ಮಲ್ಲೇಶ್ವರದಲ್ಲಿ ನಾನು ಭದ್ರವಾಗಿದ್ದೇನೆ: ಡಾ.ಸಿ.ಎನ್.ಅಶ್ವತ್ಥನಾರಾಯಣ
ಬೆಂಗಳೂರು: ನಮ್ಮ ಪಕ್ಷದಲ್ಲಿ ಯಾರು ಲಕ್ಷ್ಮಣರೇಖೆ ದಾಟಿಲ್ಲ. ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂಬುದನ್ನು ಹೇಳಲು ನಾನು ಜ್ಯೋತಿಷಿ ಅಲ್ಲ. ಈಗ ಯಡಿಯೂರಪ್ಪ ಅವರು ನಮ್ಮ ನಾಯಕರು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ರಾಮನಗರದಲ್ಲಿ ರೋಟರಿ ಬಿಜಿಎಸ್ ಆಸ್ಪತ್ರೆ (ಕೋವಿಡ್ಯೇತರ) ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, “ನಮ್ಮ ಪಕ್ಷದ ನಾಯಕತ್ವ ಬದಲಾವಣೆ ಸಂಬಂಧ ನಾನು ಏನನ್ನೂ ಹೇಳುವುದಿಲ್ಲ. ಯಾರಾದರು ಹೇಳಿಕೆಗಳನ್ನು ನೀಡಿದ್ದರೆ ಅವರನ್ನೇ ಕೇಳಿ. ಮುಂದಿನ ದಿನಗಳಲ್ಲಿ ನಾನು ರಾಮನಗರ ಜಿಲ್ಲಾ ಉಸ್ತುವಾರಿಯಾಗಿ ಮುಂದುವರಿಯುತ್ತೇನೋ ಇಲ್ಲವೋ ಎಂದು ಹೇಳಲು ನನಗೆ ಭವಿಷ್ಯ ಹೇಳುವುದು ಗೊತ್ತಿಲ್ಲ” ಎಂದರು.
ಸದ್ಯಕ್ಕೆ ನನಗೆ ರಾಮನಗರ ಜಿಲ್ಲೆಯ ಉಸ್ತುವಾರಿಯಾಗಿ ಸಿಎಂ ಅವರು ಅವಾಕಾಶ ನೀಡಿದ್ದಾರೆ. ಅದನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದೆನೆ ಎಂದು ಅವರು ಪರೋಕ್ಷವಾಗಿ ಸಿ.ಪಿ.ಯೋಗೇಶ್ವರ್ಗೆ ಟಾಂಗ್ ನೀಡಿದರು.
ಅರುಣ್ ಸಿಂಗ್ ಹೇಳಿದ್ದಾಗಿದೆ
ಈಗಾಗಲೇ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಈಗಾಗಲೇ ಎಲ್ಲವನ್ನೂ ಸ್ಪಷ್ಟವಾಗಿ ಹೇಳಿದ್ದಾರೆ. ಅರುಣ್ ಸಿಂಗ್ ಅವರ ಭೇಟಿ ಹಾಗೂ ಸಭೆಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಎಲ್ಲವೂ ಸರಿಹೋಗುತ್ತದೆ ಎಂದು ಅವರು ಪುನುರುಚ್ಛರಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪದೇಪದೆ ಸಮಾಲೋಚನೆ ನಡೆಯುತ್ತಲೇ ಇರುತ್ತದೆ. ಇದರಲ್ಲಿ ತಪ್ಪೇನಿದೆ. ಸರಕಾರ ಉತ್ತಮವಾಗಿ ಕೆಲಸ ಮಾಡುವುದ, ಪಕ್ಷವನ್ನು ಬಲಿಷ್ಠವಾಗಿ ಮುನ್ನಡೆಸುವುದು, ಜನಾಭಿಪ್ರಾಯ ಸಂಗ್ರಹಿಸುವುದು, ಜನರ ಬಳಿ ವಿಶ್ವಾಸ ಹೆಚ್ಚಿಸಿಕೊಳ್ಳುವುದು ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆದಿದೆ ಎಂದು ಅವರು ಹೇಳಿದರು.
ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಇಲ್ಲ
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಚರ್ಚೆ ನಡೆದಿಲ್ಲ. ಅಭಿವೃದ್ಧಿ ವಿಚಾರಗಳ ಬಗ್ಗೆ ಮಾತ್ರ ಚರ್ಚೆ ನಡೆಯುತ್ತಿದೆ. ನಾವು ಅಧಿಕಾರ ಪಡೆದಿರುವುದೇ ಜನರ ಸೇವೆಗೆ ಎನ್ನುವುದನ್ನು ಮರೆಯಬಾರದು. ಸಚಿವರಾದ ಸಿ.ಪಿ.ಯೋಗೇಶ್ವರ್, ಕೆ.ಎಸ್.ಈಶ್ವರಪ್ಪ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲಾರೆ. ನೀವು ಅವರನ್ನೇ ಕೇಳಿ ಉತ್ತರ ಪಡೆದುಕೊಳ್ಳಬಹುದು ಎಂದು ಡಿಸಿಎಂ ತಿಳಿಸಿದರು.
ಮುಂದಿನ ಚುನಾವಣೆಗೆ ಪಕ್ಷದ ಮೂಲಕವೇ ಮತಯಾಚನೆ ನಡೆಸುತ್ತೆವೆ. 2023ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯನ್ನು ಎದುರಿಸುವಷ್ಟೇ ನಮ್ಮ ಗುರಿ. ಅದಕ್ಕೆ ಈಗಿನಿಂದಲೇ ಸಿದ್ಧತೆ ನಡೆದಿದೆ ಎಂದು ಡಿಸಿಎಂ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ನಮ್ಮ ಬಿಜೆಪಿ ಪಕ್ಷಕ್ಕೆ ಶಕ್ತಿ, ನಿರ್ದಿಷ್ಟ ಗುರಿ ಇದೆ. ಮುಂದಿನ ಹಾದಿಗಳ ಬಗ್ಗೆ ಪಕ್ಷವೇ ನಿರ್ಧಾರ ಮಾಡುತ್ತದೆ. ಈಗ ಯಾವುದೇ ಗೊಂದಲ ಇದ್ದರೂ ಪರಿಹಾರವಾಗುತ್ತದೆ. ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಸರಕಾರ ನಡೆಯುತ್ತಿದೆ. ನಾನು ಸಹ ಅವರ ಸಂಪುಟದಲ್ಲೇ ಇದ್ದೇನೆ. ಸಚಿವ ಸಂಪುಟ ಪುನಾ ರಚನೆ ಬಗ್ಗೆ ಈಗ ಏನೇ ಹೇಳಿದರೂ ಗೊಂದಲ ಸೃಷ್ಟಿಯಾಗುತ್ತದೆ. ಆ ಬಗ್ಗೆ ಕೂಡ ನಾನು ಏನನ್ನೂ ಹೇಳುವುದಿಲ್ಲ ಎಂದರು.
ಈಗಾಗಲೇ ಪಕ್ಷದ ವರಿಷ್ಠರು ಹೇಳಿರುವ ಮಾತುಗಳನ್ನು ನಾನು ಮತ್ತೆ ಮತ್ತೆ ಮಾತನಾಡುವುದಿಲ್ಲ. ಯಾವಾಗಲು ಸ್ಪರ್ಧೆ ಇರಬೇಕು. ಆಸೆ ಇರಬೇಕು. ಇಂದು ಉಸ್ತುವಾರಿ ಸಚಿವನಾಗಿ ನಾನಿದ್ದೇನೆ. ಮುಂದೆ ಇನ್ಯಾರೊ ಇರುತ್ತಾರೆ. ಇದರಲ್ಲಿ ತಪ್ಪೇನು ಎಂದು ಜಿಲ್ಲಾ ಉಸ್ತುವಾರಿ ಕುರಿತಂತೆ ಡಿಸಿಎಂ ಪ್ರತಿಕ್ರಿಯಿಸಿದರು.
ಮಾಗಡಿಯಿಂದ ಸ್ಪರ್ಧೆ ಇಲ್ಲ
ಮಾಗಡಿಯಲ್ಲಿ ನಾನು ಸ್ಪರ್ಧಿಸುವ ಬಗ್ಗೆ ಯಾರು ಘೋಷಣೆ ಮಾಡಿದರೊ ಅವರನ್ನೆ ಕೇಳಬೇಕು. ಅಂತಹ ಯಾವುದೇ ಉದ್ದೇಶ ನನಗೆ ಇಲ್ಲ. ಚುನಾವಣೆಗಾಗಿ ನಾನು ಕೆಲಸ ಮಾಡುತ್ತಿಲ್ಲ. ಜಿಲ್ಲೆಯಲ್ಲಿ ನಿಸ್ವಾರ್ಥವಾಗಿ ಕೆಲಸ ಮಾಡುತ್ತಿದ್ದೆನೆ. ನಾನು ಮಲ್ಲೆಶ್ವರಂ ಕ್ಷೇತ್ರದಲ್ಲಿ ಭದ್ರವಾಗಿದ್ದೆನೆ ಎಂದು ಡಿಸಿಎಂ ಸ್ಪಷ್ಟಪಡಿಸಿದರು.
