭುತವೇ’ ಕವಿತೆಯನ್ನು ಹಾಡಿ, ತಮ್ಮ ಭಾವಜಾಲದಿಂದಲೇ ಕಟ್ಟಿಹಾಕಿಬಿಟ್ಟ, ಕೊರೊನಾ ಕಷ್ಟಕಾಲದಲ್ಲೂ ಪ್ರತಿಮನಸ್ಸಿಗೂ ಕಾವ್ಯಸಾಂತ್ವನದ ಧನ್ಯತೆಯ ಭಾವ ಕೊಟ್ಟ ಅವರನ್ನು ಹೇಗೆ ಹೊಗಳಬೇಕೋ ಗೊತ್ತಾಗುತ್ತಿಲ್ಲ. ಜಾಲತಾಣಗಳಲ್ಲಿ ಈಗಾಗಲೇ ಲಕ್ಷೋಪಲಕ್ಷ ಷೇರುಗಳನ್ನು ಕಂಡಿರುವ ಅವರ ಕಾವ್ಯಭಾವಾಭಿನಯ ಜೀವಪ್ರೀತಿಯ ಮನಸ್ಸುಗಳಿಗೆ ಅಮೃತ ಸಿಂಚನವೇ ಸರಿ.
ಮತ್ತೆ ಮತ್ತೆ ಅವರ ವಿಡಿಯೋವನ್ನು ನೋಡಿದಾಗ ನನಗೆ ನೆನಪಾಗಿದ್ದು ಆ ಹಳೆಯ ನನ್ನ ಸ್ಟೇಟಸ್ಸು. ಜೀವನದ ಪುಟ್ಟಪುಟ್ಟ ಅದ್ಭುತಗಳು, ಸಂತೋಷಗಳು ಮಾನಸಿ ಅವರ ಕಂಗಳಲ್ಲಿ, ಭಾವಾಭಿನಯದಲ್ಲಿ ಸಾಕ್ಷಾತ್ಕಾರವಾಗಿದ್ದವು, ಅವುಗಳನ್ನು ನಾನು ಕಂಡೆ. ಅವರ ಕಂಗಳು ಹಾಡಿದ್ದವು, ಮಾತಾಡಿದ್ದವು, ನರ್ತಿಸಿದ್ದವು!!
ಅಭಿನಯವೆಂಬ ತಾಯಿಯ ’ಮಾನಸಪುತ್ರಿ’ ಮಾನಸಿ ಅವರು.
ಕಡೆಗೆ ನನಗನಿಸಿದ್ದು ಇಷ್ಟು.
ನಮಸ್ಕಾರ.