ಇದ್ದಿದ್ದನ್ನೇ ಇದ್ದಂಗೆ ಹೇಳಿದೆ ಎಂದ ಹಳ್ಳಿಹಕ್ಕಿ!!
ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪಗೆ ಮೊದಲಿದ್ಧ ಶಕ್ತಿ, ಸ್ಪಿರಿಟ್ ಆರೋಗ್ಯ ಈಗ ಇಲ್ಲ. ಹೀಗಾಗಿ ಕಾಮನ್ ಸೆನ್ಸ್ ಇರುವ ವ್ಯಕ್ತಿಯೊಬ್ಬರನ್ನು ಸಿಎಂ ಹುದ್ದೆಗೆ ತರಲಿ. ವೀರಶೈವ ಸಮುದಾಯದವರನ್ನೇ ಸಿಎಂ ಮಾಡಲಿ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದ್ದಾರೆ.
ಇಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿಯಾಗಿ ಚರ್ಚಿಸಿದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು, ಸಿಎಂ ಬಿಎಸ್ʼವೈ ರಾಜೀನಾಮೆಗೆ ಆಗ್ರಹಿಸಿದರು.
ರಾಜ್ಯ ಬಿಜೆಪಿ ಬೆಳವಣಿಗೆಯ ಬಗ್ಗೆ ಅರುಣ್ ಸಿಂಗ್ ಅವರಿಗೆ ವಿವರಿಸಿದ್ದೇನೆ. ನನ್ನ ಹೇಳಿಕೆಯನ್ನು ಅವರು ಗಂಭೀರವಾಗಿ ಆಲಿಸಿದರು. ನಾನು ಯಾರ ಪರವೂ ಅಲ್ಲ, ಯಾರ ವಿರೋಧನೂ ಅಲ್ಲ. ರಾಜ್ಯದ ಜನ ಈಗ ಸರಕಾರದ ಬಗ್ಗೆ ಮಾತನಾಡುತ್ತಿದ್ದಾರೆ. ರಾಜ್ಯದಲ್ಲಿ ಕುಟುಂಬ ರಾಜಕಾರಣ ರಾಕ್ಷಸ ರಾಜಕಾರಣ ಕಾಣುತ್ತಿದೆ. ಬಿ.ಎಸ್.ಯಡಿಯೂರಪ್ಪ ಬಗ್ಗೆ ನನಗೆ ಅಪಾರ ಗೌರವವಿದೆ. ಪಕ್ಷ ಕಟ್ಟಿ ಬೆಳೆಸಿದ ರೀತಿ ಬಗ್ಗೆ ಗೌರವವಿದೆ. ಆದರೆ ಈಗ ರಾಜ್ಯದ ಹಿತ ದೃಷ್ಟಿಯಿಂದ ನಿರ್ಧರಿಸಲಿ ಎಂದರು ವಿಶ್ವನಾಥ್.
ಅರುಣ್ ಸಿಂಗ್ ಭೇಟಿ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಎಚ್.ವಿಶ್ವನಾಥ್ ಅವರು ಜೆಡಿಎಸ್ ಪಕ್ಷದಲ್ಲಿರುವ (ಜೆಡಿಎಸ್) ಕುಟುಂಬ ರಾಜಕಾರಣ ರಾಕ್ಷಸ ರಾಜಕಾರಣ. ಅದನ್ನು ಇಲ್ಲಿಯೂ (ಬಿಜೆಪಿ) ನೋಡ್ತಿದ್ದೇವೆ. ರಾಜ್ಯದಲ್ಲಿ ಯಡಿಯೂರಪ್ಪ ಬಗ್ಗೆ ಅಪಾರ ಗೌರವ ಇದೆ. ಆದರೆ ಇಲ್ಲಿ ಸರಕಾರ ಯಾವ ರೀತಿ ನಡೆಯುತ್ತಿದೆ ಹೈಕಮಾಂಡ್ ಏನು ತೀರ್ಮಾನ ತಗೋಬೇಕು? ಅಂತಾ ಅವರಿಗೆ (ಅರುಣ್ ಸಿಂಗ್) ವಿವರಿಸಿದ್ದೇನೆ ಎಂದರು ವಿಶ್ವನಾಥ್.
ಬಿ.ಎಸ್. ಯಡಿಯೂರಪ್ಪ ಅವರಿಗೆ ಮೊದಲಿದ್ದ ಶಕ್ತಿ, ಸ್ಪಿರಿಟ್, ಆರೋಗ್ಯ ಈಗಿಲ್ಲ. ಸಿಎಂ ಆಗಿ ಮುನ್ನಡೆಸುವ ಶಕ್ತಿ ಅವರಿಗೆ ಇಲ್ಲ. ಬಿಎಸ್ʼವೈ ಈಗಾಗಲೇ ರಾಜೀನಾಮೆ ಬಗ್ಗೆ ಹೇಳಿದ್ದಾರೆ. ಹೈಕಮಾಂಡ್ ಸೂಚಿಸಿದರೆ ರಾಜೀನಾಮೆಗೆ ಸಿದ್ಧ ಎಂದಿದ್ದಾರೆ. ಹೀಗಾಗಿ ಯಡಿಯೂರಪ್ಪ ಮಾರ್ಗದರ್ಶಕರಾಗಿ ಇರಲಿ. ಸಿಎಂ ಸ್ಥಾನಕ್ಕೆ ವೀರಶೈವ ಸಮುದಾಯದವರನೇ ಕೂರಿಸಲಿ. ಅದರಲ್ಲೂ ಪಂಚಮಸಾಲಿ ಸಮುದಾಯದವರನ್ನೇ ಸಿಎಂ ಮಾಡಲಿ ಎಂದು ಅವರು ಆಗ್ರಹಿಸಿದರು.
ಪಂಚಮಶಾಲಿ ಸಮುದಾಯಕ್ಕೆ ಸೇರಿದ ಮೂವರು ಶಾಸಕರಿದ್ದಾರೆ. ಮುರುಗೇಶ್ ನಿರಾಣಿ, ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್. ಮೂವರಲ್ಲಿ ಯಾರನ್ನಾದರೂ ಸಿಎಂ ಮಾಡಲಿ. ನಾನು ಹಲವು ಹುದ್ದೆಗಳನ್ನ ನಿರ್ವಹಿಸಿದ್ದೇನೆ. ನನಗೆ ಸಚಿವ ಸ್ಥಾನ ಸಿಗಲಿಲ್ಲ ಎಂದು ಈ ರೀತಿ ಹೇಳುತ್ತಿಲ್ಲ ಎಂದು ಎಚ್.ವಿಶ್ವನಾಥ್ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರ ಕಾರ್ಯಕ್ರಮಗಳನ್ನ ಕರ್ನಾಟಕದಲ್ಲಿ ಸರಿಯಾಗಿ ಜಾರಿ ಮಾಡುತ್ತಿಲ್ಲ. ಆಡಳಿತದಲ್ಲಿ ಕುಟುಂಬ ಹಸ್ತಕ್ಷೇಪ, ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಆರೋಪಿಸಿದರು.