ಮೊನ್ನೆ ವಿಜಯೇಂದ್ರ, ಇವತ್ತು ಬೆಲ್ಲದ್
ಬೆಂಗಳೂರು: ನಾಯಕತ್ವ ಬದಲಾವಣೆಗೆ ಸಂಬಂದಿಸಿದಂತೆ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಮತ್ತಷ್ಟೂ ಕುತೂಹಲ ಕೆರಳಿಸಿವೆ. ಪಕ್ಷದ ನಾಯಕತ್ವ ಹಿಡಿಯಲು ಲಿಂಗಾಯಿತ ವೀರಶೈವ ಸಮುದಾಯದಲ್ಲಿ ನಡೆಯುತ್ತಿರುವ ಮೇಲಾಟದಿಂದ ಬಿಜೆಪಿ ಇಕ್ಕಟ್ಟಿಗೆ ಸಿಲುಕಿದಂತೆ ಕಾಣುತ್ತಿದೆ.
ದಿಲ್ಲಿಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಘೋಷಣೆ ಮಾಡಿದ್ದಂತೆಯೇ ಮುಂದಿನ ಎರಡೂ ವರ್ಷ ʼನಾನೇ ಮುಖ್ಯಮಂತ್ರಿʼ ಎಂದು ಯಡಿಯೂರಪ್ಪ ಹೇಳಿದ ಬೆನ್ನಲ್ಲೂ ರಾಜ್ಯ ಬಿಜೆಪಿಯಲ್ಲಿ ಭಿನ್ನಮತೀಯ ಚಟುವಟಿಕೆಗಳು ನಿಲ್ಲುವಂತೆ ಕಾಣುತ್ತಿಲ್ಲ. ಒಬ್ಬೊಬ್ಬರದ್ದು ಒಂದೊಂದು ದಾರಿ ಎನ್ನುವಂತೆ ಆಗಿದೆ.
ಸದ್ಯಕ್ಕೆ ಬಿಜೆಪಿಯಲ್ಲಿ ಎದ್ದಿರುವ ಬಂಡಾಯ ಕೇಂದ್ರಸ್ಥಾನ ಪಂಚಮಸಾಲಿ ಸಮುದಾಯದಲ್ಲೇ ಕಾಣುತ್ತಿದೆ. ಈ ಸಮುದಾಯದ ಪ್ರಭಾವೀ ಶಾಸಕ ಅರವಿಂದ ಬೆಲ್ಲದ್ ಸದ್ಯಕ್ಕೆ ನವದೆಹಲಿಯಲ್ಲಿ ಬೀಡುಬಿಟ್ಟಿದ್ದು, ವರಿಷ್ಠರನ್ನು ಭೇಟಿಗೆ ಯತ್ನಿಸುತ್ತಿದ್ದಾರೆಂದು ಗೊತ್ತಾಗಿದೆ.
ವಜ್ರವನ್ನು ವಜ್ರದಿಂದಲೇ ಕೊಯ್ಯಬೇಕು ಎನ್ನುವ ಲೆಕ್ಕದಂತೆ ಬೆಲ್ಲದ್ ಕೂಡ ವಿಜಯೇಂದ್ರ ಹೂಡಿದ ತಂತ್ರಗಾರಿಕೆಯನ್ನೇ ಅನುಸರಿಸುತ್ತಿದೆ. ಕುಟುಂಬ ಸಮೇತ ದೆಹಲಿಗೆ ಹೋಗಿ ಕೂತಿರುವ ಬೆಲ್ಲದ್, ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿಯಾಗುವುದು ಖಚಿತ ಎಂದು ಮುಲಗಳು ತಿಳಿಸಿವೆ. ಇನ್ನೊಂದೆಡೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್ ಶಾ ಹಾಗೂ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನೂ ಭೇಟಿ ಮಾಡುವವರಿದ್ದಾರೆ ಎನ್ನಲಾಗಿದೆ.
ಮುಖ್ಯಮಂತ್ರಿ ಪರವಾಗಿ ಶಾಸಕ ರೇಣುಕಾಚಾರ್ಯ ಸೇರಿ ಕೆಲವರು ಸಹಿ ಸಂಗ್ರಹ ಮಾಡುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಬೆಲ್ಲದ್, ಈ ಎಲ್ಲ ಬೆಳವಣಿಗೆಗಳನ್ನು ಹೈಕಮಾಂಡ್ ಗಮನಕ್ಕೆ ತರುವ ಉದ್ದೇಶ ಹೊಂದಿದ್ದಾರೆ.
ಶಾಸಕಾಂಗ ಪಕ್ಷದ ಕರೆಯಬೇಕು ಎನ್ನುವುದು ಬೆಲ್ಲದ್ ಕಂಡೀಷನ್. ಈ ವೇದಿಕೆಯಲ್ಲೇ ಹಾಲಿ ನಾಯಕತ್ವಕ್ಕೆ ಬೆಂಬಲ ಇದೆಯಾ ಇಲ್ಲವಾ ಎಂಬುದು ತೀರ್ಮಾನವಾಗಬೇಕು ಎಂದು ಅವರು ಹೇಳುತ್ತಲೇ ಇದ್ದಾರೆ.
