ಭಾರತ-ಇಸ್ರೇಲ್ ಕೃಷಿ ಯೋಜನೆಯಡಿ ಕೋಲಾರ ಸೇರಿ ರಾಜ್ಯದಲ್ಲಿ 3 ಉತ್ಕೃಷ್ಟತಾ ಕೇಂದ್ರಗಳ ಸ್ಥಾಪನೆ
ಬೆಂಗಳೂರು: ತೋಟಗಾರಿಕೆ ಕ್ಷೇತ್ರದಲ್ಲಿ ಇಸ್ರೇಲಿ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು, ಭಾರತ-ಇಸ್ರೇಲ್ ಕೃಷಿ ಯೋಜನೆ (ಐಐಎಪಿ) ಅಡಿಯಲ್ಲಿ ಕರ್ನಾಟಕದಲ್ಲಿ ಸ್ಥಾಪಿಸಲಾದ 3 ಉತ್ಕೃಷ್ಟತಾ ಕೇಂದ್ರ (ಸಿಒಇ)ಗಳಲ್ಲಿ ಒಂದು ಕೇಂದ್ರ ಕೋಲಾರ ಜಿಲ್ಲೆಯಲ್ಲಿ ಸ್ಥಾಪನೆಯಾಗಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಜಂಟಿಯಾಗಿ ಈ ಕೇಂದ್ರಗಳನ್ನು ಉದ್ಘಾಟಿಸಿದರು.
ಭಾರತ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಎಂಐಡಿಎಚ್ ವಿಭಾಗ ಮತ್ತು ಇಸ್ರೇಲ್‌ನ ಅಂತಾರಾಷ್ಟ್ರೀಯ ಅಭಿವೃದ್ಧಿ ಸಹಕಾರ ಸಂಸ್ಥೆ– ಎಂಎಎಸ್ಎಚ್ಎವಿ ಭಾರತದಾದ್ಯಂತ 12 ರಾಜ್ಯಗಳಲ್ಲಿ 29 ಉತ್ಕೃಷ್ಟತಾ ಕೇಂದ್ರ (ಸಿಒಇ) ಗಳೊಂದಿಗೆ ಸುಧಾರಿತ ಇಸ್ರೇಲಿ ಕೃಷಿ- ತಂತ್ರಜ್ಞಾನವನ್ನು ಸ್ಥಳೀಯ ಪರಿಸ್ಥಿತಿಗಳಿಗೆ ಅನುಗುಣವಾಗಿ ಅಳವಡಿಸಿ ಅನುಷ್ಠಾನಗೊಳಿಸುತ್ತಿವೆ.
29 ಸಂಪೂರ್ಣ ಕಾರ್ಯಾಚರಣೆಯಲ್ಲಿರುವ ಸಿಒಇಗಳಲ್ಲಿ 3 ಕರ್ನಾಟಕದಲ್ಲಿವೆ. ಮಾವು ಬೆಳೆಗೆ ಸಂಬಂಧಿಸಿದಂತೆ ಕೋಲಾರದಲ್ಲಿ, ದಾಳಿಂಬೆಗಾಗಿ ಬಾಗಲಕೋಟೆಯಲ್ಲಿ ಮತ್ತು ತರಕಾರಿಗಳಿಗೆ ಧಾರವಾಡದಲ್ಲಿ ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಕರ್ನಾಟಕದಲ್ಲಿ ಭಾರತ-ಇಸ್ರೇಲ್ ಕೃಷಿ ಯೋಜನೆ (ಐಐಎಪಿ) ಅಡಿಯಲ್ಲಿ ಈ ಉತ್ಕೃಷ್ಟತಾ ಕೇಂದ್ರ (ಸಿಒಇ) ಗಳನ್ನು ಸ್ಥಾಪಿಸಲು ಆರ್ಥಿಕ ಮತ್ತು ತಾಂತ್ರಿಕ ನೆರವು ನೀಡಿದ ಭಾರತ ಸರ್ಕಾರ ಮತ್ತು ಇಸ್ರೇಲ್ ದೇಶಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಧನ್ಯವಾದ ತಿಳಿಸಿದರು.
ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್, “ಈ ಕೇಂದ್ರಗಳು ಕರ್ನಾಟಕದ ಕೃಷಿಕ ಸಮುದಾಯಕ್ಕೆ ಇತ್ತೀಚಿನ ಇಸ್ರೇಲಿ ತಂತ್ರಜ್ಞಾನಗಳು ಲಭ್ಯವಾಗಲು ಸಹಾಯ ಮಾಡುತ್ತವೆ ಮತ್ತು ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ರೈತರ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ” ಎಂದರು. ಈ ಸಿಒಇಗಳು ವಾರ್ಷಿಕವಾಗಿ 50,000 ಕಸಿ ಉತ್ಪಾದನೆ ಮತ್ತು 25 ಲಕ್ಷ ತರಕಾರಿ ಸಸಿಗಳ ಉತ್ಪಾದನೆಯ ಸಾಮರ್ಥ್ಯವನ್ನು ಹೊಂದಿವೆ. ತೋಟಗಾರಿಕೆಯಲ್ಲಿ ಆಧುನಿಕ ಕೃಷಿ ಪದ್ಧತಿಗಳ ಬಗ್ಗೆ ಜ್ಞಾನ ಪಡೆಯಲು ಸುಮಾರು 20,000 ರೈತರು ಈ ಸಿಒಇಗಳಿಗೆ ಭೇಟಿ ನೀಡಿದ್ದಾರೆ ಎಂದು ಅವರು ತಿಳಿಸಿದರು.
ಕರ್ನಾಟಕದ ತೋಟಗಾರಿಕೆ ಮತ್ತು ರೇಷ್ಮೆ ಸಚಿವ ಆರ್.ಶಂಕರ್ ಮಾತನಾಡಿ, ಈ ಕೇಂದ್ರಗಳು ಉತ್ಪಾದನೆಯಲ್ಲಿ ಹೆಚ್ಚಳ, ಉತ್ಪಾದಕತೆಯ ವೆಚ್ಚವನ್ನು ಕಡಿಮೆ ಮಾಡುವುದರ ಮೂಲಕ ರೈತರ ಆದಾಯವನ್ನು ಹೆಚ್ಚಿಸುತ್ತವೆ ಎಂದರು.
ಭಾರತದಲ್ಲಿನ ಇಸ್ರೇಲ್ ರಾಯಭಾರಿ ಡಾ.ರಾನ್ ಮಲ್ಕಾ ಅವರು ಮಾತನಾಡಿ, “ಇಂಡೋ-ಇಸ್ರೇಲಿ ಸಹಭಾಗಿತ್ವದ ಮಹತ್ವದ ಭಾಗವಾಗಿರುವ ಕೃಷಿಯಲ್ಲಿ ಕರ್ನಾಟಕ ಸರ್ಕಾರದೊಂದಿಗೆ ಸಹಯೋಗ ಹೊಂದಲು ನಾವು ಹೆಮ್ಮೆ ಪಡುತ್ತೇವೆ ಮತ್ತು ಉತ್ಸುಕರಾಗಿದ್ದೇವೆ. ನಮ್ಮ ದೇಶಗಳ ನಡುವಿನ ಸಂಬಂಧಗಳು ಬಲಗೊಳ್ಳುತ್ತಿರುವ ಮತ್ತು ವೇಗವಾಗಿ ವಿಸ್ತರಿಸುತ್ತಿರುವ ಸಂದರ್ಭದಲ್ಲಿ ನಾವು ಮೂರು ವಿಭಿನ್ನ ಕೇಂದ್ರಗಳನ್ನು ಉದ್ಘಾಟಿಸಿದ್ದೇವೆ. ಇದು ರಾಜ್ಯದ ಕೃಷಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಒಂದು ಮೈಲಿಗಲ್ಲಾಗಿದ್ದು, ಸ್ಥಳೀಯ ರೈತರಿಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪರ್ಧೆಯ ಅವಕಾಶವನ್ನು ನೀಡುತ್ತದೆ. ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಗೆ ಅನುಗುಣವಾಗಿ ರೈತರ ಆದಾಯವನ್ನು ದ್ವಿಗುಣಗೊಳಿಸಲು ಇದು ಸಹಕಾರಿಯಾಗುತ್ತದೆ” ಎಂದರು.
