ಕೂಲಿಕಾರರಿಗೆ ಕೆಲಸ ಕೊಡುವ ಬದಲು ಜೆಸಿಬಿ ಯಂತ್ರಗಳಿಂದ ಕೆಲಸ ಮಾಡುವ ಗುತ್ತಿಗೆದಾರರ ಪಾಲಾಗುತ್ತಿದೆ ಸರಕಾರದ ಹಣ
ಬಾಗೇಪಲ್ಲಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ವತಿಯಿಂದ ತಾಲೂಕಿನ ವಿವಿಧ ಗ್ರಾಮಗಳಿಂದ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ಪಿ ಮುನಿವೆಂಕಟಪ್ಪ, “ಕಳೆದ 30 ದಿನಗಳಿಂದ ಕೋವಿಡ್ ಸೋಂಕು ಜಾಸ್ತಿಯಾಗಿ ಅಪಾರ ಸಾವು-ನೋವುಗಳು ಸಂಭವಿಸಿರುವುದು ನೋವಿನ ವಿಷಯವಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ಇದರಿಂದಾಗಿ ಗ್ರಾಮೀಣ ಮತ್ತು ಪಟ್ಟಣ ಪ್ರದೇಶದ ಕೃಷಿ ಕೂಲಿಕಾರರು, ದಿನಗೂಲಿಕಾರರು, ಅಸಂಘಟಿತ ಕಾರ್ಮಿಕರು ಕೆಲಸವಿಲ್ಲದೆ, ಆಹಾರವಿಲ್ಲದೆ ಶೋಚನೀಯ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಈ ಕೊರೋನಾ ಕಾಯಿಲೆಗೆ ಮುಂದೆ ಚಿಕ್ಕ ಮಕ್ಕಳಲ್ಲಿಯೂ ಹರಡುವ ಅಪಾಯ ಪರಸ್ಥಿತಿ ಇದೆ ಎಂದು ಸರ್ಕಾರ ಎಚ್ಚರಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಬಡ ಕುಟುಂಬಗಳು ಗುಣಮಟ್ಟದ ಆಹಾರ ತಿಂದು ಪೌಷ್ಠಿಕತೆಯನ್ನು ಏರಿಸಲು ಸಾಧ್ಯವಾಗಿಲ್ಲ. ಅದೇ ರೀತಿಯಲ್ಲಿ ನಿರಂತರವಾಗಿ 40 ದಿನಗಳು ಕೆಲಸವಿಲ್ಲದೆ ಇರುವುದರಿಂದ ಆರ್ಥಿಕವಾಗಿ ಅತ್ಯಂತ ಸಂಕಷ್ಟ ಪರಿಸ್ಥಿತಿಯಲ್ಲಿದ್ದಾರೆ. ಈ ಪರಿಸ್ಥಿತಿಯಲ್ಲಿ ಬಡವರು ಸಾಲ ಮಾಡಿರುವ ಮೈಕ್ರೋ-ಫೈನಾನ್ಸ್ ಸಂಸ್ಥೆಗಳು ಪ್ರತಿನಿತ್ಯ ಮನೆಗಳಿಗೆ ಬಂದು ಸಾಲದ ಕಂತುಗಳನ್ನು ಕೊಡಬೇಕೆಂದು ಹಿಂಸಿಸುತ್ತಿದ್ದಾರೆ ಈ ಕುರಿತು ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.
ಅದೇ ರೀತಿಯಲ್ಲಿ ಹಳ್ಳಿಗಳಲ್ಲಿ ಬಡವರಿಗೆ ಆಸರೆಯಾಗಿರುವ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಕೂಲಿಕಾರರಿಗೆ ಕೆಲಸ ಕೊಡುವ ಬದಲು ಜೆಸಿಬಿ ಯಂತ್ರಗಳಿಂದ ಕೆಲಸ ಮಾಡುವ ಗುತ್ತಿಗೆದಾರರ ಪಾಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಬಡವರ ಸಮಸ್ಯೆಗಳ ಪರಿಹಾರಕ್ಕಾಗಿ ಕೆಳಗಿನ ಬೇಡಿಕೆಗಳನ್ನು ಈಡೇರಿಸಲು ಕೋರುತ್ತೇವೆ. ಮೈಕ್ರೋ ಫೈನಾನ್ಸ್ ಸಂಸ್ಥೆಗಳಲ್ಲಿ ಸಾಲ ಮಾಡಿರುವ ಮಹಿಳೆಯರು ಕಂತು ನೀಡುವ ಅವಧಿಯನ್ನು 6 ತಿಂಗಳವರೆಗೂ ಮುಂದೂಡಬೇಕು ಮತ್ತು ಇದರ ಬಡ್ಡಿಯನ್ನು ಮನ್ನಾ ಮಾಡಬೇಕು ಎಂದು ಅವರು ಒತ್ತಾಯ ಮಾಡಿದರು.
6 ತಿಂಗಳು ಕಾಲ ₹10,000 ನೀಡಬೇಕು
ಪ್ರತೀ ಬಡ ಕುಟುಂಬಕ್ಕೆ 6 ತಿಂಗಳು ಕಾಲ ₹10,000 ನೀಡಬೇಕು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಯಂತ್ರ ಬಳಕೆಯನ್ನು ತಕ್ಷಣ ನಿಲ್ಲಿಸಬೇಕು. ಶ್ರಮಿಕರಿಗೆ ಒತ್ತು ಕೊಡಬೇಕು. ಮನರೇಗಾ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದ ತಕ್ಷಣ ಕೆಲಸ ಕೊಡಬೇಕು. ಪ್ರತೀ ಕುಟುಂಬದ ಸದಸ್ಯನಿಗೂ ಮಾಸಿಕವಾಗಿ 10 ಕೆ.ಜಿ ಅಕ್ಕಿ/ಗೋಧಿ, ಅಡುಗೆ ಎಣ್ಣೆ, ಬೇಳೆ ಸೇರಿ 14 ರೀತಿಯ ಪೌಷ್ಠಿಕ ಆಹಾರ ಪದಾರ್ಥಗಳನ್ನು ನೀಡಬೇಕು. ವಲಸೆ ಕಾರ್ಮಿಕರಿಗೆ ಸಾರಿಗೆ ವ್ಯವಸ್ಥೆ ಮತ್ತು ಸ್ವಗ್ರಾಮಗಳಲ್ಲಿ ಉದ್ಯೋಗ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ನಂತರ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು. ತದನಂತರ ಬಾಗೇಪಲ್ಲಿ ತಾಲೂಕು ತಹಸೀಲ್ದಾರ್ ಡಿ.ಎ.ದಿವಾಕರ್ ಮನವಿ ಪತ್ರವನ್ನು ಸ್ವೀಕರಿಸಿ ಮಾತನಾಡಿ, “ಉದ್ಯೋಗ ಖಾತ್ರಿ ಯೋಜನೆಯಡಿಯ ಕಾಮಗಾರಿಗಳನ್ನು ಜೆಸಿಬಿ ಯಂತ್ರ ಬಳಕೆ ಮಾಡಿ ಕೆಲಸ ಮಾಡುವುದು ಕಾನೂನು ಬಾಹಿರ. ಆದ್ದರಿಂದ ಪರಿಶೀಲನೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಸದಸ್ಯೆ ಸಾವಿತ್ರಮ್ಮ, ಐವಾರಪಲ್ಲಿ ಹರೀಶ್, ಕೃಷ್ಣಪ್ಪ ಹಾಜರಿದ್ದರು. ಇನ್ನು ವಿವಿಧ ಗ್ರಾಮಗಳಿಂದ ಜಾಹೀರ್ ಬೇಗ್, ಭಾಷಾ, ಮಂಜುನಾಥ, ಪವನ್ ಸೇರಿ ಹಲವು ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.