ರೋಟರಿ-ಬಿಜಿಎಸ್ ಆಸ್ಪತ್ರೆ ಲೋಕಾರ್ಪಣೆ
ಕೋವಿಡ್ ಹೊರತುಪಡಿಸಿ ಸಾಮಾನ್ಯ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವ ಉದ್ದೇಶದಿಂದ ರಾಮನಗರ ಜಿಲ್ಲಾ ಕೇಂದ್ರದಲ್ಲಿ ಸ್ಥಾಪಿಸಿರುವ ನವೀಕೃತ ರೋಟರಿ ಬಿಜಿಎಸ್ ಆಸ್ಪತ್ರೆಯನ್ನು ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಗುರುವಾರ ಲೋಕಾರ್ಪಣೆ ಮಾಡಿದರು.
ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಂ ಅವರು, “ಈ ಆಸ್ಪತ್ರೆ ಮೊದಲೇ ಇತ್ತು. ಈಗ ಅದನ್ನು ಮತ್ತಷ್ಟು ಉತ್ತಮಪಡಿಸಲಾಗಿದೆ. ಸೌಲಭ್ಯಗಳನ್ನು ಹೆಚ್ಚಿಸಲಾಗಿದೆ” ಎಂದರು.
“ಇಲ್ಲಿ ಈಗ ಐಸಿಯು, ವೆಂಟಿಲೇಟರ್ ವ್ಯವಸ್ಥೆ ಇಲ್ಲಿದೆ. ಈ ಆಸ್ಪತ್ರೆಗೆ 15 ವೆಂಟಿಲೇಟರ್, ಮಾನಿಟರ್ಗಳನ್ನು ನೀಡಲಾಗಿದೆ. ಇನ್ನು 15 ಮಾನೀಟರ್ಗಳು ಬೇಕೆಂದು ಕೇಳಿದ್ದಾರೆ. ಅದನ್ನೂ ವೈಯಕ್ತಿಕವಾಗಿ ಒದಗಿಸುತ್ತೇನೆ. ಇನ್ನು ಮುಂದೆ ರಾಮನಗರ ಜಿಲ್ಲೆಯ ಜನರು ಅನಾರೋಗ್ಯ ಉಂಟಾದ ಕೂಡಲೇ ಬೆಂಗಳೂರು ಕಡೆ ಓಡುವ ಅಗತ್ಯವಿಲ್ಲ” ಎಂದು ಉಪ ಮುಖ್ಯಮಂತ್ರಿ ಹೇಳಿದರು.
ಪ್ರಸ್ತುತ ರಾಮನಗರ ಜಿಲ್ಲೆಯಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ಪ್ರತ್ಯೇಕ ಕೋವಿಡ್ ಆಸ್ಪತ್ರೆ ಇದೆ. ತಾಯಿ ಮಕ್ಕಳ ಅಸ್ಪತ್ರೆ ಆರಂಭಿಸಲಾಗತ್ತಿದೆ. ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಬಂದಿದೆ. ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿ ಅವರಿಗೂ ಜಿಲ್ಲಾ ಕೇಂದ್ರದಲ್ಲಿ ಒಂದು ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುವಂತೆ ಮನವಿ ಮಾಡಿದ್ದೇನೆ. ಬೆಂಗಳೂರಿನಲ್ಲಷ್ಟೇ ಅಲ್ಲ, ವಿದೇಶದಲ್ಲೂ ಸಿಗುವಂಥ ಉತ್ತಮ ಆರೋಗ್ಯ ಸೇವೆ ರಾಮನಗರದಲ್ಲೂ ಸಿಗುತ್ತದೆ ಎಂದು ಡಿಸಿಎಂ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಶ್ರೀ ಶೇಖರ ಸ್ವಾಮೀಜಿ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ರಾಕೇಶ ಕುಮಾರ, ಸಿಇಒ ಇಕ್ರಂ, ಎಸ್ ಪಿ ಗಿರೀಶ್ ಇದ್ದರು.