ಮೈಸೂರು ಜಿಲ್ಲೆಯಲ್ಲಿ ಮಾತ್ರ ಯಾವುದೇ ಸಡಿಲಿಕೆ ಇಲ್ಲ
Lead photo courtesy: Babajan@BabajanJansb1
ಬೆಂಗಳೂರು: ಕೋವಿಡ್ ಸೋಂಕಿನ ಪಾಸಿಟಿವಿಟಿ ದರ ಶೇ.5ಕ್ಕಿಂತ ಕಡಿಮೆಯಾದ ಕಾರಣಕ್ಕೆ ಆರೋಗ್ಯ ಸಚಿವರ ತವರು ಜಿಲ್ಲೆ ಚಿಕ್ಕಬಳ್ಳಾಪುರ, ನೆರೆಯ ಕೋಲಾರ ಸೇರಿದಂತೆ ರಾಜ್ಯದ 16 ಜಿಲ್ಲೆಗಳಲ್ಲಿ ಲಾಕ್ಡೌನ್ ನಿರ್ಬಂಧಗಳನ್ನು ಸಡಿಲಿಸಲಾಗಿದೆ.
ಆದರೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಯಿಂದ ಬಹಳ ಸುದ್ದಿಯಾಗಿದ್ದ ಮೈಸೂರು ಜಿಲ್ಲೆಯಲ್ಲಿ ನಿರ್ಬಂಧಗಳನ್ನು ಎಳ್ಳಷ್ಟೂ ಸಡಿಲಿಕೆ ಮಾಡಿಲ್ಲ. ಸಾಧ್ಯವಾದರೆ, ಇನ್ನಷ್ಟು ನಿರ್ಬಂಧಗಳನ್ನು ಹೇರುವ ಬಗ್ಗೆ ಸರಕಾರ ಪರಿಶೀಲನೆ ಮಾಡುತ್ತಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿದ್ದಿಷ್ಟು:
- ಕಳೆದ ಒಂದು ವಾರದಲ್ಲಿ 16 ಜಿಲ್ಲೆಗಳಲ್ಲಿ 5% ಗಿಂತ ಕಡಿಮೆ ಪಾಸಿಟಿವಿಟಿ ದರ ಇದ್ದು, 13 ಜಿಲ್ಲೆಗಳಲ್ಲಿ 5ರಿಂದ 10% ಇದೆ. ಆದರೆ, ಮೈಸೂರಿನಲ್ಲಿ 10% ಗಿಂತ ಅಧಿಕ ಪಾಸಿಟಿವಿಟಿ ದರ ಇದೆ. ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯಲ್ಲಿ ಮಾತ್ರ ಯಾವುದೇ ಸಡಿಲಿಕೆ ಇಲ್ಲ.
- ಈ ಪಾಜಿಟಿವಿಟಿ ದರದ ಆಧಾರದ ಮೇಲೆ ನಿರ್ಬಂಧಗಳ ಸಡಿಲಿಕೆಗಳನ್ನು ತಾಂತ್ರಿಕ ಸಲಹಾ ಸಮಿತಿಯ ಸಲಹೆಯ ಮೇರೆಗೆ ಸಂಪುಟ ಸಹೋದ್ಯೋಗಿಗಳೊಂದಿಗೆ ಚರ್ಚಿಸಿ ಈ ಕೆಳಕಂಡಂತೆ ತೀರ್ಮಾನಿಸಲಾಗಿದೆ.
- ಶೇ. 5ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರುವ ಜಿಲ್ಲೆಗಳಾದ ಉತ್ತರ ಕನ್ನಡ, ಬೆಳಗಾವಿ, ಮಂಡ್ಯ, ಕೊಪ್ಪಳ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಬೆಂಗಳೂರು ನಗರ (ಬಿಬಿಎಂಪಿ ಸೇರಿದಂತೆ), ಗದಗ, ರಾಯಚೂರು, ಬಾಗಲಕೋಟೆ, ಕಲಬುರಗಿ, ಹಾವೇರಿ, ರಾಮನಗರ, ಯಾದಗಿರಿ ಹಾಗೂ ಬೀದರ ಜಿಲ್ಲೆಗಳಿಗೆ ನಿರ್ಬಂಧಗಳನ್ನು ಈ ಕೆಳಗಿನಂತೆ ಸಡಿಲಿಕೆ ಮಾಡಲಾಗಿದೆ.
