ಬಾಗೇಪಲ್ಲಿಯಲ್ಲಿ ಕೇಂದ್ರ-ರಾಜ್ಯ ಸರಕಾರಗಳ ವಿರುದ್ಧ ಪ್ರತಿಭಟನೆ
by Ra Na Gopala Reddy Bagepalli
ಬಾಗೇಪಲ್ಲಿ: ಪೆಟ್ರೋಲ್, ಡೀಸೆಲ್, ಗ್ಯಾಸ್, ವಿದ್ಯುತ್ ಬಿಲ್, ಬಸ್ ಪ್ರಯಾಣ ದರ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆ ಇಳಿಸಬೇಕು ಎಂದು ಒತ್ತಾಯಿಸಿ ಬಾಗೇಪಲ್ಲಿ ತಾಲೂಕು ಪ್ರಜಾ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಹಾಗೂ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ನೇತೃತ್ವದಲ್ಲಿ ಮಂಗಳವಾರ ಪಟ್ಟಣದ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಜಿ.ವಿ.ಶ್ರೀರಾಮ ರೆಡ್ಡಿ ಮಾತನಾಡಿ, “ದೇಶವೇ ಕೋವಿಡ್ ಎರಡನೇ ಅಲೆಯ ಸಂಕಷ್ಟದಲ್ಲಿದ್ದು, ಲಾಕ್‍ಡೌನ್‍ನಿಂದಾಗಿ ಸೇವಾ ವಲಯ ಮತ್ತು ಉತ್ಪಾದನಾ ವಲಯ ನೆಲಕಚ್ಚಿದೆ. ಲಾಕ್‍ಡೌನ್ ಪರಿಣಾಮ ಲಕ್ಷಾಂತರ ಜನರಿಗೆ ಉದ್ಯೋಗ ನಷ್ಟವಾಗಿದೆ. ಈ ಸಂದರ್ಭದಲ್ಲಿ ಜನರ ಸಂಕಷ್ಟಕ್ಕೆ ನೆರವಾಗಬೇಕಾದ ಬಿಜೆಪಿ ಸರಕಾರ ಬೆಲೆಯೇರಿಸಿ ಜನರ ಗಾಯದ ಮೇಲೆ ಬರೆ ಎಳೆದಿವೆ” ಎಂದು ಕಿಡಿಕಾರಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಅಗತ್ಯ ವಸ್ತುಗಳ ಬೆಲೆಗಳನ್ನು ನಿಯಂತ್ರಣ ಮಾಡಲು ವಿಫಲವಾಗಿದ್ದಾರೆ. ಜನರಿಗೆ ಕೊಟ್ಟ ಮಾತಿನಂತೆ ಅವರು ನಡೆದುಕೊಳ್ಳುತ್ತಿಲ್ಲ. ಏಳು ವರ್ಷಗಳ ಹಿಂದೆ ಅಚ್ಛೇ ದಿನ ಬರುತ್ತದೆ ಎಂದು ಹೇಳಿ ಮತ ಪಡೆದು ಬಂಡವಾಳ ಶಾಹಿಗಳು ಹಾಗೂ ಕಾರ್ಪೊರೇಟ್ ಸಂಸ್ಥೆಗಳಿಗೆ ಮಾತ್ರ ಅಚ್ಛೇ ದಿನ ಬಂದಿದೆ. ದೇಶದ ಬಡವರು ಮಾತ್ರ ಇನ್ನೂ ಸಂಕಷ್ಟದಲ್ಲಿದ್ದಾರೆ. ಇಂಥ ಸರಕಾರಕ್ಕೆ ಜನರೇ ಬುದ್ಧಿ ಕಲಿಸುತ್ತಾರೆ ಎಂದು ರೆಡ್ಡಿ ಹೇಳಿದರು.
ಪ್ರಜಾ ಸಂಘರ್ಷ ಸಮಿತಿ ಸಂಚಾಲಕ ಚನ್ನರಾಯಪ್ಪ ಮಾತನಾಡಿ, “ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸಾರ್ವಕಾಲಿಕ ದಾಖಲೆಯ ಗರಿಷ್ಠ ಮಟ್ಟ ತಲುಪಿದೆ. ಬೇಳೆ ಕಾಳು, ಅಕ್ಕಿ, ಅಡುಗೆ ಎಣ್ಣೆಯಂತಹ ಆಹಾರ ಪದಾರ್ಥಗಳ ಬೆಲೆ ದುಪ್ಪಟ್ಟಾಗಿದೆ. ದುಡಿಮೆಯ ಹಣ ಜೀವನ ನಿರ್ವಹಣೆಗೆ ಸಾಕಾಗುತ್ತಿಲ್ಲ. ಕೇಂದ್ರದ ಅವೈಜ್ಞಾನಿಕ ಆರ್ಥಿಕ ನೀತಿಯಿಂದ ಬಡ ಮತ್ತು ಮಧ್ಯಮ ವರ್ಗದ ಜನ,ಕೂಲಿ ಕಾರ್ಮಿಕರು, ರೈತರು ತೊಂದರೆ ಅನುಭವಿಸುವಂತಾಗಿದೆ” ಎಂದರು.
ಪ್ರಗತಿಪರ ರೈತ ಹಾಗೂ ಪ್ರಜಾ ಸಂಘರ್ಷ ಸಮಿತಿ ಹಿರಿಯ ಮುಖಂಡ ಜಿ.ಎಂ.ರಾಮಕೃಷ್ಣಪ್ಪ ಮಾತನಾಡಿ, “ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆಯನ್ನು ಹೆಚ್ಚಿಸಿ ಜನಸಾಮಾನ್ಯರಿಗೆ ತೊಂದರೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ತಮ್ಮ ಏಳು ವರ್ಷಗಳ ಆಡಳಿತದ ಅವಧಿಯಲ್ಲಿ ಮಾಡಿರುವ ಒಳ್ಳೆಯ ಕೆಲಸವಾದರೂ ಏನು? ಜನಸಾಮಾನ್ಯರಿಗೆ ಅಚ್ಛೇದಿನ್ ತರುತ್ತೇವೆ ಎಂದು ಹೇಳಿಕೊಂಡು ಕೇಂದ್ರ ಸರಕಾರ ದೇಶದ ಜನರನ್ನು ಸಂಕಷ್ಟಕ್ಕೆ ದೂಡಿದ್ದಾರೆ” ಎಂದರು.
ತದ ನಂತರ ಬಾಗೇಪಲ್ಲಿ ತಾಲೂಕು ತಹಸೀಲ್ದಾರ್ ಡಿ.ಎ.ದಿವಾಕರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಪ್ರಜಾ ಸಂಘರ್ಷ ಸಮಿತಿ ಪದಾಧಿಕಾರಿಗಳಾದ ಜುಬೇರ್ ಅಹ್ಮದ್, ಕೆ.ರಾಮಾಂಜಿನಪ್ಪ, ಎಲ್.ವೆಂಕಟೇಶ್, ಟಿ.ಎಲ್.ವೆಂಕಟೇಶ್, ಆರ್.ಚಂದ್ರಶೇಖರ್ ರೆಡ್ಡಿ, ಎಚ್.ಎನ್.ಚಂದ್ರಶೇಖರ ರೆಡ್ಡಿ, ನಾರಾಯಣ ಸ್ವಾಮಿ, ಬಿ.ಕೆ.ನರಸಿಂಹಪ್ಪ, ಬೈರೆಡ್ಡಿ, ಚಲಪತಿ ಮುಂತಾದವರು ಪಾಲ್ಗೊಂಡಿದ್ದರು.