ಇನ್ನೊಂದೆಡೆ, ರಾಜ್ಯದಲ್ಲಿಯೇ ಉಳಿದಿರುವ ಸಿಎಂ ಪಾಳೆಯದ ಕೆಲವರು, ದಿಲ್ಲಿಯಲ್ಲಿ ಬೆಲ್ಲದ್ ಇಡುತ್ತಿರುವ ಹೆಜ್ಜೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅಲ್ಲದೆ, ಅವರ ಜತೆ ನೇರವಾಗಿ ಗುರುತಿಸಿಕೊಂಡಿರುವ ಬಸನಗೌಡ ಪಾಟೀಲ್ ಯತ್ನಾಳ್, ಸಚಿವ ಯೋಗೇಶ್ವರ್ ಮೇಲೂ ಕಣ್ಣಿಟ್ಟಿದ್ದಾರೆ. ಈ ಇಬ್ಬರೂ ನಾಯಕರು ಸದ್ಯಕ್ಕೆ ಮುಗುಮ್ಮಾಗಿ ಉಳಿದಿದ್ದಾರೆ. ಉಳಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಸ್ವಕ್ಷೇತ್ರ ಶಿಕಾರಿಪುರದಲ್ಲಿ ಪ್ರವಾಸ ಕೈಗೊಂಡು ಅಭಿವೃದ್ಧಿ ಕೆಲಸಗಳನ್ನು ವೀಕ್ಷಣೆ ಮಾಡುತ್ತಿದ್ದಾರೆ.
ಫ್ಯಾಮಿಲಿ ಟ್ರಿಪ್: ಅರವಿಂದ್ ಬೆಲ್ಲದ್
“ನಾನು ಕುಟುಂಬದ ಖಾಸಗಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ದೆಹಲಿಗೆ ಭೇಟಿ ನೀಡಿದ್ದು, ನನ್ನ ಈ ಭೇಟಿಯ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇಲ್ಲ. ನಾನು ರಾಷ್ಟ್ರೀಯ ನಾಯಕರ ಭೇಟಿಗಾಗಿಯಾಗಲಿ ಅಥವಾ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಲು ದೆಹಲಿಗೆ ಆಗಮಿಸಿಲ್ಲ” ಎಂದು ಅರವಿಂದ್ ಬೆಲ್ಲದ್ ತಿಳಿಸಿದ್ದಾರೆ.
“ನಾನು ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದರೂ ಮಾಧ್ಯಮಗಳಲ್ಲಿ ರಾಜಕೀಯ ಬೆಳವಣಿಗೆಗಳ ಚರ್ಚೆಗೆ ದೆಹಲಿಗೆ ಬಂದಿದ್ದಾರೆ ಎನ್ನುವ ರೀತಿ ಸುದ್ದಿ ಹರಡಿಸಲಾಗುತ್ತಿದೆ. ಮಾಧ್ಯಮಗಳಲ್ಲಿ ನನ್ನ ದೆಹಲಿ ಭೇಟಿಯ ಕುರಿತು ಬರುತ್ತಿರುವ ಸುದ್ದಿಗಳು ಸತ್ಯಕ್ಕೆ ದೂರವಾಗಿದೆ. ಹೀಗಾಗಿ ನನ್ನ ದೆಹಲಿ ಭೇಟಿಯ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿಸುವುದು ಬೇಡ” ಎಂದು ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕರಾದ ಬೆಲ್ಲದ್ ಹೇಳಿದ್ದಾರೆ. ವಿಶೇಷವೆಂದರೆ, ಅವರು ಈ ಹೇಳಿಕೆಯನ್ನು ದಿಲ್ಲಿಯಿದಲೇ ನೀಡಿದ್ದಾರೆ.
ಹೈಮಾಂಡ್‌ಗೆ ಟೈಮಿಲ್ಲ
ಉತ್ತರ ಪ್ರದೇಶ ಸೇರಿ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಬೆಣವಣಿಗೆಗಳಿಂದ ಬಿಜೆಪಿ ಹೈಕಮಾಂಡ್ ಕೊಂಚ ಸಂಕಷ್ಟದಲ್ಲಿದೆ. ಯುಪಿಯಲ್ಲಿ ಯೋಗಿ ಆದಿತ್ಯನಾಥ್ ಅವರ ನಾಯಕತ್ವದ ಬಗ್ಗೆ ಬಿಕ್ಕಟ್ಟು ಸೃಷ್ಟಿಯಾಗಿದೆ. ಇನ್ನೊಂದೆಡೆ ಚುನಾವಣೆ ಹೊತ್ತಿನಲ್ಲಿ ಬಿಜೆಪಿ ನಾಯಕರು ಈಗ ಮಾತೃಪಕ್ಷ ಟಿಎಂಸಿ ಕಡೆ ಗುಳೆ ಹೊರಟಿದ್ದಾರೆ. ಇವೆರಡೂ ವಿಷಯಳಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕತ್ವ ಬ್ಯುಸಿಯಾಗಿದೆ.