- ಎಲ್ಲಾ ಅಂಗಡಿಗಳನ್ನು ಸಂಜೆ 5 ಗಂಟೆವರೆಗೆ ತೆರೆಯಲು ಅನುಮತಿ.
- ಹವಾ ನಿಯಂತ್ರಣ ವ್ಯವಸ್ಥೆ ಚಾಲನೆ ಮಾಡದೇ ಹೋಟೆಲ್, ಕ್ಲಬ್, ರೆಸ್ಟೋರೆಂಟ್ಗಳಲ್ಲಿ (ಮದ್ಯಪಾನ ಹೊರತುಪಡಿಸಿ) ಕುಳಿತು ತಿನ್ನಲು ಸಂಜೆ 5 ಗಂಟೆವರೆಗೆ ಶೇ.50 ಸಾಮರ್ಥ್ಯದೊಂದಿಗೆ ಮಾತ್ರ ಅವಕಾಶ.
- ಹೊರಾಂಗಣ ಸಿನಿಮಾ ಚಿತ್ರೀಕರಣಕ್ಕೆ ಅವಕಾಶ.
- ಬಸ್ ಮತ್ತು ಮೆಟ್ರೋ ಶೇ.50 ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಣೆಗೆ ಅವಕಾಶ.
- ವೀಕ್ಷಕರಿಲ್ಲದೇ ಹೊರಾಂಗಣ ಕ್ರೀಡೆಗಳಿಗೆ ಅನುಮತಿ.
- ಸರಕಾರಿ/ಖಾಸಗಿ ಕಚೇರಿಗಳಿಗೆ ಶೇ.50 ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಲು ಅನುಮತಿ.
- ಲಾಡ್ಜ್ʼಗಳಲ್ಲಿ ಮತ್ತು ರೆಸಾರ್ಟ್ʼಗಳಲ್ಲಿ ಶೇ.50ರಷ್ಟು ಸಾಮರ್ಥ್ಯದೊಂದಿಗೆ ಜನ ಉಳಿಯಲು ಅವಕಾಶ.
- ಜಿಮ್ʼಗಳಲ್ಲಿ ಶೇ.50ರಷ್ಟು ಸಾಮರ್ಥ್ಯದೊಂದಿಗೆ (ಹವಾ ನಿಯಂತ್ರಣ ಇಲ್ಲದೇ) ಅವಕಾಶ.
- ಶೇ.5ಕ್ಕಿಂತ ಹೆಚ್ಚಿನ ಪಾಜಿಟಿವಿಟಿ ದರ ಇರುವ 13 ಜಿಲ್ಲೆಗಳಾದ ಹಾಸನ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಾಮರಾಜನಗರ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಕೊಡಗು, ಧಾರವಾಡ, ಬಳ್ಳಾರಿ, ಚಿತ್ರದುರ್ಗ ಹಾಗೂ ವಿಜಯಪುರ ಜಿಲ್ಲೆಗಳಿಗೆ ಜೂನ್ 11ರಂದಿನ ಆದೇಶದಲ್ಲಿ ನೀಡಿರುವ ಸಡಿಲಿಕೆಗಳು ಮಾತ್ರ ಅನ್ವಯಿಸುತ್ತವೆ.
- ಜೂನ್ 11ರ ಆದೇಶದ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ…
- ಶೇ.10ಕ್ಕಿಂತ ಹೆಚ್ಚಿನ ಪಾಸಿಟಿವಿಟಿ ದರ ಇರುವ ಮೈಸೂರು ಜಿಲ್ಲೆಯಲ್ಲಿ ಯಥಾಸ್ಥಿತಿ ನಿರ್ಬಂಧಗಳು ಮುಂದುವರಿಯುತ್ತವೆ.
ರಾಜ್ಯವ್ಯಾಪಿ ಏನೇನು ಅನ್ವಯ?
- ಪ್ರತಿ ದಿನ ನೈಟ್ ಕರ್ಫ್ಯೂ ರಾತ್ರಿ 7 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಇರುತ್ತದೆ.
- ವಾರಾಂತ್ಯದ ಕರ್ಫ್ಯೂ ಶುಕ್ರವಾರ ರಾತ್ರಿ 7 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿರುತ್ತದೆ.
- ಬಸ್ ಸಂಚಾರವು ಶೇ.50ರಷ್ಟು ಪ್ರಯಾಣಿಕರಿಗೆ ಮಿತಿಗೊಳಿಸಿ ಸಂಚಾರಕ್ಕೆ ಅನುಮತಿ.