ಉದ್ಘಾಟನಾ ಸಮಾರಂಭದಲ್ಲಿ ಭಾರತ ಸರ್ಕಾರದ ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಸಂಜಯ್ ಅಗರ್ವಾಲ್, ಇಸ್ರೇಲಿ ವಿದೇಶಾಂಗ ಸಚಿವಾಲಯದ ಹಿರಿಯ ಅಧಿಕಾರಿಗಳು, ಭಾರತ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ ಮತ್ತು ಕರ್ನಾಟಕ ಸರ್ಕಾರದ ಅಧಿಕಾರಿಗಳು ಭಾಗವಹಿಸಿದ್ದರು. ವರ್ಚುವಲ್ ಸಮಾರಂಭಕ್ಕೆ ಎಲ್ಲಾ ರಾಜ್ಯ ತೋಟಗಾರಿಕೆ ಮಿಷನ್‌ಗಳ ಹಿರಿಯ ಅಧಿಕಾರಿಗಳು ಸಾಕ್ಷಿಯಾದರು.
ಕೋಲಾರದಲ್ಲಿ ಮಾವು ಉತ್ಕೃಷ್ಟತಾ ಕೇಂದ್ರ
ಇಡೀ ರಾಜ್ಯದಲ್ಲಿಯೇ ಅತ್ಯಂತ ಹೆಚ್ಚಿನ ಮತ್ತು ಉತ್ಕೃಷ್ಟ ಮಾವು ಬೆಳೆಯುವ ಕೋಲಾರ ಜಿಲ್ಲೆಯಲ್ಲಿ ಇಸ್ರೇಲ್ ಕೃಷಿ ಇಲಾಖೆ ನೆರವಿನೊಂದಿಗೆ ಈ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ. ರೈತರು ಉತ್ತಮ ಗುಣಮಟ್ಟದ, ಅಧಿಕ ಇಳುವರಿಯ ಮಾವು ಬೆಳೆಯಲು ಅಗತ್ಯವಾದ ತಂತ್ರಜ್ಞಾನವನ್ನು ಇಸ್ತೇಲ್ ಒದಗಿಸಲಿದೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪಪುರ, ಮುಳಬಾಗಿಲು ತಾಲೂಕುಗಳಲ್ಲಿ ವ್ಯಾಪಕವಾಗಿ ಮಾವು ಬೆಳೆಯಲಾಗುತ್ತದೆ. ಸುಮಾರು 52 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. ಇಂಥ ಹಿರಿಮೆ ಇದ್ದರೂ ನಾನಾ ಕಾರಣಗಳಿಂದ ರೈತರು ಫಸಲು ಕಳೆದುಕೊಂಡು ನಷ್ಟ ಅನುಭವಿಸುತ್ತಿದ್ದಾರೆ. ಕೀಟಬಾಧೆ, ರೋಗಬಾಧೆಯಿಂದ ಕೈಸುಟ್ಟುಕೊಳ್ಳುತ್ತಿದ್ದಾರೆ.
ಇಡೀ ಕರ್ನಾಟಕದಲ್ಲಿ ಮಾವು ಬೆಳೆಗೆ ಶ್ರೀನಿವಾಸಪುರದ ಮಾವಿಗೆ ಪ್ರತ್ಯೇಕತೆ ಇದೆ. ಈ ತಾಲೂಕನ್ನು ಕರ್ನಾಟಕದ ಮಾವಿನ ತೊಟ್ಟಿಲು ಎಂದು ಕರೆಯಲಾಗುತ್ತಿದೆ. ಬಂಗಿನಪಲ್ಲಿ, ತೋತಾಪುರಿ, ರಸಪುರಿ, ಅಲ್ಫಾನ್ಸೋ, ಕೇಸರ್, ಸೆಂಧೂರ, ದಶಹರಿ, ಮಲ್ಲಿಕಾ, ತೋತಾಪುರಿ, ಮಲಗೋವಾ, ರಾಜಗಿರಾ, ನೀಲಂ ಸೇರಿ ಇನ್ನೂ ಹಲವಾರು ಉತ್ಕೃಷ್ಟ ತಳಿಗಳಿವೆ ಇಲ್ಲಿ.
ಈಗ ಮಾವು ಇಸ್ರೇಲ್ ನೆರವಿನಿಂದ ಸ್ಥಾಪನೆಯಾಗಿರುವ ಮಾವು ಉತ್ಕೃಷ್ಟ ಕೇಂದ್ರದಿಂದ ಕೋಲಾರದ ಮಾವಿಗೆ ಜಾಗತಿಕವಾಗಿ ಬೃಹತ್ ಮಾರುಕಟ್ಟೆ ಸೃಷ್ಟಿಯಾಗಲಿದೆ.